ADVERTISEMENT

ನಕ್ಸಲ್‌ಬಾಧಿತರಿಂದ ಚುನಾವಣೆ ಬಹಿಷ್ಕಾರ?

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2013, 19:59 IST
Last Updated 25 ಏಪ್ರಿಲ್ 2013, 19:59 IST

ಶಿವಮೊಗ್ಗ: `ಸರ್ಕಾರ, ಗನ್ ಹಿಡಿದವರ ಬಗ್ಗೆ ಯೋಚಿಸುತ್ತಿದೆ; ಆದರೆ, ಹೊಸದಾಗಿ ಗನ್ ಹಿಡಿಯಲು ಹೊರಟವರ ಬಗ್ಗೆ ಚಿಂತಿಸುತ್ತಿಲ್ಲ' -  ಹುರಳಿ ಮತಗಟ್ಟೆ ವ್ಯಾಪ್ತಿಯ ಗಾಡರಗದ್ದೆ ದೇವರಾಜ್ ಅವರ ಮಾತಿನಲ್ಲಿ ಆಕ್ರೋಶ, ಸಿಟ್ಟು ಮಡುಗಟ್ಟಿತ್ತು.  

`50 ವರ್ಷಗಳ ಹಿಂದೆ ಯಾವ ಸಮಸ್ಯೆಗಳಿದ್ದವೋ ಈಗಲೂ ಅವೇ ಸಮಸ್ಯೆಗಳೇ ಇವೆ. ಅಂದಿನಿಂದ ಇಂದಿನವರೆಗೆ ಯಾವ ಸರ್ಕಾರಗಳೂ ನಮ್ಮ ಕೂಗಿಗೆ ಸ್ಪಂದಿಸಿಲ್ಲ. ಈಗ ಚುನಾವಣೆ ಆರಂಭವಾಗಿದೆ, ರಾಜಕಾರಣಿಗಳು ಮತ್ತೆ ನಮ್ಮ ಹಳ್ಳಿಗೆ ಬರುತ್ತಿದ್ದಾರೆ. ಆದರೆ, ನಾವು ಚುನಾವಣೆ ಬಹಿಷ್ಕರಿಸುವ ಚಿಂತನೆಯಲ್ಲಿದ್ದೇವೆ' ಎನ್ನುತ್ತಾರೆ ಅವರು.

ತೀರ್ಥಹಳ್ಳಿ- ಆಗುಂಬೆ ರಸ್ತೆ ಮಧ್ಯದ ನಾಲೂರಿನಿಂದ ಕೋರನಕುಂಟೆ ಸುಮಾರು 12 ಕಿ.ಮೀ. ದೂರ ಇದೆ. ತೀರ್ಥಹಳ್ಳಿಯ ನಕ್ಸಲ್‌ಪೀಡಿತ ನಾಲೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ 10ಕ್ಕೂ ಹೆಚ್ಚು ಹಳ್ಳಿಗಳಿವೆ. 2,800ಕ್ಕೂ ಜನಸಂಖ್ಯೆ ಇದೆ. ಇಷ್ಟು ಹಳ್ಳಿಗೆ ಇರುವುದೊಂದೇ ರಸ್ತೆ. ಓಡಾಡುವುದೊಂದೇ ಬಸ್.

ಈ ಕಲ್ಲುಬಂಡೆಗಳ ಕಡಿದಾದ ಹಾದಿಯಲ್ಲಿ ಓಲಾಡುತ್ತಾ ಬರುವ ಬಸ್, ಮುಂದೆ ಹೋಗಲು ಸಾಧ್ಯವಾಗದೇ ಪ್ರತಿದಿನ ಅರ್ಧ ದಾರಿಗೆ ಹಿಂತಿರುಗುತ್ತದೆ.  ಇಲ್ಲಿಯ ಗ್ರಾಮಸ್ಥರ ಬೇಡಿಕೆ ಒಂದೇ ಒಂದು- ಸೂಕ್ತ ರಸ್ತೆ ಮಾಡಿಕೊಡಿ. ಇದು ಹಲವು ದಶಕಗಳ ಬೇಡಿಕೆಯೂ ಹೌದು. ಆದರೆ, ಅದು ಈಡೇರಿಲ್ಲ. ಈ ಹಿಂದೆ ಕೆಪಿಸಿ ರಸ್ತೆ ನಿರ್ಮಿಸಿ ಟಾರ್ ಹಾಕಿತ್ತು.

ಅದು ಸರಿಯಾಗಿ ನಿರ್ವಹಣೆ ಮಾಡದಿದ್ದರಿಂದ ಈ ರಸ್ತೆಯನ್ನು ಜಿಲ್ಲಾ ಪಂಚಾಯ್ತಿಗೆ ವಹಿಸಲಾಯಿತು. ಅಲ್ಲಿಂದ ಈ ರಸ್ತೆ ರಿಪೇರಿ ಕಂಡಿಲ್ಲ. `ನಾಲೂರು ಗ್ರಾಮ ಪಂಚಾಯ್ತಿ ನಕ್ಸಲ್‌ಪೀಡಿತ ಪ್ರದೇಶಕ್ಕೆ ಸೇರ್ಪಡೆಯಾಗಿದೆ. ನಕ್ಸಲ್ ಪ್ಯಾಕೇಜ್ ಅಡಿ ಸರ್ಕಾರ ಸಾಕಷ್ಟು ಹಣ ಬಿಡುಗಡೆ ಮಾಡಿದೆ ಎನ್ನುತ್ತಾರೆ ಪ್ಯಾಕೇಜ್ ಅನುಷ್ಠಾನಾಧಿಕಾರಿಗಳೂ ಆದ ಜಿಲ್ಲಾಧಿಕಾರಿ. ಆದರೆ, ಅವರಿಗೆ ಈ ರಸ್ತೆ ರಿಪೇರಿ ಕಣ್ಣಿಗೆ ಕಾಣಿಸುವುದಿಲ್ಲವೇ?' ಎಂದು ಪ್ರಶ್ನಿಸುತ್ತಾರೆ ದೇವರಾಜ್.

`ಕೊನೇ ಪಕ್ಷ ಈ ಊರನ್ನು `ಸುವರ್ಣಗ್ರಾಮ' ಯೋಜನೆಗೆ ಸೇರಿಸಿ ಎಂದರೂ ನಿಯಮಾವಳಿಗಳ ಪ್ರಕಾರ ಜನಸಂಖ್ಯೆ ಕಡಿಮೆ ಎಂದು ಅದನ್ನೂ ಮಾಡಲಿಲ್ಲ. ಜಿಲ್ಲಾ ಪಂಚಾಯ್ತಿಗೆ ಈ ಬಗ್ಗೆ ಕೇಳಿದರೆ ಹಣದ ಕೊರತೆ ಎನ್ನುತ್ತಾರೆ. ಸರ್ಕಾರದ ಯಾವುದೇ ಯೋಜನೆಗಳಿಂದಲೂ ಈ ರಸ್ತೆ ರಿಪೇರಿ ಮಾಡಿಸಲು ಸಾಧ್ಯ ಇಲ್ಲ ಎನ್ನುವುದಾದರೆ ಮತ್ತೆ ಯಾರಿಗೆ ನಕ್ಸಲ್ ಪ್ಯಾಕೇಜ್? ರಸ್ತೆ ಸಮರ್ಪಕ ಇಲ್ಲದಿದ್ದರಿಂದ ಹೈಸ್ಕೂಲ್‌ಗೆ ಪ್ರತಿದಿನ ವಿದ್ಯಾರ್ಥಿಗಳು ಮೇಗರವಳ್ಳಿಗೆ 10 ಕಿ.ಮೀ. ನಡೆದು ಹೋಗಬೇಕು' ಎನ್ನುತ್ತಾರೆ ಹೆಗ್ಗದ್ದೆಯ ಕಾಮತ್.

`ಊರಿಗೆ ಎಸ್ಪಿ ಬರುತ್ತಾರೆಂದರೆ ಪೊಲೀಸರು ಫೋನ್ ಮಾಡಿ, ಅವರ ಮುಂದೆ ಕಷ್ಟ ಹೇಳಿಕೊಳ್ಳಬೇಡಿ ಎಂದು ತಾಕೀತು ಮಾಡುತ್ತಾರೆ. ತಹಶೀಲ್ದಾರ್ ಬರುತ್ತಾರೆ ಎಂದರೆ ಪಿಡಿಒ ಕೂಡ ಇದೇ ಮಾತು ಹೇಳುತ್ತಾರೆ. ಹಾಗಾದರೆ ನಮ್ಮ ಕಷ್ಟ ಯಾರಿಗೆ ಹೇಳಬೇಕು? ನಮ್ಮೂರಲ್ಲೇ ಮೂರು ತಿಂಗಳ ಕೆಳಗೆ ನಕ್ಸಲ್ ನಿಗ್ರಹ ಪಡೆ ಹಾಗೂ ಊರ ಜನರ ನಡುವೆ ಆಟೋಟ ಸ್ಪರ್ಧೆಗಳು ನಡೆದವು. ಆದರೆ, ನಾವು ನೆಪಕ್ಕೆ ಭಾಗವಹಿಸಿದ್ದೆವು ಅಷ್ಟೇ' ಎನ್ನುತ್ತಾರೆ ಹುರುಳಿಯ ನಾಗರಿಕರೊಬ್ಬರು.

`ತೀರ್ಥಹಳ್ಳಿ ನಮಗೆ 36 ಕಿ.ಮೀ. ದೂರ. ಆದರೆ, ನಾಲೂರು ಗ್ರಾಮ ಪಂಚಾಯ್ತಿಯನ್ನು 90 ಕಿ.ಮೀ. ದೂರದ ಹೊಸನಗರಕ್ಕೆ ಸೇರಿಸಲಾಗಿದೆ. ಪ್ರತಿಯೊಂದು ದಾಖಲೆ ತೆಗೆಸಲು ಹೊಸನಗರಕ್ಕೆ ಹೋಗಬೇಕಾಗಿದೆ. ಇದನ್ನು ತಪ್ಪಿಸಿ ಎಂದು ಹೇಳಿಕೊಂಡರೂ ಯಾವ ಜನಪ್ರತಿನಿಧಿಗಳು ನಮ್ಮ ಮಾತು ಕೇಳುತ್ತಿಲ್ಲ. ಹೀಗಾಗಿ, ಮತದಾನ ಬಹಿಷ್ಕರಿಸಬೇಕೆಂಬ ಚಿಂತನೆ ಇದೆ. ಆದರೆ, ಮುಂದೆ ಏನಾಗುತ್ತೋ ಎಂಬ ಗೊಂದಲ ಇದೆ' ಎನ್ನುತ್ತಾರೆ ಇದೇ ಊರಿನ ರಾಜು.

ಇದೇ ತಾಲ್ಲೂಕಿನ ಮುಳುಬಾಗಿಲು ಗ್ರಾಮ ಪಂಚಾಯ್ತಿಯ ಬಿಂಕ್ಲ ಗ್ರಾಮಸ್ಥರು ಚುನಾವಣೆ ಬಹಿಷ್ಕಾರದ ಬೃಹತ್ ಕಹಳೆಯನ್ನೇ ಊದಿದ್ದಾರೆ. ಕಳೆದ ಚುನಾವಣೆಯಲ್ಲಿ ಊರಿನ ರಸ್ತೆ ರಿಪೇರಿಯ ಭರವಸೆಯನ್ನು ಜನಪ್ರತಿನಿಧಿಗಳು ನೀಡಿದ್ದರು. ಆದರೆ ಅದು ಈಡೇರಿಲ್ಲ. ಹಾಗಾಗಿ, ಈ ಬಾರಿ ಚುನಾವಣೆಯನ್ನು ಬಹಿಷ್ಕರಿಸಿದ್ದೇವೆ ಎಂದು ಗ್ರಾಮಸ್ಥರು ದೃಢವಾದ ಧ್ವನಿಯಲ್ಲಿ ಹೇಳುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.