ADVERTISEMENT

ಪ್ರಚಾರ ಸಭೆ ಪರವಾನಗಿ ಅಡ್ಡಿ

ಅಭ್ಯರ್ಥಿ ಕೆ. ಸೋಮಶೇಖರ ಯಾದಗಿರಿ ಆರೋಪ

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2014, 8:36 IST
Last Updated 14 ಏಪ್ರಿಲ್ 2014, 8:36 IST

ರಾಯಚೂರು: ರಾಯಚೂರು ಲೋಕ­ಸಭಾ ಕ್ಷೇತ್ರದ ಅಭ್ಯರ್ಥಿಯಾದ ನನಗೆ ಚುನಾವಣಾ ಪ್ರಚಾರ ಸಭೆ ನಡೆಸಲು ಪರವಾನಗಿ ನೀಡದೇ ವಿನಾಕಾರಣ ಯಾದಗಿರಿ ಜಿಲ್ಲಾಡಳಿತ ಕಿರಿಕಿರಿ ನೀಡುತ್ತಿದೆ. ದೊಡ್ಡಪಕ್ಷಗಳ ಪರವಾಗಿ ಕಾರ್ಯ ಮಾಡುತ್ತಿದೆ ಎಂದು ಎಂದು ಎಸ್‌ಯುಸಿಐ ಪಕ್ಷದ ಅಭ್ಯರ್ಥಿ ಕೆ. ಸೋಮಶೇಖರ ಯಾದಗಿರಿ ಆರೋಪಿಸಿದರು.

ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈ ಬಗ್ಗೆ ನಾನು ಕೇಂದ್ರ ಚುನಾವಣಾ ಆಯುಕ್ತರಿಗೆ, ರಾಜ್ಯ ಚುನಾವಣಾ ಅಧಿಕಾರಿಗಳಿಗೆ ಹಾಗೂ ಕ್ಷೇತ್ರ ಚುನಾವಣಾ ವೀಕ್ಷಕರಿಗೆ ಮತ್ತು ಕ್ಷೇತ್ರ ಚುನಾವಣಾಧಿಕಾರಿಗೆ ದೂರು ಸಲ್ಲಿಸಿದ್ದೇನೆ. ಆದರೆ, ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ನನ್ನ ಚುನಾವಣಾ ಪ್ರಚಾರ ಸಭೆಗೆ ಅನುಮತಿ ನೀಡಿಲ್ಲ. ಹೀಗಾಗಿ ನನ್ನ ಎಲ್ಲ ಚುನಾವಣಾ ಪ್ರಚಾರವನ್ನು ಹಾಳು ಮಾಡಿದ್ದಾರೆ ಎಂದು ಆರೋಪಿಸಿದರು.

ಚುನಾವಣಾಧಿಕಾರಿ ಅಭ್ಯರ್ಥಿಗಳಿಗೆ ಸಹಕರಿಸಬೇಕು. ಪ್ರಚಾರ ಸಭೆ, ಆಟೊ ಪ್ರಚಾರ, ಜೀಪ್ ಜಾಥಾ ಮುಂತಾ­ದವುಗಳಿಗೆ ಕಾಲ ವಿಳಂಬವಿಲ್ಲದೇ ಪರವಾನಗಿ ನೀಡಬೇಕು. ಆದರೆ, ಯಾದಗಿರಿ ಜಿಲ್ಲೆಯಲ್ಲಿ ಅಲ್ಲಿನ ಉಪವಿಭಾಗಾಧಿಕಾರಿ ಗಂಗಾಬಾಯಿ ಮಾನಕರ್‌ ಅವರು ಪರವಾನಗಿಗೆ ಮುಂಗಡವಾಗಿ ಅರ್ಜಿ ಸಲ್ಲಿಸಿದರೂ ಪರವಾನಗಿ ನೀಡದೇ ಅಡ್ಡಿಪಡಿಸಿದ್ದಾರೆ ಎಂದು ಆರೋಪ ಮಾಡಿದರು.

ಬೆಳಗಿನ 6ರಿಂದ ರಾತ್ರಿ 10ರವರೆಗೆ ಪ್ರಚಾರದ ವಾಹನಗಳಿಗೆ ಸಮಯ­ವಿದೆ. ಆದರೆ, ಬೆಳಿಗ್ಗೆ 6ರಿಂದ ಸಂಜೆ 6ರವರೆಗೆ ಮಾತ್ರ ಪ್ರಚಾರ ಮಾಡ­ಬೇಕು ಎಂಬ ನಿಬಂಧನೆ ಹಾಕಲಾಗಿದೆ. ಏ. 15ರ ಸಂಜೆ 5ರವರೆಗೆ ಪ್ರಚಾರಕ್ಕೆ ಅವಕಾಶವಿದ್ದರೂ ಏ. 14ರವರೆಗೆ ಮಾತ್ರ ಅನುಮತಿ ನೀಡಲಾಗಿದೆ ಎಂದು ಆರೋಪಿಸಿದರು. ಡಾ.ಟಿ.ಎಸ್ ಸುನೀತ್‌ಕುಮಾರ, ಅಪರ್ಣಾ ಬಿ.ಆರ್, ಎನ್.ಎಸ್ ವಿರೇಶ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.