ADVERTISEMENT

ಶಿವಸೇನೆ ಶಿರಡಿ ಅಭ್ಯರ್ಥಿಗೆ ಜೈಲು ಶಿಕ್ಷೆ

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2014, 19:30 IST
Last Updated 21 ಮಾರ್ಚ್ 2014, 19:30 IST

ಮುಂಬೈ (ಪಿಟಿಐ): ಚುನಾವಣೆಗೆ ಮುನ್ನವೇ ಶಿವಸೇನೆಗೆ ಭಾರಿ ಹಿನ್ನಡೆಯಾಗಿದೆ.  ಅಕ್ರಮ ಆಸ್ತಿ ಸಂಪಾದನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿರಡಿ ಲೋಕಸಭೆ ಕ್ಷೇತ್ರದ ಶಿವಸೇನೆ ಅಭ್ಯರ್ಥಿ ಬಬನ್‌­ರಾವ್‌ ಘೋಲಪ್‌ ಮತ್ತು ಅವರ ಪತ್ನಿಗೆ ಇಲ್ಲಿನ ವಿಶೇಷ ಭ್ರಷ್ಟಾಚಾರ ನಿಗ್ರಹ (ಎಸಿಬಿ) ನ್ಯಾಯಾಲಯವು ಮೂರು ವರ್ಷ ಜೈಲು, ₨1 ಲಕ್ಷ ದಂಡ ವಿಧಿಸಿದೆ. ಇದ­ರಿಂದಾಗಿ ಶಿವಸೇನೆ ತೀವ್ರ ಮುಜುಗರ­ಕ್ಕೊಳಗಾಗುವಂತಾಗಿದೆ.

ಎರಡು ವರ್ಷಕ್ಕಿಂತ ಮೇಲ್ಪಟ್ಟು ಶಿಕ್ಷೆಗೊಳಗಾದವರು ಆರು ವರ್ಷಗಳವರೆಗೆ ಚುನಾವಣೆಗೆ ಸ್ಪರ್ಧಿಸಲು ಅನರ್ಹರು ಎಂದು ಸುಪ್ರೀಂಕೋರ್ಟ್‌  ತೀರ್ಪು ನೀಡಿರುವ ಹಿನ್ನೆಲೆಯಲ್ಲಿ ಘೋಲಪ್‌ ಮುಂದಿನ ಆರು ವರ್ಷಗಳವರೆಗೆ ಚುನಾವಣೆಗೆ ಸ್ಪರ್ಧಿಸಲು ಸಾಧ್ಯವಾಗುವುದಿಲ್ಲ.

ಸದ್ಯ ನಾಸಿಕ್‌ ಕ್ಷೇತ್ರದ ಶಾಸಕರಾಗಿರುವ ಘೋಲಪ್‌, 1995ರಲ್ಲಿ ಮಹಾರಾಷ್ಟ್ರದಲ್ಲಿ ಬಿಜೆಪಿ ಶಿವಸೇನೆ ಸಮ್ಮಿಶ್ರ ಸರ್ಕಾರದಲ್ಲಿ ಸಮಾಜ ಕಲ್ಯಾಣ ಸಚಿವರಾಗಿದ್ದರು. ಭ್ರಷ್­ಟಾಚಾರ ಆರೋಪದ ಹಿನ್ನೆಲೆಯಲ್ಲಿ 1999ರಲ್ಲಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇತ್ತೀಚೆಗೆ ಅವರನ್ನು ಶಿರಡಿ ಲೋಕಸಭೆ ಕ್ಷೇತ್ರದ ಅಭ್ಯರ್ಥಿ ಎಂದು ಶಿವಸೇನೆ ಘೋಷಿಸಿತ್ತು. ‘ಘೋಲಪ್‌, ಅವರ ಪತ್ನಿ ಶಶಿಕಲಾ, ಅಕ್ರಮ ಆಸ್ತಿ ಪ್ರಕರಣದಲ್ಲಿ ತಪ್ಪಿತಸ್ಥರಾಗಿ­ದ್ದಾರೆ’ ಎಂದು ಎಸಿಬಿ ವಿಶೇಷ ನ್ಯಾಯಮೂರ್ತಿ ಎ.ವಿ. ದೌಲತಾಬಾದಕರ್‌ ಹೇಳಿದರು.

‘ಘೋಲಪ್‌ ಮತ್ತು ಶಶಿಕಲಾ ಅವರಿಗೆ ನ್ಯಾಯಾಲಯ ಮೂರು ವರ್ಷ ಜೈಲು ಶಿಕ್ಷೆ ವಿಧಿಸಿದೆ. ಬಳಿಕ ನ್ಯಾಯಾಲಯವು ಅವರಿಗೆ ಜಾಮೀನು ನೀಡಿದೆ’ ಎಂದು ಮುಖ್ಯ ಪಬ್ಲಿಕ್‌ ಪ್ರಾಸಿಕ್ಯೂಟರ್‌ ಕಲ್ಪನಾ ಚವಾಣ್‌ ತಿಳಿಸಿದ್ದಾರೆ. ಘೋಲಪ್‌ ಅಕ್ರಮ ಆಸ್ತಿ ಸಂಪಾದಿಸಿದ್ದಾರೆ ಎಂದು ಆರೋಪಿಸಿ ಮಿಲಿಂದ್‌ ಯಾವತ್‌ಕರ್‌ ಎಂಬುವರು 1999ರಲ್ಲಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಪ್ರಕರಣದ ತನಿಖೆ ನಡೆಸಿದ ಎಸಿಬಿ 2001ರಲ್ಲಿ ಘೋಲಪ್‌ ವಿರುದ್ಧ ಪ್ರಕರಣ ದಾಖಲಿಸಿತು. ಬಳಿಕ ಅವರ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.