ADVERTISEMENT

ಪರ್ಸೆಂಟೇಜ್‌ ಬಗ್ಗೆ ನನಗೇನು ಗೊತ್ತಿಲ್ಲ: ರೇವಣ್ಣ

'ಬಿಜೆಪಿ ನಾಯಕರ ಬಳಿ ನೋಟು ಎಣಿಸುವ ಮಷಿನ್‌'

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2019, 15:16 IST
Last Updated 12 ಏಪ್ರಿಲ್ 2019, 15:16 IST
ಎಚ್.ಡಿ.ರೇವಣ್ಣ
ಎಚ್.ಡಿ.ರೇವಣ್ಣ   

ಹಾಸನ: ಮಾಧ್ಯಮಗಳಲ್ಲಿ ಮೋದಿ ಮತ್ತೆ ಅಧಿಕಾರಕ್ಕೆ ಬರುವುದು ಕಷ್ಟ ಎಂದು ವರದಿಯಾಗಿದೆ. ಹಾಗಾಗಿ ಮೋದಿ ಪ್ರಧಾನಿಯಾದರೆ ರಾಜಕೀಯದಿಂದ ನಿವೃತ್ತಿ ಆಗುವುದಾಗಿ ಹೇಳಿರುವುದರಲ್ಲಿ ತಪ್ಪೇನಿದೆ ಎಂದು ಸಚಿವ ಎಚ್‌.ಡಿ. ರೇವಣ್ಣ ಪ್ರಶ್ನಿಸಿದರು.

ಪ್ರಚಾರದ ವೇಳೆ ಸುದ್ದಿಗಾರರ ಜತೆ ಮಾತನಾಡಿದ ಅವರು, ಸುಳ್ಳು ಹೇಳಿ ರಾಜಕೀಯ ಮಾಡಿ ಪ್ರಧಾನಿ ಆಗಬೇಕೇ ಅಥವಾ ಸಂಸದನಾಗಬೇಕಾ? ಎಂದು ಹೇಳುವ ಮೂಲಕ ಸುಳ್ಳಿನ ಸರದಾರರು ಎಂಬ ಮೋದಿ ಟೀಕೆಗೆ ಟಾಂಗ್‌ ನೀಡಿದರು.

ದೇಶದ ರೈತರು ಸಂಕಷ್ಟದಲ್ಲಿದ್ದಾರೆ. ಯುಪಿಎ ಜಾರಿ ಮಾಡಿದ್ದ ಜನಪರ ಯೋಜನೆಗಳನ್ನು ಎನ್‌ಡಿಎ ಏಕೆ ಮುಂದುವರೆಸಿಲ್ಲ? ಮೋದಿ‌ ಬಗ್ಗೆ ಗೌರವ ಇದೆ. ವೈಯಕ್ತಿಕವಾಗಿ ಅವರನ್ನ ಟೀಕೆ ಮಾಡುವುದಿಲ್ಲ ಎಂದರು.

ADVERTISEMENT

ಪರ್ಸೆಂಟೇಜ್ ಸರ್ಕಾರ ಎಂಬ ಟೀಕೆಗೆ ಕಿಡಿಕಾರಿದ ರೇವಣ್ಣ, ‘ಪರ್ಸೆಂಟೇಜ್ ಬಗ್ಗೆ ನನಗೇನು ಗೊತ್ತಿಲ್ಲ. ಅದೇನಿದ್ದರೂ ಯಡಿಯೂರಪ್ಪ, ಈಶ್ವರಪ್ಪ, ಜಗದೀಶ್ ಶೆಟ್ಟರ್ ಅವರನ್ನ ಕೇಳಿದರೆ ಹೇಳುತ್ತಾರೆ. ನೋಟು ಎಣಿಸುವ ಮಷಿನ್‌ ಅನ್ನು ಅವರೇ ಇಟ್ಟುಕೊಂಡಿದ್ದಾರೆ. ಮೋದಿ ಅವರಿಗೆ ರೈತರ ಸಾಲ ಮನ್ನಾ ಮಾಡುವುದಕ್ಕೆ ಆಗುತ್ತಿರಲಿಲ್ಲವೇ. ನಮಗೆ ಪರ್ಸೆಂಟೇಜ್ ಪಡೆದು ಅಭ್ಯಾಸ ಇಲ್ಲ. ದೇವೇಗೌಡರ ಬಳಿ ಉಳಿದಿವುದು ಬರೀ ಜುಬ್ಬಾ, ಪಂಚೆ ಎಂದರು.

ಜಿಲ್ಲೆಯ ಜನರಿಗೆ ಸ್ವಾತಂತ್ರ್ಯ ಬೇಕು ಎಂಬ ಎ.ಮಂಜು ಹೇಳಿಕೆಗೆ ಪ್ರತಿಕ್ರಿಯಿಸಿ, ಐದು ವರ್ಷ ಅವರಿಗೆ ಜನರು ಅವಕಾಶ ಕೊಟ್ಟಿದ್ದರು. ಎರಡೂವರೆ ವರ್ಷ ಸಚಿವ ಆಗಿದ್ದರೂ ಯಾಕೆ ಕೆಲಸ ಮಾಡಿಲ್ಲ. ಇಷ್ಟು ದಿನ ಬಾಳೆ‌ ಎಲೆಯಲ್ಲಿ ಚನ್ನಾಗಿ ಊಟ ಮಾಡಿ ಎಸೆದು,‌ ಬಿಜೆಪಿಯ ಬೆಳ್ಳಿ ತಟ್ಟೆ ಕಡೆಗೆ ಹೋಗಿದ್ದಾರೆ. ಅಧಿಕಾರಕ್ಕಾಗಿ ಪಕ್ಷಾಂತರ ಮಾಡಿದ್ದಾರೆ’ ಎಂದು ವಾಗ್ದಾಳಿ ನಡೆಸಿದರು.

ಕಾಶ್ಮೀರ ಸಮಸ್ಯೆ ಬಗೆಹರಿಸಲು ಮೋದಿ ಮತ್ತೆ ಅಧಿಕಾರಕ್ಕೆ ಬರಬೇಕು ಎಂಬ ಪಾಕ್‌ ಪ್ರಧಾನಿ ಹೇಳಿಕೆ ಖಂಡಿಸಿದ ರೇವಣ್ಣ, ಸಮಸ್ಯೆ ಬಗೆಹರಿಸುವುದಾಗಿದ್ದರೆ ಐದು ವರ್ಷದಲ್ಲಿ ಏಕೆ ಬಗೆಹರಿಸಿಲ್ಲ. ಸರ್ಜಿಕಲ್ ಸ್ಟ್ರೈಕ್ ಏಕೆ ಮಾಡಿದರು. ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಬೇಕಿತ್ತು. ಕೇಂದ್ರದಲ್ಲಿ ಯುಪಿಎ ಅಧಿಕಾರಕ್ಕೆ ಬಂದರೆ ಸೈನಿಕರಿಗೆ ಅನುಕೂಲವಾಗುತ್ತದೆ. ಸೈನಿಕರು ಮೃತಪಟ್ಟರೆ 48 ಗಂಟೆಯೊಳಗೆ ಕುಟುಂಬ ಸದಸ್ಯರಿಗೆ ಉದ್ಯೋಗ ನೀಡುವ ಕಾನೂನು ತರಲಾಗುವುದು ಎಂದು ನುಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.