ADVERTISEMENT

ಕಣದಲ್ಲಿ ಕ್ರಿಮಿನಲ್‌ ಹಿನ್ನೆಲೆಯ 391 ಅಭ್ಯರ್ಥಿಗಳು

​ಪ್ರಜಾವಾಣಿ ವಾರ್ತೆ
Published 6 ಮೇ 2018, 19:30 IST
Last Updated 6 ಮೇ 2018, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ವಿಧಾನಸಭಾ ಚುನಾವಣೆಯಲ್ಲಿ ಕಣದಲ್ಲಿರುವ 2,560 ಅಭ್ಯರ್ಥಿಗಳ ಪೈಕಿ 391 (ಶೇ 15) ಮಂದಿ ತಮ್ಮ ವಿರುದ್ಧ ಕ್ರಿಮಿನಲ್‌ ಹಿನ್ನೆಲೆ ಇದೆ ಎಂದು ಘೋಷಿಸಿಕೊಂಡಿದ್ದಾರೆ. ಬಿಜೆಪಿಯ 83 (ಶೇ 37), ಕಾಂಗ್ರೆಸ್‌ನ 59 (ಶೇ 27), ಜೆಡಿಎಸ್‌ನ 41 (ಶೇ 21) ಅಭ್ಯರ್ಥಿಗಳು ಇವರಲ್ಲಿ ಸೇರಿದ್ದಾರೆ.

ಅಭ್ಯರ್ಥಿಗಳ ಅಪರಾಧ ಹಿನ್ನೆಲೆ, ಹಣಕಾಸು, ಶಿಕ್ಷಣ, ಲಿಂಗ ಹಾಗೂ ಇತರ ವಿಷಯಗಳ ಬಗ್ಗೆ ಅಸೋಸಿಯೇಷನ್‌ ಫಾರ್‌ ಡೆಮಾಕ್ರೆಟಿಕ್‌ ರಿಫಾರ್ಮ್ಸ್‌ (ಎಡಿಆರ್‌) ವಿಶ್ಲೇಷಣೆ ನಡೆಸಿ ವರದಿ ಪ್ರಕಟಿಸಿದೆ. ಪ್ರಮಾಣಪತ್ರಗಳು ಸರಿಯಾಗಿ ಸ್ಕ್ಯಾನ್‌ ಆಗಿರದ ಕಾರಣ ಹಾಗೂ ಕೆಲವರ ಪ್ರಮಾಣಪತ್ರಗಳು ಚುನಾವಣಾ ಆಯೋಗದ ವೆಬ್‌ಸೈಟ್‌ನಲ್ಲಿ ಸಿಗದ ಕಾರಣ 95 ಅಭ್ಯರ್ಥಿಗಳ ವಿಶ್ಲೇಷಣೆ ನಡೆಸಿಲ್ಲ ಎಂದು ಸಂಸ್ಥೆಯ ಸಂಸ್ಥಾಪಕ ಸದಸ್ಯ ಪ್ರೊ. ತ್ರಿಲೋಚನ್‌ ಶಾಸ್ತ್ರಿ ಭಾನುವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಯಾವುದೇ ಕ್ಷೇತ್ರದಲ್ಲಿ ಮೂರು ಅಥವಾ ಅದಕ್ಕಿಂತ ಹೆಚ್ಚು ಅಭ್ಯರ್ಥಿಗಳು ಕ್ರಿಮಿನಲ್‌ ಹಿನ್ನೆಲೆ ಹೊಂದಿದ್ದರೆ ಅಂತಹ ಕ್ಷೇತ್ರವನ್ನು ಸೂಕ್ಷ್ಮ ಕ್ಷೇತ್ರವೆಂದು ಘೋಷಿಸಲಾಗುತ್ತದೆ. 56 (ಶೇ 25) ಅತೀ ಸೂಕ್ಷ್ಮ ಕ್ಷೇತ್ರಗಳಿವೆ’ ಎಂದು ಅವರು ಮಾಹಿತಿ ನೀಡಿದರು.

ADVERTISEMENT

ಕಾಂಗ್ರೆಸ್‌ನ ಅಭ್ಯರ್ಥಿಗಳು ಸರಾಸರಿ ₹38.75 ಕೋಟಿ, ಜೆಡಿಎಸ್‌ ಹುರಿಯಾಳುಗಳು ₹20.91 ಕೋಟಿ, ಬಿಜೆಪಿ ಅಭ್ಯರ್ಥಿಗಳು ₹17.86 ಕೋಟಿ ಹಾಗೂ 1,090 ಪಕ್ಷೇತರರು ಸರಾಸರಿ ₹1.58 ಕೋಟಿ ಆಸ್ತಿ ಹೊಂದಿದ್ದಾರೆ ಎಂದರು.

1,351 (ಶೇ 53) ಅಭ್ಯರ್ಥಿಗಳ ಶೈಕ್ಷಣಿಕ ಹಿನ್ನೆಲೆ 5ರಿಂದ 12ನೇ ತರಗತಿ, 981 (ಶೇ 38) ಮಂದಿಯದ್ದುಪದವಿ ಹಾಗೂ ಸ್ನಾತಕೋತ್ತರ ಪದವಿ. 52 (ಶೇ 2) ಮಂದಿ ಅಕ್ಷರಜ್ಞಾನವನ್ನಷ್ಟೇ ಹೊಂದಿದ್ದಾರೆ. 50 (ಶೇ 2) ಅಭ್ಯರ್ಥಿಗಳು ಅನಕ್ಷರಸ್ಥರು. 11 ಮಂದಿ ಶೈಕ್ಷಣಿಕ ವಿವರ ನೀಡಿಲ್ಲ.

**

ಜನರ ನೋವಿಗೆ ಸ್ಪಂದಿಸುವವರಿಗೆ ಮತ ನೀಡಿ. ಆಮಿಷಗಳನ್ನು ತಿರಸ್ಕರಿಸಿ.
– ಪ್ರೊ. ತ್ರಿಲೋಚನ್‌ ಶಾಸ್ತ್ರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.