ADVERTISEMENT

ಸುರಪುರ ಮತಕ್ಷೇತ್ರದಲ್ಲಿ ಅಪ್ರಾಪ್ತ ಮತದಾರರಿಲ್ಲ: ಶಾಸಕ ನರಸಿಂಹ ನಾಯಕ

​ಪ್ರಜಾವಾಣಿ ವಾರ್ತೆ
Published 26 ಮಾರ್ಚ್ 2019, 14:26 IST
Last Updated 26 ಮಾರ್ಚ್ 2019, 14:26 IST
ನರಸಿಂಹ ನಾಯಕ (ರಾಜೂಗೌಡ)
ನರಸಿಂಹ ನಾಯಕ (ರಾಜೂಗೌಡ)   

ಯಾದಗಿರಿ: ‘ಜಿಲ್ಲೆಯ ಸುರಪುರ ಮತಕ್ಷೇತ್ರದಲ್ಲಿ ಅಪ್ರಾಪ್ತ ಹಾಗೂ ನಕಲಿ ಮತದಾರರಿಲ್ಲ. ಆದರೆ, ಡಬ್ಲಿಂಗ್‌ ಮತದಾರರ ಸಮಸ್ಯೆ ಇದೆ’ ಎಂದು ಸುರಪುರ ಶಾಸಕ ನರಸಿಂಹ ನಾಯಕ (ರಾಜೂಗೌಡ) ತಿಳಿಸಿದರು.

ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ,‘ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕರು ಹಿರಿಯರಾಗಿದ್ದಾರೆ. ಅವರು ಸೋಲಿನ ಹತಾಶೆಯಿಂದ ಮತದಾರರನ್ನು ನಕಲಿ ಮತದಾರರು ಎಂಬುದಾಗಿ ಆರೋಪಿಸುವ ಮೂಲಕ ಅವಮಾನ ಮಾಡಿದ್ದಾರೆ. ಕೂಡಲೇ ಅವರು ಕ್ಷೇತ್ರದ ಮತದಾರರ ಕ್ಷಮೆಯಾಚಿಸಬೇಕು’ ಎಂದು ಆಗ್ರಹಿಸಿದರು.

‘ಚುನಾವಣೆಗೂ ಮುಂಚಿತವಾಗಿ ಮತದಾರರ ಪಟ್ಟಿ ಪರಿಷ್ಕರಣೆ ನಡೆಯುತ್ತದೆ. ನಂತರ ಅಂತಿಮ ಪಟ್ಟಿಯ ಬಿಡುಗಡೆ ಆಗುತ್ತದೆ. ನಂತರ ಆಕ್ಷೇಪಣೆಗೆ ಅವಕಾಶ ಕಲ್ಪಿಸಲಾಗುತ್ತದೆ. ಆಗ ಬಿಟ್ಟು ಈಗ ಸೋಲಿಗೆ ಕಾರಣ ಹುಡುಕುತ್ತಾ ಹತಾಶೆಯಿಂದ ಮತದಾರರೇ ನಕಲಿ ಇದ್ದಾರೆ. ಅದರಲ್ಲೂ 20 ಸಾವಿರ ಮತದಾರರು ನಕಲಿ ಇದ್ದಾರೆ ಎಂದು ದೂರಿರುವುದು ಸರಿಯಲ್ಲ’ ಎಂದರು.

ADVERTISEMENT

‘ಗುಳೆ ಹೋಗುವವರ ಮತದಾರರನ್ನು ಪಟ್ಟಿಯಿಂದ ಕೈಬಿಡುವಂತೆ ಅವರು ಬಿಎಲ್‌ಒ ಸಿಬ್ಬಂದಿ ಮೇಲೆ ಒತ್ತಡ ಹೇರುತ್ತಿದ್ದಾರೆ. ನಿಂಗಣ್ಣ ಬಾದೆಪುರ. ವಿಠ್ಠಲ್‌ ಯಾದವ ಅವರಂತಹರವರು ಎರಡು ಕಡೆಗಳಲ್ಲಿ ಮತದಾನ ಮಾಡಿರುವುದು ಮತದಾರರ ಪಟ್ಟಿಯಲ್ಲಿ ದಾಖಲಾಗಿದೆ. ಮಾಜಿ ಶಾಸಕರು ಮೊದಲು ತಮ್ಮ ಬೆಂಬಲಿಗರ ಮತ್ತು ಕುಟುಂಬದ ಸದಸ್ಯರು ಪಾದರ್ಶಕವಾಗಿ ಮತದಾನ ನಡೆಸುತ್ತಿದ್ದಾರೆಯೇ ಎಂಬುದನ್ನು ಮೊದಲು ಪರಿಶೀಲಿಸಿಕೊಳ್ಳಲಿ. ನಂತರ ಮತಕ್ಷೇತ್ರದ ಮತದಾರರ ಪಾದರ್ಶಕತ್ವದ ಬಗ್ಗೆ ಪರಿಶೀಲಿಸಿಕೊಳ್ಳಲಿ’ ಎಂದು ಹೇಳಿದರು.

‘ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಮಾಜಿ ಶಾಸಕರು ಅಪ್ರಾಪ್ತ, ನಕಲಿ ಮತದಾರರು ಇದ್ದಾರೆ ಎಂಬುದಾಗಿ ಗೊಂದಲ ಮೂಡಿಸುವುದನ್ನು ಕೈಬಿಡಬೇಕು. ಇದರಿಂದ ಮತದಾರರ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಮತದಾರರ ಪಟ್ಟಿ ಪರೀಲನೆ, ಆಕ್ಷೇಪಣೆಗೆ ಅವಕಾಶ ನೀಡಿದಾಗ ಇಂಥಾ ಸಮಸ್ಯೆಗಳ ಬಗ್ಗೆ ಗಮನ ಸೆಳೆದರೆ ಅದನ್ನು ಪರಶೀಲಿಸಲು ಅಧಿಕಾರಿಗಳಿಗೆ ಸಮಯಾವಕಾಶ ಇರುತ್ತದೆ’ ಎಂದರು.

‘ಈಗ ಮತದಾರರ ನೋಂದಣಿಗೆ ಅರ್ಜಿ ಸಲ್ಲಿಸುವ ವ್ಯವಸ್ಥೆ ಬದಲಾಗಿದೆ. ಮತದಾರರ ನೋಂದಣಿ ಆನ್‌ಲೈನ್‌ ಮೂಲಕ ಆಗುವುದರಿಂದ ಯುವಕರು ಹೆಚ್ಚಾಗಿ ಅರ್ಜಿ ಸಲ್ಲಿಸಿದ್ದಾರೆ. ಈ ಹಿಂದೆ ಮತದಾರರ ನೋಂದಣಿಯನ್ನು ಅಧಿಕಾರಿಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿರಲಿಲ್ಲ. ಹೀಗಾಗಿ, ಹೊಸ ಮತದಾರರು ಅರ್ಹರಿದ್ದರೂ, ಮತದಾರರ ಪಟ್ಟಿಯಲ್ಲಿ ನೋಂದಣಿ ಆಗಿರುತ್ತಿರಲಿಲ್ಲ. ಆದರೆ, ಈಗ ಯುವಕರು ಸ್ವಪ್ರೇರಣೆಯಿಂದ ಆನ್‌ಲೈನ್‌್ ಮೂಲಕ ನೋಂದಾಯಿಸಿಕೊಂಡಿರುವುದರಿಂದ ಮತಕ್ಷೇತ್ರದಲ್ಲಿ ಹೊಸ ಮತದಾರರ ಸಂಖ್ಯೆ ಹೆಚ್ಚಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.