ADVERTISEMENT

ಸೋಲಿನ ಸರದಾರನಿಗಿದು 27ನೇ ಚುನಾವಣೆ!

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2014, 19:30 IST
Last Updated 15 ಮಾರ್ಚ್ 2014, 19:30 IST

ಬೆಹ್ರಾಂಪುರ (ಒಡಿಶಾ): ಪ್ರತಿಯೊಬ್ಬ ರಾಜಕಾರಣಿಗೂ ಚುನಾ­ವಣೆಯೆಂದರೆ ಮಾಡು ಇಲ್ಲವೇ ಮಡಿ ಪರಿಸ್ಥಿತಿಯೇ. ಆದರೆ ಬೆಹ್ರಾಂಪುರದ ಕೆ. ಶ್ಯಾಮ್‌ ಬಾಬು ಸುಬುದ್ಧಿಗೆ ಹಾಗಲ್ಲ.

ಸುಬುದ್ಧಿ 27 ಬಾರಿ ಲೋಕಸಭೆ ಮತ್ತು ವಿಧಾನಸಭೆ ಚುನಾ­ವಣೆಗೆ ಸ್ಪರ್ಧಿಸಿದ್ದಾರೆ. ಒಮ್ಮೆಯೂ ಅವರು ಗೆದ್ದಿಲ್ಲ. ಹಾಗಂತ ಅವರೇನು ಚುನಾವಣೆಯಲ್ಲಿ ಸ್ಪರ್ಧಿಸುವುದನ್ನು ನಿಲ್ಲಿಸಿಲ್ಲ. ಯಾಕೆಂದರೆ ಚುನಾವಣೆಗೆ ನಿಲ್ಲದೇ ಇದ್ದರೆ ಅವರಿಗೆ ಕೈಕೈ ಹಿಸುಕಿಕೊಳ್ಳು­ವಂತಾ­ಗುತ್ತದೆ. ಸ್ಪರ್ಧಿಸುವುದು ಅವರಿಗೆ ಹವ್ಯಾಸ.

78 ವರ್ಷದ ಸುಬುದ್ಧಿ ಈ ಬಾರಿ ಎರಡು ಲೋಕಸಭಾ ಕ್ಷೇತ್ರಗಳಿಂದ  ಸ್ಪರ್ಧಿಸಲಿದ್ದಾರೆ. ಬೆಹ್ರಾಂಪುರ ಮತ್ತು ಅಸ್ಕ ಅವರ ಈ ಬಾರಿಯ ಕ್ಷೇತ್ರಗಳು.  ಏಪ್ರಿಲ್‌ 10ರಂದು ನಡೆ­ಯುವ ಚುನಾವಣೆಗೆ ಅವರು ತಮ್ಮದೇ ಶೈಲಿಯಲ್ಲಿ ಪ್ರಚಾರವನ್ನೂ ಆರಂಭಿಸಿದ್ದಾರೆ.

ದೇಶದಲ್ಲಿ ಯಾರೂ ಸ್ಪರ್ಧಿಸದಿರುವಷ್ಟು ಬಾರಿ ಚುನಾವಣೆಗೆ ನಿಲ್ಲಬೇಕು ಎಂಬುದು ಶ್ಯಾಮ್‌ ಬಾಬು ಸುಬುದ್ಧಿ ಗುರಿ.
‘ಚುನಾವಣೆಗೆ ಸ್ಪರ್ಧಿಸುವಾಗ ಗೆಲ್ಲಬೇಕು ಎಂಬುದೇ ಉದ್ದೇಶ. ಎಲ್ಲ ರಾಜಕಾರಣಿಗಳ ಬಗ್ಗೆಯೂ ಜನರಿಗೆ ಭ್ರಮನಿರಸನವಾಗಿದೆ. ಹಾಗಾಗಿ ಈ ಬಾರಿ ನಾನು ಗೆಲ್ಲುವ ಸಾಧ್ಯತೆಯೇ ಅಧಿಕ’ ಎಂದು ಸುಬುದ್ಧಿ ಆತ್ಮವಿಶ್ವಾಸ ಪ್ರದರ್ಶಿಸಿದ್ದಾರೆ.

10 ವಿಧಾನಸಭೆ ಮತ್ತು 17 ಲೋಕಸಭೆ ಚುನಾವಣೆಯಲ್ಲಿ ಒಮ್ಮೆಯೂ ಸುಬುದ್ಧಿಗೆ ಠೇವಣಿ ದೊರೆತಿಲ್ಲ. ಆದರೂ ಅವರು ಎದೆಗುಂದಿಲ್ಲ. ಚುನಾವಣೆ ಪ್ರಕ್ರಿಯೆಯನ್ನು ಸರಿಪಡಿಸುವುದು ತನ್ನ ಉದ್ದೇಶ ಎಂದು ಈ ಹೋಮಿಯೋಪಥಿ ವೈದ್ಯ ಹೇಳಿದ್ದಾರೆ.

ಕೊನೆಯುಸಿರಿರುವ ತನಕ ಸ್ಪರ್ಧಿಸುತ್ತೇನೆ ಎಂಬ ಪ್ರತಿಜ್ಞೆಯನ್ನೂ ಅವರು ಮಾಡಿದ್ದಾರೆ. ಮೊದಲ ಬಾರಿ ಅವರು ಚುನಾವಣೆಗೆ ನಿಂತಿದ್ದು 1957ರಲ್ಲಿ. ಮಾಜಿ ಪ್ರಧಾನಿ ಪಿ.ವಿ. ನರಸಿಂಹ ರಾವ್‌, ಮಾಜಿ ಮುಖ್ಯಮಂತ್ರಿ ಬಿಜು ಪಟ್ನಾಯಕ್‌ ಅವರಂತಹ ಘಟಾನುಘಟಿ ನಾಯಕರ ವಿರುದ್ಧವೂ ಸುಬುದ್ಧಿ ಸ್ಪರ್ಧಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.