ADVERTISEMENT

ಒಡೆಯರ್‌ಗೆ ಒಲಿಯದ ಮಂತ್ರಿ ಪದವಿ

ಮೈಸೂರು ಲೋಕಸಭಾ ಚುನಾವಣೆ– 1996

​ಪ್ರಜಾವಾಣಿ ವಾರ್ತೆ
Published 29 ಮಾರ್ಚ್ 2014, 9:23 IST
Last Updated 29 ಮಾರ್ಚ್ 2014, 9:23 IST

ಮೈಸೂರು: ಮಾಜಿ ಮುಖ್ಯಮಂತ್ರಿ ದಿ.ಡಿ. ದೇವರಾಜ ಅರಸು ಅವರ ಪುತ್ರಿ ಚಂದ್ರಪ್ರಭಾ ಅರಸು ಅವರ ವಿರುದ್ಧ 1991ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಸೋಲನುಭವಿಸಿದ್ದ ಯದುವಂಶದ ಅರಸ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್‌ ಕಾಂಗ್ರೆಸ್‌ಗೆ ಮರಳಿ 1996 ಚುನಾವಣೆಯಲ್ಲಿ ಮತ್ತೆ ಸ್ಪರ್ಧಿಸಿ ಮೂರನೇ ಬಾರಿಗೆ ಗೆದ್ದರು. ಆದರೂ, ಅವರಿಗೆ ಮಂತ್ರಿ ಪದವಿ ಒಲಿಯಲಿಲ್ಲ.

1984ರಲ್ಲಿ ಮೊದಲ ಬಾರಿಗೆ ಸ್ಪರ್ಧಿಸಿ ಒಡೆಯರ್‌ ಗೆದ್ದರು. ಆಗ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂತು. ಆದರೆ, ಒಡೆಯರ್‌ಗೆ ಮಂತ್ರಿ ಪದವಿ ಸಿಗಲಿಲ್ಲ. 1989ರಲ್ಲಿ ಎರಡನೇ ಬಾರಿಗೆ ಗೆದ್ದಾಗ ಕೇಂದ್ರದಲ್ಲಿ ವಿ.ಪಿ. ಸಿಂಗ್‌ ನೇತೃತ್ವದ ಜನತಾ ಸರ್ಕಾರ ಇತ್ತು. 1996ರಲ್ಲಿ ಮೂರನೇ ಬಾರಿಗೆ ಗೆದ್ದಾಗ ಎಚ್‌.ಡಿ. ದೇವೇಗೌಡ ಮತ್ತು ಐ.ಕೆ. ಗುಜ್ರಾಲ್‌ ನೇತೃತ್ವದ ಸಂಯುಕ್ತ ರಂಗ ಸರ್ಕಾರ ಇತ್ತು. ಇದಾದ ನಂತರ 1999ರಲ್ಲಿ ನಾಲ್ಕನೇ ಬಾರಿ ಒಡೆಯರ್‌ ಗೆದ್ದರು. ಆಗ ಕೇಂದ್ರದಲ್ಲಿ ಬಿಜೆಪಿಯ ಎ.ಬಿ. ವಾಜಪೇಯಿ ಸರ್ಕಾರ ಇತ್ತು. ಹಾಗಾಗಿ, ಒಟ್ಟು ನಾಲ್ಕು ಬಾರಿ ಗೆದ್ದರೂ ಒಡೆಯರ್‌ ಮಂತ್ರಿಯಾಗಲೇ ಇಲ್ಲ.

1996ರ ಚುನಾವಣೆಯಲ್ಲಿ ಚಂದ್ರಪ್ರಭಾ ಅರಸು ರಾಜ್ಯ ರಾಜಕಾರಣದತ್ತ ಮರಳಿದರು. ಕಾಂಗ್ರೆಸ್‌ನಿಂದ ಒಡೆಯರ್‌ಗೆ ಟಿಕೆಟ್‌ ಸಿಕ್ಕಿತು. ಜನತಾ ದಳದಿಂದ ಜಿ.ಟಿ. ದೇವೇಗೌಡ ಅವರನ್ನು ಕಣಕ್ಕೆ ಇಳಿಸಲಾಗಿತ್ತು. ಬಿಜೆಪಿಯಿಂದ ತೋಂಟದಾರ್ಯ, ಕೆಸಿಪಿಯಿಂದ ಪಿ. ಗೋವಿಂದರಾಜು, ಜನತಾ ಪಕ್ಷದಿಂದ ನೋಟರಿ ಶ್ರೀನಿವಾಸಮೂರ್ತಿ ಕಣದಲ್ಲಿ ಇದ್ದರು. ಉಳಿದಂತೆ ಪಕ್ಷೇತರರು ಸ್ಪರ್ಧಿಸಿದ್ದರು.

ಆಗ ಕಾಂಗ್ರೆಸ್‌ ಮತ್ತು ಜನತಾ ದಳದ ನಡುವೆ ನೇರ ಹಣಾಹಣಿ ಇತ್ತು. ಎಚ್‌.ಡಿ. ದೇವೇಗೌಡ, ಸಿದ್ದರಾಮಯ್ಯ ತಮ್ಮ ಅಭ್ಯರ್ಥಿಯ ಗೆಲುವಿಗೆ ಶ್ರಮಿಸಿದ್ದರು. ಮೈಸೂರು ಲೋಕಸಭಾ ಕ್ಷೇತ್ರದಲ್ಲಿ ಒಮ್ಮೆಯೂ ಖಾತೆ ತೆರೆಯದ ಜನತಾ ದಳ ಹೇಗಾದರೂ ಮಾಡಿ ಕಾಂಗ್ರೆಸ್‌ ವಿರುದ್ಧ ಗೆಲುವು ಸಾಧಿಸಲು ಪಣ ತೊಟ್ಟಿತ್ತು. ಹಾಗಾಗಿ, ಖುದ್ದು ದೇವೇಗೌಡರೇ ಕ್ಷೇತ್ರದಲ್ಲಿ ಪ್ರಚಾರ ನಡೆಸಿದ್ದರು.

ಒಡೆಯರ್‌ ಪ್ರಚಾರದ ಅಬ್ಬರ: ಕೇಂದ್ರದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಮಂತ್ರಿ ಪದವಿ ದಕ್ಕುತ್ತದೆ ಎಂಬ ಆಸೆ ಒಡೆಯರ್‌ ಅವರಲ್ಲಿ ಇತ್ತು. ಹಾಗಾಗಿ,  ಚುನಾವಣೆಯಲ್ಲಿ ಅಬ್ಬರದ ಪ್ರಚಾರ ಮಾಡಿದ್ದರು. ಒಟ್ಟು 8 ವಿಧಾನಸಭಾ ಕ್ಷೇತ್ರಗಳಿಗೆ ಕೇಳಿದಷ್ಟು ಪ್ರಚಾರ ವಾಹನಗಳನ್ನು ಕೊಟ್ಟಿದ್ದರು. ಒಡೆಯರ್‌ ಅವರು ಹೋದ ಕಡೆಯಲ್ಲೆಲ್ಲ ಅಭೂತಪೂರ್ವ ಸ್ವಾಗತ ಸಿಗುತ್ತಿತ್ತು. ಎಚ್‌.ಡಿ. ಕೋಟೆ, ಹುಣಸೂರಿಗೆ ಒಡೆಯರ್‌ ಹೋದರೆ ಜನರು ಕಾಲಿಗೆ ಬಿದ್ದು ನಮಸ್ಕರಿಸುತ್ತಿದ್ದರು. ಶಿರ ಬಾಗಿಸಿ, ‘ನಿಮ್ಮನ್ನು ನಾವು ಗೆಲ್ಲಿಸುತ್ತೇವೆ. ನೀವು ನಮ್ಮ ಮನೆ ಬಾಗಿಲಿಗೆ ಬಂದು ಮತ ಕೇಳುವ ಅಗತ್ಯ ಇಲ್ಲ ಮಹಾಸ್ವಾಮಿ’ ಎಂದು ಊರಿನ ಮುಖಂಡರು ಒಡೆಯರ್‌ಗೆ ಹೇಳುತ್ತಿದ್ದುದ್ದನ್ನು ಹಿರಿಯರು ಈಗಲೂ ನೆನಪಿಸುತ್ತಾರೆ. ಮೈಸೂರು ರಾಜಮನೆತನಕ್ಕೆ ಜನರು ಸಾಕಷ್ಟು ಗೌರವ ಕೊಡುತ್ತಿದ್ದರು. ‘ರಾಜ ದೈವ ಸ್ವರೂಪಿ’ ಎಂದು ನಂಬಿಕೆ ಇತ್ತು. ರಾಜ ಮನೆತನದ ಮೇಲೆ ಜನರು ಇಟ್ಟಿದ್ದ ಭಯ, ಭಕ್ತಿ ಮತಗಳಾಗಿ ಪರಿವರ್ತನೆಯಾಗುತ್ತಿದ್ದವು.

ಜನತಾ ದಳದಿಂದ ಜಿ.ಟಿ. ದೇವೇಗೌಡ ಅವರು ಒಡೆಯರ್‌ಗೆ ಸಾಕಷ್ಟು ಪೈಪೋಟಿ ನೀಡಿದರು. ಒಡೆಯರ್‌ 2,58,299 ಮತಗಳನ್ನು ಪಡೆದರೆ; ದೇವೇಗೌಡ 2,46,623 ಮತಗಳನ್ನು ಗಳಿಸಿ, 11,676 ಮತಗಳ ಅಂತರದಿಂದ ಪರಾಜಿತರಾದರು. ಅಲ್ಪಮತಗಳ ಅಂತರದಿಂದ ಕೈತಪ್ಪಿದ ಕ್ಷೇತ್ರ ಕಾಂಗ್ರೆಸ್‌ ಭದ್ರಕೋಟೆಯನ್ನು ಬೇಧಿಸಲು ಜನತಾ ದಳ ವಿಫಲವಾಯಿತು. ಬಿಜೆಪಿಯ ತೋಂಟದಾರ್ಯ 1,62,630 ಮತಗಳ ಮತಗಳನ್ನು ಪಡೆದು, ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು. ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಕಟ್ಟಿದ ಕರ್ನಾಟಕ ಕಾಂಗ್ರೆಸ್‌ ಪಕ್ಷ (ಕೆಸಿಪಿ)ದಿಂದ ‘ಮುಡಾ’ದ ಮಾಜಿ ಅಧ್ಯಕ್ಷ ಪಿ. ಗೋವಿಂದರಾಜು ಸ್ಪರ್ಧಿಸಿ, ನಾಲ್ಕನೇ ಸ್ಥಾನ ಪಡೆದರು.

ಕಡಿವಾಣ ಇರಲಿಲ್ಲ
‘ಚುನಾವಣಾ ಖರ್ಚಿನ ಮೇಲೆ ಮಿತಿ ಇತ್ತು. ಆದರೆ, ಈಗಿನಂತೆ ಚುನಾವಣಾ ಪ್ರಚಾರಕ್ಕೆ ಕಡಿವಾಣ ಇರಲಿಲ್ಲ. ಹಾಗಾಗಿ, ಜಿಲ್ಲೆಯಲ್ಲಿ ಸಾಕಷ್ಟು ಪ್ರಚಾರ ಮಾಡಲಾಗುತ್ತಿತ್ತು. ಬೀದಿ ಬೀದಿಗಳಲ್ಲಿ ಮೈಕ್‌ಗಳಲ್ಲಿ ಪ್ರಚಾರ, ಕರಪತ್ರಗಳನ್ನು ಹಂಚಲಾಗುತ್ತಿತ್ತು. ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಒಡೆಯರ್‌ ಹೆಚ್ಚು ಪ್ರಚಾರ ಮಾಡಿದ್ದರು. ಒಂದೊಂದು ವಿಧಾನಸಭಾ ಕ್ಷೇತ್ರಕ್ಕೂ ಕೇಳಿದಷ್ಟು ಪ್ರಚಾರ ವಾಹನಗಳನ್ನು ನೀಡುತ್ತಿದ್ದರು. ಹಾಗಾಗಿ, ಜಿಲ್ಲೆಯಲ್ಲಿ ಆಗ ಕಾಂಗ್ರೆಸ್‌ನ ಹೆಚ್ಚು ಪ್ರಚಾರ ವಾಹನಗಳು ಓಡಾಡುತ್ತಿದ್ದವು’
–ತೋಂಟದಾರ್ಯ, ವಿಧಾನ ಪರಿಷತ್ ಮಾಜಿ ಸದಸ್ಯ


29 ಮಂದಿ ಕಣದಲ್ಲಿ
ಮೈಸೂರು ಲೋಕಸಭಾ ಕ್ಷೇತ್ರದಲ್ಲಿ 1996ರಲ್ಲಿ ನಡೆದ ಚುನಾವಣೆಯಲ್ಲಿ ಒಟ್ಟು 29 ಅಭ್ಯರ್ಥಿಗಳು ಕಣದಲ್ಲಿ ಇದ್ದರು. ಚುನಾವಣಾ ಮತಪತ್ರದಲ್ಲಿ ಅಭ್ಯರ್ಥಿಗಳ ದೊಡ್ಡ ಪಟ್ಟಿಯೇ ಇತ್ತು. ಪ್ರಮುಖ ಪಕ್ಷಗಳ 5 ಅಭ್ಯರ್ಥಿಗಳನ್ನು ಹೊರತುಪಡಿಸಿದರೆ 24 ಮಂದಿ ಪಕ್ಷೇತರರು ಕಣದಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT