ADVERTISEMENT

ಮೊಯಿಲಿ ಹಿಮಾಲಯದಿಂದ ನೀರು ತರುತ್ತಾರಾ: ಸುಭಾಷಿಣಿ ಅಲಿ

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2019, 14:31 IST
Last Updated 15 ಏಪ್ರಿಲ್ 2019, 14:31 IST
ಸಿಪಿಐ(ಎಂ) ವತಿಯಿಂದ ನಡೆದ ಬಹಿರಂಗ ಚುನಾವಣಾ ಪ್ರಚಾರ ಸಭೆಯಲ್ಲಿ ಪಕ್ಷದ ಪಾಲಿಟ್ ಬ್ಯೂರೋ ಸದಸ್ಯೆ ಸುಭಾಷಿಣಿ ಅಲಿ ಮಾತನಾಡಿದರು
ಸಿಪಿಐ(ಎಂ) ವತಿಯಿಂದ ನಡೆದ ಬಹಿರಂಗ ಚುನಾವಣಾ ಪ್ರಚಾರ ಸಭೆಯಲ್ಲಿ ಪಕ್ಷದ ಪಾಲಿಟ್ ಬ್ಯೂರೋ ಸದಸ್ಯೆ ಸುಭಾಷಿಣಿ ಅಲಿ ಮಾತನಾಡಿದರು   

ದೊಡ್ಡಬಳ್ಳಾಪುರ:‘ಹಾಲಿ ಸಂಸದ ವೀರಪ್ಪ ಮೊಯಿಲಿ ಎತ್ತಿನಹೊಳೆಯಿಂದ ನೀರು ತರಲಿಲ್ಲ. ಈಗ ಆಂಧ್ರದಿಂದ ನೀರು ತರುತ್ತೇನೆ ಎನ್ನುತ್ತಿದ್ದಾರೆ. ಮುಂದೆ ಹಿಮಾಲಯದಿಂದ ನೀರು ತರುವುದು ಬಾಕಿ ಇದೆ. ಒಟ್ಟಿನಲ್ಲಿ ಜನರಿಗೆ ನೀರು ತರುವುದಿಲ್ಲ’ ಎಂದು ಸಿಪಿಎಂ ಪಾಲಿಟ್ ಬ್ಯೂರೊ ಸದಸ್ಯೆ ಸುಭಾಷಿಣಿ ಅಲಿ ಹೇಳಿದರು.

ನಗರದ ಸಿದ್ಧಲಿಂಗಯ್ಯ ವೃತ್ತದಲ್ಲಿ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಸಿಪಿಎಂ ಅಭ್ಯರ್ಥಿ ಎಸ್. ವರಲಕ್ಷ್ಮೀ ಪರವಾಗಿ ನಡೆದ ಬಹಿರಂಗ ಚುನಾವಣಾ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.

‘ಬಿಜೆಪಿ ಅಭ್ಯರ್ಥಿ ಬಚ್ಚೇಗೌಡ ಅವರು ಹಿಂದೆ ಯಡಿಯೂರಪ್ಪ ಸಂಪುಟದಲ್ಲಿ ಸಚಿವರಾಗಿದ್ದರು. ಅವರು ಹಣ ಮಾಡಿರುವ ವಿಚಾರ ಎಲ್ಲರಿಗೂ ತಿಳಿದಿದೆ. ಇಂತಹವರಿಂದ ಏನನ್ನು ನಿರೀಕ್ಷಿಸಲು ಸಾಧ್ಯ’ ಎಂದರು.

ADVERTISEMENT

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಸಿಪಿಎಂ ಅಭ್ಯರ್ಥಿ ಎಸ್. ವರಲಕ್ಷ್ಮೀ ಮಾತನಾಡಿ, ಮಾಧ್ಯಮಗಳು ಸಾಮಾಜಿಕ ಸಮಸ್ಯೆಗಳಿಗೆ ಒತ್ತು ನೀಡದೇ ಬರೀ ಮಂಡ್ಯ ಚುನಾವಣೆಯ ಸುಮಲತಾ, ನಿಖಿಲ್ ಅವರ ಬಗ್ಗೆಯೇ ವರದಿ ಮಾಡುವುದು. ಮೋದಿ ಬಗ್ಗೆ ಪ್ರಚಾರ ಮಾಡುವುದಕ್ಕಷ್ಟೇ ಸೀಮಿತವಾದಂತಿವೆ ಎಂದು ಟೀಕಿಸಿದರು.

ಮೋದಿ ಕೆಲಸವನ್ನು ಜನಸಾಮಾನ್ಯರು ಹೇಳಬೇಕೇ ಹೊರತು ಮಾಧ್ಯಮದಿಂದಲ್ಲ. ಪ್ರಚಾರಕ್ಕಾಗಿ ₹ 5 ಸಾವಿರ ಕೋಟಿ ವೆಚ್ಚ ಮಾಡಲಾಗುತ್ತಿದೆ ಎಂದರು.

2014ರಲ್ಲಿ ಮೋದಿ ಸರ್ಕಾರ ನೀಡಿದ್ದ ಭರವಸೆಗಳು ಈಡೇರಿಲ್ಲ. ರೈತರ ಬೆಳೆಗಳಿಗೆ ಬೆಂಬಲ ಬೆಲೆ ನೀಡುವ ಸ್ವಾಮಿನಾಥನ್ ವರದಿ ಜಾರಿಯಾಗಿಲ್ಲ. ವರ್ಷಕ್ಕೆ 2 ಕೋಟಿ ಉದ್ಯೋಗ ನೀಡುವುದಾಗಿ ಭರವಸೆ ನೀಡುವುದಾಗಿ ಹೇಳಿದ್ದ ಮೋದಿ ಸರ್ಕಾರ ಉದ್ಯೋಗ ಸೃಷ್ಟಿಮಾಡಲಿಲ್ಲ ಎಂದು ಆರೋಪಿಸಿದರು.

ಕೇಂದ್ರ ಸಚಿವ ಸದಾನಂದ ಗೌಡ ಈಚೆಗಿನ ಸಂದರ್ಶನದಲ್ಲಿ ಪಕೋಡ ಮಾರುವುದು ಉದ್ಯೋಗ ಎಂದಿದ್ದರು. ಇನ್ನು ಅಸಂಘಟಿತ ಕಾರ್ಮಿಕರ ಹಾಗೂ ಅಂಗನವಾಡಿ ನೌಕರರ ಪಿ.ಎಫ್, ಇಎಸ್‍ಐ ನೋಂದಣಿಗಳನ್ನೇ ಹೊಸ ಉದ್ಯೋಗ ಎನ್ನುವುದಾಗಿ ಬಿಂಬಿಸುತ್ತಿದ್ದಾರೆ ಎಂದರು.

ಸರ್ಜಿಕಲ್ ಸ್ಟ್ರೈಕ್ ರಾಜಕೀಯ ವಸ್ತುವಾಗಿದೆ. ಜಿಎಸ್‍ಟಿಯಿಂದಾಗಿ ಸಣ್ಣ ಕೈಗಾರಿಕೆಗಳು ಉದ್ಯೋಗಿಗಳು ಬವಣೆ ಪಡುವಂತಾಗಿದೆ. ನೋಟು ಅಮಾನ್ಯದಿಂದಾಗಿ ಬಿಜೆಪಿ ಪಕ್ಷಕ್ಕೆ ಲಾಭವಾಗಿದೆ ಎಂದರು.

ಸಿಪಿಎಂ ತಾಲ್ಲೂಕು ಕಾರ್ಯದರ್ಶಿ ಪಿ.ಎ. ವೆಂಕಟೇಶ್ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸಭೆಯಲ್ಲಿ ಪಕ್ಷದ ಜಿಲ್ಲಾ ಕಾರ್ಯದರ್ಶಿ ಆರ್. ಚಂದ್ರತೇಜಸ್ವಿ, ರಾಜ್ಯ ಮುಖಂಡ ಕೆ.ಎನ್. ಉಮೇಶ್, ಜಿಲ್ಲಾ ಸಮಿತಿ ಸದಸ್ಯ ರುದ್ರಾರಾಧ್ಯ, ತಾಲ್ಲೂಕು ಮುಖಂಡ ರೇಣುಕಾರಾಧ್ಯ, ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಮೀನಾಕ್ಷಿ ಸುಂದರಂ, ಜನವಾದಿ ಮಹಿಳಾ ಸಂಘಟನೆ ರಾಜ್ಯ ಮುಖಂಡರಾದ ಗೌರಮ್ಮ, ಎಐಟಿಯುಸಿ ತಾಲ್ಲೂಕು ಅಧ್ಯಕ್ಷ ಮಹೇಶ್, ಮುಖಂಡರಾದ ರಘುಕುಮಾರ್ ಎಂ.ಚೌಡಯ್ಯ, ಶಿವಾರೆಡ್ಡಿ, ಬಾಬಾ ಜಾನ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.