ADVERTISEMENT

ಸಂಶಯಾಸ್ಪದ ಚಟುವಟಿಕೆ ಮೇಲೆ ಕಣ್ಣಿರಿಸಿ: ವೆಚ್ಚ ವೀಕ್ಷಕ ಹಸನ್ ಅಹ್ಮದ್

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2019, 14:06 IST
Last Updated 12 ಏಪ್ರಿಲ್ 2019, 14:06 IST
ಹಾವೇರಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ಲೋಕಸಭಾ ಕ್ಷೇತ್ರದ ವೆಚ್ಚ ವೀಕ್ಷಕ ಹಸನ್ ಅಹ್ಮದ್ ಸಭೆ ನಡೆಸಿದರು 
ಹಾವೇರಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ಲೋಕಸಭಾ ಕ್ಷೇತ್ರದ ವೆಚ್ಚ ವೀಕ್ಷಕ ಹಸನ್ ಅಹ್ಮದ್ ಸಭೆ ನಡೆಸಿದರು    

ಹಾವೇರಿ:ಸಂಶಯಾಸ್ಪದ ಚುಟವಟಿಕೆಗಳ ಮೇಲೆ ಹದ್ದಿನ ಕಣ್ಣಿರಿಸಿ, ಅಕ್ರಮಗಳನ್ನು ನಿರ್ಭೀತಿಯಿಂದ ತಡೆಯಿರಿ ಎಂದು ಲೋಕಸಭಾ ಕ್ಷೇತ್ರದ ವೆಚ್ಚ ವೀಕ್ಷಕ ಹಸನ್ ಅಹ್ಮದ್ ಸೂಚಿಸಿದರು.

ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ನಡೆದ ಹಾವೇರಿ– ಗದಗ ಜಿಲ್ಲೆಯ ಎಂ.ಸಿ.ಸಿ., ಎಫ್‌.ಎಸ್‌.ಟಿ., ವಿ.ಎಸ್‌.ಟಿ., ಎಂ.ಸಿ.ಎಂ,ಸಿ., ಅಬಕಾರಿ, ಪೊಲೀಸ್‌ ಇಲಾಖೆ ಹಾಗೂ ಸಹಾಯಕ ವೆಚ್ಚ ವೀಕ್ಷಕರ ಸಭೆಯಲ್ಲಿ ಅವರು ಮಾತನಾಡಿದರು.

ಮತದಾನಕ್ಕೆ ಕೇವಲ 12 ದಿನಗಳು ಬಾಕಿ ಉಳಿದಿವೆ. ಕೊನೆ ದಿನಗಳಲ್ಲಿ ಅಕ್ರಮ ಚಟುವಟಿಕೆಗಳು ತೀವ್ರಗೊಳ್ಳುವ ಸಾಧ್ಯತೆಯಿದ್ದು, ಪ್ರತಿ ಚಲನವಲನಗಳನ್ನು ಸೂಕ್ಷ್ಮವಾಗಿ ಅವಲೋಕಿಸಬೇಕು. ಸಾಮಾನ್ಯ ಜ್ಞಾನ ಬಳಸಿ ಅಕ್ರಮಗಳನ್ನು ಪತ್ತೆ ಮಾಡಿ ಎಂದರು.

ADVERTISEMENT

ಸಹಾಯಕ ವೆಚ್ಚ ವೀಕ್ಷಕರಾಗಿ ನಿಯೋಜನೆಗೊಂಡ ಅಧಿಕಾರಿಗಳು ಕೇವಲ ಕಚೇರಿಯಲ್ಲಿ ಕುಳಿತುಕೊಳ್ಳಬಾರದು. ಕ್ಷೇತ್ರ ಭೇಟಿ, ಚೆಕ್ ಪೋಸ್ಟ್ ಸೇರಿದಂತೆ ವಿವಿಧ ತಂಡಗಳ ಕಾರ್ಯ ನಿರ್ವಹಣೆ ಬಗ್ಗೆ ಪರಿಶೀಲಿಸಬೇಕು ಎಂದರು.

ಮತದಾನದ ದಿನ ಹತ್ತಿರವಾಗುತ್ತಿದ್ದಂತೆ ಅಕ್ರಮ ಚಟುವಟಿಕೆಗಳು ಚುರುಕುಗೊಳ್ಳುತ್ತಿವೆ. ಹಣದ ವಹಿವಾಟು, ಮದ್ಯ, ಚುನಾವಣಾ ಉದ್ದೇಶದಿಂದ ಹಂಚಿಕೆ ಮಾಡುವ ವಸ್ತುಗಳ ಖರೀದಿ, ಸಾಗಾಣಿಕೆ, ಹಂಚಿಕೆಗಳ ಬಗ್ಗೆ ತಮ್ಮದೇ ಗೂಢಾಚಾರ ಮಾಹಿತಿ ಸಂಗ್ರಹಿಸಬೇಕು. ಸ್ಥಳೀಯ ಪೊಲೀಸ್ ಠಾಣೆಯ ನೆರವು ಪಡೆಯಬೇಕು. ಸ್ಥಳೀಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮಾಹಿತಿ ಕಲೆಹಾಕಬೇಕು ಎಂದು ಸಲಹೆ ನೀಡಿದರು.

ಸಭೆ-ಸಮಾರಂಭಗಳು, ವಿ.ಐ.ಪಿ.ಗಳು ಭಾಗವಹಿಸುವ ಕಾರ್ಯಕ್ರಮಗಳನ್ನು ವಿಡಿಯೋ ಚಿತ್ರೀಕರಣ ತಂಡ ವಿವರವಾಗಿ ಚಿತ್ರಿಕರಿಸಬೇಕು. ವಿಡಿಯೋ ವೀಕ್ಷಣೆ ತಂಡ ಅತ್ಯಂತ ಸೂಕ್ಷ್ಮವಾಗಿ ಜವಾಬ್ದಾರಿಯುತವಾಗಿ ಪರಿಶೀಲಿಸಿ ಆಯೋಗದ ನಿಯಮಾನುಸಾರ ವೆಚ್ಚವನ್ನು ದಾಖಲಿಸಬೇಕು. ಭಾಷಣಗಳಲ್ಲಿ ನೀತಿ ಸಂಹಿತೆ ಉಲ್ಲಂಘನೆ ಅಂಶಗಳಿದ್ದರೆ ದೂರು ದಾಖಲಿಸಬೇಕು ಎಂದರು.

ಸಾರ್ವಜನಿಕರಿಗೆ ತೊಂದರೆಯಾಗದಂತೆ ಸಾರಿಗೆ ಬಸ್‌ಗಳು, ದ್ವಿಚಕ್ರವಾಹನಗಳನ್ನು ತಪಾಸಣೆ ನಡೆಸಬೇಕು. ಮುಗ್ಧ ವ್ಯಕ್ತಿಗಳನ್ನು ಬಳಸಿಕೊಂಡು ಹಣ, ವಸ್ತುಗಳನ್ನು ಸಾಗಾಣಿಕೆಗೆ ಬಳಸಲಾಗುತ್ತದೆ. ಗೊಬ್ಬರ ಚೀಲ, ತರಕಾರಿ ಚೀಲದಲ್ಲಿ ಹಣ ಸಾಗಿಸಿ ಸಿಕ್ಕುಬಿದ್ದಿರುವ ಉದಾಹರಣೆಗಳಿವೆ. ಈ ಕಾರಣಕ್ಕಾಗಿ ಇಂತಹ ಬಗ್ಗೆ ಹೆಚ್ಚು ಗಮನ ಹರಿಸಿ ಎಂದು ಹೇಳಿದರು.

ಚುನಾವಣೆ ಹಿನ್ನೆಲೆಯಲ್ಲಿ ಬ್ಯಾಂಕಿನಲ್ಲಿ ಅಸಹಜ ವಹಿವಾಟುಗಳ ಬಗ್ಗೆ ಅಧಿಕಾರಿಗಳು ಪರಿಶೀಲಿಸಬೇಕು. ನೈಜ ವಹಿವಾಟಿಗೂ ಚುನಾವಣೆ ಸಂದರ್ಭದ ವಹಿವಾಟಿಗೂ ತಾಳೆ ಮಾಡಬೇಕು. ಸೀರೆ ಅಂಗಡಿ, ಗೃಹೋಪಯೋಗಿ ವಸ್ತುಗಳ ಮಾರಾಟ ಅಂಗಡಿಗಳ ವಹಿವಾಟಿನ ಬಗ್ಗೆ ಪರಿಶೀಲನೆ ನಡೆಸಬೇಕು. ಜಿ.ಎಸ್.ಟಿ. ಖರೀದಿ ಬಿಲ್‌ಗಳಿಗೆ ತಾಳೆ ಹಾಕಬೇಕು. ಮದ್ಯ ಹಾಗೂ ಪೆಟ್ರೋಲ್ ಖರೀದಿಗೆ ಕೈ ಚೀಟಿ ನೀಡುವ ಚಟುವಟಿಕೆಯ ಮೇಲೆ ಕ್ರಮವಹಿಸಬೇಕು. ಚುನಾವಣಾ ಬಾಂಡ್‌ಗಳ ಮೇಲೆ ನಿಗಾವಹಿಸಬೇಕು ಎಂದು ಸೂಚಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಪರಶುರಾಂ, ಜಿಲ್ಲಾ ನೋಡಲ್ ಅಧಿಕಾರಿ ಧರಣಿ, ಗದಗ ನೋಡಲ್ ಅಧಿಕಾರಿ ಪ್ರಕಾಶ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.