ADVERTISEMENT

ಮತದಾರರ ಕಣ್ಣಲ್ಲಿ ಮಾದರಿ ಸಂಸದ

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2019, 9:06 IST
Last Updated 14 ಏಪ್ರಿಲ್ 2019, 9:06 IST
ದೊಡ್ಡನಾಯ್ಕ ಜಿಡ್ಡಿಮನಿ
ದೊಡ್ಡನಾಯ್ಕ ಜಿಡ್ಡಿಮನಿ   

ಜನರ ಸೇವೆಗೆ ಆದ್ಯತೆ ನೀಡಬೇಕು

ಜನರ ಸೇವೆಯೇ ಜನಾರ್ದನ ಸೇವೆ ಎಂದು ತಿಳಿದವರಾಗಿರಬೇಕು. ಜನರ ಕಷ್ಟ–ಸುಖಗಳ ಅರಿವಿದ್ದು, ನಾಡಿನ ಸೇವೆಗಾಗಿಯೇ ತನ್ನ ಜೀವನವನ್ನು ಮುಡುಪಾಗಿಡಬೇಕು. ಕ್ಷೇತ್ರದ ಯುವಜನತೆ, ರೈತರು, ಹಿರಿಯ ನಾಗರಿಕರು ಹಾಗೂ ಶೈಕ್ಷಣಿಕ ಬೇಕು ಬೇಡಿಕೆಗಳ ಕುರಿತು ಮಾಹಿತಿ ಹೊಂದಿರಬೇಕು. ದೇಶದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ದುಡಿಯಬೇಕು. ಕೇಂದ್ರ ಸರ್ಕಾರದ ಎಲ್ಲಾ ಯೋಜನೆಗಳನ್ನು ಕ್ಷೇತ್ರದ ಜನರಿಗೆ ತಲುಪಿಸಿ ಅವರ ಜೀವನಮಟ್ಟ ಸುಧಾರಿಸಲು ಶ್ರಮಿಸಬೇಕು. ಎಲ್ಲರನ್ನೂ ಸಮಾನವಾಗಿ ಕಾಣಬೇಕು.

– ದೊಡ್ಡನಾಯ್ಕ ಜಿಡ್ಡಿಮನಿ, ದೈಹಿಕ ಶಿಕ್ಷಣ ಶಿಕ್ಷಕ. ಸರ್ಕಾರಿ ಪ್ರೌಢಶಾಲೆ, ದೇವಲಾಪುರ, ಬೈಲಹೊಂಗಲ ತಾಲ್ಲೂಕು

ADVERTISEMENT

ಭ್ರಷ್ಟಾಚಾರ ಮಾಡಬಾರದು

ಸಂಸದರಾದವರು ಜನರ ಪರವಾಗಿ ಕೆಲಸ ಮಾಡುವಂತಿರಬೇಕು. ಸುಶಿಕ್ಷರಾಗಿರಬೇಕು. ಜಾತಿ ಬಿಟ್ಟು ಕೆಲಸ ಮಾಡುವಂತಿರಬೇಕು. ಭ್ರಷ್ಟಾಚಾರದಿಂದ ದೂರವಿರಬೇಕು. ಜನರ ಬಗ್ಗೆ ಅರ್ಥಮಾಡಿಕೊಂಡಿರಬೇಕು. ಅವರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಲು ಕ್ರಮ ಕೈಗೊಳ್ಳಬೇಕು. ರೈತರಿಗೆ ನೆರವಾಗಬೇಕು. ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡಬೇಕು. ಸರ್ಕಾರದ ಯೋಜನೆಗಳ ಮಾಹಿತಿಯನ್ನು, ಲಾಭವನ್ನು ಎಲ್ಲರಿಗೂ ತಲುಪಿಸಬೇಕು.

–ಸಂಜು ಗಸ್ತಿ, ಪೀರನವಾಡಿ, ಬೆಳಗಾವಿ

ಸುಲಭವಾಗಿ ಸಿಗಬೇಕು

ಸಂಸದರು ಎಲ್ಲರಿಗೂ ತಕ್ಷಣ ಹಾಗೂ ಸುಲಭವಾಗಿ ಸಿಗುವಂತಿರಬೇಕು. ಜಾತಿ, ಧರ್ಮದ ಹೆಸರಿನಲ್ಲಿ ಒಡೆದು ಆಳಬಾರದು. ಗೆದ್ದಾಗೊಂದು, ಸೋತಾಗೊಂದು ರೀತಿ ಮಾತನಾಡಬಾರದು. ಮತದಾರರಿಗೆ ಸಮಸ್ಯೆ ಎದುರಾದಾಗ ತಕ್ಷಣ ಸ್ಪಂದಿಸಬೇಕು. ಪ್ರಣಾಳಿಕೆಯಲ್ಲಿ ಘೋಷಿಸಿದ ಭರವಸೆಗಳನ್ನು ಈಡೇರಿಸುವ ಪ್ರಯತ್ನ ಮಾಡಬೇಕು. ಭಾಷೆ, ಸಂಸ್ಕೃತಿ ಮೊದಲಾದವುಗಳ ರಕ್ಷಣೆಗೆ ಸದಾ ಮುಂದಿರಬೇಕು. ಗೆದ್ದ ನಂತರ ತಮ್ಮ ಪಕ್ಷದವರಿಗೆ ಮಾತ್ರ ಕೆಲಸ ಮಾಡಿಕೊಡಬಾರದು. ನಿಷ್ಪಕ್ಷಪಾತವಾಗಿ ನಡೆದುಕೊಳ್ಳಬೇಕು. ಸಮಾಜದ ಸ್ವಾಸ್ಥ್ಯ ಹಾಳು ಮಾಡದ, ಕೋಮು ಸಾಮರಸ್ಯ ಕಾಪಾಡುವ ವ್ಯಕ್ತಿಯಾಗಿರಬೇಕು.

- ಯರಿಯಪ್ಪ ಬೆಳಗುರ್ಕಿ, ಕನ್ನಡ ಉಪನ್ಯಾಸಕ, ಗೋಕಾಕ

ಉದ್ಯೋಗ ಸೃಷ್ಟಿಸಬೇಕು

ಸಂಸದರು ಜನರ ಸೇವೆಗೆ ಸದಾ ಸಿದ್ಧರಿರಬೇಕು. ಸಮಾಜದ ಸ್ವಾಸ್ಥ್ಯ ಕಾಪಾಡಬೇಕು. ಯಾವುದೇ ಜಾತಿ, ವರ್ಗ, ಪಂಗಡಗಳನ್ನು ನೋಡದೇ ಎಲ್ಲರೂ ಒಂದೇ ಎಂದು ಭಾವಿಸಬೇಕು; ಅಂತೆಯೇ ನಡೆದುಕೊಳ್ಳಬೇಕು. ಕೇಂದ್ರ ಸರ್ಕಾರದ ಸಹಾಯ ಪಡೆದು ಜಿಲ್ಲೆಯಲ್ಲಿ ಉದ್ಯೋಗಗಳನ್ನು ಸೃಷ್ಟಿಸಬೇಕು. ಚುನಾವಣೆ ನಂತರ ಸಂಸದರು ನಗರ, ಪಟ್ಟಣಕ್ಕೆ ಸೀಮಿತವಾಗದೇ ಹಳ್ಳಿಗಳಿಗೂ ಭೇಟಿ ಕೊಡಬೇಕು. ಗ್ರಾಮೀಣ ಜನರ ಸಮಸ್ಯೆಗಳ ಪರಿಹಾರಕ್ಕೆ ಮುಂದಾಗಬೇಕು.

– ಉಮರಫಾರೂಖ್ ಹೆಬ್ಬಳ್ಳಿ, ಎಂ.ಕಾಂ. ವಿದ್ಯಾರ್ಥಿ, ಮನಿಹಾಳ-ಸುರೇಬಾನ, ರಾಮದುರ್ಗ ತಾಲ್ಲೂಕು

* ಕ್ಷೇತ್ರದ ಬಗ್ಗೆ ವಿಶೇಷವಾದ ಕಾಳಜಿ ವಹಿಸಬೇಕು. ನಿಯಮಿತವಾಗಿ ಭೇಟಿ ನೀಡಿ ಸಮಸ್ಯೆಗಳನ್ನು ಆಲಿಸಬೇಕು. ಅವುಗಳ ಪರಿಹಾರಕ್ಕೆ ಕ್ರಮ ಕೈಗೊಳ್ಳಬೇಕು. ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗುವ ಯೋಜನೆಗಳನ್ನು ರೂಪಿಸಿ ಅವುಗಳನ್ನು ಕಾರ್ಯರೂಪಕ್ಕೆ ತರಬೇಕು. ಜನಸಾಮಾನ್ಯರ ಕಷ್ಟ-ಸುಖಗಳಿಗೆ ಸ್ಪಂದಿಸುವಂಥ ಸದೃಹಯಿಯಾಗಿರಬೇಕು. ಜನರ ಜೀವನಶೈಲಿ ಬದಲಿಸಿ ಅವರಲ್ಲಿ ಹೊಸತನ ತರುವ ನಾಯಕನಾಗಬೇಕು.

– ಸುಧೀರ ಎಂ. ಕಾರಭಾರಿ, ಬಿ.ಇಡಿ. ಪ್ರಶಿಕ್ಷಣಾರ್ಥಿ, ಸಿಟಿಇ, ಬೆಳಗಾವಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.