ಬೆಂಗಳೂರು: ‘ಅತ್ಯುತ್ತಮ ಸಂಸದೀಯ ಪಟು ಎಸ್.ಎಂ. ಕೃಷ್ಣ ಅವರನ್ನು ಕಾಂಗ್ರೆಸ್ ಪಕ್ಷವು ಬೆಂಗಳೂರಿನ ಯಾವುದಾದರೂ ಒಂದು ಕ್ಷೇತ್ರದಿಂದ ಕಣಕ್ಕೆ ಇಳಿಸಬೇಕು. ಎಚ್.ಡಿ. ದೇವೇಗೌಡ ಅವರ ವಿರುದ್ಧ ಅಭ್ಯರ್ಥಿಯನ್ನು ಹಾಕಬಾರದು’ ಎಂದು ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಒತ್ತಾಯಿಸಿದರು.
ಅವರು ಮಂಗಳವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಜಾಫರ್ ಷರೀಫ್, ಡಿ.ಬಿ. ಚಂದ್ರೇಗೌಡ, ಜನಾರ್ದನ ಪೂಜಾರಿ, ಬಿ.ಕೆ. ಚಂದ್ರಶೇಖರ್ ಅವರಂತಹ ನಾಯಕರು ಸಂಸತ್‌ನಲ್ಲಿ ರಾಜ್ಯವನ್ನು ಪ್ರತಿನಿಧಿಸಬೇಕು’ ಎಂದು ಅಭಿಪ್ರಾಯಪಟ್ಟರು. ‘ಇಂಥವರು ನೆಲ– ಜಲದ ವಿಷಯವೂ ಸೇರಿದಂತೆ ರಾಜ್ಯದ ಜ್ವಲಂತ ಸಮಸ್ಯೆಗಳ ಕುರಿತು ಲೋಕಸಭೆ ಕಲಾಪಗಳಲ್ಲಿ ಪರಿಣಾಮಕಾರಿಯಾಗಿ ವಾದ ಮಂಡಿಸಬಲ್ಲರು’ ಎಂದು ಹೇಳಿದರು.
‘ತಮಿಳುನಾಡು, ಆಂಧ್ರ ಮತ್ತು ಕೇರಳದ ಸಂಸದರು ತಮ್ಮ ರಾಜ್ಯಗಳ ಪರ ದನಿ ಎತ್ತುವ ಮೂಲಕ ಅಲ್ಲಿನ ಜನರ ಹಲವು ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಯಶಸ್ವಿಯಾದರು. ಆದರೆ, ನಮ್ಮ ಸಂಸದರು ಕಾವೇರಿ, ಕೃಷ್ಣಾ ಜಲ ವಿವಾದ, ಗಡಿ ವಿವಾದ, ಮಹಾಜನ್ ವರದಿ ಅನುಷ್ಠಾನ ಸೇರಿದಂತೆ ಹಲವು ಸಂಗತಿಗಳ ಬಗೆಗೆ ದನಿಯನ್ನೇ ಎತ್ತಲಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.