ADVERTISEMENT

ಲೋಕಸಭೆ ಚುನಾವಣೆ: ಯಲ್ಲಾಪುರ ಶಾಸಕರ ನಡೆ ನಿಗೂಢ!

ಬೆಂಬಲಿಗರನ್ನು ಕಾಂಗ್ರೆಸ್‍ಗೆ ಸೇರಿಸಲು ಶಿವರಾಮ ಹೆಬ್ಬಾರ ಪ್ರಯತ್ನ?

ಗಣಪತಿ ಹೆಗಡೆ
Published 28 ಮಾರ್ಚ್ 2024, 6:13 IST
Last Updated 28 ಮಾರ್ಚ್ 2024, 6:13 IST
ಶಿವರಾಮ ಹೆಬ್ಬಾರ
ಶಿವರಾಮ ಹೆಬ್ಬಾರ   

ಕಾರವಾರ: ಕಳೆದ ಕೆಲ ದಿನಗಳಿಂದ ಪಕ್ಷದ ಚಟುವಟಿಕೆಯಿಂದ ದೂರ ಸರಿದಿರುವ ಯಲ್ಲಾಪುರದ ಬಿಜೆಪಿ ಶಾಸಕ ಶಿವರಾಮ ಹೆಬ್ಬಾರ ಅವರು ಲೋಕಸಭೆ ಚುನಾವಣೆಯಲ್ಲಿ ಪಕ್ಷದ ಪರ ಸಕ್ರೀಯ ಪ್ರಚಾರ ಕೈಗೊಳ್ಳಬಹುದೇ ಅಥವಾ ತಟಸ್ಥವಾಗಿರಬಹುದೇ ಎಂಬ ಗೊಂದಲ ಕಾರ್ಯಕರ್ತರ ವಲಯದಲ್ಲಿ ಮೂಡಿದೆ.

ಯಲ್ಲಾಪುರದಲ್ಲಿ ಬುಧವಾರ ನಡೆದ ಬಿಜೆಪಿಯ ಲೋಕಸಭೆ ಪ್ರಚಾರ ಸಭೆಯಲ್ಲಿ ಪಾಲ್ಗೊಳ್ಳದ ಅವರ ನಡೆ ಇಂತಹ ಗೊಂದಲಗಳಿಗೆ ಮತ್ತಷ್ಟು ಪುಷ್ಟಿ ನೀಡಿದೆ.

‘ಹೆಬ್ಬಾರ ಪಕ್ಷ ತೊರೆದು ಕಾಂಗ್ರೆಸ್ ಸೇರುತ್ತಾರೆ’ ಎಂಬ ವದಂತಿಗಳನ್ನು ತಳ್ಳಿ ಹಾಕುತ್ತಲೇ ಬಿಜೆಪಿಯಿಂದ ದೂರ ಸರಿಯುತ್ತಿರುವ ಶಾಸಕ ಶಿವರಾಮ ಹೆಬ್ಬಾರ ತಮ್ಮ ಬೆಂಬಲಿಗರನ್ನು ಕಾಂಗ್ರೆಸ್ ಸೇರಿಸಲು ಪ್ರಯತ್ನಿಸುತ್ತಿದ್ದಾರೆ ಎಂಬ ವದಂತಿಗಳೂ ಕ್ಷೇತ್ರದಲ್ಲಿ ಹರಿದಾಡುತ್ತಿದೆ. ಲೋಕಸಭೆ ಚುನಾವಣೆ ಪ್ರಚಾರ ಆರಂಭಿಸಿರುವ ಬಿಜೆಪಿಗೆ ಪಕ್ಷದ ಶಾಸಕರ ನಡೆ ಇರಿಸುಮುರಿಸು ತರಿಸಿದ್ದರೂ ಪಕ್ಷದ ಯಾವುದೇ ನಾಯಕರು ಈವರೆಗೆ ಹೆಬ್ಬಾರ ಮನವೊಲಿಕೆಗೂ ಮುಂದಾಗದಿರುವುದು ಚರ್ಚೆಗೆ ಗ್ರಾಸವಾಗಿದೆ.

ADVERTISEMENT

‘ಶಿವರಾಮ ಹೆಬ್ಬಾರ ಅವರನ್ನು ಬಿಜೆಪಿಯಲ್ಲಿ ಸರಿಯಾಗಿ ನಡೆಸಿಕೊಳ್ಳುತ್ತಿಲ್ಲ. ಹೀಗಾಗಿ ಅವರು ಬೇಸರಗೊಂಡಿರುವುದು ನಿಜ. ಈಚೆಗೆ ಆಪ್ತರ ಸಭೆ ನಡೆಸಿದ್ದ ಅವರು ರಾಜಕೀಯ ನಿರ್ಧಾರ ಕೈಗೊಳ್ಳಲು ನೀವೆಲ್ಲ ಸ್ವತಂತ್ರರು ಎಂದಿದ್ದರು. ಕೆಲ ಮುಖಂಡರು ಕಾಂಗ್ರೆಸ್ ಸೇರುವ ಇಂಗಿತ ವ್ಯಕ್ತಪಡಿಸಿದ್ದಕ್ಕೆ ಅವರು ವಿರೋಧಿಸಲಿಲ್ಲ’ ಎಂದು ಹೆಬ್ಬಾರ ಅವರ ಆಪ್ತವಲಯದಲ್ಲಿ ಗುರುತಿಸಿಕೊಂಡ ಮುಖಂಡರೊಬ್ಬರು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ಶಿವರಾಮ ಹೆಬ್ಬಾರ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡ ಮುಂಡಗೋಡ, ಬನವಾಸಿ ಭಾಗದ ಹಲವು ಮುಖಂಡರು ಶೀಘ್ರವೇ ಕಾಂಗ್ರೆಸ್ ಸೇರುವ ಸಾಧ್ಯತೆ ಹೆಚ್ಚಿದೆ. ಹೆಬ್ಬಾರ ಮಾತ್ರ ಲೋಕಸಭೆ ಚುನಾವಣೆಯಲ್ಲಿ ತಟಸ್ಥರಾಗುಳಿಯಬಹುದು’ ಎಂದೂ ಅವರು ತಿಳಿಸಿದರು.

ಹೆಬ್ಬಾರ ಕಾಂಗ್ರೆಸ್ ಸೇರ್ಪಡೆಯಾಗಬಹುದು ಎಂಬ ಮುನ್ಸೂಚನೆಯಿಂದಲೇ ಜಿಲ್ಲೆಯ ಹಲವು ಮುಖಂಡರು, ಕಾರ್ಯಕರ್ತರು ಬಹಿರಂಗವಾಗಿ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷೆ ರೂಪಾಲಿ ನಾಯ್ಕ ಹೆಬ್ಬಾರ ಅವರಿಗೆ ಪಕ್ಷ ಬಿಟ್ಟುಹೋಗಬಹುದು ಎಂದು ಪರೋಕ್ಷ ಎಚ್ಚರಿಕೆಯನ್ನೂ ಪ್ರಚಾರ ಸಭೆಯಲ್ಲಿ ನೀಡಿದ್ದಾರೆ.

ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರಿಂದ ಪಕ್ಷದ ಪ್ರಚಾರ ಸಭೆಗೆ ಹೋಗಲಾಗಲಿಲ್ಲ. ಚುನಾವಣೆ ಪ್ರಚಾರದ ಬಗ್ಗೆ ನಿರ್ಧರಿಸಿಲ್ಲ.
ಶಿವರಾಮ ಹೆಬ್ಬಾರ ಯಲ್ಲಾಪುರ ಶಾಸಕ
ಬೆಂಬಲಿಗರೊಂದಿಗೆ ಗೋಪ್ಯ ಸಭೆ
ಮುಂಡಗೋಡ: ಶಾಸಕ ಶಿವರಾಮ ಹೆಬ್ಬಾರ ಅವರು ತಾಲ್ಲೂಕಿನ ಬಾಚಣಕಿ ಜಲಾಶಯದ ಆವರಣದಲ್ಲಿ ಬುಧವಾರ ತಮ್ಮ ಬೆಂಬಲಿಗರ ಸಭೆ ನಡೆಸಿದರು. ಲೋಕಸಭಾ ಚುನಾವಣೆಯಲ್ಲಿ ಬೆಂಬಲಿಗರ ಪಾತ್ರದ ಕುರಿತು ಚರ್ಚಿಸಲಾಯಿತು ಎಂದು ಮೂಲಗಳು ತಿಳಿಸಿವೆ. ‘ಕೆಲವು ತಿಂಗಳಿಂದ ಕ್ಷೇತ್ರದ ಪದಾಧಿಕಾರಿಗಳ ಆಯ್ಕೆ ಸಹಿತ ಲೋಕಸಭಾ ಅಭ್ಯರ್ಥಿ ಆಯ್ಕೆ ಕುರಿತು ಬಿಜೆಪಿಯವರು ಯಾವುದಕ್ಕೂ ನನ್ನ ಅಭಿಪ್ರಾಯ ಕೇಳಿಲ್ಲ’ ಎಂದು ಶಿವರಾಮ ಹೆಬ್ಬಾರ ಅಳಲು ತೋಡಿಕೊಂಡಿದ್ದಾಗಿ ಸಭೆಯಲ್ಲಿದ್ದ ಮುಖಂಡರೊಬ್ಬರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.