ADVERTISEMENT

ಕೊಳ್ಳೆಗಾಲ| ಕಾಂಗ್ರೆಸ್ ಮಾಜಿ ಶಾಸಕ ಎಸ್. ಬಾಲರಾಜ್ ಅವರ ನಿರ್ಧಾರ ಇಂದು ಪ್ರಕಟ?

ಕಾಂಗ್ರೆಸ್‌ನಿಂದ ಕಾಲು ಹೊರಗಿಟ್ಟ ಬಾಲರಾಜ್‌? ಇಂದು ನಿರ್ಧಾರ ಪ್ರಕಟ

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2023, 2:12 IST
Last Updated 17 ಏಪ್ರಿಲ್ 2023, 2:12 IST
ಕೊಳ್ಳೇಗಾಲದಲ್ಲಿ ಭಾನುವಾರ ನಡೆದ ಸಮಾಲೋಚನಾ ಸಭೆಯಲ್ಲಿ ಬಾಲರಾಜ್‌ ಬೆಂಬಲಿಗರನ್ನುದ್ದೇಶಿಸಿ ಮಾತನಾಡಿದರು
ಕೊಳ್ಳೇಗಾಲದಲ್ಲಿ ಭಾನುವಾರ ನಡೆದ ಸಮಾಲೋಚನಾ ಸಭೆಯಲ್ಲಿ ಬಾಲರಾಜ್‌ ಬೆಂಬಲಿಗರನ್ನುದ್ದೇಶಿಸಿ ಮಾತನಾಡಿದರು   

ಕೊಳ್ಳೇಗಾಲ: ಕೊಳ್ಳೇಗಾಲ ಮೀಸಲು ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್‌ ಟಿಕೆಟ್‌ ತಪ್ಪಿದ ಬಳಿಕ ಅಸಮಾಧಾನಗೊಂಡಿರುವ ಮಾಜಿ ಶಾಸಕ ಎಸ್‌.ಬಾಲರಾಜ್‌ ಭಾನುವಾರ ಮತ್ತೆ ಪಕ್ಷ ಹಾಗೂ ನಾಯಕರ ವಿರುದ್ಧ ಅಸಮಾಧಾನ ಹೊರಹಾಕಿದರು. ಪಕ್ಷದಿಂದ ನನಗೆ ಅನ್ಯಾಯವಾಗಿದೆ ಎಂದು ದೂರಿದರು. ದಿವಂಗತ ಧ್ರುವನಾರಾಯಣ ಅವರನ್ನು ನೆನೆದು ಕಣ್ಣೀರು ಹಾಕಿದರು.

ಕಾಂಗ್ರೆಸ್‌ ಪಕ್ಷದಿಂದ ದೂರವಾಗಲು ಬಾಲರಾಜ್‌ ಮನಸ್ಸು ಮಾಡಿದ್ದಾರೆ ಎಂದು ಹೇಳಲಾಗುತ್ತಿದ್ದು, ಸೋಮವಾರ ತಮ್ಮ ನಿರ್ಧಾರ ಪ್ರಕಟಿಸಲಿದ್ದಾರೆ.

‘ರಾಜ್ಯ ನಾಯಕರು ಕರೆ ಮಾಡಿ ಭರವಸೆ ನೀಡಬೇಕು. ಇಲ್ಲದಿದ್ದರೆ ಸೋಮವಾರ ಬೆಳಿಗ್ಗೆ ನಿರ್ಧಾರ ಪ್ರಕಟಿಸುವೆ’ ಎಂದು ಭಾನುವಾರ ನಡೆದ ಬೆಂಬಲಿಗರ ಸಭೆಯಲ್ಲಿ ಅವರು ಹೇಳಿದ್ದಾರೆ.

ADVERTISEMENT

ನಗರದ ಬಸವೇಶ್ವರ ನಗರದ ನಿವಾಸದಲ್ಲಿ ಭಾನುವಾರ ಅಭಿಮಾನಿಗಳು ಹಾಗೂ ಕಾರ್ಯಕರ್ತರ ಸಮಾಲೋಚನಾ ಸಭೆ ನಡೆಸಿದ ಬಾಲರಾಜ್‌ ‘23 ವರ್ಷಗಳಿಂದ ದುಡಿದ ನನಗೆ ಕಾಂಗ್ರೆಸ್ ಅನ್ಯಾಯ ಮಾಡಿದೆ. ನಾನು ನಂಬಿರುವುದು ಕಾರ್ಯಕರ್ತರನ್ನೇ ವಿನಾಃ ಹಣವನ್ನಲ್ಲ. ಕಾರ್ಯಕರ್ತರೇ ನನ್ನ ದೇವರು. ಅವರೇ ನನ್ನ ಜೀವ. ಪಕ್ಷಕ್ಕಾಗಿ ಪ್ರಾಮಾಣಿಕವಾಗಿ ಹಗಲು–ರಾತ್ರಿ ನಿರಂತರವಾಗಿ ದುಡಿದಿದ್ದೇನೆ. ಪಕ್ಷ ಕೊಟ್ಟ ಜವಾಬ್ದಾರಿಯನ್ನು ನಿಷ್ಠೆಯಿಂದ ಮಾಡಿದ್ದೇನೆ. ಹಾಗಿದ್ದರೂ ನನಗೆ ಅನ್ಯಾಯವಾಗಿದೆ. ಅನೇಕ ಉಪ ಚುನಾವಣೆಗಳ ಸಂದರ್ಭದಲ್ಲಿ ಜಿಲ್ಲೆಗಳಿಗೆ ಪ್ರವಾಸ ಹೋಗಿ ಕಾರ್ಯಕರ್ತರ ಜೊತೆ ಬಾಂಧವ್ಯ ಬೆಳೆಸಿಕೊಂಡು ಪಕ್ಷ ಕಟ್ಟಿದ್ದೇನೆ. ಪಕ್ಷ ಈ ರೀತಿಯ ದ್ರೋಹ ಮಾಡುತ್ತದೆ ಎಂದು ನಾನು ಎಂದಿಗೂ ಭಾವಿಸಿರಲಿಲ್ಲ’ ಎಂದು ಭಾವುಕರಾದರು.

‌‘ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿದ್ದ ಆರ್.ಧ್ರುವನಾರಾಯಣ ನಮ್ಮನ್ನು ಬಿಟ್ಟು ಹೋದ ಮೇಲೆ ಪಕ್ಷದ ವರಿಷ್ಠರು ನನಗೆ ಸರಿಯಾಗಿ ಸ್ಪಂದಿಸುತ್ತಿಲ್ಲ‌. ಅವರು ಬದುಕಿದ್ದರೆ ನನಗೆ ಈ ಸ್ಥಿತಿ ಬರುತ್ತಿರಲಿಲ್ಲ’ ಎಂದು ಬಿಕ್ಕಿ ಬಿಕ್ಕಿ ಅತ್ತರು.

‘ನನ್ನ ತಾಯಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಂದರ್ಭದಲ್ಲಿ ಧ್ರುವನಾರಾಯಣ ನನ್ನ ತಾಯಿಯನ್ನು ನೋಡಲು ಬಂದಿದ್ದರು. ಆಗ ತಾಯಿ ಧ್ರುವನಾರಾಯಣ ಕೈಯನ್ನು ಹಿಡಿದು, ‘ನನ್ನ ಮಗನನ್ನು ಕೈ ಬಿಡಬೇಡ. ನಾನು ನಿನ್ನನ್ನೇ ನಂಬಿದ್ದೇನೆ. ಈ ಬಾರಿ ನನ್ನ ಮಗನಿಗೆ ಟಿಕೆಟ್ ನೀಡಬೇಕು’ ಎಂದು ಭಾವುಕರಾಗಿದ್ದರು. ಆದರೆ ಇಂದು ನನ್ನ ತಾಯಿಯೂ ಇಲ್ಲ ಹಾಗೂ ನನ್ನ ಗೆಳೆಯನೂ ಇಲ್ಲ. ಈ ದಿನ ಬರುತ್ತದೆ ಎಂದು ನಾನು ಎಂದಿಗೂ ಭಾವಿಸಿರಲಿಲ್ಲ’ ಎಂದು ಕಣ್ಣೀರು ಸುರಿಸಿದರು.

‘ಮೂರು ಮಂದಿ ಟಿಕೆಟ್ ಆಕಾಂಕ್ಷಿಗಳು ಇದ್ದೆವು. ಟಿಕೆಟ್ ನೀಡುವ ಸಂದರ್ಭದಲ್ಲಿ ಮೂವರನ್ನೂ ಕರೆದು ಯಾರಿಗೆ ಟಿಕೆಟ್ ಎಂದು ಘೋಷಣೆ ಮಾಡುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದರು. ಆದರೆ ಯಾರನ್ನು ಕರೆಸಿಕೊಳ್ಳದೆ ಏಕಾಏಕಿ ಟಿಕೆಟ್ ಘೋಷಣೆ ಮಾಡಿದ್ದಾರೆ. ಇದರಿಂದ ನನಗೆ ನೋವಾಗಿದೆ. ನನಗೆ ಟಿಕೆಟ್‌ ನೀಡಬೇಕು ಎಂಬ ಅಭಿಪ್ರಾಯ ಸಮೀಕ್ಷೆಯಲ್ಲಿ ಬಂದಿದ್ದರೂ, ನನಗೆ ಟಿಕೆಟ್ ತಪ್ಪಿಸಿದ್ದಾರೆ’ ಎಂದು ದೂರಿದರು.

ಸಭೆಯಲ್ಲಿ 500ಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು.

‘ಸ್ವಾಭಿಮಾನಕ್ಕೆ ಧಕ್ಕೆ’

ಬೆಂಬಲಿಗ ಬಾನಹಳ್ಳಿಯ ಶಂಭುರಾಜ್ ಮಾತನಾಡಿ ‘ನಿಮಗೆ ಪಕ್ಷ ಅನ್ಯಾಯ ಮಾಡಿದೆ. ಹಾಗಾಗಿ ನೀವು ಪಕ್ಷದಿಂದ ಹೊರಬರಬೇಕು’ ಎಂದರು.

ಮತ್ತೊಬ್ಬ ಮುಖಂಡ ಕಾಗಲವಾಡಿ ಕಾರ್ತಿಕ್ ಮಾತನಾಡಿ ‘ಅನ್ಯಾಯ ಮಾಡಿರುವ ಪಕ್ಷ ತ್ಯಜಿಸಿ, ಬಿಜೆಪಿಗೆ ಸೇರಿ’ ಎಂದು ಸಲಹೆ ನೀಡಿದರು. ಕೆ.ಕೆ.ಮೂರ್ತಿ ಎಂಬುವರು ಮಾತನಾಡಿ ‘ಪಕ್ಷೇತರರಾಗಿ ಸ್ಪರ್ಧೆ ಮಾಡಬೇಕು. ನಿಮ್ಮನ್ನು ನಂಬಿ ನಾವು 20 ವರ್ಷಗಳಿಂದ ಬಂದಿದ್ದೇವೆ’ ಎಂದು ಹೇಳಿದರು.

ಇನ್ನೂ ಕೆಲವರು ‘ಪಕ್ಷ ಬಿಡಬೇಡಿ, ಕಾಂಗ್ರೆಸ್ ಅಭ್ಯರ್ಥಿ ಪರವಾಗಿ ಕೆಲಸ ಮಾಡಿ’ ಎಂಬ ಸಲಹೆಯನ್ನೂ ನೀಡಿದರು.

ಬೆಂಬಲಿಗರ ಮಾತುಗಳಿಗೆ ಪ್ರತಿಕ್ರಿಯಿಸಿದ ಬಾಲರಾಜ್‌ ‘ನನ್ನ ಸ್ವಾಭಿಮಾನಕ್ಕೆ ಧಕ್ಕೆಯಾಗಿದೆ. ಹಾಗಾಗಿ ಸೋಮವಾರ ಬೆಳಿಗ್ಗೆ 10 ಗಂಟೆಗೆ ನನ್ನ ನಿಲುವು ಏನು ಎಂಬುದನ್ನು ಬಹಿರಂಗಪಡಿಸುತ್ತೇನೆ. ರಾಜ್ಯ ನಾಯಕರು ದೂರವಾಣಿಯ ಮೂಲಕ ಮಾತನಾಡಿ ಭರವಸೆ ನೀಡಿದರೆ ಮಾತ್ರ ಪಕ್ಷದಲ್ಲಿ ಉಳಿಯುತ್ತೇನೆ. ಇಲ್ಲವಾದರೆ ನನ್ನ ನಿಲುವು ನಾಳೆ ಕಾದು ನೋಡಿ’ ಎಂದು ಹೇಳಿ ಸಭೆ ಮುಗಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.