ADVERTISEMENT

ಎಪಿಕ್ ಅಕ್ರಮ: ಕೋಲಾಹಲ -ಆಯೋಗದ ಕದ ತಟ್ಟಿದ ಮೂರು ಪಕ್ಷಗಳು

​ಪ್ರಜಾವಾಣಿ ವಾರ್ತೆ
Published 9 ಮೇ 2018, 19:30 IST
Last Updated 9 ಮೇ 2018, 19:30 IST
ಸಂಜೀವಕುಮಾರ್, ಅಕ್ರಮವಾಗಿ ಸಂಗ್ರಹಿಸಲಾಗಿದ್ದ ಮತದಾರರ ಗುರುತಿನ ಚೀಟಿ, ಸಿದ್ದರಾಮಯ್ಯ
ಸಂಜೀವಕುಮಾರ್, ಅಕ್ರಮವಾಗಿ ಸಂಗ್ರಹಿಸಲಾಗಿದ್ದ ಮತದಾರರ ಗುರುತಿನ ಚೀಟಿ, ಸಿದ್ದರಾಮಯ್ಯ   

ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಯ ಹಣಾಹಣಿ ಅಂತಿಮ ಘಟ್ಟ ತಲುಪುತ್ತಿದ್ದಂತೆ, ಭಾರೀ ಪ್ರಮಾಣದಲ್ಲಿ ಮತದಾರರ ಗುರುತಿನ ಚೀಟಿ (ಎಪಿಕ್‌) ಅಕ್ರಮವಾಗಿ ಸಂಗ್ರಹಿಸಿಟ್ಟಿರುವ ಪ್ರಕರಣ ಪತ್ತೆಯಾಗಿರುವುದು ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ.

ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಫ್ಲ್ಯಾಟ್‌ವೊಂದರಲ್ಲಿ 9,896 ಮತದಾರರ ಗುರುತಿನ ಚೀಟಿ ಸಂಗ್ರಹಿಸಿಟ್ಟಿರುವುದು ಮಂಗಳವಾರ (ಮೇ 8) ಪತ್ತೆಯಾಗಿತ್ತು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಚುನಾವಣಾ ಆಯೋಗ ತನಿಖೆ ನಡೆಸುತ್ತಿದೆ. ಪ್ರಕರಣದ ಗಂಭೀರತೆ ಗಮನಿಸಿ ಈ ಕ್ಷೇತ್ರದ ಮತದಾನ ಮುಂದೂಡುವ ಸಾಧ್ಯತೆಯೂ ಇದೆ.

ಈ ಮಧ್ಯೆ, ಪ್ರಕರಣದ ಕೂಲಂಕಷ ತನಿಖೆಗೆ ಆಗ್ರಹಿಸಿ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್‌ ನಾಯಕರು ಆಯೋಗದ ಕದ ತಟ್ಟಿದ್ದಾರೆ. ಅಲ್ಲದೇ, ಈ ಪಕ್ಷಗಳ ನಾಯಕರು ಆರೋಪ–ಪ್ರತ್ಯಾರೋಪಗಳಿಗೆ ಇಳಿದಿದ್ದಾರೆ.

ADVERTISEMENT

ಚಿಕ್ಕಮಗಳೂರಿನಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ‘ಚುನಾವಣಾ ಅಧಿಕಾರಿಗಳ ತಂಡ ಬೆಂಗಳೂರಿನ ಫ್ಲಾಟ್‌ವೊಂದರಲ್ಲಿ ಕಾರ್ಯಾಚರಣೆ ನಡೆಸಿದಾಗ ಸಹಸ್ರಾರು ನಕಲಿ ಗುರುತಿನ ಚೀಟಿಗಳು, ಮುದ್ರಣ ಯಂತ್ರ, ಲ್ಯಾಪ್‌ಟಾಪ್‌, ಎರಡು ಸ್ಟೀಲ್‌ ಡಬ್ಬಗಳಲ್ಲಿ ಇಟ್ಟಿದ್ದ ಮತದಾರರ ಪಟ್ಟಿ ಸಿಕ್ಕಿವೆ. ಸೋಲಿನ ಭೀತಿಯಲ್ಲಿ ಕಾಂಗ್ರೆಸ್‌ ಇಂಥ ದುಸ್ಸಾಹಸಗಳಿಗೆ ಮುಂದಾಗಿದೆ’ ಎಂದು ದೂರಿದರು.

ಬೆಳಗಾವಿಯಲ್ಲಿ ಮಾತನಾಡಿದ ಅವರು, ‘ರಾಜ್ಯದ 40ರಿಂದ 50 ಕ್ಷೇತ್ರಗಳಲ್ಲಿ ಮತದಾರರ ನಕಲಿ ಗುರುತಿನ ಚೀಟಿ ತಯಾರಿಸಲಾಗಿದೆ. ಈ ಬಗ್ಗೆ ಎಚ್ಚರದಿಂದಿರಿ. ಮತದಾನವು ಪ್ರಜಾಪ್ರಭುತ್ವದ ಹಬ್ಬವಾಗಿದ್ದು, ಕಳಂಕ ಬಾರದಂತೆ ನೋಡಿಕೊಳ್ಳಿ’ ಎಂದೂ ಮನವಿ ಮಾಡಿದರು.

ತುಮಕೂರಿನಲ್ಲಿ ಮಾತನಾಡಿದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ‘ಸೋಲು ಖಚಿತ ಎಂಬುದನ್ನು ಮನಗಂಡು ವಾಮಮಾರ್ಗದಲ್ಲಿ ಗೆಲ್ಲಲು ಸಿದ್ದರಾಮಯ್ಯ ಪ್ರಯತ್ನಿಸುತ್ತಿದ್ದಾರೆ’ ಎಂದು ಹರಿಹಾಯ್ದರು.

ಬಾಗಲಕೋಟೆಯಲ್ಲಿ ಮಾತನಾಡಿದ ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ, ‘ಎಲ್ಲೆಲ್ಲಿ ನಮ್ಮ ಪಕ್ಷ ಪ್ರಬಲವಾಗಿದೆಯೋ ಅಲ್ಲೆಲ್ಲಾ ವಿರೋಧಿಗಳು ಅಕ್ರಮ ನಡೆಸುತ್ತಿದ್ದಾರೆ. ರಾಜರಾಜೇಶ್ವರಿ ನಗರದಲ್ಲಿ ಮತದಾರರ ಗುರುತಿನ ಚೀಟಿ ಸಂಗ್ರಹ ಪತ್ತೆಯಾಗಿರುವುದೇ ಇದಕ್ಕೆ ಸಾಕ್ಷಿ’ ಎಂದರು.

ತನಿಖೆ ನಡೆಸಲಿ–ಸಿದ್ದರಾಮಯ್ಯ

‘ಮತದಾರರ ಗುರುತಿನ ಚೀಟಿ ಪತ್ತೆ ಬಗ್ಗೆ ನನಗೆ ಮಾಹಿತಿ ಇಲ್ಲ. ಚುನಾವಣಾಧಿಕಾರಿಗಳು ಆ ಬಗ್ಗೆ ತನಿಖೆ ನಡೆಸಲಿ. ಬಿಜೆಪಿ ಮುಖಂಡರ ಮಾತನ್ನು ಗಂಭೀರವಾಗಿ ಪರಿಗಣಿಸುವ ಅಗತ್ಯವಿಲ್ಲ. ಈ ಕಾರಣಕ್ಕೆ ಚುನಾವಣೆ ಮುಂದೂಡಬೇಕು ಎನ್ನುವುದರಲ್ಲಿ ಅರ್ಥವಿಲ್ಲ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮೈಸೂರಿನಲ್ಲಿ ಹೇಳಿದರು.

‘ಆಯೋಗದಿಂದ ಶೀಘ್ರ ತೀರ್ಮಾನ’

ಮತದಾರರ ಗುರುತಿನ ಚೀಟಿ ಸಂಗ್ರಹಿಸಿಟ್ಟ ಪ್ರಕರಣದ ಕುರಿತು ಪರಿಶೀಲಿಸಿ, ತೀರ್ಮಾನ ಪ್ರಕಟಿಸಲು ಉಪ ಚುನಾವಣಾ ಆಯುಕ್ತ ಚಂದ್ರಭೂಷಣ್‌ ಕುಮಾರ್‌ ಬೆಂಗಳೂರಿಗೆ ಬುಧವಾರ ಬಂದಿದ್ದಾರೆ.

‘ಕೊಳೆಗೇರಿ ವಾಸಿಗಳಿಗೆ ಆಮಿಷ ಒಡ್ಡುವ ಉದ್ದೇಶದಿಂದಲೇ ಈ ರೀತಿ ಸಂಗ್ರಹಿಸಿರುವುದು ಖಚಿತವಾಗಿದೆ. ಈ ಚೀಟಿಗಳು ಸಿಕ್ಕಿರುವ ಕೊಣೆಯಲ್ಲಿ ಸ್ಥಳೀಯ ಶಾಸಕರ ಚಿತ್ರವಿರುವ ವಿಸಿಟಿಂಗ್‌ ಕಾರ್ಡ್‌, ಕರಪತ್ರಗಳು ಸಿಕ್ಕಿವೆ’ ಎಂದು ಮುಖ್ಯ ಚುನಾವಣಾಧಿಕಾರಿ ಸಂಜೀವ್‌ ಕುಮಾರ್‌ ತಿಳಿಸಿದರು.

7 ಮಂದಿ ವಶಕ್ಕೆ

ಅಕ್ರಮವಾಗಿ ಮತದಾರರ ಗುರುತಿನ ಚೀಟಿಗಳನ್ನು ಪತ್ತೆ ಹಚ್ಚಿದ್ದ ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆ ಮಾಡಿದ್ದ ಆರೋಪದಡಿ ಯಶವಂತಪುರ ಕಾರ್ಪೋರೇಟರ್ ಜಿ.ಕೆ.ವೆಂಕಟೇಶ್ ಸೇರಿದಂತೆ ಐವ ರನ್ನು ಪೊಲೀಸರು ಬಂಧಿಸಿದ್ದು, ಅಪಾರ್ಟ್‌ಮೆಂಟ್‌ನ ಭದ್ರತಾ ಸಿಬ್ಬಂದಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

‘ಭದ್ರತಾ ಸಿಬ್ಬಂದಿ ಕೊಠಡಿಯಲ್ಲೂ ಚೀಟಿಗಳು ಪತ್ತೆಯಾಗಿವೆ. ಸದ್ಯಕ್ಕೆ ಸೆಕ್ಯುರಿಟಿ ಸಿಬ್ಬಂದಿ ಸೇರಿ ಏಳು ಮಂದಿಯನ್ನು ವಶಕ್ಕೆ ಪಡೆದಿದ್ದೇವೆ. ಚುನಾವಣಾಧಿಕಾರಿ ದೂರು ನೀಡುತ್ತಿದ್ದಂತೆ ಮುಂದಿನ ಕ್ರಮ ಕೈಗೊಳ್ಳಲಿದ್ದೇವೆ’ ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.