ADVERTISEMENT

ಕಾರುಗಳ ಧಣಿ ಶ್ರೀರಾಮುಲು!

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2018, 19:30 IST
Last Updated 21 ಏಪ್ರಿಲ್ 2018, 19:30 IST
ಬಿ.ಶ್ರೀರಾಮುಲು
ಬಿ.ಶ್ರೀರಾಮುಲು   

ಬೆಂಗಳೂರು: ಮೊಳಕಾಲ್ಮುರು ಬಿಜೆಪಿ ಅಭ್ಯರ್ಥಿ, ಸಂಸದ ಶ್ರೀರಾಮುಲು ₹ 1.20 ಕೋಟಿ ಮೌಲ್ಯದ ಹಮ್ಮರ್ ಮತ್ತು ₹ 1 ಕೋಟಿ ಮೌಲ್ಯದ ಬಿಎಂಡಬ್ಲ್ಯು, ಅವರ ಪತ್ನಿ ಭಾಗ್ಯಲಕ್ಷ್ಮಿ ₹ 14.45 ಲಕ್ಷ ಮೌಲ್ಯದ ಸ್ಯಾಂಟೆಫೆ ಕಾರು ಹೊಂದಿದ್ದಾರೆ.

ಚುನಾವಣಾ ಆಯೋಗಕ್ಕೆ ಸಲ್ಲಿಸಿದ ನಾಮಪತ್ರದ ಜೊತೆಗೆ ಸಲ್ಲಿಸಿದ ಪ್ರಮಾಣ ಪತ್ರದಲ್ಲಿ ತಮ್ಮ ಬಳಿ ₹ 18.52 ಕೋಟಿ ಮೌಲ್ಯದ ಆಸ್ತಿ ಇದೆ ಎಂದು ಶ್ರೀರಾಮುಲು ಘೋಷಿಸಿದ್ದಾರೆ. ಅವರಿಗೆ ₹ 6 ಲಕ್ಷ ಬ್ಯಾಂಕ್ ಸಾಲವೂ ಇದೆ.

5 ವರ್ಷಗಳಲ್ಲಿ ₹ 114 ಕೋಟಿ ಹೆಚ್ಚಳ: ಬಾಗೇಪಲ್ಲಿ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಎಸ್‌.ಎನ್‌. ಸುಬ್ಬಾರೆಡ್ಡಿ ಅವರ ಆಸ್ತಿ ಕಳೆದ 5 ವರ್ಷಗಳಲ್ಲಿ ₹ 114 ಕೋಟಿ ಹೆಚ್ಚಾಗಿದೆ. 2013ರ ಚುನಾವಣೆಯಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿದ್ದ ಅವರು ಆಗ ₹ 86.41 ಕೋಟಿ ಆಸ್ತಿ ಘೋಷಿಸಿದ್ದರು. ಈಗ ಅವರ ಆಸ್ತಿ ₹ 201.32 ಕೋಟಿಗೆ ಏರಿದೆ. ಅವರು ₹ 31 ಕೋಟಿ ಸಾಲದಲ್ಲಿದ್ದಾರೆ. ಈ ಬಗ್ಗೆ ಅವರು ಚುನಾವಣಾ ಆಯೋಗಕ್ಕೆ ಪ್ರಮಾಣ ಪತ್ರದಲ್ಲಿ ಸಲ್ಲಿಸಿದ್ದಾರೆ.

ADVERTISEMENT

‘ಲೇ ಔಟ್‌’ ಕೃಷ್ಣಪ್ಪ ಬಳಿ ಎಕರೆಗಟ್ಟಲೆ ಜಮೀನು: ಕಾಂಗ್ರೆಸ್‌ ಅಭ್ಯರ್ಥಿಯಾಗಿ ಗೋವಿಂದರಾಜನಗರ ಕ್ಷೇತ್ರದಿಂದ ಶುಕ್ರವಾರ ನಾಮಪತ್ರ ಸಲ್ಲಿಸಿದ್ದ ಪ್ರಿಯಕೃಷ್ಣ ₹ 1,020 ಕೋಟಿ ಮೌಲ್ಯದ ಆಸ್ತಿ ಘೋಷಿಸಿದ್ದರೆ, ಅದೇ ಪಕ್ಷದಿಂದ ವಿಜಯನಗರ ಕ್ಷೇತ್ರದಿಂದ ಶನಿವಾರ ನಾಮಪತ್ರ ಸಲ್ಲಿಸಿದ ಅವರ ತಂದೆ, ’ಲೇ ಔಟ್‌’ ಕೃಷ್ಣಪ್ಪ ಎಂದೇ ಗುರುತಿಸಿಕೊಂಡಿರುವ ವಸತಿ ಸಚಿವ ಎಂ. ಕೃಷ್ಣಪ್ಪ, ₹ 126.16 ಕೋಟಿ ಮೌಲ್ಯದ ಆಸ್ತಿ ಘೋಷಿಸಿದ್ದಾರೆ. ಅವರ ಪತ್ನಿ ಪ್ರಿಯದರ್ಶಿನಿ ಹೆಸರಿನಲ್ಲಿ ₹ 110 ಕೋಟಿ ಮೌಲ್ಯದ ಆಸ್ತಿ ಇದೆ. 2013ರಲ್ಲಿ ಕೃಷ್ಣಪ್ಪ ಅವರ ಹೆಸರಿನಲ್ಲಿ ಒಟ್ಟು ₹ 147.43 ಕೋಟಿ ಮೌಲ್ಯದ ಆಸ್ತಿ ಇತ್ತು.

ಈಗ ತಮ್ಮ ಬಳಿ 113 ಎಕರೆ ಭೂಮಿ ಹಾಗೂ 1.05 ಲಕ್ಷ ಚದರ ಅಡಿ ನಿವೇಶನ, ಪತ್ನಿ ಹೆಸರಿನಲ್ಲಿ 60 ಎಕರೆ ಭೂಮಿ, 13 ಸಾವಿರ ಚದರ ಅಡಿ ನಿವೇಶನ ಇದೆ ಎಂದೂ ಕೃಷ್ಣಪ್ಪ ಘೋಷಿಸಿಕೊಂಡಿದ್ದಾರೆ

ಕೃಷ್ಣಪ್ಪ ಬಳಿ ಐಷಾರಾಮಿ ಏಳು ಕಾರುಗಳು ಸೇರಿ ಒಟ್ಟು 10 ವಿವಿಧ ವಾಹನಗಳಿವೆ. ಅವರ ಪತ್ನಿ ಹೆಸರಿನಲ್ಲಿ ನಾಲ್ಕು ಟ್ರ್ಯಾಕ್ಟರ್‌ಗಳೂ, ₹ 3.42 ಕೋಟಿ ಮೌಲ್ಯದ ಚಿನ್ನ, ₹ 1.30 ಕೋಟಿ ಮೌಲ್ಯದ ವಜ್ರಾಭರಣಗಳಿವೆ. ಪುತ್ರ, ಶಾಸಕ ಪ್ರಿಯಕೃಷ್ಣ ಅವರಿಗೆ ₹ 9.40 ಕೋಟಿ, ಪತ್ನಿಗೆ ₹ 6.93 ಕೋಟಿ ಸಾಲ ನೀಡಿದ್ದಾರೆ.

ಗರುಡ ಮಾಲ್‌ ಮಾಲೀಕರೂ ಆಗಿರುವ ಚಿಕ್ಕಪೇಟೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಉದಯ್‌ ಬಿ.ಗರುಡಾಚಾರ್ ಬಳಿ ಇರುವ ಆಸ್ತಿಯ ಒಟ್ಟು  ಮೌಲ್ಯ ₹ 164 ಕೋಟಿ. ಅವರ ಪತ್ನಿ ಹೆಸರಿನಲ್ಲಿ 31.65 ಕೋಟಿ ಮೌಲ್ಯದ ಆಸ್ತಿ ಇದೆ.

ಮಾಜಿ ಸಚಿವ ಬಚ್ಚೇಗೌಡರ ಪುತ್ರ ಹೊಸಕೋಟೆಯ ಬಿಜೆಪಿ ಅಭ್ಯರ್ಥಿ ಶರತ್‌ ಕುಮಾರ್‌ ಹೆಸರಿನಲ್ಲಿ ₹ 102.61 ಕೋಟಿ ಮೌಲ್ಯದ ಆಸ್ತಿ ಇದೆ. ₹ 1.87 ಕೋಟಿ ಸಾಲವೂ ಇದೆ ಎಂದು ಚುನಾವಣಾ ಆಯೋಗಕ್ಕೆ ಪ್ರಮಾಣ ಪತ್ರ ಸಲ್ಲಿಸಿದ್ದಾರೆ.

ಆಸ್ತಿ ಮೌಲ್ಯ

ಶ್ರೀರಾಮುಲು– ₹ 18.52 ಕೋಟಿ

ಎಸ್‌.ಎನ್‌. ಸುಬ್ಬಾರೆಡ್ಡಿ– ₹ 201.32 ಕೋಟಿ

ರಾಮದಾಸ್‌ ಬಳಿ ವಾಹನ ಇಲ್ಲ!

ಒಟ್ಟು ₹ 39.69 ಲಕ್ಷ ಮೌಲ್ಯದ ಆಸ್ತಿ ಹೊಂದಿರುವುದಾಗಿ ಕೃಷ್ಣರಾಜ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಮಾಜಿ ಸಚಿವ ಎಸ್‌.ಎ. ರಾಮದಾಸ್‌ ಅವರು ಚುನಾವಣಾ ಆಯೋಗಕ್ಕೆ ಪ್ರಮಾಣಪತ್ರ ಸಲ್ಲಿಸಿದ್ದಾರೆ. ₹ 50 ಸಾವಿರ ನಗದು, 200 ಗ್ರಾಂ ಚಿನ್ನ, 4 ಕೆ.ಜಿ ಬೆಳ್ಳಿ ಸಾಮಗ್ರಿಗಳಿವೆ. ಯಾವುದೇ ವಾಹನ ಇಲ್ಲ. ಮೂರು ಪ್ರಕರಣಗಳು ಬಾಕಿ ಇವೆ ಎಂದೂ ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.