
ಬೆಂಗಳೂರು: ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರ ಮೋಡಿಗೆ ಒಳಗಾಗಿರುವ ರಾಜ್ಯದ ಜನತೆ ಪ್ರಸಕ್ತ ಲೋಕಸಭೆ ಚುನಾವಣೆಯಲ್ಲಿ ಆಡಳಿತಾರೂಢ ಕಾಂಗ್ರೆಸ್ ಪಕ್ಷಕ್ಕೆ ತೀವ್ರ ಮುಖಭಂಗ ಉಂಟುಮಾಡಿದ್ದಾರೆ. ಲೋಕಸಭೆಯ ಒಟ್ಟು 28 ಸ್ಥಾನಗಳ ಪೈಕಿ 17 ಸ್ಥಾನಗಳು 'ಕಮಲ'ದ ಪಾಲಾಗಿದ್ದು, 'ಕೈ'ಗೆ ಕೇವಲ 9 ಸ್ಥಾನಗಳು ಮಾತ್ರ ದಕ್ಕಿವೆ. ಇನ್ನೂ, ಜೆಡಿಎಸ್ 2 ಸ್ಥಾನಗಳಿಗೆ ತೃಪ್ತಿಪಟ್ಟುಕೊಳ್ಳುವಂತಾಗಿದೆ.
ಪ್ರಮುಖ ಕ್ಷೇತ್ರಗಳಾದ ಶಿವಮೊಗ್ಗ, ಉಡುಪಿ–ಚಿಕ್ಕಮಗಳೂರು,ದಕ್ಷಿಣ ಕನ್ನಡ, ಮೈಸೂರು, ಬೆಂಗಳೂರು ಉತ್ತರ, ದಕ್ಷಿಣ, ಬಳ್ಳಾರಿ, ದಾವಣಗೆರೆಯಲ್ಲಿ ತೀವ್ರ ಪೈಪೋಟಿ ನಡುವೆಯೂ ಬಿಜೆಪಿ ಭರ್ಜರಿ ಜಯ ಸಾಧಿಸಿದೆ.
ಇನ್ನುಳಿದಂತೆ ಧಾರವಾಡ,ಬಿಜಾಪುರ, ಬಾಗಲಕೋಟೆ, ಬೆಳಗಾವಿ, ಬೀದರ್, ಹಾವೇರಿ ಕ್ಷೇತ್ರಗಳಲ್ಲೂ ಬಿಜೆಪಿ ಗೆಲುವು ಸಾಧಿಸಿದೆ.
ಕಾಂಗ್ರೆಸ್ ತೆಕ್ಕೆಗೆ: ತುಮಕೂರು, ಗುಲ್ಬರ್ಗ, ಚಿಕ್ಕೋಡಿ, ರಾಯಚೂರು, ಬೆಂಗಳೂರು ಗ್ರಾಮಾಂತರ, ಚಿಕ್ಕೋಡಿ ಕ್ಷೇತ್ರಗಳು ಕಾಂಗ್ರೆಸ್ ಪಾಲಾಗಿವೆ.
ಜೆಡಿಎಸ್: ಮಾಜಿ ಪ್ರಧಾನಿ, ಜೆಡಿಎಸ್ ರಾಷ್ಟ್ರಾಧ್ಯಕ್ಷ ಎಚ್. ಡಿ. ದೇವೇಗೌಡ ಹಾಸನ ಕ್ಷೇತ್ರದಲ್ಲಿ ಜಯಭೇರಿ ಬಾರಿಸಿದ್ದಾರೆ. ಇನ್ನು ಮಂಡ್ಯದಲ್ಲಿ ರಮ್ಯಾ ಅವರನ್ನು ಕಣಕ್ಕಿಳಿಸಿ ಗೆಲ್ಲುವ ಕಾಂಗ್ರೆಸ್ ನಿರೀಕ್ಷೆ ತಲೆಕೆಳಗಾಗಿದೆ. ಪ್ರತಿಸ್ಪರ್ಧಿ ಜೆಡಿಎಸ್ ನ ಸಿ. ಎಸ್. ಪುಟ್ಟರಾಜು ಗೆಲುವು ಸಾಧಿಸಿದ್ದಾರೆ.
ಕೊಪ್ಪಳದಲ್ಲಿ ಬಿಜೆಪಿಯ ಕರಡಿ ಸಂಗಣ್ಣ ಗೆಲುವು ಬಹುತೇಕ ಖಚಿತವಾಗಿದೆ. ಮತಯಂತ್ರವೊಂದರಲ್ಲಿ ತಾಂತ್ರಿಕ ದೋಷದಿಂದ ಗೆಲುವಿನ ಅಧಿಕೃತ ಘೋಷಣೆ ಬಾಕಿ ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.