ADVERTISEMENT

ಬಿಜೆಪಿಗೆ ತಡೆ ಕಾಂಗ್ರೆಸ್‌ ಗುರಿಯಲ್ಲ: ಅಖಿಲೇಶ್‌

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2019, 18:55 IST
Last Updated 26 ಏಪ್ರಿಲ್ 2019, 18:55 IST
ಅಖಿಲೇಶ್‌ ಯಾದವ್‌
ಅಖಿಲೇಶ್‌ ಯಾದವ್‌   

ಲಖನೌ (ಪಿಟಿಐ): ಕೇಂದ್ರದಲ್ಲಿ ಬಿಜೆಪಿ ಸರ್ಕಾರ ರಚಿಸುವುದನ್ನು ತಡೆಯುವ ಉದ್ದೇಶ ಕಾಂಗ್ರೆಸ್‌ ಪಕ್ಷಕ್ಕೆ ಇಲ್ಲ. 2022ರಲ್ಲಿ ಉತ್ತರ ಪ್ರದೇಶದಲ್ಲಿ ಅಧಿಕಾರಕ್ಕೆ ಏರುವ ಗುರಿಯನ್ನು ಮಾತ್ರ ಆ ಪಕ್ಷವು ಹೊಂದಿದೆ ಎಂದು ಸಮಾಜವಾದಿ ಪಕ್ಷದ (ಎಸ್‌ಪಿ) ಅಧ್ಯಕ್ಷ ಅಖಿಲೇಶ್ ಯಾದವ್‌ ಆರೋಪಿಸಿದ್ದಾರೆ.

‘ನಮ್ಮ ಉದ್ದೇಶ ಬಹಳ ಸ್ಪಷ್ಟ. ಕೋಮುವಾದಿ ಪಕ್ಷವನ್ನು ತಡೆಯುವುದಕ್ಕಾಗಿಯೇ ನಾವು ಮೈತ್ರಿಕೂಟ (ಎಸ್‌ಪಿ–ಬಿಎಸ್‌ಪಿ ಮತ್ತು ಆರ್‌ಎಲ್‌ಡಿ) ರಚಿಸಿಕೊಂಡಿದ್ದೇವೆ. ಹಾಗಾಗಿಯೇ ರಾಷ್ಟ್ರೀಯ ಹಿತಾಸಕ್ತಿಯಿಂದ ಎಸ್‌ಪಿ ಮತ್ತು ಬಿಎಸ್‌ಪಿ ಕ್ಷೇತ್ರಗಳನ್ನು ತ್ಯಾಗ ಮಾಡಿವೆ’ ಎಂದು ಅವರು ಹೇಳಿದ್ದಾರೆ.

ಕಾಂಗ್ರೆಸ್‌ ಪಕ್ಷವು ಅತಿಯಾದ ಅಹಂ ಹೊಂದಿದೆ ಎಂದೂ ಅಖಿಲೇಶ್‌ ಅಭಿಪ್ರಾಯಪಟ್ಟಿದ್ದಾರೆ. ತಮ್ಮ ಪಕ್ಷವು ಕೇಂದ್ರದಲ್ಲಿ ಮತ್ತು 2022ರಲ್ಲಿ ಉತ್ತರ ಪ್ರದೇಶದಲ್ಲಿ ಸರ್ಕಾರ ರಚಿಸಲಿದೆ ಎಂದು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಇತ್ತೀಚೆಗೆ ನೀಡಿದ ಹೇಳಿಕೆಯ ಹಿನ್ನೆಲೆಯಲ್ಲಿ ಅಖಿಲೇಶ್‌ ಹೇಳಿಕೆ ಮಹತ್ವ ಪಡೆದುಕೊಂಡಿದೆ. ಬಿಎಸ್‌ಪಿ ಮತ್ತು ಆರ್‌ಎಲ್‌ಡಿ ಜತೆಗೆ ತಮ್ಮ ಮೈತ್ರಿ ಬಹಳ ಬಲಯುತ ಎಂದು ಅಖಿಲೇಶ್‌ ಬಣ್ಣಿಸಿದ್ದಾರೆ. ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಬಾರದು ಎಂಬುದಕ್ಕಾಗಿಯೇ ಎಸ್‌ಪಿ ಮತ್ತು ಬಿಎಸ್‌ಪಿ ಅರ್ಧದಷ್ಟು ಕ್ಷೇತ್ರಗಳನ್ನು ತ್ಯಾಗ ಮಾಡಿವೆ ಎಂದು ಅವರು ಹೇಳಿದ್ದಾರೆ.ಮೇ 23ರಂದು ಫಲಿತಾಂಶ ಪ್ರಕಟವಾದ ಕೂಡಲೇ ಈ ಮೈತ್ರಿಕೂಟ ಬಿರುಕು ಬಿಡಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರ ಹೇಳಿಕೆಗೂ ಅಖಿಲೇಶ್‌ ಪ್ರತಿಕ್ರಿಯೆ ಕೊಟ್ಟಿದ್ದಾರೆ. ‘ಈ ವಿಚಾರದಲ್ಲಿ ಬಿಜೆಪಿಯ ಸಮಸ್ಯೆ ಏನು? ಅವರಿಗೆ ಯಾಕೆ ಚಿಂತೆ? ಉತ್ತರ ಪ್ರದೇಶದಲ್ಲಿ ನಾವು ಪ್ರಬಲವಾಗಿದ್ದೇವೆ. ಬಿಜೆಪಿ ಎಲ್ಲಿಯೂ ಇಲ್ಲ. ಅದು ತಳಮಟ್ಟದ ವಾಸ್ತವ. ಮೈತ್ರಿಕೂಟಕ್ಕಿಂತ ಬಿಜೆಪಿ ಬಹಳ ಹಿಂದೆ ಇದೆ’ ಎಂದು ಅಖಿಲೇಶ್‌ ಹೇಳಿದ್ದಾರೆ.

ADVERTISEMENT

ಮಹಾಮೈತ್ರಿಯನ್ನು ಮಹಾಕಲಬೆರಕೆ ಎಂದು ಬಿಜೆಪಿ ಹೇಳುತ್ತಿರುವುದಕ್ಕೂ ಅಖಿಲೇಶ್‌ ಪ್ರತಿಕ್ರಿಯೆ ಕೊಟ್ಟಿದ್ದಾರೆ. ‘ಹಾಗಾದರೆ 38 ಪಕ್ಷಗಳ ಜತೆಗೆ ಬಿಜೆಪಿ ಮಾಡಿಕೊಂಡಿರುವುದು ಏನು? ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.