ADVERTISEMENT

ಎಂ.ಬಿ.ಪಾಟೀಲ ಪರ ನಟಿ ರಮ್ಯಾ ಭರ್ಜರಿ ಪ್ರಚಾರ

​ಪ್ರಜಾವಾಣಿ ವಾರ್ತೆ
Published 6 ಮೇ 2023, 12:52 IST
Last Updated 6 ಮೇ 2023, 12:52 IST
ಎಂ.ಬಿ.ಪಾಟೀಲ ಪರ ಚುನಾವಣಾ ಪ್ರಚಾರ ನಡೆಸಿದ ನಟಿ ರಮ್ಯಾ
ಎಂ.ಬಿ.ಪಾಟೀಲ ಪರ ಚುನಾವಣಾ ಪ್ರಚಾರ ನಡೆಸಿದ ನಟಿ ರಮ್ಯಾ   

ವಿಜಯಪುರ: ಕಾಂಗ್ರೆಸ್‌ ಸ್ಟಾರ್‌ ಪ್ರಚಾರಕಿ, ಖ್ಯಾತ ಚಲನಚಿತ್ರ ನಟಿ ರಮ್ಯಾ ಅವರು ಶನಿವಾರ ಬಬಲೇಶ್ವರ ವಿಧಾನಸಭಾ ಕ್ಷೇತ್ರದಲ್ಲಿ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ ಪರ ಚುನಾವಣಾ ಪ್ರಚಾರ ನಡೆಸಿದರು.

ತಿಕೋಟಾ ತಾಲ್ಲೂಕಿನ ಜಾಲಗೇರಿ, ಜಾಲಗೇರಿ ಎಲ್.ಟಿ.1, ತಿಕೋಟಾ, ನಿಡೋಣಿ, ಬಬಲೇಶ್ವರದಲ್ಲಿ ರೋಡ್ ಶೋ, ಕಾರ್ನರ್ ಮಿಟಿಂಗ್‍ ನಡೆಸಿದರು.

ಚಿತ್ರನಟಿ ರಮ್ಯಾ ಮತ್ತು ಎಂ.ಬಿ. ಪಾಟೀಲ ಅವರ ಕುಟುಂಬ ಸದಸ್ಯರು ಹಾಗೂ ಕಾಂಗ್ರೆಸ್ ಮುಖಂಡರನ್ನು ಗ್ರಾಮಸ್ಥರು ಹೂಮಳೆ ಸುರಿಸುವ ಮೂಲಕ ಭರ್ಜರಿ ಸ್ವಾಗತ ಕೋರಿದರು.

ADVERTISEMENT

'ಬಸವಣ್ಣನವರ ಕಾಯಕ ತತ್ವದಡಿ ಜನಸೇವೆ ಮಾಡುತ್ತಿರುವ ಎಂ. ಬಿ. ಪಾಟೀಲರು ಕರ್ನಾಟಕದ ಆಸ್ತಿಯಾಗಿದ್ದಾರೆ' ಎಂದು ರಮ್ಯಾ ಹೇಳಿದರು.

'ಶ್ರೀ ಸಿದ್ಧೇಶ್ವರ ಸ್ವಾಮೀಜಿ ಬೊಗಸೆ ನೀರನ್ನು ಕೇಳಿದರು. ಆದರೆ, ಎಂ. ಬಿ. ಪಾಟೀಲರು ಹೊಳೆಯನ್ನು ಈ ಕಡೆ ಹರಿಸಿ ಜಲಕ್ರಾಂತಿ ಮಾಡಿದ್ದಾರೆ. ಈ ಮೂಲಕ ಜನರ ಜೀವನ ಮಟ್ಟವನ್ನು ಶಾಶ್ವತವಾಗಿ ಸುಧಾರಿಸಿದ್ದಾರೆ. ಇಂಥ ನಾಯಕರನ್ನು ಆಶೀರ್ವದಿಸಿ ಗೆಲ್ಲಿಸಿದರೆ ವಿಜಯಪುರ ಜಿಲ್ಲೆ ಅಷ್ಟೇ ಅಲ್ಲ. ಇಡೀ ನಾಡಿಗೆ ಒಳ್ಳೆಯದಾಗಲಿದೆ' ಎಂದು ಹೇಳಿದರು.

'ನಾನು ತಂದೆಯನ್ನು ಕಳೆದುಕೊಂಡಾಗ ಮಂಡ್ಯಕ್ಕೆ ಬಂದಿದ್ದ ಎಂ. ಬಿ. ಪಾಟೀಲರು ನೈತಿಕವಾಗಿ ಧೈರ್ಯ ತುಂಬಿದ್ದರು. ಅಲ್ಲದೇ, ಚುನಾವಣೆಯಲ್ಲಿ ನಾನು ಸಂಸತ್ ಸದಸ್ಯೆಯಾಗಲು ಸಹಕರಿಸಿದ್ದಾರೆ. ಅಷ್ಟೇ ಅಲ್ಲ, ಇಡೀ ನಾಡಿನಾದ್ಯಂತ ಕೆಲಸ ಮಾಡಿ ವಿಜಯಪುರ ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಜಿಲ್ಲೆ ಮತ್ತು ರಾಜ್ಯಕ್ಕೆ ಅವರ ಸೇವೆ ಅಗತ್ಯವಾಗಿದೆ. ಅವರನ್ನು ಎಲ್ಲರೂ ಬೆಂಬಲಿಸಿ ಗೆಲ್ಲಿಸಬೇಕು. ಈ ಬಾರಿ ಕಾಂಗ್ರೆಸ್‍ನ್ನು ಗೆಲ್ಲಿಸಿದರೆ ಜನರ ಪರ ಯೋಜನೆಗಳು ಜಾರಿಯಾಗಲಿವೆ' ಎಂದು ಹೇಳಿದರು.

ಪ್ರಚಾರದಲ್ಲಿ ಸಕ್ರಿಯರಾಗಿರುವ ರಮ್ಯಾ

ಆಶಾ ಎಂ.ಪಾಟೀಲ ಮಾತನಾಡಿ , 'ಎಂ. ಬಿ. ಪಾಟೀಲರ ಮೇಲೆ ತಾವೆಲ್ಲರೂ ಇಟ್ಟಿರುವ ಅಭಿಮಾನವನ್ನು ಉಳಿಸಿ ಬೆಳೆಸಬೇಕು. ಅವರು ಮಾಡಿರುವ ಅಭಿವೃದ್ಧಿ ಕಾರ್ಯಗಳನ್ನು ಪರಿಗಣಿಸಿ ಪ್ರಚಂಡ ಬಹುಮತದಿಂದ ಆರಿಸಿ ತರಬೇಕು. ಈ ಮೂಲಕ ಸರ್ವಜನರ ಸರ್ವಾಂಗೀಣ ಅಭಿವೃದ್ಧಿಗೆ ಬೆಂಬಲ ನೀಡಬೇಕು' ಎಂದು ಹೇಳಿದರು.

ನಿಡೋಣಿಯಲ್ಲಿ ಮಾತನಾಡಿದ ಬಸನಗೌಡ ಎಂ. ಪಾಟೀಲ, 'ಇದು ಧರ್ಮ ಮತ್ತು ಅಧರ್ಮದ ನಡುವೆ ನಡೆಯುತ್ತಿರುವ ಚುನಾವಣೆಯಾಗಿದೆ. ಮಕ್ಕಳು ಉತ್ತಮ ಶಿಕ್ಷಣ ಪಡೆಯಬೇಕಾ? ಅಥವಾ ದಾರಿ ತಪ್ಪಬೇಕಾ? ಎಂದು ಯೋಚಿಸಿ ನಿರ್ಧರಿಸಿ. ಎಂ. ಬಿ. ಪಾಟೀಲರನ್ನು ಭಾರಿ ಅಂತರದಿಂದ ಗೆಲ್ಲಿಸುವ ಮೂಲಕ ಬಬಲೇಶ್ವರ ಮತಕ್ಷೇತ್ರ ಮತ್ತಷ್ಟು ಅಭಿವೃದ್ಧಿಯಾಗುವಂತೆ ಮಾಡೋಣ' ಎಂದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಮ್ಯಾ

ಬಬಲೇಶ್ವರದಲ್ಲಿ ಮಾತನಾಡಿದ ಜಿ.ಪಂ. ಮಾಜಿ ಅಧ್ಯಕ್ಷ ವಿ.ಎಸ್.ಪಾಟೀಲ, 'ಮತದಾರರು ಜಾತಿ ರಾಜಕಾರಣಕ್ಕೆ ಮಣೆ ಹಾಕಬಾರದು. ನಮ್ಮ ಜೀವನ ಸುಖಮಯವಾಗಿರಲು ಶಾಶ್ವತ ಪರಿಹಾರ ಒದಗಿಸಿರುವ ಎಂ. ಬಿ. ಪಾಟೀಲ ಅವರನ್ನು ಕಳೆದ ಬಾರಿಗಿಂತಲೂ ಅತ್ಯಧಿಕ ಮತಗಳ ಅಂತರದಿಂದ ಗೆಲ್ಲಿಸಬೇಕು' ಎಂದು ಹೇಳಿದರು.

ಮುಖಂಡರಾದ ರೇಣುಕಾ ಸುನೀಲಗೌಡ ಪಾಟೀಲ, ಕಲ್ಪನಾ ಪಾಟೀಲ, ರಾಜುಗೌಡ ಪೊಲೀಸ್ ಪಾಟೀಲ, ಭಾಗೀರಥಿ ತೇಲಿ, ಗೀತಾಂಜಲಿ ಪಾಟೀಲ, ಪ್ರತಿಭಾ ಪಾಟೀಲ, ವಿದ್ಯಾರಾಣಿ ತುಂಗಳ, ಶ್ರೀಶೈಲಗೌಡ ಪಾಟೀಲ ನಿಡೋಣಿ, ವಿ.ಎಸ್.ಪಾಟೀಲ, ಈರನಗೌಡ ಬಿರಾದಾರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.