ಅಹಮದಾಬಾದ್(ಪಿಟಿಐ): ಲೋಕಸಭೆ ಚುನಾವಣೆಗೆ ದಿನಗಣನೆ ಶುರುವಾಗಿರುವುದರಿಂದ ಪ್ರತಿಯೊಂದು ಸಂದರ್ಭವನ್ನು ಬಿಜೆಪಿ ಪ್ರಚಾರಕ್ಕಾಗಿ ಬಳಸಿಕೊಳ್ಳುತ್ತಿದೆ. ಇದಕ್ಕೆ ಇತ್ತೀಚಿನ ಉದಾಹರಣೆ ‘ನಮೋ ಗುಲಾಲ್’. ಹೋಳಿ ಹಬ್ಬವನ್ನು ಗಮನದಲ್ಲಿಟ್ಟು ‘ನಮೋ ಗುಲಾಲ್’ ಪ್ರಚಾರ ಕೈಗೊಂಡಿರುವ ಬಿಜೆಪಿ ಇದೀಗ ಪರೀಕ್ಷೆಗಳನ್ನೂ ತನ್ನ ಪ್ರಚಾರಕ್ಕಾಗಿ ಬಳಸಿಕೊಳ್ಳಲು ಮುಂದಾಗಿದೆ.
ಗುಜರಾತ್‌ನಲ್ಲಿ ಗುರುವಾರದಿಂದ ಹತ್ತು ಮತ್ತು ಹನ್ನೆರಡನೇ ತರಗತಿಯ ಪರೀಕ್ಷೆಗಳು ಆರಂಭವಾಗಲಿವೆ. ಪರೀಕ್ಷೆಗೆ ಹಾಜರಾಗಲಿರುವ ವಿದ್ಯಾರ್ಥಿಗಳು ಮತ್ತು ಅವರ ಪೋಷಕರ ಮೊಬೈಲ್ಗಳಿಗೆ ಮುಖ್ಯಮಂತ್ರಿ ನರೇಂದ್ರ ಮೋದಿ ಅವರ ಶುಭ ಕೋರುವ ಕರೆ ಬರುತ್ತಿವೆ.
‘ವಿದ್ಯಾರ್ಥಿ ಮಿತ್ರರೇ, ನಾನು ನರೇಂದ್ರ ಮೋದಿ. ನಿಮ್ಮಂತೆ ನಾನು ಕೂಡ ಪರೀಕ್ಷೆ ಬರೆಯುತ್ತಿದ್ದೇನೆ. ನನ್ನಂತೆ, ನೀವು ಕೂಡ ಪರೀಕ್ಷೆ ಬಗ್ಗೆ ಚಿಂತಿತರಾಗುವುದು ಬೇಡ. ಜೀವನದಲ್ಲಿ ಪರೀಕ್ಷೆ ಸ್ವಾಭಾವಿಕ. ನಮ್ಮ ಪರಿಶ್ರಮವೇ ನಮಗೆ ಒಳ್ಳೆಯ ಫಲಿತಾಂಶ ತಂದುಕೊಡುತ್ತದೆ. ನನ್ನ ಶುಭಾಶಯ ನಿಮ್ಮೊಂದಿಗೆ ಇದೆ’ ಎಂದು ಮೋದಿ ಅವರ ಧ್ವನಿಮುದ್ರಿಕೆ ಹೇಳುತ್ತದೆ.
ಇಂದು ಲಖನೌ, ವಾರಾಣಸಿ ಅಭ್ಯರ್ಥಿ ಪ್ರಕಟ
ಲಖನೌ: ಉತ್ತರ ಪ್ರದೇಶದ 80 ಲೋಕಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ಬಗ್ಗೆ ಚರ್ಚಿಸುವುದಕ್ಕಾಗಿ ರಾಜ್ಯದ ಬಿಜೆಪಿ ನಾಯಕರನ್ನು ದೆಹಲಿಗೆ ಕರೆಸಿಕೊಳ್ಳಲಾಗಿದೆ. ವಿವಾದಕ್ಕೆ ಕಾರಣವಾಗಿರುವ ಲಖನೌ, ವಾರಾಣಸಿ ಮತ್ತು ಕಾನ್ಪುರ ಕ್ಷೇತ್ರಗಳ ಬಗ್ಗೆಯೂ ಚರ್ಚೆ ನಡೆಯಲಿದೆ ಎಂದು ತಿಳಿದು ಬಂದಿದೆ.
ಪ್ರಧಾನ ಕಾರ್ಯದರ್ಶಿ ಅಮಿತ್ ಷಾ ಮತ್ತು ರಾಷ್ಟ್ರೀಯ ಅಧ್ಯಕ್ಷ ರಾಜನಾಥ ಸಿಂಗ್ ಅವರನ್ನು ರಾಜ್ಯ ಬಿಜೆಪಿ ಅಧ್ಯಕ್ಷ ಲಕ್ಷ್ಮಿಕಾಂತ್ ಬಾಜ್‌ಪೈ ಭೇಟಿಯಾಗಿ ಚರ್ಚಿಸಲಿದ್ದಾರೆ. ವಿವಾದದಲ್ಲಿರುವ ಮೂರು ಕ್ಷೇತ್ರಗಳ ಪಕ್ಷದ ಕಾರ್ಯಕರ್ತರ ಅಭಿಪ್ರಾಯಗಳನ್ನು ಬಾಜ್‌ಪೈ ಪಡೆದುಕೊಂಡಿದ್ದಾರೆ. ವಾರಾಣಸಿಯಿಂದ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರು ಸ್ಪರ್ಧಿಸಬೇಕು ಎಂದು ಪಕ್ಷದ ಕಾರ್ಯಕರ್ತರು ಬಯಸುತ್ತಿದ್ದಾರೆ.
ಆದರೆ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಬಿಜೆಪಿ ನಾಯಕ ಮುರಳಿ ಮನೋಹರ ಜೋಶಿ ಅವರಿಗೆ ಕ್ಷೇತ್ರ ಬಿಟ್ಟು ಕೊಡಲು ಇಷ್ಟವಿಲ್ಲ. ಹಾಗೆಯೇ ಲಖನೌ ಕ್ಷೇತ್ರದಿಂದ ರಾಜನಾಥ ಸ್ಪರ್ಧಿಸುವ ಚಿಂತನೆ ಇದೆ. ಈ ಕ್ಷೇತ್ರದ ಹಾಲಿ ಸಂಸದ ಲಾಲ್‌ಜಿ ಟಂಡನ್ ಅವರಿಗೂ ಕ್ಷೇತ್ರ ಬಿಟ್ಟುಕೊಡುವ ಮನಸಿಲ್ಲ. ಉತ್ತರ ಪ್ರದೇಶದ ಎಲ್ಲ ಬಿಜೆಪಿ ಅಭ್ಯರ್ಥಿಗಳ ಹೆಸರು ಗುರುವಾರ ಪ್ರಕಟವಾಗಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.