ADVERTISEMENT

ಅಶೋಕ ಖೇಣಿ ಇಂದು ಕಾಂಗ್ರೆಸ್‌ ಸೇರ್ಪಡೆ?

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2018, 19:30 IST
Last Updated 4 ಮಾರ್ಚ್ 2018, 19:30 IST
ಅಶೋಕ ಖೇಣಿ
ಅಶೋಕ ಖೇಣಿ   

ಬೀದರ್‌: ಇಲ್ಲಿನ ದಕ್ಷಿಣ ಕ್ಷೇತ್ರದ ಶಾಸಕ ಅಶೋಕ ಖೇಣಿ ಸೋಮವಾರ (ಮಾರ್ಚ್‌ 5) ಬೆಳಿಗ್ಗೆ ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಮ್ಮುಖದಲ್ಲಿ ಕಾಂಗ್ರೆಸ್‌ ಸೇರ್ಪಡೆಯಾಗುವರು.

ಕರ್ನಾಟಕ ಮಕ್ಕಳ ಪಕ್ಷದ ಖೇಣಿ ಕಾಂಗ್ರೆಸ್‌ ಸೇರುವರು ಎಂಬ ಸುದ್ದಿ ಜಿಲ್ಲೆಯಲ್ಲಿ ತಿಂಗಳಿನಿಂದ ಹರಿದಾಡುತ್ತಿತ್ತು. ಅವರು ಬಹಿರಂಗವಾಗಿಯೇ ನಿರಾಕರಿಸುತ್ತಿದ್ದರು. ಭಾನುವಾರ ಕರೆ ಮಾಡಿದಾಗ ‘ಒಂದು ದಿನ ಕಾಯ್ದು ನೋಡಿ’ ಎಂದಷ್ಟೇ ಹೇಳಿದರು. ಆದರೆ, ಕಾಂಗ್ರೆಸ್‌ ಸೇರುವುದನ್ನು ಅವರು ನಿರಾಕರಿಸಲಿಲ್ಲ.

‘ಖೇಣಿ ಶನಿವಾರ ಬೆಂಗಳೂರಿನಲ್ಲಿ ಸಿದ್ದರಾಮಯ್ಯ ಅವರೊಂದಿಗೆ ಸಮಾಲೋಚನೆ ನಡೆಸಿದರು. ಟಿಕೆಟ್‌ ಕೊಡುವುದಾದರೆ ಮಾತ್ರ ಕಾಂಗ್ರೆಸ್‌ ಸೇರುವುದಾಗಿ ಹೇಳಿದರು. ಮುಖ್ಯಮಂತ್ರಿ ಟಿಕೆಟ್‌ ಭರವಸೆ ನೀಡಿದ ನಂತರ ಅವರು ಪಕ್ಷ ಸೇರಲು ಒಪ್ಪಿದರು’ ಎಂದು ಮೂಲಗಳು ತಿಳಿಸಿವೆ.

ADVERTISEMENT

ಮಾಜಿ ಮುಖ್ಯಮಂತ್ರಿ ದಿ. ಧರ್ಮಸಿಂಗ್‌ ಅವರ ಪುತ್ರ ವಿಜಯಸಿಂಗ್ ಅವರು ಈಗಾಗಲೇ ವಿಧಾನ ಪರಿಷತ್‌ ಸದಸ್ಯರಾಗಿದ್ದಾರೆ. ಅವರ ಅಳಿಯ ಚಂದ್ರಾಸಿಂಗ್‌ ಅವರು ಬೀದರ್‌ ದಕ್ಷಿಣ ಕ್ಷೇತ್ರದ ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿ. ಅವರನ್ನು ಪರಿಗಣಿಸಿದರೆ ಒಂದೇ ಕುಟುಂಬದವರಿಗೆ ಹೆಚ್ಚು ಅವಕಾಶ ಕೊಟ್ಟಂತಾಗುತ್ತದೆ. ಸ್ಥಳೀಯ ಅಭ್ಯರ್ಥಿಗೇ ಟಿಕೆಟ್‌ ಕೊಡಬೇಕು’ ಎಂದು ಸ್ಥಳೀಯ ಕಾಂಗ್ರೆಸ್‌ ಮುಖಂಡರು ಮುಖ್ಯಮಂತ್ರಿ ಮೇಲೆ ಒತ್ತಡ ಹಾಕಿದ್ದರು.

‘ಚಂದ್ರಾಸಿಂಗ್‌ ಅವರಿಗೆ ಟಿಕೆಟ್‌ ತಪ್ಪಿಸುವ ಉದ್ದೇಶದಿಂದ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರು ಖೇಣಿ ಅವರನ್ನು ಬೆಂಬಲಿಸುತ್ತಿದ್ದಾರೆ’ ಎನ್ನುವುದು ಮೂಲಗಳ ಮಾಹಿತಿ.

2013ರಲ್ಲಿ ಖೇಣಿ ಅವರು ಕರ್ನಾಟಕ ಮಕ್ಕಳ ಪಕ್ಷದಿಂದ ಸ್ಪರ್ಧಿಸಿ ಜೆಡಿಎಸ್‌ನ ಬಂಡೆಪ್ಪ ಕಾಶೆಂಪೂರ ಅವರನ್ನು 15,788 ಮತಗಳ ಅಂತರದಿಂದ ಪರಾಭವಗೊಳಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.