ADVERTISEMENT

‘ಆಯೋಗದ ಸ್ಪಷ್ಟನೆ ಅಸತ್ಯ’

​ಪ್ರಜಾವಾಣಿ ವಾರ್ತೆ
Published 11 ಮೇ 2014, 19:30 IST
Last Updated 11 ಮೇ 2014, 19:30 IST
ಅರುಣ್‌ ಜೇಟ್ಲಿ   ಸಾಂದರ್ಭಿಕ ಚಿತ್ರ
ಅರುಣ್‌ ಜೇಟ್ಲಿ ಸಾಂದರ್ಭಿಕ ಚಿತ್ರ   

ನವದೆಹಲಿ (ಪಿಟಿಐ): ‘ನರೇಂದ್ರ ಮೋದಿ ಅವರು ವಾರಾಣಸಿಯ ಬೇನಿಯಾ­ಭಾಗ್‌­ನಲ್ಲಿ ರ್‍ಯಾಲಿ ನಡೆಸುವುದು ಸೂಕ್ತವಲ್ಲವೆಂದು ಗುಜರಾತ್‌ ಹಿರಿಯ ಪೊಲೀಸ್‌ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದರು’ ಎಂಬ ಚುನಾವಣಾ ಆಯೋಗದ ಸ್ಪಷ್ಟನೆಯಲ್ಲಿ ಸತ್ಯಾಂಶವಿಲ್ಲ ಎಂದು ಬಿಜೆಪಿ ಆಪಾದಿಸಿದೆ.

‘ಚುನಾವಣಾ ಆಯುಕ್ತ ಎಚ್‌.ಎಸ್‌.ಬ್ರಹ್ಮ ಅವರಿಗೆ ಈ ಸಂಬಂಧ ತಪ್ಪು ಮಾಹಿತಿ ನೀಡಲಾಗಿದೆ. ಗುಜರಾತ್‌ ಪೊಲೀಸ್‌ ಸಿಬ್ಬಂದಿಯ ಅಭಿಪ್ರಾಯವನ್ನು ತಿರುಚಲಾಗಿದೆ’ ಎಂದು ಬಿಜೆಪಿ ನಾಯಕ ಅರುಣ್‌ ಜೇಟ್ಲಿ ಆರೋಪಿಸಿದರು.

‘ರ್‍ಯಾಲಿ ನಡೆಯುವ ಜಾಗದ ಬಗ್ಗೆ ನಾನು ಮತ್ತು ಅಮಿತ್‌ ಷಾ ಗುಜರಾತ್‌ ಪೊಲೀಸರೊಂದಿಗೆ ಹಲವು ಸಲ ಖುದ್ದು ಮಾತನಾಡಿದ್ದೆವು. ಅವರು ಜಿಲ್ಲಾಧಿಕಾರಿ ಮುಂದೆ, ನಿಗದಿತ ಜಾಗದಲ್ಲಿ ರ್‍ಯಾಲಿ ನಡೆಸಲು ತಮ್ಮ ಆಕ್ಷೇಪವೇನೂ ಇಲ್ಲ; ಅನುಮತಿ ಕೊಡಿ ಎಂದೇ ಹೇಳಿದ್ದರು’ ಎಂದು ಖಾಸಗಿ ಸುದ್ದಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಹೇಳಿದರು.

‘ಹಿಂದೆ, 1991ರಲ್ಲಿ ನಡೆದಿದ್ದ ರ್‍ಯಾಲಿಯ ನಂತರ ಅಲ್ಲಿ ತೊಂದರೆ ಉದ್ಭವಿಸಿದ್ದ ಕಾರಣ ಮೋದಿ ಅವರ ರ್‍ಯಾಲಿಗೆ ಅನುಮತಿ ನಿರಾಕರಿಸಲಾಗಿದೆ’ ಎಂದು ಪಕ್ಷಕ್ಕೆ ತಿಳಿಸಲಾಯಿತು. ಆದರೆ ಈಗ ಬೇರೆ ಬೇರೆ ಕಾರಣಗಳನ್ನು ನೀಡಲಾಗುತ್ತಿದೆ ಎಂದು ಅವರು ಟೀಕಿಸಿದರು. ‘ಒಂದೇ ಜಾಗದಲ್ಲಿ ಮೂರು ಪಕ್ಷಗಳಿಗೆ ರ್‍ಯಾಲಿ ನಡೆಸಲು ಅವಕಾಶ ನೀಡಿ ಬಿಜೆಪಿ ಯೊಂದಕ್ಕೆ ಅವಕಾಶ ನೀಡದಿರುವುದು ಎಷ್ಟರಮಟ್ಟಿಗೆ ಸರಿ’ ಎಂದು ಜೇಟ್ಲಿ ಕೇಳಿದರು.

‘ಮೋದಿ ಅವರ ರ್‍ಯಾಲಿಗೆ ನಿಗದಿ ಮಾಡಿರುವ ಜಾಗ ತೀರಾ ಇಕ್ಕಟ್ಟಿನ ‘ಗೊಂದಲಪುರ’ದಂತಹ ಜಾಗವಾಗಿರುವುದರಿಂದ ಅಲ್ಲಿ ರ್‍ಯಾಲಿ ನಡೆಸಲು ಸಾಧ್‍ಯವಿಲ್ಲವೆಂದು ಗುಜರಾತ್‌ ಪೊಲೀಸ್‌ ಅಧಿಕಾರಿ ಅಭಿಪ್ರಾಯಪಟ್ಟಿ­ದ್ದರು’ ಎಂದು ಬ್ರಹ್ಮ ಅವರು ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.