ADVERTISEMENT

ಜನತಾ ಪಕ್ಷ ವಿಭಜನೆ; ಶ್ರೀಕಂಠದತ್ತರಿಗೆ ಭರ್ಜರಿ ಜಯ

ಬಿ.ಜೆ.ಧನ್ಯಪ್ರಸಾದ್
Published 27 ಮಾರ್ಚ್ 2014, 8:34 IST
Last Updated 27 ಮಾರ್ಚ್ 2014, 8:34 IST

ಮೈಸೂರು: ಜನತಾ ಪಕ್ಷ ವಿಭಜನೆ, ನೆಲೆ ಕಾಣದ ಬಿಜೆಪಿ, ಮೈಸೂರು ಭಾಗದ ಜನರಲ್ಲಿದ್ದ ರಾಜಭಕ್ತಿ ಯಿಂದಾಗಿ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್‌ ಅನಾಯಾಸವಾಗಿ ಎರಡನೇ ಬಾರಿಗೆ ಭರ್ಜರಿ ಜಯ ದಾಖಲಿಸಿದರು.

1989ರ ಲೋಕಸಭೆ ಚುನಾವಣೆ ವೇಳೆಗೆ ಜನತಾ ಪಕ್ಷ ವಿಭಜನೆಯಾಗಿ ಎಚ್‌.ಡಿ. ದೇವೇಗೌಡ ಅವರು ಸಮಾಜವಾದಿ ಜನತಾ ಪಕ್ಷ ಮತ್ತು ರಾಮಕೃಷ್ಣ ಹೆಗಡೆ ಅವರು ಜನತಾ ದಳದ ನೇತೃತ್ವ ವಹಿಸಿದ್ದರು. ಭಾರತೀಯ ಜನತಾ ಪಕ್ಷವು (ಬಿಜೆಪಿ) ನೆಲೆ ಕಂಡುಕೊಳ್ಳಲು ಹವಣಿಸುತ್ತಿತ್ತು. ಪಕ್ಷೇತರರು ಹೆಚ್ಚು ಪರಿಣಾಮ ಬೀರುತ್ತಿರಲಿಲ್ಲ. ರಾಜಕೀಯ ವ್ಯಕ್ತಿ ಕೇಂದ್ರಿತವಾಗಿರಲಿಲ್ಲ. ಬದಲಿಗೆ, ಸಾಮೂಹಿಕ ನಾಯಕತ್ವ ತತ್ವ ಆಧರಿಸಿತ್ತು.

ಈ ಚುನಾವಣೆ ವೇಳೆಗೆ ಪಕ್ಷ, ಜನಪ್ರತಿನಿಧಿ, ಸರ್ಕಾರದ ಯೋಜನೆಗಳ ಕುರಿತು ಜನಸಾಮಾನ್ಯರು ಹಳ್ಳಿಕಟ್ಟೆಗಳಲ್ಲಿ ಮಾತನಾಡುವಷ್ಟರ ಮಟ್ಟಿಗೆ ಜಾಗೃತಿ ಮೂಡಿತ್ತು. ಅಧಿಕಾರ ವಿಕೇಂದ್ರೀಕರಣ, ಬಡತನ ನಿರ್ಮೂಲನೆ, ರಸ್ತೆ, ಕುಡಿಯವ ನೀರಿನ ಸೌಲಭ್ಯ ಇತ್ಯಾದಿ ಅಂಶಗಳನ್ನು ಇಟ್ಟುಕೊಂಡು ಅಭ್ಯರ್ಥಿಗಳು ಪ್ರಚಾರ ಮಾಡುತ್ತಿದ್ದರು.

ಮೈಸೂರು ಕ್ಷೇತ್ರದಲ್ಲಿ ಈ ಚುನಾವಣೆಯಲ್ಲಿ ಜನತಾದಳ ಅಭ್ಯರ್ಥಿಯಾಗಿ ಪ. ಮಲ್ಲೇಶ್‌ ಕಣಕ್ಕಿಳಿದಿದ್ದರು. ಇವರು ಜೆ.ಪಿ. ಚಳವಳಿ, ನವ ನಿರ್ಮಾಣ ಕ್ರಾಂತಿ ಸಂಘಟನೆ ಹಿನ್ನಲೆಯವರು. ಕನ್ನಡ ಕ್ರಿಯಾ ಸಮಿತಿ ಅಧ್ಯಕ್ಷರೂ ಆಗಿದ್ದರು. ಗ್ರಾಮಗಳಿಗೆ ತೆರಳಿ ಜನರನ್ನು ಒಟ್ಟುಗೂಡಿಸಿ ಪ್ರಚಾರ ಮಾಡುತ್ತಿದ್ದರು.
‘ಜೀವನದಲ್ಲಿ ಅದೇ ಮೊದಲ ಬಾರಿಗೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದೆ. ಜನತಾ ಪಕ್ಷ ಇಬ್ಭಾಗವಾಗಿದ್ದರಿಂದ ಮತಗಳು ಹಂಚಿಹೋಗಿದ್ದವು. ಪ್ಷಕದಿಂದ ಒಬ್ಬನೇ ಅಭ್ಯರ್ಥಿ ಸ್ಪರ್ಧಿಸಿದ್ದರೆ ಗೆಲುವು ಒಲಿಯುತ್ತಿತ್ತು’ ಎಂದು ಪ. ಮಲ್ಲೇಶ್‌ ಆ ದಿನಗಳನ್ನು ನೆನೆಯುತ್ತಾರೆ.

ಇನ್ನು ಸಮಾಜವಾದಿ ಜನತಾ ಪಕ್ಷದಿಂದ ಎಚ್‌.ಡಿ ದೇವೇಗೌಡ ಆಣತಿಯಂತೆ ಡಿ. ಮಾದೇಗೌಡ ಕಣಕ್ಕಿಳಿದಿದ್ದರು. ಪ್ರಾದೇಶಿಕ ಪಕ್ಷಗಳು ಬೇರೂರುತ್ತಿದ್ದ ಕಾಲ ಅದು. ದಾಸ್ಯತ್ವ ವಿರೋಧ, ರಾಜಮನೆತನದವರನ್ನು ಆಯ್ಕೆ ಮಾಡಿದರೆ ಶ್ರೀಸಾಮಾನ್ಯರ ಕೈಗೆ ಅವರು ಸಿಗುವುದಿಲ್ಲ ಇತ್ಯಾದಿ ಅಂಶಗಳನ್ನು ಇಟ್ಟುಕೊಂಡು ಪ್ರಚಾರ ಕೈಗೊಂಡಿದ್ದರು.

‘ರಾಜನ ಎದುರು ಸ್ಪರ್ಧಿಸಿ ಉಳಿಯಲು ಸಾಧ್ಯವಿಲ್ಲ ಎಂದು ಬಹಳಷ್ಟು ಮಂದಿ ಹೆದರಿಸುತ್ತಿದ್ದರು. ರಾಜ ಊರಿಗೆ ಪ್ರಚಾರಕ್ಕೆ ಹೋದರೆ ಆರತಿ ಎತ್ತಿ ಗೌರವಿಸುತ್ತಿದ್ದರು. ಅದು ಮೌಲ್ಯಧಾರಿತ ರಾಜಕಾರಣದ ಕಾಲಘಟ್ಟ. ಪ್ರಜಾಪ್ರಭುತ್ವದ ಆಶಾವಾದಿಯಾಗಿದ್ದೆ. ಸೋಲು ಖಚಿತ ಎಂಬುದು ಮೊದಲೇ ಗೊತ್ತಿತ್ತು’ ಎಂದು ವಿಧಾನ ಪರಿಷತ್‌ ಮಾಜಿ ಸದಸ್ಯ ಡಿ. ಮಾದೇಗೌಡ ನೆನಪಿಸಿಕೊಳ್ಳುತ್ತಾರೆ.

ಭಾರತೀಯ ಜನತಾ ಪಕ್ಷವು ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷರಾಗಿದ್ದ ತೋಂಟದಾರ್ಯ ಅವರನ್ನು ಕಣಕ್ಕಿಳಿಸಿತ್ತು. ಪಕ್ಷಕ್ಕೆ ವ್ಯವಸ್ಥಿತವಾದ ನೆಲೆ ಇರಲಿಲ್ಲ. ರೈತರ ಸಾಲ ಮನ್ನಾ, ಗ್ರಾಮೀಣ ಪ್ರದೇಶಗಳ ಅಭಿವೃದ್ಧಿ ಅಂಶಗಳನ್ನು ಇಟ್ಟುಕೊಂಡು ಪ್ರಚಾರ ಮಾಡಿದ್ದರು.‘ಮಹಾರಾಜ’ ನಮ್ಮ ಪ್ರತಿನಿಧಿ ಎಂಬ ಕೃತಜ್ಞತಾಭಾವ ಮತದಾರರಲ್ಲಿ ಇತ್ತು. ಇಡೀ ಕ್ಷೇತ್ರದ ಜನತೆಗೆ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್‌ ಯಾರು ಎಂಬುದು ತಿಳಿದಿತ್ತು. ಸೋತರೂ ಖುಷಿ ನೀಡಿದ ಚುನಾವಣೆ ಅದು’ ಎಂದು ತೋಂಟದಾರ್ಯ ಹೇಳುತ್ತಾರೆ.

ಅಮೆರಿಕದ ತೈಲ ಕಂಪೆನಿಯೊಂದರಲ್ಲಿ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿ ಸ್ವದೇಶಕ್ಕೆ ಹಿಂದಿರುಗಿ ಮೈಸೂರಿನಲ್ಲಿ ನೆಲೆಸಿದ್ದ ಭಾಮಿ ವಿ. ಶಣೈ ಅವರು ಪಕ್ಷೇತರರಾಗಿ ಸ್ಪರ್ಧಿಸಿದ್ದರು. ಇವರು ಮದ್ರಾಸ್‌ ಐಐಟಿಯಲ್ಲಿ ಬಿ.ಟೆಕ್‌ ಮತ್ತು ಅಮೆರಿಕದಲ್ಲಿ ಎಂಬಿಎ ಪೂರೈಸಿದ್ದರು. ಪತ್ರಕರ್ತ ಶಫಿ ಅಹಮದ್‌ ಷರೀಫ್‌ ಕಣದಲ್ಲಿದ್ದರು. ಪಕ್ಷೇತರರೆಡೆಗೆ ಮತದಾರರ ಚಿತ್ತ ಹರಿಯಲಿಲ್ಲ.

ಜನತೆಯ ರಾಜಭಕ್ತಿ ಶ್ರೀಕಂಠದತ್ತ ಒಡೆಯರ್‌ ಪಾಲಿಗೆ ವರದಾನವಾಗಿ ಪರಿಣಮಿಸಿ ಅಭೂತಪೂರ್ವ ಗೆಲುವು ಸಾಧಿಸಿದರು. ದೇಶದಲ್ಲಿ ಕಾಂಗ್ರೆಸ್‌ 197 ಸ್ಥಾನ ಪಡೆದಿತ್ತು. ಸರ್ಕಾರ ರಚಿಸಲು ಸಾಧ್ಯವಾಗಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.