ADVERTISEMENT

ಆಣೆ ಪ್ರಮಾಣಗಳ ಸಮರದಲ್ಲಿ ಹಾಲಪ್ಪ– ಬೇಳೂರು

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2018, 19:30 IST
Last Updated 9 ಮಾರ್ಚ್ 2018, 19:30 IST
ಗೋಪಾಲಕೃಷ್ಣ ಬೇಳೂರು
ಗೋಪಾಲಕೃಷ್ಣ ಬೇಳೂರು   

ಸಾಗರ: ಇಲ್ಲಿನ ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್‌ಗಾಗಿ ತೀವ್ರ ಪೈಪೋಟಿ ನಡೆಸುತ್ತಿರುವ ಬಿಜೆಪಿ ಮುಖಂಡರಾದ ಹರತಾಳು ಹಾಲಪ್ಪ ಹಾಗೂ ಗೋಪಾಲಕೃಷ್ಣ ಬೇಳೂರು ನಡುವೆ ಈಗ ಆಣೆ ಪ್ರಮಾಣಗಳ ಸಮರ ನಡೆಯುತ್ತಿದೆ.

ಕೆಲವು ದಿನಗಳ ಹಿಂದೆ ಹೊಸನಗರ ತಾಲ್ಲೂಕಿನ ಹರತಾಳು ಗ್ರಾಮದಲ್ಲಿ ಬೆಂಬಲಿಗರ ಸಭೆಯಲ್ಲಿ ಮಾತನಾಡಿದ್ದ ಹಾಲಪ್ಪ, ‘ನನ್ನ ವಿರುದ್ಧ ಅತ್ಯಾಚಾರ ಆರೋಪ ಪ್ರಕರಣ ದಾಖಲಾಗುವಲ್ಲಿ ಗೋಪಾಲಕೃಷ್ಣ ಬೇಳೂರು ಪಾತ್ರವಿತ್ತು. ಈ ಬಗ್ಗೆ ನನ್ನ ಬಳಿ ಸಾಕ್ಷ್ಯಾಧಾರಗಳಿದ್ದು ಎಲ್ಲಿ ಬೇಕಾದರೂ ಪ್ರಮಾಣ ಮಾಡಲು ಸಿದ್ದ. ಅವರು ನನ್ನ ನಗುವನ್ನು ಕಸಿದಿದ್ದಾರೆ’ ಎಂದು ಆರೋಪಿಸಿದ್ದರು.

ಹಾಲಪ್ಪ ಬೆಂಬಲಿಗರು ಸಾಮಾಜಿಕ ಜಾಲತಾಣದಲ್ಲಿ ನಿರಂತರವಾಗಿ ಕೆಲವು ಸಂದೇಶಗಳನ್ನು ಪ್ರಕಟಿಸುತ್ತಿದ್ದಾರೆ.

ADVERTISEMENT

‘ಹಾಲಪ್ಪ ಸಚಿವರಾಗಿದ್ದಾಗ ಅವರ ವರ್ಚಸ್ಸಿಗೆ ಧಕ್ಕೆ ತರಬೇಕು ಎನ್ನುವ ಕಾರಣದಿಂದಲೇ ಅವರ ವಿರುದ್ಧ ಅತ್ಯಾಚಾರದ ಆರೋಪ ಪ್ರಕರಣ ದಾಖಲಾಗುವಂತೆ ನೋಡಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಹಾಲಪ್ಪ, ಅವರ ಸಂಬಂಧಿಕರಿಗೆ ಮತ್ತು ಅಭಿಮಾನಿಗಳಿಗೆ ತೀವ್ರ ನೋವು ಉಂಟಾಗಿತ್ತು. ತಪ್ಪು ಮಾಡದೇ ಇದ್ದರೂ ಹಾಲಪ್ಪ ವಿರುದ್ಧ ಪ್ರಕರಣ ದಾಖಲಾಗುವಂತೆ ಮಾಡಿದ ವ್ಯಕ್ತಿಗಳಿಗೆ ಆ ದೇವರೇ ಶಿಕ್ಷೆ ನೀಡಲಿ ಎಂದು ಹರಕೆ ಹೊತ್ತಿದ್ದರು’ ಎಂದು ಸಂದೇಶದಲ್ಲಿ ಹೇಳಲಾಗಿದೆ.

ಇದಕ್ಕೆ ಪೂರಕವಾಗಿ ಕೆಲವು ದಿನಗಳ ಹಿಂದೆ ಹರತಾಳು ಗ್ರಾಮದಲ್ಲಿ ಹರಕೆ ತೀರಿಸಿದ್ದ ಹಾಲಪ್ಪ, ತಮ್ಮ ಅಭಿಮಾನಿಗಳಿಗೆ ಬಾಡೂಟ ಹಾಕಿಸಿದ್ದರು. ನಂತರದ ಬೆಳವಣಿಗೆಯಲ್ಲಿ ಕಳೆದ ಭಾನುವಾರ ತಾಲ್ಲೂಕಿನ ಆವಿನಹಳ್ಳಿ ಗ್ರಾಮದಲ್ಲಿ ಅವರು ಮತ್ತೊಮ್ಮೆ ತಮ್ಮ ಅಭಿಮಾನಿಗಳ ಸಭೆ ನಡೆಸಿ ಬಾಡೂಟದ ವ್ಯವಸ್ಥೆ ಮಾಡಿದ್ದರು. ಈ ವೇಳೆಯಲ್ಲೂ ಅವರು ಹರಕೆಯ ಪ್ರಸ್ತಾಪ ಮಾಡಿದ್ದರು.

ಈ ನಡುವೆ, ಗೋಪಾಲಕೃಷ್ಣ ಬೇಳೂರು ಅವರು ಶೀಘ್ರದಲ್ಲೇ ಸಿಗಂದೂರು ಚೌಡೇಶ್ವರಿ ದೇವಸ್ಥಾನಕ್ಕೆ ತೆರಳಿ ‘ಹಾಲಪ್ಪ ಅವರ ವಿರುದ್ಧ ದಾಖಲಾಗಿದ್ದ ಅತ್ಯಾಚಾರದ ಆರೋಪದ ಪ್ರಕರಣಕ್ಕೂ ನನಗೂ ಯಾವುದೇ ಸಂಬಂಧವಿಲ್ಲ’ ಎಂದು ದೇವರ ಎದುರು ಆಣೆ ಪ್ರಮಾಣ ಮಾಡಲು ಸಿದ್ಧರಾಗಿದ್ದಾರೆ. ತಮ್ಮ ಅಭಿಮಾನಿಗಳು ಹಾಗೂ ಮಾಧ್ಯಮದವರ ಎದುರೇ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವುದಾಗಿ ಬೇಳೂರು ಸ್ಪಷ್ಟಪಡಿಸಿದ್ದಾರೆ.

ಸೊರಬದಲ್ಲಿ ಕುಮಾರ್‌ ಬಂಗಾರಪ್ಪ ಅವರು ಕಾಂಗ್ರೆಸ್‌ ತೊರೆದು ಬಿಜೆಪಿ ಸೇರಿದ ನಂತರ ಬಿಜೆಪಿ ವರಿಷ್ಠರ ಸೂಚನೆ ಮೇರೆಗೆ ಸಾಗರ ಕ್ಷೇತ್ರದಲ್ಲಿ ಸಕ್ರಿಯರಾಗಿರುವ ಹಾಲಪ್ಪ ಈವರೆಗೂ ಬೇಳೂರು ವಿರುದ್ಧ ಬಹಿರಂಗವಾಗಿ ಮಾತನಾಡಿರಲಿಲ್ಲ. ಚುನಾವಣೆ ದಿನಾಂಕ ಹತ್ತಿರವಾಗುತ್ತಿದ್ದಂತೆ ಹಾಗೂ ಈ ಕ್ಷೇತ್ರದ ಟಿಕೆಟ್‌ಗೆ ಬೇಳೂರು ಅವರಿಂದ ಪೈಪೋಟಿ ಹೆಚ್ಚುತ್ತಿರುವಂತೆ ಹರತಾಳು ಗ್ರಾಮದ ಸಭೆಯಲ್ಲಿ ಆಕ್ರಮಣಕಾರಿಯಾಗಿ ಮಾತನಾಡಿದ್ದಾರೆ.

ಇತ್ತ ಬೇಳೂರು ತಮ್ಮ ಹುಟ್ಟುಹಬ್ಬದ ನೆಪದಲ್ಲಿ ಅಭಿಮಾನಿಗಳ ಸಮಾವೇಶ ನಡೆಸಿ ಬಲಪ್ರದರ್ಶನಕ್ಕೆ ಮುಂದಾಗಿದ್ದಾರೆ. ಅಲ್ಲದೆ ತಮ್ಮ ಬೆಂಬಲಿಗರನ್ನು ಶಿವಮೊಗ್ಗದ ಬಿಜೆಪಿ ಕಚೇರಿಗೆ ಕಳುಹಿಸಿ ಟಿಕೆಟ್‌ಗಾಗಿ ಒತ್ತಡ ಹೇರುವ ತಂತ್ರ ನಡೆಸಿದ್ದಾರೆ.

ಹಾಲಪ್ಪ ಅವರಿಗೆ ಸಾಗರ ಕ್ಷೇತ್ರದಲ್ಲಿ ಟಿಕೆಟ್‌ ನೀಡಲಾಗುವುದು ಎಂದು ಪಕ್ಷದ ರಾಜ್ಯ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಅವರು ಕೆಲದಿನಗಳ ಹಿಂದೆ ಶಿವಮೊಗ್ಗದಲ್ಲಿ ಹೇಳಿದ್ದರು. ಹೀಗಾಗಿ ಬಿಜೆಪಿ ಟಿಕೆಟ್‌ ದೊರಕುವುದು ಖಚಿತ ಎಂಬ ವಿಶ್ವಾಸದಲ್ಲಿ ಹಾಲಪ್ಪ ಬೆಂಬಲಿಗರಿದ್ದಾರೆ.

ಯಾವುದೇ ಕ್ಷೇತ್ರದ ಟಿಕೆಟ್‌ ವಿಷಯ ಅಂತಿಮವಾಗಿಲ್ಲ. ಹೈಕಮಾಂಡ್‌ ನಡೆಸಿ
ರುವ ಸಮೀಕ್ಷೆ ಪ್ರಕಾರ ಬೇಳೂರು ಅವರಿಗೆ ಟಿಕೆಟ್‌ ದೊರೆಯುವುದರಲ್ಲಿ ಅನುಮಾನವಿಲ್ಲ ಎಂಬ ನಂಬಿಕೆ ಅವರ ಬೆಂಬಲಿಗರದ್ದಾಗಿದೆ.

– ಎಂ.ರಾಘವೇಂದ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.