ADVERTISEMENT

ಅನ್ನದಾತನ ಏಳಿಗೆಗೆ ಜೀವನ ಮುಡಿಪು–ಯಡಿಯೂರಪ್ಪ

​ಪ್ರಜಾವಾಣಿ ವಾರ್ತೆ
Published 19 ಮೇ 2018, 19:30 IST
Last Updated 19 ಮೇ 2018, 19:30 IST
ಅನ್ನದಾತನ ಏಳಿಗೆಗೆ ಜೀವನ ಮುಡಿಪು–ಯಡಿಯೂರಪ್ಪ
ಅನ್ನದಾತನ ಏಳಿಗೆಗೆ ಜೀವನ ಮುಡಿಪು–ಯಡಿಯೂರಪ್ಪ   

ಬೆಂಗಳೂರು: ‘ಅಧಿಕಾರದಲ್ಲಿರಲಿ ಅಥವಾ ವಿರೋಧ ಪಕ್ಷದಲ್ಲೇ ಇರಲಿ. ನನ್ನ ಕೈಕಾಲು ಗಟ್ಟಿಯಾಗಿವೆ. ಇನ್ನೂ 10 ವರ್ಷ ಓಡಾಡುತ್ತೇನೆ. ಕೊನೆಯ ಉಸಿರು ಇರುವವರೆಗೂ ರೈತರ ಏಳಿಗೆಗೆ ಜೀವನ ಮುಡಿಪಾಗಿ ಇರಿಸುತ್ತೇನೆ’ ಎಂದು ನಿರ್ಗಮಿತ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಭಾವುಕರಾಗಿ ನುಡಿದರು.

ವಿಧಾನಸಭಾ ಅಧಿವೇಶನದಲ್ಲಿ ವಿಶ್ವಾಸ ಮತ ಯಾಚನೆ ಪ್ರಸ್ತಾಪ ಮಂಡಿಸಿ ಸುಮಾರು 22 ನಿಮಿಷ ಮನದಾಳದ ಮಾತುಗಳನ್ನು ತೆರೆದಿಟ್ಟ ಅವರು, ನಾಡಿನ ಸಂಕಷ್ಟ ವಿವರಿಸುತ್ತಾ ಗದ್ಗದಿತರಾದರು. ಕಾಂಗ್ರೆಸ್‌–ಜೆಡಿಎಸ್‌ ಪಕ್ಷಗಳನ್ನು ಟೀಕಿಸುವಾಗ ಅಬ್ಬರಿಸಿದರು. ಭಾಷಣದ ಕೊನೆಗೆ ‘ವಿಶ್ವಾಸ ಮತ ಯಾಚನೆಯ ಮಂಡನೆ ಮುಂದುವರಿಸುವುದಿಲ್ಲ. ಈಗಲೇ ರಾಜೀನಾಮೆ ನೀಡಿ ಹೋಗುವೆ’ ಎಂದರು. ಆಗ, ವಿರೋಧ ಪಕ್ಷಗಳ ಸದಸ್ಯರು ಮೇಜು ಕುಟ್ಟಿ ಸಂಭ್ರಮಿಸಿದರಲ್ಲದೇ, ಶೇಮ್–ಶೇಮ್ ಎಂದು ಹೀಯಾಳಿಸಿದರು.

‘ಕುಮಾರಸ್ವಾಮಿಯವರೇ, ಅಧಿಕಾರ ಕೊಡದಿದ್ದರೆ ಪ್ರಾಣ ಕಳೆದುಕೊಳ್ಳುತ್ತೇನೆ ಎಂದು ನಾನು ಹೇಳುವುದಿಲ್ಲ.  ಜನರಿಗಾಗಿ ಪ್ರಾಣ ಕೊಡುತ್ತೇನೆ ಎನ್ನುತ್ತೇನೆ’ ಎಂದು ಕುಟುಕಿದ ಯಡಿಯೂರಪ್ಪ, ‘ಚುನಾವಣೆ ಇನ್ನೂ ಐದು ವರ್ಷ ಅಥವಾ ಆರೇ ತಿಂಗಳಲ್ಲಿ ಬರಬಹುದು. ಆಗ 150 ಸ್ಥಾನ ಗೆದ್ದು ಮತ್ತೆ ಅಧಿಕಾರಕ್ಕೆ ಬರುವೆ. ಲೋಕಸಭೆ ಚುನಾವಣೆಯಲ್ಲಿ 28 ಸ್ಥಾನಗಳನ್ನೂ ಗೆದ್ದು ಮೋದಿಗೆ ಕೊಡುಗೆ ನೀಡುವೆ’ ಎಂದು ಹೇಳಿದರು.

ADVERTISEMENT

‘ನಾನು ಯಾರ ಮರ್ಜಿಯಲ್ಲೂ ಈತನಕ ರಾಜಕೀಯ ಮಾಡಿಲ್ಲ. ಹೋರಾಟದಿಂದ ಇಲ್ಲಿಯವರೆಗೆ ಬಂದು ನಿಂತಿದ್ದೇನೆ. ಎಲ್ಲರೂ ಹೇಳುವಂತೆ ನನಗೀಗ ಅಗ್ನಿ ಪರೀಕ್ಷೆ ಎದುರಾಗಿದೆ. ಸಾಕಷ್ಟು ಅಗ್ನಿ ಪರೀಕ್ಷೆ ಎದುರಿಸಿದ್ದೇನೆ. ರಾಜ್ಯದ ಜನ ತೋರಿಸಿದ ಪ್ರೀತಿಯನ್ನು ಎಂದಿಗೂ ಮರೆಯುವುದಿಲ್ಲ. ನಾಳೆಯಿಂದಲೇ ನಾನು ರಾಜ್ಯ ಪ್ರವಾಸ ಹೊರಡುತ್ತೇನೆ. ಕಾಂಗ್ರೆಸ್–ಜೆಡಿಎಸ್‌ ನಡೆಸಿದ ಕುತಂತ್ರವನ್ನು ಜನರ ಮುಂದಿಡುವ ಕೆಲಸ ಮಾಡುತ್ತೇನೆ. ಕರ್ನಾಟಕವನ್ನು ಮಾದರಿ ರಾಜ್ಯವಾಗಿ ರೂಪಿಸುವ ವಿಷಯದಲ್ಲಿ ಹಿಂದೆ ಸರಿಯುವ ಪ್ರಶ್ನೆಯೇ ಎಲ್ಲ’ ಎಂದು ಪ್ರತಿಪಾದಿಸಿದರು.

‘ಅವರಪ್ಪನಾಣೆ ಮುಖ್ಯಮಂತ್ರಿಯಾಗುವುದಿಲ್ಲ. ನಿಮ್ಮಪ್ಪನಾಣೆ ಮುಖ್ಯಮಂತ್ರಿಯಾಗುವುದಿಲ್ಲ ಎಂದು ಪರಸ್ಪರ ಹೇಳಿಕೊಂಡಿದ್ದವರು ಇಂದು ಒಟ್ಟಾಗಿದ್ದಾರೆ. ರೈತ ಸಂಕುಲ ಇವತ್ತು ಸಂಕಷ್ಟದಲ್ಲಿದೆ. ನೊಂದಿರುವ ರೈತ ಸಮುದಾಯಕ್ಕೆ ನ್ಯಾಯ ಒದಗಿಸಬೇಕು, ಅದಕ್ಕಾಗಿ ನನ್ನ ಸರ್ವಸ್ವವನ್ನೂ ತ್ಯಾಗಮಾಡಿ ರಾಜ್ಯದ ಉದ್ದಗಲಕ್ಕೂ ಓಡಾಡಿದೆ’ ಎಂದರು.

ಕೈಕೊಟ್ಟ ಶಾಸಕರು: ‘ನನ್ನ ಸರ್ಕಾರ ಬರುತ್ತದೆ ಎಂಬ ಕಾರಣಕ್ಕೆ ಆ ಭಾಗದ (ಕಾಂಗ್ರೆಸ್‌–ಜೆಡಿಎಸ್‌) ಕೆಲವು ಶಾಸಕರು ಸಹಕಾರ ಕೊಡುವುದಾಗಿ ಒಪ್ಪಿಕೊಂಡಿದ್ದರು. ನಮ್ಮ ನಿರೀಕ್ಷೆ ಬೇರೆ ಇತ್ತು. ಅವರ ಸಹಕಾರ ಸಿಗಲಿಲ್ಲ’ ಎಂದು ಯಡಿಯೂರಪ್ಪ ಬೇಸರ ವ್ಯಕ್ತಪಡಿಸಿದರು.

‘ಶಾಸಕರಿಂದ ಆತ್ಮಸಾಕ್ಷಿ ಮತ ಕೇಳಿದ್ದು ನಿಜ. ಕೆಲವರು ಭರವಸೆ ಕೊಟ್ಟಿದ್ದೂ ನಿಜ. ಆದರೆ, ವಿರೋಧ ಪಕ್ಷಗಳ ನಾಯಕರು ಅವರ ಕುಟುಂಬದ ಸದಸ್ಯರೊಂದಿಗೂ ಮಾತನಾಡಲು ಶಾಸಕರಿಗೆ ಅವಕಾಶ ನೀಡಲಿಲ್ಲ. ಅವರನ್ನು ಹಿಡಿದಿಟ್ಟುಕೊಂಡು, ಹಿಂಸೆ ಕೊಟ್ಟರು’ ಎಂದು ಅವರು ಆರೋಪಿಸಿದರು.

‘ರಾಜ್ಯದ ಜನತೆ 113 ಸ್ಥಾನಗಳನ್ನು ನೀಡಿದ್ದರೆ ರಾಜ್ಯದ ಅಭಿವೃದ್ಧಿ ಚಿತ್ರಣವೇ ಬದಲಾಗುತ್ತಿತ್ತು. ಆದರೆ ದೈವೇಚ್ಛೆ ಬೇರೆಯೇ ಇರಬಹುದು’ ಎಂದು ನೋವಿನಿಂದ ನುಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.