ADVERTISEMENT

ಮೋದಿ ಪರ ಯುವಕರ ಘೋಷಣೆ: ಗೀತಾ ಖಂಡ್ರೆ, ಖೇಣಿಗೆ ಮುಜುಗರ

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2019, 15:18 IST
Last Updated 14 ಏಪ್ರಿಲ್ 2019, 15:18 IST
ಬೀದರ್‌ನ ಓಲ್ಡ್‌ಸಿಟಿಯ ಮಾರುಕಟ್ಟೆ ರಸ್ತೆಯಲ್ಲಿ ಬೀದರ್ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಈಶ್ವರ ಖಂಡ್ರೆ ಅವರ ಪತ್ನಿ ಗೀತಾ ಪ್ರಚಾರಕ್ಕೆ ಹೊರಟಿದ್ದಾಗ ಕೇಸರಿ ಪಡೆ ಮೋದಿ ಪರ ಘೋಷಣೆಗಳನ್ನು ಕೂಗಿದರು
ಬೀದರ್‌ನ ಓಲ್ಡ್‌ಸಿಟಿಯ ಮಾರುಕಟ್ಟೆ ರಸ್ತೆಯಲ್ಲಿ ಬೀದರ್ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಈಶ್ವರ ಖಂಡ್ರೆ ಅವರ ಪತ್ನಿ ಗೀತಾ ಪ್ರಚಾರಕ್ಕೆ ಹೊರಟಿದ್ದಾಗ ಕೇಸರಿ ಪಡೆ ಮೋದಿ ಪರ ಘೋಷಣೆಗಳನ್ನು ಕೂಗಿದರು   

ಬೀದರ್: ಬೀದರ್ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಈಶ್ವರ ಖಂಡ್ರೆ ಅವರ ಪತ್ನಿ ಗೀತಾ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾಗ ಕೇಸರಿ ಪಡೆಯ ಕಾರ್ಯಕರ್ತರು ಮೋದಿ ಪರ ಘೋಷಣೆ ಕೂಗುವ ಮೂಲಕ ಮುಜುಗರಕ್ಕೆ ಒಳಗಾಗುವಂತೆ ಮಾಡಿದರು.

ಶನಿವಾರ ರಾತ್ರಿ ರಾಮ ನವಮಿ ಪ್ರಯುಕ್ತ ವಿದ್ಯಾನಗರದಿಂದ ಓಲ್ಡ್‌ಸಿಟಿಗೆ ಶ್ರೀರಾಮನ ಭಾವಚಿತ್ರದ ಮೆರವಣಿಗೆ ಬಂದಿತ್ತು. ಈ ಸಂದರ್ಭದಲ್ಲಿ ಗೀತಾ ಖಂಡ್ರೆ ಹಾಗೂ ಕಾಂಗ್ರೆಸ್‌ ಕಾರ್ಯಕರ್ತರು ಪ್ರಚಾರ ಕೈಗೊಂಡು ಓಲ್ಡ್‌ಸಿಟಿಯಲ್ಲಿ ಸಾಗುತ್ತಿದ್ದರು. ಇದನ್ನು ನೋಡಿದ ಕೇಸರಿ ಪಡೆ ಧಾರ್ಮಿಕ ಧ್ವಜ ಹಿಡಿದು ಮೋದಿ.. ಮೋದಿ.. ಎಂದು ಜೋರಾಗಿ ಕೂಗಲು ಆರಂಭಿಸಿದರು.

ತಕ್ಷಣ ಖಂಡ್ರೆ ಬೆಂಬಲಿಗರು ಹಾಗೂ ಪೊಲೀಸರು ಗೀತಾ ಅವರಿಗೆ ರಕ್ಷಣೆ ಒದಗಿಸಿ ಸುರಕ್ಷಿತ ಸ್ಥಳಕ್ಕೆ ಕರೆದೊಯ್ದರು. ಸ್ಥಳದಲ್ಲಿದ್ದ ಯುವಕರು ಮೊಬೈಲ್‌ ಕ್ಯಾಮೆರಾಗಳಲ್ಲಿ ದೃಶ್ಯವನ್ನು ಸೆರೆ ಹಿಡಿದು ಸಾಮಾಜಿಕ ಜಾಲ ತಾಣಗಳಲ್ಲಿ ಅಪ್‌ಲೋಡ್‌ ಮಾಡಿದರು. ಈ ದೃಶ್ಯ ಎಲ್ಲೆಡೆ ವೈರಲ್‌ ಆಗಿದೆ.

ADVERTISEMENT

ವಿದ್ಯಾನಗರದಿಂದ ಹೊರಟಿದ್ದ ಮೆರವಣಿಗೆ ಭಗತ್‌ಸಿಂಗ್ ವೃತ್ತ, ನಯಾಕಮಾನ್, ಗವಾನ್‌ ಚೌಕ್‌ ಮಾರ್ಗವಾಗಿ ರಾಮಮಂದಿರಕ್ಕೆ ಬಂದು ಸಮಾರೋಪಗೊಂಡಿತು.

ಖೇಣಿಗೆ ಮುಜುಗರ

ಚಿಟಗುಪ್ಪ ತಾಲ್ಲೂಕಿನ ನಿರ್ಣಾದಲ್ಲಿ ಅಶೋಕ ಖೇಣಿ ಪ್ರಚಾರಕ್ಕೆ ಹೊರಟಿದ್ದಾಗ ಬಿಜೆಪಿ ಕಾರ್ಯಕರ್ತರು ಪಕ್ಷದ ಧ್ವಜ ಹಿಡಿದು ಮೋದಿ ಮೋದಿ ಎಂದು ಘೋಷಣೆ ಕೂಗಿ ಮುಜುಗರ ಉಂಟಾಗುವಂತೆ ಮಾಡಿದರು.

ಪ್ರಚಾರಕ್ಕೆ ಬರುತ್ತಿದ್ದ ಬಿಜೆಪಿ ಮುಖಂಡರನ್ನು ಸ್ವಾಗತಿಸಲು ಪಕ್ಷದ ಕಾರ್ಯಕರ್ತರು ಡಾ.ಅಂಬೇಡ್ಕರ್‌ ವೃತ್ತದ ಬಳಿ ನಿಂತಿದ್ದ ಸಂದರ್ಭದಲ್ಲಿ ಬೀದರ್‌ ದಕ್ಷಿಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಉಸ್ತುವಾರಿ ಅಶೋಕ ಖೇಣಿ ಕಾರಿನಲ್ಲಿ ಬಂದಿಳಿದರು. ಕ್ಷಣಾರ್ಧದಲ್ಲಿ ಬಿಜೆಪಿ ಕಾರ್ಯಕರ್ತರು ಮೋದಿ ಪರ ಘೋಷಣೆ ಕೂಗಲು ಆರಂಭಿಸಿದರು.

‘ನಾನು ಮೋದಿ ಅಲ್ಲ, ಖೇಣಿ’ ಎಂದು ಹೇಳಿದರೂ ಘೋಷಣೆ ತೀವ್ರಗೊಳಿಸಿದರು. ಹೀಗಾಗಿ ಖೇಣಿ ಬಂದ ದಾರಿಯಲ್ಲೇ ಮರಳಿ ಹೋದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.