ADVERTISEMENT

ಬಿಜೆಪಿಗೆ ರಾಷ್ಟ್ರ, ಸೇನೆಯೇ ಮೊದಲು: ಮಾಳವಿಕ

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2019, 14:36 IST
Last Updated 15 ಏಪ್ರಿಲ್ 2019, 14:36 IST
ಮಾಳವಿಕಾ ಅವಿನಾಶ್‌
ಮಾಳವಿಕಾ ಅವಿನಾಶ್‌   

ಚಿತ್ರದುರ್ಗ: ಬಿಜೆಪಿಗೆ ಪಕ್ಷಕ್ಕಿಂತ ರಾಷ್ಟ್ರವೇ ಮೊದಲು. ಸೇನೆಯನ್ನು ಇನ್ನಷ್ಟು ಸಶಕ್ತಗೊಳಿಸಿ, ಸೈನಿಕರನ್ನು ಮಾನಸಿಕವಾಗಿ ಸಜ್ಜುಗೊಳಿಸಲು ಆದ್ಯತೆ ನೀಡಲಾಗುವುದು ಎಂದು ಬಿಜೆಪಿ ಸಹ ವಕ್ತಾರೆ ಮಾಳವಿಕಾ ಅವಿನಾಶ್‌ ಅಭಿಪ್ರಾಯಪಟ್ಟರು.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ದೇಶದ ಭದ್ರತೆಗೆ ಧಕ್ಕೆ ಉಂಟಾಗುವ ರೀತಿಯಲ್ಲಿ ಕಾಂಗ್ರೆಸ್‌ ನಡೆದುಕೊಳ್ಳುತ್ತಿದೆ. ಭಾರತೀಯ ದಂಡ ಸಂಹಿತೆಯ 124 (ಎ) ಕಾಲಂ ರದ್ದುಗೊಳಿಸುವುದಾಗಿ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದೆ. ಇದರಿಂದ ನಕ್ಸಲ್‌ ಹಾಗೂ ಭಯೋತ್ಪಾದಕ ಚಟುವಟಿಕೆಗೆ ಕುಮ್ಮಕ್ಕು ಸಿಗುತ್ತದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘1971ರಲ್ಲಿನ ‘ಗರೀಬಿ ಹಠಾವೊ’ ಘೋಷಣೆಯನ್ನು ಪರಿಷ್ಕರಿಸಿ ‘ನ್ಯಾಯ್‌’ ಯೋಜನೆ ರೂಪಿಸುವುದಾಗಿ ಹೇಳಿದೆ. ಇಷ್ಟು ವರ್ಷ ದೇಶ ಆಳಿರುವ ಕಾಂಗ್ರೆಸ್‌ಗೆ ಬಡತನ ನಿರ್ಮೂಲನೆ ಮಾಡಲು ಸಾಧ್ಯವಾಗಿಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ದೇಶದಲ್ಲಿ ವೋಟ್‌ ಬ್ಯಾಂಕ್‌ ರಾಜಕಾರಣ ಮಾಡುತ್ತಿದೆ’ ಎಂದು ಆರೋಪಿಸಿದರು.

ADVERTISEMENT

‘2014ಕ್ಕೂ ಮೊದಲು ರಾಷ್ಟ್ರದಲ್ಲಿ ಆರ್ಥಿಕ ಅಭದ್ರತೆ ಕಾಡುತ್ತಿತ್ತು. ಮೋದಿ ಅವರು ಪ್ರಧಾನಿಯಾದ ಬಳಿಕ ಆರ್ಥಿಕ ಸ್ಥಿರತೆಗೆ ಒತ್ತು ನೀಡಿದರು. ರೈತರು, ಕಾರ್ಮಿಕರ ಪರವಾದ ನೀತಿ ಜಾರಿಗೆ ತಂದರು. ಆರ್ಥಿಕ ಸುಧಾರಣಾ ನೀತಿಯ ಫಲವಾಗಿ ಜಿಡಿಪಿ 7.2ಕ್ಕೆ ಏರಿದ್ದು, ಹಣದುಬ್ಬರ ಪ್ರಮಾಣ 3.4ಕ್ಕೆ ಕುಸಿದಿದೆ. ಇದೇ ರಿಪೋರ್ಟ್‌ ಕಾರ್ಡ್‌ ಹಿಡಿದು ಪ್ರಧಾನಿ ಮೋದಿ ಜನರ ಬಳಿ ಬಂದಿದ್ದಾರೆ’ ಎಂದರು.

‘ತಂದೆ ಜನಪ್ರತಿನಿಧಿ ಎಂಬ ಕಾರಣಕ್ಕೆ ಮಗನೂ ರಾಜಕೀಯಕ್ಕೆ ಬರಬಾರದು ಎಂದು ಹೇಳುವುದು ತಪ್ಪಾಗುತ್ತದೆ. ಪಕ್ಷಕ್ಕೆ ದುಡಿಯುವ, ಸಕ್ರಿಯವಾಗಿರುವವರು ರಾಜಕಾರಣಕ್ಕೆ ಬಂದರೆ ತಪ್ಪೇನೂ ಇಲ್ಲ. ಆದರೆ, ದೇವೇಗೌಡರ ಕುಟುಂಬದ ರೀತಿ ವಂಶ ಪಾರಂಪರ್ಯ ರಾಜಕಾರಣ ಮಾಡುವುದು ನಾಚಿಕೆಗೇಡು’ ಎಂದು ಕುಟುಕಿದರು.

ಲೋಕಸಭಾ ಕ್ಷೇತ್ರದ ಪ್ರಭಾರ ಡಾ. ಶಿವಯೋಗಿಸ್ವಾಮಿ, ಮಹಿಳಾ ಘಟಕದ ಅಧ್ಯಕ್ಷೆ ಶಾಮಲಾ, ಮುಖಂಡರಾದ ಮಲ್ಲಿಕಾರ್ಜುನ, ನರೇಂದ್ರ, ದಗ್ಗೆ ಶಿವಪ್ರಕಾಶ್‌, ಬೇದ್ರೆ ನಾಗರಾಜ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.