ADVERTISEMENT

`ಒಳ ಹೊಡೆತಕ್ಕೆ' ಎಲ್ಲ ಪಕ್ಷಗಳು ತತ್ತರ

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2013, 19:59 IST
Last Updated 25 ಏಪ್ರಿಲ್ 2013, 19:59 IST
ಡಾ.ಪರಮೇಶ್ವರ್,     ಜಯಚಂದ್ರ,      ವೀರಭದ್ರಯ್ಯ
ಡಾ.ಪರಮೇಶ್ವರ್, ಜಯಚಂದ್ರ, ವೀರಭದ್ರಯ್ಯ   

ತುಮಕೂರು: ಹನ್ನೊಂದು ಕ್ಷೇತ್ರಗಳನ್ನು ಹೊಂದಿರುವ ಜಿಲ್ಲೆಯಲ್ಲಿ ಜಿದ್ದಾಜಿದ್ದಿಯ ಅಖಾಡ ರಂಗೇರುತ್ತಿದೆ. `ಮೇಲುಗೈ' ಸಾಧಿಸಲು ಎಲ್ಲ ಪಕ್ಷಗಳಲ್ಲಿ ಪೈಪೋಟಿ ನಡೆದಿದೆ. ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಕಾಂಗ್ರೆಸ್- ಜೆಡಿಎಸ್ ನಡುವೆ ಹಣಾಹಣಿ. ಈ ಪಕ್ಷಗಳ ಅಭ್ಯರ್ಥಿಗಳ ಗೆಲುವಿನ ಓಟಕ್ಕೆ ಬಿಜೆಪಿ, ಕೆಜೆಪಿ ತಡೆ ಹಾಕುತ್ತಿವೆ. ಎಲ್ಲೆಡೆ `ಒಳಪೆಟ್ಟು' ಕೆಲಸ ಮಾಡುತ್ತಿದೆ. ಇಬ್ಬರು ಎಂಜಿನಿಯರಿಂಗ್ ಪದವೀಧರರು ಮತ್ತು ಇಬ್ಬರು ನಿವೃತ್ತ ಐಎಎಸ್ ಅಧಿಕಾರಿಗಳ ಸ್ಪರ್ಧೆಯಂತೂ ಕುತೂಹಲ ಕೆರಳಿಸಿದೆ.

ಕೆಪಿಸಿಸಿ ಅಧ್ಯಕ್ಷರ ಕ್ಷೇತ್ರ
ಪ್ರತಿಷ್ಠಿತ ಕೊರಟಗೆರೆ ಮೀಸಲು ಕ್ಷೇತ್ರ ರಾಜ್ಯದ ಗಮನ ಸೆಳೆದಿದೆ. ಏಕೆಂದರೆ ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್ ಇಲ್ಲಿ ಎರಡನೇ ಬಾರಿ ಕಣಕ್ಕಿಳಿದಿದ್ದಾರೆ. ಅವರಿಗೆ ಜೆಡಿಎಸ್‌ನ ಸುಧಾಕರಲಾಲ್, ಕೆಜೆಪಿಯ ಚಂದ್ರಯ್ಯ ತೀವ್ರ ಸ್ಪರ್ಧೆ ಒಡ್ಡಿದ್ದಾರೆ. ಪರಮೇಶ್ವರ್ ಆಯ್ಕೆಯಾಗಿ ಮುಖ್ಯಮಂತ್ರಿಯಾದರೆ ಕ್ಷೇತ್ರ ಅಭಿವೃದ್ಧಿ ಕಾಣಲಿದೆ ಎಂಬ ಭಾವನೆ ಕೆಲಸ ಮಾಡುತ್ತಿದ್ದರೂ, ಜನರ ಕೈಗೆ ಸಿಗುವುದಿಲ್ಲ ಎಂಬ ಆರೋಪ ಫಲಿತಾಂಶದ ಮೇಲೆ ಪರಿಣಾಮ ಬೀರಲಿದೆ.

ಕ್ಷೇತ್ರದ ವ್ಯಾಪ್ತಿಗೆ ಒಳಪಡುವ ಮೂರು ಬೇರೆ-ಬೇರೆ ಕ್ಷೇತ್ರದಿಂದ ಮೂರು ಬಾರಿ ಸುಧಾಕರಲಾಲ್ ಜಿಲ್ಲಾ ಪಂಚಾಯಿತಿ ಸದಸ್ಯರಾಗಿದ್ದು, ಜನರ ಒಡನಾಟ ಹೊಂದಿದ್ದಾರೆ. ಬಾಲಕನೊಬ್ಬ ಕರೆ ಮಾಡಿದರೂ ಸ್ಪಂದಿಸುತ್ತಾರೆ ಎಂಬ ಅಭಿಪ್ರಾಯವಿದೆ. ನಾಲಿಗೆ ಮೇಲಿರುವ ಲಾಲ್, ಮತಗಳಾಗಿ ಪರಿವರ್ತನೆಯಾದರೆ ಫಲಿತಾಂಶ ವಾಲಬಹುದು.

ಕಳೆದ ಬಾರಿ ಪರಮೇಶ್ವರ್ ಗೆಲುವಿಗೆ ಕಾರಣವಾಗಿದ್ದ ಕೊರಟಗೆರೆ ಕ್ಷೇತ್ರದ ವ್ಯಾಪ್ತಿಗೆ ಒಳಪಡುವ ತುಮಕೂರು ತಾಲ್ಲೂಕಿನ ಕೋರ ಹೋಬಳಿ ಹಾಗೂ ಮಧುಗಿರಿ ತಾಲ್ಲೂಕಿನ ಪುರವರ ಹೋಬಳಿಯಲ್ಲಿ ಹಿಂದಿನ ಸ್ಥಿತಿ ಇಲ್ಲ.

2008ರ ಚುನಾವಣೆಯಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ಚಂದ್ರಯ್ಯ ಈಗ ಕೆಜೆಪಿ ಅಭ್ಯರ್ಥಿ. ಹಿಂದಿನ ಸಲ ಪರಮೇಶ್ವರ್ ಕೈಹಿಡಿದ್ದ ಲಿಂಗಾಯತ ಸಮುದಾಯದ ಮತಗಳು ಈ ಬಾರಿ ಚದುರುತ್ತಿವೆ. ಚಂದ್ರಯ್ಯ, ದಲಿತರ ಮತಗಳ ಜತೆಗೆ ಲಿಂಗಾಯತರ ಮತಗಳನ್ನು ಸೆಳೆಯುತ್ತಿದ್ದಾರೆ.

ನಿವೃತ್ತ ಐಎಎಸ್ ಅಧಿಕಾರಿ ಬಿಎಸ್‌ಪಿಯ ಬುಳ್ಳಾ ಸುಬ್ಬರಾವ್ ದಲಿತರ ಮತಗಳ ಬುಟ್ಟಿಗೆ ಕೈ ಒಡ್ಡಿರುವುದು ಪರಮೇಶ್ವರ್‌ಗೆ ಸಮಸ್ಯೆಯಾಗಲಿದೆ. ಜನರ ಕೈಗೆ ಸಿಗುವುದಿಲ್ಲ ಎಂಬ ಜನರ ಸಿಟ್ಟು ದಿನಗಳು ಕಳೆದಂತೆ ಶಮನ ಕಾಣುತ್ತಿರುವುದು ಅಂತಿಮ ಫಲಿತಾಂಶವನ್ನು ನಿರ್ಧರಿಸಲಿದೆ. ಪರಮೇಶ್ವರ್- ಸುಧಾಕರಲಾಲ್ ನಡುವೆಯೇ ನೇರ ಸ್ಪರ್ಧೆ ಇದೆ.

`ಯುವಕ-ಅನುಭವಿ'
ಸತತ ನಾಲ್ಕು ಬಾರಿ ತುಮಕೂರು ನಗರ ಕ್ಷೇತ್ರ ಪ್ರತಿನಿಧಿಸಿದ್ದ ಸಚಿವ ಎಸ್.ಶಿವಣ್ಣ ಬಿಜೆಪಿ ಹುರಿಯಾಳು. ಕಾಂಗ್ರೆಸ್‌ನ ಡಾ.ರಫಿಕ್ ಅಹಮದ್, ಇದೇ ಮೊದಲ ಬಾರಿಗೆ ಸ್ಪರ್ಧಿಸಿರುವ ಕೆಜೆಪಿ ಜ್ಯೋತಿ ಗಣೇಶ್, ಜೆಡಿಎಸ್ ಗೋವಿಂದರಾಜು ಕಣದಲ್ಲಿ ಇದ್ದಾರೆ.

ಅಭಿವೃದ್ಧಿಗಿಂತ ನಗರದಲ್ಲಿ ಶಾಂತಿ ಕಾಪಾಡಿದ್ದೇನೆ' ಎನ್ನುವ ಶಿವಣ್ಣ, ಅಧಿಕಾರ ಉಳಿಸಿಕೊಳ್ಳಲು ಪ್ರಯತ್ನ ನಡೆಸಿದ್ದಾರೆ. ಅಭಿವೃದ್ಧಿ ಬೇಕಾದರೆ ಯುವಕರನ್ನು ಗೆಲ್ಲಿಸಿ ಎಂದು ಎಂಜಿನಿಯರಿಂಗ್, ಎಂಬಿಎ ಪದವೀಧರ ಜ್ಯೋತಿ ಗಣೇಶ್ ಮತದಾರರ ಮನೆ ಬಾಗಿಲು ತಟ್ಟಿದ್ದಾರೆ. ತಂದೆ ಸಂಸದ ಜಿ.ಎಸ್.ಬಸವರಾಜು ಬೆನ್ನಿಗಿರುವುದು ಸ್ವಲ್ಪ ಮಟ್ಟಿಗೆ ಸಹಕಾರಿಯಾಗಲಿದೆ. ಮತ್ತೊಬ್ಬ ಎಂಜಿನಿಯರಿಂಗ್ ಪದವೀಧರ ರಫೀಕ್ ಅಹಮದ್ ಎರಡನೇ ಬಾರಿಗೆ ಸ್ಪರ್ಧಿಸಿದ್ದು, ಅಲ್ಪಸಂಖ್ಯಾತರು, ಹಿಂದುಳಿದ ವರ್ಗಗಳ ಮತಗಳ ಮೇಲೆ ಕಣ್ಣಿಟ್ಟಿದ್ದಾರೆ.

ಗೋವಿಂದರಾಜು ಕಾಂಗ್ರೆಸ್‌ನಿಂದ ದಿಢೀರ್ ಬಂದು, ಜೆಡಿಎಸ್ ಅಭ್ಯರ್ಥಿಯಾಗಿರುವುದು ಆಂತರಿಕವಾಗಿ ಭಿನ್ನಮತ ಹೆಚ್ಚಿಸಿದೆ. ಕ್ಷೇತ್ರದಲ್ಲಿ ಒಂದು ರೀತಿಯಲ್ಲಿ `ಯುವಕ- ಅನುಭವಿಗಳ' ನಡುವಿನ ಹೋರಾಟವಾಗಿ ರೂಪಾಂತರಗೊಂಡಿದೆ.

ನೀರಿನ ರಾಜಕಾರಣ
ಶಿರಾ ಕ್ಷೇತ್ರದಿಂದ ಮಾಜಿ ಸಚಿವ ಟಿ.ಬಿ.ಜಯಚಂದ್ರ ಎರಡನೇ ಬಾರಿಗೆ ಕಾಂಗ್ರೆಸ್ ಅಭ್ಯರ್ಥಿ. ನಾಲ್ಕು ಸಲ ಸ್ಪರ್ಧಿಸಿ ಎರಡು ಬಾರಿ ಶಾಸಕರಾಗಿದ್ದ ಮಾಜಿ ಸಚಿವ ಬಿ.ಸತ್ಯನಾರಾಯಣ ಜೆಡಿಎಸ್‌ನಿಂದ ಕಣಕ್ಕಿಳಿದಿದ್ದಾರೆ. `ಸಾಕಷ್ಟು ಅಭಿವೃದ್ಧಿ ಮಾಡಿದ್ದೇನೆ, ಹೇಮಾವತಿ ನೀರು ತಂದಿದ್ದೇನೆ, ಮದಲೂರು ಕೆರೆಗೆ ನೀರು ಹರಿಸುತ್ತೇನೆ' ಎಂದು ಜಯಚಂದ್ರ ಪ್ರಚಾರ ನಡೆಸಿದ್ದಾರೆ. ಕೊನೆಯ ಅವಕಾಶಕ್ಕಾಗಿ ಸತ್ಯನಾರಾಯಣ್ ಕೋರಿಕೆ ಸಲ್ಲಿಸಿದ್ದಾರೆ. ಇಬ್ಬರ ನಡುವೆ ನೇರ ಹಣಾಹಣಿ.

ಐಎಎಸ್ ಅಧಿಕಾರಿ ಆಗಮನ
ಐಎಎಸ್ ಅಧಿಕಾರಿಯಾಗಿದ್ದ ಎಚ್.ವಿ.ವೀರಭದ್ರಯ್ಯ ಸ್ವಯಂ ನಿವೃತ್ತಿ ಪಡೆದು ಮಧುಗಿರಿ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿದ್ದಾರೆ. ಕಾಂಗ್ರೆಸ್‌ನಿಂದ ಕೆ.ಎನ್.ರಾಜಣ್ಣ, ಬಿಎಸ್‌ಪಿಯಿಂದ ಮಾಯಸಂದ್ರ ಮುನಿಯಪ್ಪ ಸ್ಪರ್ಧಿಸಿದ್ದಾರೆ. ಮಾಜಿ ಶಾಸಕ ಗಂಗಹನುಮಯ್ಯ, ರಾಜಣ್ಣ ಅವರಿಗೆ ಓಟು ತಂದುಕೊಡುವ ಶಕ್ತಿ ಹೊಂದಿದ್ದ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ, ಗೊಲ್ಲ ಸಮುದಾಯದ ಜಿ.ಜೆ.ರಾಜಣ್ಣ ಜೆಡಿಎಸ್ ಸೇರಿದ್ದಾರೆ. ಇಬ್ಬರೂ ಸಾಕಷ್ಟು ಓಟು ಕೊಡಿಸುತ್ತಾರೆ ಎಂದು ವೀರಭದ್ರಯ್ಯ ನಂಬಿದ್ದಾರೆ.

ಬಹುಸಂಖ್ಯಾತರಾಗಿರುವ ಒಕ್ಕಲಿಗರು ಜೆಡಿಎಸ್ ಜತೆಯಲ್ಲಿದ್ದಾರೆ. ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿರುವ ರಾಜಣ್ಣ, ರೈತರಿಗೆ ಬ್ಯಾಂಕ್‌ನಿಂದ ಸಾಲ ಕೊಡಿಸಿದ್ದು, ಆ ಮೂಲಕ ಮತ ಸೆಳೆಯುತ್ತಿದ್ದಾರೆ. ವೀರಭದ್ರಯ್ಯ- ರಾಜಣ್ಣ ನಡುವೆ ನೇರ ಸ್ಪರ್ಧೆ ಕಾಣುತ್ತದೆ. ಆದರೆ ಕಳೆದ ಬಾರಿ ಇಲ್ಲಿಂದ ಗೆದ್ದಿದ್ದ ಜೆಡಿಎಸ್‌ನ ಅನಿತಾ ಕುಮಾರಸ್ವಾಮಿ ಅವರು ಕ್ಷೇತ್ರದ ಅಭಿವೃದ್ಧಿ ಕಡೆಗಣಿಸಿದರು ಎಂಬ ಬೇಸರ ಮತದಾರರಲ್ಲಿದೆ. ಇದನ್ನು ವೀರಭದ್ರಯ್ಯ ಹೇಗೆ ನಿವಾರಿಸುತ್ತಾರೆ ಎಂಬುದು ಫಲಿತಾಂಶದ ಮೇಲೆ ಪರಿಣಾಮ ಬೀರಲಿದೆ.

ಸಹೋದರರ ಸವಾಲ್
ಕುಣಿಗಲ್ ಕ್ಷೇತ್ರದಲ್ಲಿ ಜೆಡಿಎಸ್‌ನಿಂದ ಮಾಜಿ ಸಚಿವ ಡಿ.ನಾಗರಾಜಯ್ಯ, ಅವರ ಸಹೋದರ ಬಿಜೆಪಿಯ ಕೃಷ್ಣಕುಮಾರ್ ಹಾಗೂ ಕಾಂಗ್ರೆಸ್‌ನ ಬಿ.ಬಿ.ರಾಮಸ್ವಾಮಿಗೌಡ, ಪಕ್ಷೇತರವಾಗಿ (ಕಾಂಗ್ರೆಸ್ ಬಂಡಾಯ) ರವಿ ಕಿರಣ್ ಸ್ಪರ್ಧೆಯಲ್ಲಿದ್ದಾರೆ. ಕಳೆದ ಸಲದಂತೆ ಈ ಬಾರಿಯೂ ಅಣ್ಣ-ತಮ್ಮಂದಿರ ಹೋರಾಟ ನಡೆದಿದೆ. ಬಂಡಾಯ ಅಭ್ಯರ್ಥಿ ದಾನ ಧರ್ಮದ ಮೂಲಕ ಮತ ಸೆಳೆಯುತ್ತಿರುವುದು ಕಾಂಗ್ರೆಸ್‌ಗೆ ತಲೆನೋವು ತಂದಿದೆ. ಬಿ- ಫಾರಂ ಸಿಕ್ಕಿಯೂ ಕೊನೆ ಕ್ಷಣದಲ್ಲಿ ಜೆಡಿಎಸ್ ಟಿಕೆಟ್ ವಂಚಿತರಾದ ಎಸ್.ಪಿ.ಮುದ್ದಹನುಮೇಗೌಡ ತಟಸ್ಥರಾಗಿ ಉಳಿದಿದ್ದಾರೆ.

ಅಭಿವೃದ್ಧಿ ರಾಜಕಾರಣ
ತಿಪಟೂರು ಕ್ಷೇತ್ರದಲ್ಲಿ ಬಿಜೆಪಿಯಿಂದ ಮಾಜಿ ಶಾಸಕರಾದ ಬಿ.ಸಿ.ನಾಗೇಶ್, ಕಾಂಗ್ರೆಸ್‌ನಿಂದ ಕೆ.ಷಡಕ್ಷರಿ ಹಾಗೂ ಇದೇ ಮೊದಲ ಬಾರಿಗೆ ಕೆಜೆಪಿಯಿಂದ ನಿವೃತ್ತ ಪೊಲೀಸ್ ಅಧಿಕಾರಿ ಲೋಕೇಶ್ವರ, ಜೆಡಿಎಸ್‌ನ ಎಂ.ಲಿಂಗರಾಜು ಸ್ಪರ್ಧಾ ಕಣದಲ್ಲಿ ಇದ್ದಾರೆ. ಅಭಿವೃದ್ಧಿ ಮುಂದಿಟ್ಟುಕೊಂಡು ನಾಗೇಶ್ ಪ್ರಚಾರ ನಡೆಸಿದ್ದಾರೆ. ಲಿಂಗಾಯತ ಸಮುದಾಯದ ಷಡಕ್ಷರಿ, ಲೋಕೇಶ್ವರ್ ಜಾತಿ ಬಲ ನಂಬಿದ್ದಾರೆ. ನಿರ್ಣಾಯಕವಾಗಿರುವ ಲಿಂಗಾಯತರ ಒಲವಿನ ಮೇಲೆ ಫಲಿತಾಂಶ ನಿರ್ಧಾರವಾಗಲಿದೆ.

ಗಣಿ ಕೋಪ
ಚಿಕ್ಕನಾಯಕನಹಳ್ಳಿ ಕ್ಷೇತ್ರದಲ್ಲಿ ಮಾಜಿ ಶಾಸಕರಾದ ಜೆಡಿಎಸ್‌ನಿಂದ ಸಿ.ಬಿ.ಸುರೇಶ್‌ಬಾಬು, ಕೆಜೆಪಿಯಿಂದ ಜೆ.ಸಿ.ಮಾಧುಸ್ವಾಮಿ, ಬಿಜೆಪಿಯಿಂದ ಕಿರಣ್ ಕುಮಾರ್ ಮತ್ತೊಮ್ಮೆ ಅದೃಷ್ಟ ಪರೀಕ್ಷಿಸಿದ್ದಾರೆ. ಇದೇ ಮೊದಲ ಬಾರಿಗೆ ಕಣಕ್ಕಿಳಿದಿರುವ ಕಾಂಗ್ರೆಸ್‌ನ ಸಾಸಲು ಸತೀಶ್ ಸ್ಪರ್ಧೆ ಒಡ್ಡಿದ್ದಾರೆ. ಎಲ್ಲರಿಗೂ ಮತ ಹಂಚಿಕೆಯಾಗಲಿದ್ದು, ಗಣಿ ಹಾಗೂ ನೀರಾವರಿ ವಿಚಾರ ಪ್ರಮುಖ ಸ್ಥಾನ ಪಡೆದಿದೆ. ತಾಲ್ಲೂಕಿನಲ್ಲಿ ಗಣಿ ಲೂಟಿಯಾಗಿದ್ದರೂ ಯಾವೊಬ್ಬ ರಾಜಕಾರಣಿಯೂ ಬಾಯಿ ಬಿಡದಿರುವುದು ಮತದಾರರ ಸಿಟ್ಟಿಗೆ ಕಾರಣವಾಗಿದೆ.

ಗ್ರಾಮಾಂತರ ಕ್ಷೇತ್ರ
ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ಬಿ.ಸುರೇಶ್‌ಗೌಡ ಮತ್ತೆ ಬಿಜೆಪಿ ಅಭ್ಯರ್ಥಿ. ಜೆಡಿಎಸ್‌ನ ಬಿ.ಸಿ.ಗೌರಿಶಂಕರ, ಕಾಂಗ್ರೆಸ್‌ನ ಆಡಿಟರ್ ನಾಗರಾಜು, ಜೆಡಿಎಸ್ ಟಿಕೆಟ್ ವಂಚಿತರಾದ ಎಚ್.ನಿಂಗಪ್ಪ ಕೆಜೆಪಿಯಿಂದ ಸ್ಪರ್ಧಿಸಿದ್ದಾರೆ. ಜೆಡಿಎಸ್ ಮತಗಳು ಹಂಚಿಕೆಯಾಗುವುದು ಫಲಿತಾಂಶವನ್ನು ಏರುಪೇರು ಮಾಡಬಹುದು. ಸುರೇಶ್‌ಗೌಡ ಅಭಿವೃದ್ಧಿ ಮುಂದಿಟ್ಟುಕೊಂಡು ಮತ ಕೇಳುತ್ತಿದ್ದಾರೆ. `ಜಾತಿ- ಅಭಿವೃದ್ಧಿ' ಅಭ್ಯರ್ಥಿಗಳ ಅಸ್ತ್ರವಾಗಿದೆ.

ನೇರ ಸ್ಪರ್ಧೆ
ಪಾವಗಡದಲ್ಲಿ ಜೆಡಿಎಸ್‌ನ ಕೆ.ಎಂ.ತಿಮ್ಮರಾಯಪ್ಪ, ಕಾಂಗ್ರೆಸ್‌ನ ಎಚ್.ವಿ.ವೆಂಕಟೇಶ್ ನಡುವೆ ಪೈಪೋಟಿ. ಕೆಜೆಪಿಯಿಂದ ಪಾವಗಡ ಶ್ರೀರಾಮ್, ಬಿಎಸ್‌ಆರ್ ಕಾಂಗ್ರೆಸ್‌ನಿಂದ ಮಾಜಿ ಶಾಸಕ ಉಗ್ರನರಸಿಂಹಪ್ಪ ಸ್ಪರ್ಧಿಸಿದ್ದಾರೆ. ಈ ಇಬ್ಬರೂ ಅಭ್ಯರ್ಥಿಗಳು ತಿಮ್ಮರಾಯಪ್ಪ, ವೆಂಕಟೇಶ್ ಗೆಲುವಿಗೆ ತೊಡಕಾಗಿದ್ದಾರೆ. ಇಬ್ಬರಲ್ಲಿ ಯಾರ ಮತ ಬ್ಯಾಂಕ್ ಸೆಳೆಯಲಿದ್ದಾರೆ ಎಂಬುದು ಗೆಲುವು ನಿರ್ಧರಿಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.