ADVERTISEMENT

ಹಿರಿಯರು, ಸಂಬಂಧಿಕರು ‘ಪ್ರೈಮರಿ’ ಪಾಸ್

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2014, 19:30 IST
Last Updated 17 ಮಾರ್ಚ್ 2014, 19:30 IST

ನವದೆಹಲಿ: ರಾಜಕೀಯ ವ್ಯವಸ್ಥೆಯನ್ನು ಸಾಮಾನ್ಯ ಜನರಿಗೆ ತೆರೆದಿಡಬೇಕು ಎಂಬ ಉದ್ದೇಶದೊಂದಿಗೆ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್‌ ಗಾಂಧಿ ಅವರು ಆರಂಭಿಸಿದ ‘ಪ್ರೈಮರಿ’ ಚುನಾವಣೆ ಮೂಲಕ ಆಯ್ಕೆಯಾದ 16 ಲೋಕಸಭೆ ಅಭ್ಯರ್ಥಿಗಳಲ್ಲಿ ಪಕ್ಷದ ಪ್ರಬಲ ನಾಯಕರು ಮತ್ತು ಹಿರಿಯ ನಾಯಕರ ಸಂಬಂಧಿಗಳೇ ಹೆಚ್ಚಾಗಿದ್ದಾರೆ.

ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆಗೆ ಅಭ್ಯರ್ಥಿ­ಗಳನ್ನು ಆಯ್ಕೆ ಮಾಡುವ ರೀತಿಯಲ್ಲಿಯೇ ಪ್ರಾಯೋ­ಗಿಕ ನೆಲೆಯಲ್ಲಿ 16 ಕ್ಷೇತ್ರಗಳಲ್ಲಿ ‘ಪ್ರಾಥಮಿಕ’ ಚುನಾವಣೆಗಳು ನಡೆದಿದ್ದವು. ಅಭ್ಯರ್ಥಿಗಳ ಆಯ್ಕೆ­ಯಲ್ಲಿ ಪಕ್ಷದ ಬೆಂಬಲಿಗರ ದೊಡ್ಡ ಮಟ್ಟದ ಭಾಗ­ವ­ಹಿಸು­ವಿಕೆಗಾಗಿ ಈ ಪ್ರಕ್ರಿಯೆ ಅಳವಡಿಸಿಕೊಳ್ಳಲಾಗಿತ್ತು.

ಆದರೆ ಅಜಯ್ ಮಾಕನ್‌, ಜೆ.ಪಿ. ಅಗರ್‌ವಾಲ್‌, ಜನಾರ್ದನ ಪೂಜಾರಿ, ಮೀನಾಕ್ಷಿ ನಟರಾಜನ್‌ ಅವರಂಥ ಹಿರಿಯ ನಾಯಕರು ಈ ಚುನಾವಣೆ ಮೂಲಕ ಅಭ್ಯರ್ಥಿಗಳಾಗಿದ್ದಾರೆ. ಕ್ಷೇತ್ರ ವ್ಯಾಪ್ತಿಯ ಜಿಲ್ಲಾ ಕಾಂಗ್ರೆಸ್‌ ಪದಾಧಿಕಾರಿಗಳು ಮತ್ತು ಪಕ್ಷದ ನಾಯಕರು ಮತದಾರರಾಗಿದ್ದರು.

ಆಸಕ್ತಿಕರ ವಿಷಯವೆಂದರೆ, ಇತ್ತೀಚೆಗೆ ತೃಣಮೂಲ ಕಾಂಗ್ರೆಸ್‌ ಬಿಟ್ಟು ಕಾಂಗ್ರೆಸ್‌ ಸೇರಿದ್ದ ಸೋಮನ್‌ ಮಿತ್ರಾ ಮತ್ತು ಅಜಯ್ ಮಾಕನ್‌ ಅವರು ಕೋಲ್ಕತ್ತ ಉತ್ತರ ಮತ್ತು ನವದೆಹಲಿ ಕ್ಷೇತ್ರಗಳಿಂದ ಅವಿರೋಧ­ವಾಗಿ ಆಯ್ಕೆಯಾಗಿದ್ದಾರೆ. ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ಇತ್ತೀಚೆಗೆ ಜೆಡಿಎಸ್‌ ತೊರೆದ ಸಿ. ನಾರಾಯಣಸ್ವಾಮಿ ವಿಜಯ ಗಳಿಸಿದ್ದಾರೆ.

ಪಕ್ಷದ ನಾಯಕ ದತ್ತಾ ಮೆಘೆ ಮಗ ಸಾಗರ್‌ ಮೆಘೆ ಮತ್ತು ಇನ್ನೊಬ್ಬ ನಾಯಕ ದಿ. ಸಿಸ್‌ರಾಂ ಓಲಾ ಸೊಸೆ ರಾಜ್‌ಬಾಲಾ ಓಲಾ, ವಾರ್ಧಾ ಮತ್ತು ಝುಂಝುನು ಕ್ಷೇತ್ರಗಳಿಂದ ಆಯ್ಕೆಯಾಗಿದ್ದಾರೆ.

ಗುವಾಹಟಿ ಕ್ಷೇತ್ರಕ್ಕಾಗಿ ನಡೆದ ಚುನಾವಣೆಯಲ್ಲಿ ಅಲ್ಲಿನ ಸಚಿವ ಅಕೊನ್ ಬೋರಾ ಪುತ್ರ ಮನಸ್‌ ಬೋರಾ ಆಯ್ಕೆಯಾಗಿರುವುದು ಕಾಂಗ್ರೆಸಿಗರಲ್ಲಿ ಅತೃಪ್ತಿಗೆ ಕಾರಣವಾಗಿದೆ. ಗುವಾಹಟಿ ಪ್ರಾಥಮಿಕ ಚುನಾವಣೆ ಗೆಲ್ಲಲು ‘ಹಣ ಮತ್ತು ತೋಳ್ಬಲ’ದ ಜೊತೆಗೆ ಅಭ್ಯರ್ಥಿಯ ಸಚಿವ ತಂದೆಯ ಪ್ರಭಾವವೂ ಬಳಕೆಯಾಗಿದೆ ಎಂಬ ಆರೋಪಗಳಿವೆ.

ನವದೆಹಲಿಯ ಚಾಂದಿನಿ ಚೌಕ ಮತ್ತು ವಾಯವ್ಯ ದೆಹಲಿ ಕ್ಷೇತ್ರಗಳನ್ನು ಪ್ರಾಥಮಿಕ ಚುನಾವಣೆಗಳಿಗೆ ಆರಂಭದಲ್ಲಿ ಆಯ್ಕೆ ಮಾಡಲಾಗಿತ್ತು. ಈ ಕ್ಷೇತ್ರ­ಗಳನ್ನು ಈಗ ಕಪಿಲ್‌ ಸಿಬಲ್‌ ಮತ್ತು ಕೃಷ್ಣಾ ತೀರಥ್‌ ಪ್ರತಿನಿಧಿಸುತ್ತಿದ್ದಾರೆ. ಈ ನಾಯಕರಿಬ್ಬರ ವಿರೋಧ­ದಿಂದಾಗಿ ಪ್ರಾಥಮಿಕ ಚುನಾವಣೆ ನಡೆಸಲಿರುವ ಪಟ್ಟಿಯಿಂದ ಈ ಕ್ಷೇತ್ರಗಳನ್ನು ಕೈಬಿಡಲಾಗಿತ್ತು.

ಕೇಂದ್ರ ಸಚಿವ ಬೇಣಿ ಪ್ರಸಾದ್ ವರ್ಮಾ ಅವರು ಪ್ರಾಥಮಿಕ ಚುನಾವಣೆಯ ಕಲ್ಪನೆಯನ್ನೇ ಟೀಕಿಸಿದ್ದರು. ‘ಈ ವ್ಯವಸ್ಥೆ ಚುನಾವಣಾ ಟಿಕೆಟನ್ನು ಹರಾಜು ಮಾಡಿದಂತೆ’ ಎಂದು ವರ್ಮಾ ಹೇಳಿದ್ದರು.

ಆದರೆ, ಟೀಕೆ ಮತ್ತು ಅತೃಪ್ತಿಗಳನ್ನು ಕಾಂಗ್ರೆಸ್‌ ಗಣನೆಗೆ ತೆಗೆದುಕೊಂಡಿಲ್ಲ. ನಿರ್ದಿಷ್ಟ ಅಭ್ಯರ್ಥಿಯನ್ನು ಕಾರ್ಯಕರ್ತರು ಬೆಂಬಲಿಸಿದ್ದಾರೆ ಎಂದಾದರೆ ಲೋಕ­ಸಭೆ ಚುನಾವಣೆಯಲ್ಲಿಯೂ ಅವರನ್ನು ಬೆಂಬಲಿಸು­ತ್ತಾರೆ ಎಂಬ ನಿಲುವನ್ನು ಪಕ್ಷ ವ್ಯಕ್ತಪಡಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.