ADVERTISEMENT

ಕುಮಾರಸ್ವಾಮಿ ಏನೂ ತಪ್ಪು ಮಾಡಿಲ್ಲ: ದೇವೇಗೌಡ

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2018, 19:37 IST
Last Updated 28 ಫೆಬ್ರುವರಿ 2018, 19:37 IST
ಕುಮಾರಸ್ವಾಮಿ ಏನೂ ತಪ್ಪು ಮಾಡಿಲ್ಲ: ದೇವೇಗೌಡ
ಕುಮಾರಸ್ವಾಮಿ ಏನೂ ತಪ್ಪು ಮಾಡಿಲ್ಲ: ದೇವೇಗೌಡ   

ಕಲಬುರ್ಗಿ: ‘ಎಚ್.ಡಿ.ಕುಮಾರಸ್ವಾಮಿ ಏನೂ ತಪ್ಪು ಮಾಡಿಲ್ಲ. 20 ತಿಂಗಳು ಮುಖ್ಯಮಂತ್ರಿಯಾಗಿದ್ದಾಗ ಒಳ್ಳೆಯ ಕೆಲಸ ಮಾಡಿದ್ದಾರೆ. ಆದ್ದರಿಂದ ಮತ ನೀಡಿ’ ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಮನವಿ ಮಾಡಿದರು.

ಅಫಜಲಪುರದಲ್ಲಿ ಬುಧವಾರ ನಡೆದ ‘ವಿಕಾಸ ಪರ್ವ’ ಸಮಾವೇಶದಲ್ಲಿ ಮಾತನಾಡಿದ ಅವರು, ‘ಕುಮಾರಸ್ವಾಮಿ ಎರಡು ಬಾರಿ ಹೃದಯಕ್ಕೆ
ಶಸ್ತ್ರಚಿಕಿತ್ಸೆ ಮಾಡಿಕೊಂಡರೂ ವಿಶ್ರಾಂತಿ ಪಡೆಯದೆ ರಾಜ್ಯ ಸುತ್ತುತ್ತಿದ್ದಾರೆ. ರೈತರಿಗೆ ಒಳ್ಳೆಯದು ಮಾಡಬೇಕು ಎಂಬ ಕಳಕಳಿ ಇದೆ’ ಎಂದರು.

‘ಬಿಜೆಪಿಯವರು ಈಗ ಪರಿಶಿಷ್ಟ ಜಾತಿಯವರ ಮನೆಗಳಿಗೆ ಭೇಟಿ ನೀಡಿ, ಅಲ್ಲಿ ಊಟ ಮಾಡುತ್ತಿದ್ದಾರೆ. ಆದರೆ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ಒಂದು ತಿಂಗಳಲ್ಲೇ ಪರಿಶಿಷ್ಟ ಜಾತಿಯ ರೈತರೊಬ್ಬರ ಮನೆಯಲ್ಲಿ ಊಟ, ನಿದ್ದೆ ಮಾಡಿದರು. ಗ್ರಾಮ ವಾಸ್ತವ್ಯದ ಮೂಲಕ ರೈತರ ಏಳಿಗೆಗೆ ಶ್ರಮಿಸಿದರು’ ಎಂದು ಹೇಳಿದರು.

ADVERTISEMENT

‘ಪ್ರಾದೇಶಿಕ ಪಕ್ಷವನ್ನು ಗಟ್ಟಿಯಾಗಿ ಉಳಿಸಿಕೊಳ್ಳಲು ನಾನು ಈ ಇಳಿವಯಸ್ಸಿನಲ್ಲೂ ರಾಜ್ಯದೆಲ್ಲೆಡೆ ಸುತ್ತುತ್ತಿದ್ದೇನೆ. 56 ವರ್ಷಗಳಿಂದ ರಾಜಕೀಯ
ದಲ್ಲಿ ಉಳಿದುಕೊಂಡು ರಾಜ್ಯದ ಏಳಿಗೆಗೆ ಶ್ರಮಿಸಿದ್ದೇನೆ. ನೀರಾವರಿ ಯೋಜನೆಗಳನ್ನು ಅನುಷ್ಠಾನಗೊಳಿಸಿದ್ದೇನೆ. ಸಾಕಷ್ಟು ಪ್ರಮಾಣದಲ್ಲಿ ಅನುದಾನ ಬಿಡುಗಡೆ ಮಾಡಿದ್ದೇನೆ’ ಎಂದು ತಿಳಿಸಿದರು.

‘ಇದನ್ನೆಲ್ಲ ಅರಿತಿರುವ ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಗಳ ಜನರು ನಿಮ್ಮ ಮಗನನ್ನು ಗೆಲ್ಲಿಸಿ ಋಣ ತೀರಿಸುತ್ತೇವೆ ಎಂದಿದ್ದಾರೆ. ಕುಮಾರಣ್ಣ ನೀವು ಮನೆಮನೆಗೆ ಹೋಗುವುದು ಬೇಡ. ನಿಮ್ಮನ್ನು ಮತ ಹಾಕಿ ಗೆಲ್ಲಿಸುತ್ತೇವೆ ಎಂಬ ಅಭಯ ಕಾರ್ಯಕರ್ತರಿಂದ ವ್ಯಕ್ತವಾಗಬೇಕು’ ಎಂದರು.

‘ಪ್ರಜಾವಾಣಿ’ ಮುಖಪುಟದಲ್ಲಿ ಪ್ರಕಟಿತ ಜೆಡಿಎಸ್‌ ಜಾಹೀರಾತು ತೋರಿಸಿ ಮಾತನಾಡಿದ ಅವರು, ‘ಜನರು, ರೈತರು ಮತ್ತು ರಾಜ್ಯದ ಏಳಿಗೆಗಾಗಿ ಕುಮಾರಸ್ವಾಮಿ ನೀಡಿರುವ ಭರವಸೆಗಳನ್ನು ಈಡೇರಿಸಲು ಅವಕಾಶ ಮಾಡಿಕೊಡಿ. ಇಲ್ಲದಿದ್ದರೆ, ನಮ್ಮನ್ನು ವಚನಭ್ರಷ್ಟರೆಂದು ಬಿಂಬಿಸಲಾಗುತ್ತದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.