ADVERTISEMENT

ನೆಹರೂ ಜತೆ ನಿಕಟ ಸಂಪರ್ಕ ಹೊಂದಿದ್ದ ಕೆ.ಜಿ.ಒಡೆಯರ್

ಶಿವಮೊಗ್ಗ ಲೋಕಕ್ಷೇತ್ರದ ಪರಿಚಯ...

ಪ್ರಕಾಶ ಕುಗ್ವೆ
Published 27 ಮಾರ್ಚ್ 2014, 9:32 IST
Last Updated 27 ಮಾರ್ಚ್ 2014, 9:32 IST

ಶಿವಮೊಗ್ಗ: ಈ ಕ್ಷೇತ್ರದ ಮೊದಲ ಲೋಕಸಭಾ ಸದಸ್ಯ ಕೆ.ಜಿ.ಒಡೆಯರ್. ದೇಶಕ್ಕೆ ನಡೆದ ಮೊದಲ (1952) ಹಾಗೂ ಎರಡನೇ (1957) ಚುನಾವಣೆಯಲ್ಲಿ ಕೆ.ಜಿ. ಒಡೆಯರ್‌ ಶಿವಮೊಗ್ಗದಿಂದ ಆಯ್ಕೆಯಾಗಿದ್ದರು. ಪ್ರಧಾನಿ ಜವಾಹರ ಲಾಲ್ ನೆಹರೂ ಅವರಿಗೆ ಆಪ್ತರಾಗಿದ್ದ ಒಡೆಯರ್‌ ಒಮ್ಮೆ ಅವರನ್ನು ಜೋಗಕ್ಕೂ ಕರೆದು ತಂದಿದ್ದರು.

ಕೆ.ಜಿ.ಒಡೆಯರ್‌ ಅವರದ್ದು ಕಾಂಗ್ರೆಸ್ ಪಕ್ಷ. 1952ರಲ್ಲಿ 1,08,990 ಮತ ಪಡೆಯುವ ಮೂಲಕ ತಮ್ಮ ಪ್ರತಿಸ್ಪರ್ಧಿ ಪ್ರಜಾಸೋಷಲಿಸ್ಟ್‌ ಪಕ್ಷದ ಎ.ಆರ್‌.ಬದರಿನಾರಾಯಣ ವಿರುದ್ಧ ಗೆಲುವು ಪಡೆದಿದ್ದರು. 1952ರಲ್ಲಿ ಕ್ಷೇತ್ರದಲ್ಲಿದ್ದ ಮತದಾರರ ಸಂಖ್ಯೆ 3,13,647. ಇದರಲ್ಲಿ ಚಲಾವಣೆ ಗೊಂಡ ಮತ 2,35,659. ದೇಶಕ್ಕೆ ನಡೆದ ಮೊದಲ ಚುನಾ ವಣೆಯಲ್ಲಿ ಶೇ 75ರಷ್ಟು ಮತದಾನವಾಗಿದ್ದು ವಿಶೇಷ.

ಎರಡನೇ ಚುನಾವಣೆಯಲ್ಲೂ ಸ್ಪರ್ಧಿಸಿದ್ದ ಕೆ.ಜಿ.ಒಡೆ ಯರ್ ಆಗಲೂ 1,38,046 ಮತ ಪಡೆದು ಜಯಭೇರಿ ಬಾರಿಸಿದ್ದರು. ಆಗ ಮತದಾರರ ಸಂಖ್ಯೆ 3,91,924 ಇತ್ತು. ಆದರೆ, ಮತದಾನ ಮೊದಲ ಚುನಾವಣೆಗಿಂತ ಸುಮಾರು ಶೇ 17 ಕಡಿಮೆಯಾಗಿತ್ತು. ಆವಾಗ ಕೆ.ಜಿ.ಒಡೆಯರ್‌ ಎದುರಾಳಿ ಯಾಗಿದ್ದು ಪ್ರಜಾ ಸೋಷಲಿಸ್ಟ್‌ ಪಕ್ಷದ ಟಿ.ಎಲ್‌.ಕಲ್ಲಯ್ಯ.

ಕೆ.ಜಿ.ಒಡೆಯರ್ ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು. 5 ಬಾರಿ ಸೆರೆವಾಸ ಅನುಭವಿಸಿದ್ದು, 5ವರ್ಷ ಕಾಲ ಜೈಲಿ ನಲ್ಲಿದ್ದರು. ಇದರಲ್ಲಿ ಐದು ತಿಂಗಳು ಜೈಲಿನ ಕಠಿಣ ಶಿಕ್ಷೆ ಯನ್ನೂ ಉಂಡಿದ್ದರು. ಒಮ್ಮೆ ಗಾಂಧೀಜಿ ಅವರನ್ನು ಭೇಟಿ ಮಾಡಿದ ನಂತರ ತಮ್ಮ ವೇಷ–ಭೂಷಣವನ್ನು ಸಂಪೂರ್ಣ ಬದಲಿಸಿಕೊಂಡಿದ್ದರು. ಕೋಟು–ಬೂಟ ಧರಿಸುತ್ತಿದ್ದವರು ತಲೆ ಮೇಲೊಂದು ಗಾಂಧಿ ಟೋಪಿ, ಪಂಜೆ, ಜುಬ್ಬಾ ಶಾಶ್ವತವಾ ಯಿತು. ಎಲ್ಲವೂ ಖಾದಿಮಯ. ಸಂಸತ್‌ ಸದಸ್ಯರಾಗುವ ವರೆಗೂ ಅವರು ಮನೆಯಲ್ಲಿ ಚರಕದಿಂದ ನೊಲು ತೆಗೆಯುತ್ತಿದ್ದರು.

ಮಲೆನಾಡಿನ ಬಗ್ಗೆ ವಿಶೇಷ ಕಾಳಜಿ ಹೊಂದಿದ್ದ ಕೆ.ಜಿ.ಒಡೆಯರ್‌ ಅವರನ್ನು ಕಂಡರೆ ಎಸ್‌.ನಿಜಲಿಂಗಪ್ಪ ಅವರಿಗೆ ವಿಶೇಷ ಪ್ರೀತಿ. ಹಾಗಾಗಿ, ನೆಹರೂ ಅವರಿಗೂ ಒಡೆಯರ್‌ ಬಗ್ಗೆ ಅಭಿಮಾನ–ಅಕ್ಕರೆ. ಇವರನ್ನೂ ಯಾವಾ ಗಲೂ ನೆಹರೂ ಅವರು ‘ಜಂಟಲ್‌ಮನ್‌’ ಎನ್ನುತ್ತಿದ್ದರಂತೆ. ಅವರು ಪ್ರಧಾನಿಯಾದಾಗ ಚೀನಾ ಪ್ರವಾಸಕ್ಕೆ ತೆರಳಿದ ತಂಡದಲ್ಲಿ ಒಡೆಯರ್ ಕೂಡ ಒಬ್ಬರಾಗಿದ್ದರು. 

ಸತತ ಎರಡೂ ಚುನಾವಣೆಗಳಲ್ಲಿ ಭಾರೀ ಅಂತರದಿಂದ ಗೆದ್ದಿದ್ದರೂ ಮತ್ತೆ ಎಂದೂ ಕೆ.ಜಿ.ಒಡೆಯರ್‌ ಚುನಾವಣೆಗೆ ಸ್ಪರ್ಧಿಸುವ ಮನಸ್ಸು ಮಾಡಲಿಲ್ಲ. ಅಧಿಕಾರ ರಾಜಕಾರಣದಿಂದ ದೂರವೇ ಉಳಿದರು. ಈ ಎರಡೂ ಚುನಾ ವಣೆಗಳು ನಡೆದಾಗ ಇವರ ಮಗ ಜಗದೀಶ್‌ ಒಡೆಯರ್‌ (ಈಗ ಇವರು ಬಿಜೆಪಿ ಜಿಲ್ಲಾ ಘಟಕದ ಉಪಾಧ್ಯಕ್ಷ) ಇನ್ನೂ ಬಾಲಕ. ಒಂದೆರೆಡು ಬಾರಿ ಕಾರಿನಲ್ಲಿ ಚುನಾವಣಾ ಪ್ರಚಾರಕ್ಕೆ ತಂದೆ ಜತೆ ತೆರಳಿದಷ್ಟೇ ಅವರಿಗೆ ನೆನಪು.

ತಂದೆಯ ವ್ಯಕ್ತಿತ್ವ, ಅವರ ಹೃದಯವಂತಿಕೆ ಬಗ್ಗೆ ಜಗದೀಶ್‌ ಒಡೆಯರ್‌ ಹೇಳಿದ ಮಾತಿನ ಸಾರಾಂಶ ಇಲ್ಲಿದೆ. ಅಧಿಕಾರ ಇಲ್ಲದ ಮೇಲೆ ಅವರು ಮಾಡಿದ ಕೆಲಸಗಳು ಆನೇಕ. ಅವುಗಳಲ್ಲಿ ಲಾಲ್‌ ಬಹದ್ದೂರ್‌ ಶಾಸ್ತ್ರಿ ಕಾಲೇಜು, ಶಿವಲಿಂಗಪ್ಪ ಪ್ರೌಢಶಾಲೆ ಸ್ಥಾಪಕ ಅಧ್ಯಕ್ಷರಾಗಿ ಕೆಲಸ ಮಾಡಿದರು.

ಕಾಗೋಡು ಇಂದು ರಾಷ್ಟ್ರವ್ಯಾಪಿ ಹೆಸರು ಪಡೆದ ಗ್ರಾಮ. ಅದೇ ಗ್ರಾಮದವರು ಈ ಕೆ.ಜಿ.ಒಡೆಯರ್‌. ಇವರೇ ಭೂ ಮಾಲೀಕರಾಗಿದ್ದರೂ ಇವರ ಸಹಕಾರ ಇಲ್ಲದಿದ್ದರೆ ‘ಉಳುವವನೇ ಹೊಲದೊಡೆಯ’ ಕಾನೂನು ಜಾರಿಗೆ ಬರಲು ಸಾಧ್ಯವೇ ಇರುತ್ತಿರಲಿಲ್ಲ.

ಕಾಗೋಡು ಸೇರಿದಂತೆ 7 ಹಳ್ಳಿಗೆ ಇವರೇ ದೊಡ್ಡ ಭೂಮಾಲಿಕರು. ಅದು ಯಾರದೋ ಜಮೀನಿನಲ್ಲಿ ಹತ್ತಿದ ಹೋರಾಟದ ಕಿಡಿಯನ್ನು ಕಾಗೋಡು ಸತ್ಯಾಗ್ರಹದ ರೂವಾರಿ ಎಚ್‌.ಗಣಪತಿಯಪ್ಪ, ರಾಷ್ಟ್ರವ್ಯಾಪಿ ಗಮನ ಸೆಳೆಯುವ ದೃಷ್ಟಿಯಿಂದ ಅದನ್ನು ಕೆ.ಜಿ.ಒಡೆಯರ್‌ ಜಮೀನಿಗೆ ಸ್ಥಳಾಂತರಿಸಿದರು. ಕಾಗೋಡಿಗೆ  ರಾಮಮನೋಹರ ಲೋಹಿಯಾ, ಗೋಪಾಲಗೌಡ ಮತ್ತಿತರ ಸಮಾಜವಾದಿಗಳು ಬಂದು ಹೋರಾಟಕ್ಕೆ ಚಾಲನೆ ನೀಡಿದರು.

ತದನಂತರ ಚುನಾವಣೆ ಘೋಷಣೆಯಾಯಿತು. ಸಮಾಜವಾದಿಗಳ ಹೋರಾಟ ರಾಷ್ಟ್ರವ್ಯಾಪಿ ಗಮನ ಸೆಳೆದಿದ್ದರೂ ಕ್ಷೇತ್ರದ ಜನ ಕೆ.ಜಿ.ಒಡೆಯರ್‌ರನ್ನು ಬಿಟ್ಟುಕೊಡಲಿಲ್ಲ; ಅವರು ಅತ್ಯಧಿಕ ಮತಗಳಿಂದ ಗೆದ್ದು ಬಂದರು.

ಕಾಗೋಡು ಚಳವಳಿ ಸ್ವಲ್ಪ ಕಾಲ ತಣ್ಣಗಾಯಿತು. ಯಾರ ವಿರುದ್ಧ ರೈತರು ದಂಗೆ ಎದ್ದಿದ್ದರೋ ಅವರೇ (ಕೆ.ಜಿ.ಒಡೆಯರ್‌) ಕೊನೆಗೆ ರೈತರ ಹೊಟ್ಟೆ ತಣ್ಣಗಾಗಿಸಿದರು. ಮುಂದೆ ‘ಉಳುವವನೇ ಹೊಲದೊಡೆಯ’ ಕಾನೂನು ಅನುಷ್ಠಾನಕ್ಕೆ ಬರುವುದರ ಒಳಗೆಯೇ ಕೆ.ಜಿ.ಒಡೆಯರ್‌ ಸುಮಾರು 800 ಎಕರೆ ಜಮೀನನ್ನು ರೈತರಿಗೆ ಬಿಟ್ಟು ಕೊಟ್ಟರು. ಇದನ್ನು ಸ್ವತಹ ಎಚ್‌.ಗಣಪತಿಯಪ್ಪ ತಮ್ಮ ಹೋರಾಟ ಕುರಿತ ಪುಸ್ತಕದಲ್ಲಿ ಸ್ಮರಿಸಿದ್ದಾರೆ.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.