ADVERTISEMENT

ಪ್ರಜ್ಞಾ ಸಿಂಗ್‌ ವಯಸ್ಸೆಷ್ಟು?

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2019, 20:15 IST
Last Updated 22 ಏಪ್ರಿಲ್ 2019, 20:15 IST
ಪ್ರಜ್ಞಾ ಸಿಂಗ್‌
ಪ್ರಜ್ಞಾ ಸಿಂಗ್‌   

ಭೋಪಾಲ್‌: ಲೋಕಸಭಾ ಕ್ಷೇತ್ರದಬಿಜೆಪಿಯ ಅಭ್ಯರ್ಥಿ ಸಾಧ್ವಿ ಪ್ರಜ್ಞಾ ಸಿಂಗ್‌ ಅವರ ವಯಸ್ಸೆಷ್ಟು? ಸಾಮಾಜಿಕ ಜಾಲತಾಣಗಳ ದಾಖಲೆಗಳ ಪ್ರಕಾರ ಅವರು 1988ರ ಏಪ್ರಿಲ್‌ 2ರಂದು ಜನಿಸಿದವರಾಗಿದ್ದು, ಅವರ ವಯಸ್ಸು 31ವರ್ಷ.

ಆದರೆ ಮಾಲೆಗಾಂವ್‌ ಸ್ಫೋಟಕ್ಕೆ ಸಂಬಂಧಿಸಿದಂತೆ ಜಾಮೀನು ಪಡೆಯಲು ಬಾಂಬೆ ಹೈಕೋರ್ಟ್‌ಗೆ 2016ರಲ್ಲಿ ಅವರು ಸಲ್ಲಿಸಿದ್ದ ದಾಖಲೆಗಳ ಪ್ರಕಾರ ಅವರ ವಯಸ್ಸು 44 ವರ್ಷ. ಅದನ್ನೇ ದಾಖಲೆಯಾಗಿ ತೆಗೆದುಕೊಂಡರೆ ಈಗ ಅವರ ವಯಸ್ಸು 47 ವರ್ಷ. ಆದರೆ ಇದನ್ನೂ ಅಧಿಕೃತ ಎಂದು ಸ್ವೀಕರಿಸುವಂತಿಲ್ಲ. ಯಾಕೆಂದರೆ, ಚುನಾವಣಾ ಆಯೋಗಕ್ಕೆ ಅವರು ನಾಮಪತ್ರದ ಜೊತೆಗೆ ಸಲ್ಲಿಸಿರುವ ಪ್ರಮಾಣಪತ್ರದಲ್ಲಿ ತಮ್ಮ ವಯಸ್ಸು 49 ವರ್ಷ ಎಂದು ಹೇಳಿಕೊಂಡಿದ್ದಾರೆ.

‘ಬಾಬರಿ ಮಸೀದಿಯ ಮೇಲೆ ಏರಿ ಅದನ್ನು ಒಡೆದು ಹಾಕಿದವರಲ್ಲಿ ನಾನೂ ಒಬ್ಬಳು, ಆ ಬಗ್ಗೆ ನನಗೆ ಹೆಮ್ಮೆ ಇದೆ’ ಎಂದು ಪ್ರಜ್ಞಾ ಅವರು ಭಾನುವಾರ ಸುದ್ದಿ ವಾಹಿನಿ ಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದ್ದರು. ಅದಕ್ಕಾಗಿ ಚುನಾವಣಾ ಆಯೋಗದಿಂದ ನೋಟಿಸ್‌ ಪಡೆದಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಅವರು ನಮೂದಿಸಿರುವ ಜನ್ಮ ದಿನಾಂಕವನ್ನು ದಾಖಲೆಯಾಗಿ ತೆಗೆದುಕೊಂಡರೆ, ಬಾಬರಿ ಮಸೀದಿಯ ಮೇಲೆ ಏರುವಾಗ (1992) ಅವರ ವಯಸ್ಸು ಕೇವಲ ನಾಲ್ಕು ವರ್ಷ. ಇದನ್ನಿಟ್ಟುಕೊಂಡು ಈಗ ಸಾಮಾಜಿಕ ಮಾಧ್ಯಮಗಳಲ್ಲಿ ಸಾಧ್ವಿಯ ಕಾಲೆಳೆಯಲಾಗುತ್ತಿದೆ.

ADVERTISEMENT

ಅಪಾರವಾದ ದೈಹಿಕ ಶಕ್ತಿಯನ್ನು ಹೊಂದಿರುವಂಥ ಕಾರ್ಟೂನ್‌ ಪಾತ್ರಗಳಾದ ಛೋಟಾ ಭೀಮ್‌ ಮತ್ತು ಶಿನ್‌ಚೆನ್‌ಗಳಿಗೆ ಸಾಧ್ವಿಯನ್ನು ಹೋಲಿಕೆ ಮಾಡಿರುವ ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ, ‘ಛೋಟಾ ಭೀಮ್‌ ಮತ್ತು ಶಿನ್‌ಚೆನ್‌ ಅವರಿಗೆ ಭಾರತದ ಪ್ರತಿಸ್ಪರ್ಧಿ ಇವರು’ ಎಂದು ಟ್ವೀಟ್‌ ಮಾಡಿದ್ದಾರೆ.

‘ಆಕೆಗೆ ಆಗ ಕೇವಲ ನಾಲ್ಕು ವರ್ಷ ವಯಸ್ಸು. ವಯಸ್ಸಿಗೂ ಮೀರಿದ ಶಕ್ತಿಯನ್ನು ಹೊಂದಿದ್ದ ಸಾಧ್ವಿ, ಛೋಟಾ ಭೀಮ್‌ ಪಾತ್ರಕ್ಕೆ ಪ್ರೇರಣೆ ಆಗಿರಬೇಕು’ ಎಂದು ಪತ್ರಕರ್ತ ಶೇಖರ್‌ ಗುಪ್ತ ಟ್ವೀಟ್‌ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.