ADVERTISEMENT

ಕೇಂದ್ರದಲ್ಲಿ ಕಿಚಡಿ ಸರ್ಕಾರ ನಿಶ್ಚಿತ: ಎನ್.ಮಹೇಶ್‌ ಭವಿಷ್ಯ

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2019, 13:46 IST
Last Updated 5 ಏಪ್ರಿಲ್ 2019, 13:46 IST
ಎನ್‌.ಮಹೇಶ್‌
ಎನ್‌.ಮಹೇಶ್‌   

ಹಾಸನ: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗಲಿದ್ದು, ಕಿಚಡಿ ಸರ್ಕಾರ ಅಧಿಕಾರ ಹಿಡಿಯುವುದು‌ ನಿಶ್ಚಿತ ಎಂದು ಶಾಸಕ ಎನ್.ಮಹೇಶ್ ಭವಿಷ್ಯ ನುಡಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ಯಾವುದೇ ಪಕ್ಷ ಸ್ಪಷ್ಟ ಬಹುಮತ ಪಡೆಯುವುದಿಲ್ಲ. ಹಲವು ರಾಜ್ಯದಲ್ಲಿ ಪ್ರಾದೇಶಿಕ ‌ಪಕ್ಷ ಹೆಚ್ಚು ಸ್ಥಾನ ‌ಗಳಿಸಲಿದ್ದು, ಕಿಚಡಿ ಸರ್ಕಾರ ಬರುವುದು ನಿಶ್ಚಿತ. ಈಗಾಗಲೇ ಹಲವು‌ ಮಾಧ್ಯಮ ಸಮೀಕ್ಷೆಯಲ್ಲಿ ಈ ಬಗ್ಗೆ ವಿಸ್ತಾರವಾದ ಮಾಹಿತಿಯನ್ನು ನೀಡಲಾಗಿದೆ. ಬಿಎಸ್‌ಪಿ ಮೂರನೇ ಶಕ್ತಿಯಾಗಿ ಹೊರಹೊಮ್ಮಲಿದೆ ಹಾಗೂ ಸರ್ಕಾರ ರಚನೆಯಲ್ಲಿ ಕಿಂಗ್ ಮೇಕರ್ ಆಗಲಿದೆ‌ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಹಾಸನದಲ್ಲಿ ಬಿಎಸ್‌ಪಿ ಅಭ್ಯರ್ಥಿಗೆ ಅಚ್ಚರಿಯ ಫಲಿತಾಂಶ ಬರಲಿದ್ದು, ಮೈತ್ರಿ ಹಾಗೂ ಬಿಜೆಪಿ ಪಕ್ಷ ವಿರೋಧಿ ಮತಗಳು ಬಿಎಸ್‌ಪಿ‌ಗೆ‌ ಬರಲಿದೆ. ರಾಜ್ಯದ ಬಹುತೇಕ ಕ್ಷೇತ್ರದಲ್ಲಿ ಮೈತ್ರಿ‌ ಪಕ್ಷ‌ ಹಾಗೂ ಬಿಜೆಪಿ ನಡುವೆ ಹಣಾಹಣಿ ಏರ್ಪಟ್ಟಿದೆ. ಆದರೆ, ಬಹುತೇಕ ಪ್ರಜ್ಞಾವಂತ ಮತದಾರರು ಬಿಎಸ್‌ಪಿ ಬೆಂಬಲಿಸುವರು ಎಂಬ ವಿಶ್ವಾಸವಿದೆ ಎಂದು ನುಡಿದರು.

ADVERTISEMENT

ಮಂಡ್ಯ ಕ್ಷೇತ್ರ ಈ ಬಾರಿ‌ ಜಿದ್ದಾ ಜಿದ್ದಿನ ಕಣವಾಗಿ‌ ಮಾರ್ಪಟ್ಟಿದ್ದು, ಪಕ್ಷದ ನಾಯಕರು‌ ಹಾಗೂ ಅಭ್ಯರ್ಥಿಗಳ ಟೀಕೆ ,ಅಸೂಯೆ ರಾಜಕಾರಣಕ್ಕೆ ವೇದಿಕೆಯಾಗಿದೆ‌. ಚುನಾವಣೆಯಲ್ಲಿ ಸೋಲು, ಗೆಲುವನ್ನು‌ ಸಮನಾಗಿ ಸ್ವೀಕರಿಸಬೇಕು. 14 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳು ಕಣದಲ್ಲಿದ್ದು, ಸ್ವತಂತ್ರವಾಗಿ ಸ್ಪರ್ಧಿಸುತ್ತೇವೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಗೋಷ್ಠಿಯಲ್ಲಿ ಪಕ್ಷದ ಅಭ್ಯರ್ಥಿ ವಿನೋದ್ ರಾಜ್, ಮುಖಂಡರಾದ ಹರೀಶ್, ಎ.ಪಿ.ಅಹಮದ್, ದೇವರಾಜು, ಗಂಗಾಧರ್ ಬಹುಜನ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.