ADVERTISEMENT

17 ಚುನಾವಣೆಗಳಲ್ಲಿ ಸ್ಪರ್ಧಿಸಿದ್ದ ಖಾನಗೌಡರ!

ಕ್ಷೇತ್ರದ ನೆನಪು

ಶ್ರೀಕಾಂತ ಕಲ್ಲಮ್ಮನವರ
Published 30 ಏಪ್ರಿಲ್ 2019, 14:14 IST
Last Updated 30 ಏಪ್ರಿಲ್ 2019, 14:14 IST
ಶಿವಗೌಡಪ್ಪ ಖಾನಗೌಡರ
ಶಿವಗೌಡಪ್ಪ ಖಾನಗೌಡರ   

ಬೆಳಗಾವಿ: ಇವರ ಹೆಸರು ಶಿವಗೌಡಪ್ಪ ಬಾಳಪ್ಪ ಖಾನಗೌಡರ. ಗೋಕಾಕದ ಕಲ್ಲೋಳಿಯಲ್ಲಿ ಜನಿಸಿದ ಇವರು, ಸದ್ಯಕ್ಕೆ ಘಟಪ್ರಭಾದಲ್ಲಿ ನೆಲೆನಿಂತಿದ್ದಾರೆ. ಜಿಲ್ಲೆಯಲ್ಲಿ ಅತಿ ಹೆಚ್ಚು ಚುನಾವಣೆಗಳಲ್ಲಿ ಸ್ಪರ್ಧಿಸುವ ಮೂಲಕ ವಿಶಿಷ್ಟ ದಾಖಲೆ ಬರೆದಿದ್ದಾರೆ!

ಇದುವರೆಗೆ 8 ಲೋಕಸಭಾ ಚುನಾವಣೆ, 7 ವಿಧಾನಸಭಾ ಚುನಾವಣೆ ಹಾಗೂ 2 ಸಲ ವಾಯವ್ಯ ಪದವೀಧರ ಕ್ಷೇತ್ರದಿಂದ ಸೇರಿದಂತೆ ಒಟ್ಟು 17 ಬಾರಿ ಚುನಾವಣಾ ಕಣಕ್ಕಿಳಿದಿದ್ದರು. ಎಲ್ಲ ಚುನಾವಣೆಗಳಲ್ಲಿಯೂ ಪಕ್ಷೇತರರಾಗಿ ಸ್ಪರ್ಧಿಸಿದ್ದರು.

ಈಗ ಅವರಿಗೆ 70 ವರ್ಷ ವಯಸ್ಸು ದಾಟಿದೆ. ವೃದ್ಧಾಪ್ಯ ಕಾರಣದಿಂದಾಗಿ ಓಡಾಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಈ ಸಲ ತಮ್ಮ ಮಗ ಮೇಘರಾಜ ಅವರನ್ನು ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಸಿದ್ದಾರೆ.

ADVERTISEMENT

1980ರಲ್ಲಿ ಪ್ರವೇಶ:

1980ರಲ್ಲಿ ಮೊದಲ ಬಾರಿಗೆ ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಆಗ ₹ 200 ಠೇವಣಿ ಕಟ್ಟಿದ್ದರು. ಪ್ರಚಾರ ನಡೆಸಲು 400 ಹಸ್ತಪ್ರತಿ ಮುದ್ರಿಸಿದ್ದರು. ಬಸ್‌ಸ್ಟ್ಯಾಂಡ್‌, ಮಾರ್ಕೆಟ್‌ ಸೇರಿದಂತೆ ನಗರದ ಪ್ರಮುಖ ಸ್ಥಳಗಳಲ್ಲಿ ಇವುಗಳನ್ನು ಹಂಚಿದ್ದರು. ಆ ಸಂದರ್ಭದಲ್ಲಿ ಸಾಮಾನ್ಯ ವ್ಯಕ್ತಿಯೊಬ್ಬರು ಹೀಗೆ ಚುನಾವಣಾ ಕಣಕ್ಕಿಳಿದು, ಒಂಟಿಯಾಗಿ ಪ್ರಚಾರ ನಡೆಸಿದ್ದನ್ನು ಕಂಡು ಜನರು ಆಶ್ಚರ್ಯಗೊಂಡಿದ್ದರು. ಅನುಕಂಪವನ್ನೂ ವ್ಯಕ್ತಪಡಿಸಿದ್ದರು. ಇದರ ಫಲವಾಗಿ 4,900 ಮತಗಳು ಇವರ ಬುಟ್ಟಿಗೆ ಬಂದಿದ್ದವು. ಆಗ ಕಾಂಗ್ರೆಸ್‌ನ ಎಸ್‌.ಬಿ. ಸಿದ್ನಾಳ ಆಯ್ಕೆಯಾಗಿದ್ದರು.

ನಂತರ ಅವರು 1984, 1989, 1991, 1998, 2004, 2009 ಹಾಗೂ 2014 ರ ಚುನಾವಣೆಯಲ್ಲಿ ಸ್ಪರ್ಧಿಸಿದರು.

ವಿಧಾನಸಭೆಗೂ ಸ್ಪರ್ಧೆ: ಅರಭಾವಿ ವಿಧಾನಸಭಾ ಕ್ಷೇತ್ರದಿಂದಲೂ ಸ್ಪರ್ಧಿಸಿದ್ದರು. ಇಲ್ಲಿಂದ 5 ಸಲ, ಗೋಕಾಕ ಕ್ಷೇತ್ರದಿಂದ 1 ಸಲ ಹಾಗೂ ಬೆಳಗಾವಿ ಉತ್ತರ ಕ್ಷೇತ್ರದಿಂದ 1 ಸಲ ಸ್ಪರ್ಧಿಸಿದ್ದಾರೆ. ವಾಯವ್ಯ ಪದವೀಧರ ಕ್ಷೇತ್ರದಿಂದ 2 ಬಾರಿ ಸ್ಪರ್ಧಿಸಿದ್ದರು (ವಯೋಸಹಜ ಮರೆವು ಅವರನ್ನು ಕಾಡುತ್ತಿದ್ದು, ಚುನಾವಣೆ ನಡೆದ ಇಸ್ವಿಯನ್ನು ಹೇಳಲು ಅವರಿಗೆ ಸಾಧ್ಯವಾಗುತ್ತಿಲ್ಲ).

ಕೊನೆಯ ಬಾರಿ 2014ರ ಬೆಳಗಾವಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ₹ 25,000 ಠೇವಣಿ ಕಟ್ಟಿದ್ದರು. ಇತರ ವೆಚ್ಚಗಳಿಗಾಗಿ ₹ 4,000 ಖರ್ಚು ಮಾಡಿದ್ದರು. ಆಗ ಅವರಿಗೆ ಕೇವಲ 920 ಮತಗಳು ಲಭಿಸಿದ್ದವು.

ಠೇವಣಿ ಭರಿಸಲು ಹಾಗೂ ಚುನಾವಣಾ ಪ್ರಚಾರಕ್ಕಾಗಿ ಸ್ನೇಹಿತರು, ಹಿತೈಷಿಗಳಿಂದ ಕೈಯಲಾದ ಮಟ್ಟಿಗೆ ಆರ್ಥಿಕ ಸಹಾಯ ಪಡೆಯುತ್ತಿದ್ದರು. ಅಬ್ಬರ ಪ್ರಚಾರವಿಲ್ಲದೇ, ಬೀದಿ ಬೀದಿಗಳಲ್ಲಿ ಮೈಕ್‌ ಹಿಡಿದುಕೊಂಡು ಪ್ರಚಾರ ಮಾಡುತ್ತಿದ್ದರು.

ಆಸ್ತಿ ವಿವರ; ಧ್ವನಿ ಎತ್ತಿದ್ದರು...:

ಚುನಾವಣಾ ಅಭ್ಯರ್ಥಿಗಳು ತಮ್ಮ ಆಸ್ತಿಯನ್ನು ಘೋಷಿಸಬೇಕೆಂದು ಖಾನಗೌಡರು 1995ರಲ್ಲಿ ಧ್ವನಿ ಎತ್ತಿದ್ದರು. ತಮ್ಮ ಪ್ರತಿನಿಧಿಗಳ ಆರ್ಥಿಕ ಸ್ಥಿತಿ– ಗತಿಯ ಬಗ್ಗೆ ತಿಳಿದುಕೊಳ್ಳುವ ಹಕ್ಕು ಮತದಾರರಿಗೆ ಇದೆ ಎಂದು ವಾದಿಸಿದ್ದರು. ಅವರ ವಾದ ಎಲ್ಲೆಡೆ ಪ್ರಚಾರ ಪಡೆದುಕೊಂಡಿತು. ದೆಹಲಿಯ ಎನ್‌ಜಿಒವೊಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿತು. ಇದರ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌, ಚುನಾವಣಾ ಅಭ್ಯರ್ಥಿಗಳು ತಮ್ಮ ಆಸ್ತಿಯನ್ನು ಘೋಷಿಸಿಕೊಳ್ಳಬೇಕು ಎಂದು 2002ರಲ್ಲಿ ಆದೇಶ ನೀಡಿತು.

ಪ್ರಮಾಣಪತ್ರದ ನೈಜತೆ ಬಗ್ಗೆ ತನಿಖೆಯಾಗಲಿ:

‘ಸುಪ್ರೀಂ ಕೋರ್ಟ್‌ ಆದೇಶದ ಹಿನ್ನೆಲೆಯಲ್ಲಿ ಅಭ್ಯರ್ಥಿಗಳು ಆಸ್ತಿ ಘೋಷಣೆ ಮಾಡಿಕೊಳುತ್ತಿದ್ದಾರೆ. ಆದರೆ ಇದರಲ್ಲಿ ಬಹಳಷ್ಟು ಜನರು ಸುಳ್ಳು ಮಾಹಿತಿ ನೀಡುತ್ತಿದ್ದಾರೆ. ಇದರ ಸತ್ಯಾಸತ್ಯತೆಯನ್ನು ಒರೆಗೆ ಹಚ್ಚುವ ಕೆಲಸವನ್ನು ಚುನಾವಣಾ ಆಯೋಗ ಮಾಡಬೇಕು’ ಎಂದು ಖಾನಗೌಡರು ಒತ್ತಾಯಿಸಿದ್ದಾರೆ.

ಎರಡೇ ಪಕ್ಷಗಳಿರಲಿ;

‘ನೂರೆಂಟು ರಾಜಕೀಯ ಪಕ್ಷಗಳಿರುವುದರಿಂದ ಜನಪ್ರತಿನಿಧಿಗಳು ಈ ಕಡೆಯಿಂದ ಆ ಕಡೆ, ಆ ಕಡೆಯಿಂದ ಈ ಕಡೆ ನೆಗೆಯುತ್ತಾರೆ. ‘ಆಪರೇಷನ್‌’ ನಡೆಸಿ, ಅಧಿಕಾರ ಗಿಟ್ಟಿಸಿಕೊಳ್ಳುತ್ತಾರೆ. ಇದು ಪ್ರಜಾಪ್ರಭುತ್ವಕ್ಕೆ ದೊಡ್ಡ ಮಾರಕವಾಗಿದೆ. ಇದಕ್ಕೆ ತಡೆಯೊಡ್ಡಲು ಅಮೆರಿಕ ರೀತಿಯಲ್ಲಿ ‘ಟು ಪಾರ್ಟಿ ಸಿಸ್ಟಂ’ ನಮ್ಮಲಿಯೂ ಜಾರಿಗೆ ಬರಬೇಕು’ ಎನ್ನುವುದು ಅವರು ವಾದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.