ADVERTISEMENT

ಖಾತೆ ವಿಚಾರ: ಜಿ.ಟಿ.ದೇವೇಗೌಡ, ಪುಟ್ಟರಾಜು ಮುನಿಸು

​ಪ್ರಜಾವಾಣಿ ವಾರ್ತೆ
Published 9 ಜೂನ್ 2018, 19:30 IST
Last Updated 9 ಜೂನ್ 2018, 19:30 IST
ಪುಟ್ಟರಾಜು(ಎಡಚಿತ್ರ) ಮತ್ತು ಜಿ.ಟಿ.ದೇವೇಗೌಡ
ಪುಟ್ಟರಾಜು(ಎಡಚಿತ್ರ) ಮತ್ತು ಜಿ.ಟಿ.ದೇವೇಗೌಡ   

‌ಮೈಸೂರು/ಮಂಡ್ಯ: ತಮಗೆ ಹಂಚಿಕೆ ಮಾಡಿರುವ ಖಾತೆಗಳ ಬಗ್ಗೆ ಸಚಿವರಾದ ಜಿ.ಟಿ.ದೇವೇಗೌಡ ಹಾಗೂ ಸಿ.ಎಸ್‌.ಪುಟ್ಟರಾಜು ಮುನಿಸಿಕೊಂಡಿದ್ದಾರೆ.

‘ಜನರೊಂದಿಗೆ ಬೆರೆತು ಕೆಲಸ ಮಾಡಲು ಸಾಧ್ಯವಾಗುವಂತಹ ಖಾತೆ ಬಯಸಿದ್ದೆ. ಕಂದಾಯ ಅಥವಾ ಸಾರಿಗೆ ಖಾತೆ ಸಿಗಬಹುದು ಅಂದುಕೊಂಡಿದ್ದೆ. ಕಾಲೇಜು ಮೆಟ್ಟಿಲೇರದ ನನಗೆ ಉನ್ನತ ಶಿಕ್ಷಣ ಖಾತೆ ನೀಡಿದ್ದಾರೆ’ ಎಂದು ದೇವೇಗೌಡರು ಬೇಸರ ವ್ಯಕ್ತಪಡಿಸಿದ್ದಾರೆ.

ಸರ್ಕಾರಿ ಕಾರನ್ನು ಬೆಂಗಳೂರಿನಲ್ಲಿಯೇ ಬಿಟ್ಟು ಮೈಸೂರಿಗೆ ಬಂದಿರುವ ಅವರು, ಯಾರ ಕೈಗೂ ಸಿಗದೆ ಅಜ್ಞಾತ ಸ್ಥಳಕ್ಕೆ ತೆರಳಿದ್ದಾರೆ.

ADVERTISEMENT

ಅವರ ನಿವಾಸದ ಎದುರು ಬೆಂಬಲಿಗರು ಹಾಗೂ ಪಕ್ಷದ ಕಾರ್ಯಕರ್ತರು ಶನಿವಾರ ಪ್ರತಿಭಟನೆ ನಡೆಸಿದರು. ಅವರ ಪತ್ನಿ ಲಲಿತಾ ಹಾಗೂ ಪುತ್ರ ಜಿ.ಡಿ.ಹರೀಶ್‌ ಗೌಡ ಅವರನ್ನು ಕಾರ್ಯಕರ್ತರು ತರಾಟೆಗೆ ತೆಗೆದುಕೊಂಡರು. ‘ಯಾವುದೇ ಕಾರಣಕ್ಕೂ ಈ ಖಾತೆ ಒಪ್ಪಿಕೊಳ್ಳಬಾರದು, ಜಿ.ಟಿ.ದೇವೇಗೌಡರು ಮೌನ ವಹಿಸಬಾರದು’ ಎಂದು ಆಗ್ರಹಿಸಿದ್ದಾರೆ. ಜೆಡಿಎಸ್‌ನ ಜಿಲ್ಲಾ ಪಂಚಾಯಿತಿ ಕೆಲ ಸದಸ್ಯರು ರಾಜೀನಾಮೆ ನೀಡಲು ಮುಂದಾಗಿದ್ದಾರೆ.

‘ಮುಖ್ಯಮಂತ್ರಿ ಆಗಿದ್ದ ಸಿದ್ದರಾಮಯ್ಯ ವಿರುದ್ಧವೇ 36 ಸಾವಿರ ಮತಗಳ ಅಂತರದಿಂದ ಗೆದ್ದಿದ್ದಾರೆ. ಗ್ರಾಮೀಣ ಪ್ರದೇಶದ ಸಮಸ್ಯೆ ಬಗೆಹರಿಸಲು ಸಾಧ್ಯವಾಗುವಂಥ ಖಾತೆ ನೀಡಿದರೆ ಒಳ್ಳೆಯದು. ಈ ಕುರಿತು ಜಿ.ಟಿ.ದೇವೇಗೌಡರೊಂದಿಗೆ ಚರ್ಚಿಸಿ ವರಿಷ್ಠರನ್ನು ಭೇಟಿ ಮಾಡುತ್ತೇವೆ’ ಎಂದು ಜಿ.ಪಂ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಬೀರಿಹುಂಡಿ ಬಸವಣ್ಣ ತಿಳಿಸಿದರು.

‘ಖಾತೆ ಬದಲಾವಣೆಯ ವಿಶ್ವಾಸವಿದೆ. ಕಾಲಾವಕಾಶ ಕೊಡಿ. ವರಿಷ್ಠರಿಗೆ ತಪ್ಪು ಸಂದೇಶ ಹೋಗಬಾರದು’ ಎಂದು ಕಾರ್ಯಕರ್ತರಿಗೆ ಹರೀಶ್‌ ಮನವಿ ಮಾಡಿದರು.

ಪುಟ್ಟರಾಜು ಮುನಿಸು: ಸಾರಿಗೆ ಖಾತೆ ನಿರೀಕ್ಷೆಯಲ್ಲಿದ್ದ ತಮಗೆ ಸಣ್ಣ ನೀರಾವರಿ ಖಾತೆ ನೀಡಲಾಗಿದೆ ಎಂದು ಪುಟ್ಟರಾಜು ಮುನಿಸಿಕೊಂಡಿದ್ದಾರೆ.

ಮಂಡ್ಯದಲ್ಲಿರುವ ಅವರ ನಿವಾಸದ ಮುಂದೆ ಕಾರ್ಯಕರ್ತರು ಹಾಗೂ ಬೆಂಬಲಿಗರು ಪ್ರತಿಭಟನೆ ನಡೆಸಿ, ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಒತ್ತಾಯಿಸಿದ್ದಾರೆ. ಜಿಲ್ಲಾ ಉಸ್ತುವಾರಿ ಜವಾಬ್ದಾರಿ ನೀಡಬೇಕೆಂದು ಕೆಲವರು ಬೆಂಗಳೂರು–ಮೈಸೂರು ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು.

‘ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಮೇಲೆ ನನಗೆ ಅಸಮಾಧಾನವಿಲ್ಲ. ಸಣ್ಣ ನೀರಾವರಿ ಖಾತೆ ನೀಡಿರುವುದಕ್ಕೆ ಬೆಂಬಲಿಗರು ಬೇಸರಗೊಂಡಿದ್ದಾರೆ. ಸಚಿವ ಸ್ಥಾನ ತ್ಯಜಿಸುವಂತೆ ಒತ್ತಾಯ ಮಾಡುತ್ತಿದ್ದಾರೆ. ಈಗ ಅವರನ್ನು ಸಮಾಧಾನ ಮಾಡಿದ್ದೇನೆ’ ಎಂದು ಮೇಲುಕೋಟೆ ಶಾಸಕರೂ ಆಗಿರುವ ಪುಟ್ಟರಾಜು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನವನ್ನೂ ನಾನು ಕೇಳಿಲ್ಲ. ಮದ್ದೂರು ಶಾಸಕ ಡಿ.ಸಿ.ತಮ್ಮಣ್ಣ ಅವರಿಗೆ ಸಾರಿಗೆ ಸಚಿವ ಸ್ಥಾನ ನೀಡಿರುವುದಕ್ಕೂ ನನಗೆ ಅಸಮಾಧಾನವಿಲ್ಲ‍’ ಎಂದರು.

‘ಸಚಿವನಾದ ನಂತರ ನನ್ನ ಮನೆ ದೇವರು ತ್ರಿಪುರಸುಂದರಿ ಅಮ್ಮನವರಿಗೆ ಪೂಜೆ ಸಲ್ಲಿಸಲು ಮೂಗೂರು ಗ್ರಾಮಕ್ಕೆ ಬಂದಿದ್ದೇನೆ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಬೇಕು ಎಂಬುದು ನಮ್ಮೆಲ್ಲರ ಉದ್ದೇಶವಾಗಿತ್ತು. ಅದರಂತೆ ಮುಖ್ಯಮಂತ್ರಿಯಾಗಿದ್ದಾರೆ. ಸಣ್ಣ ನೀರಾವರಿ ಖಾತೆ ನೀಡಿರುವುದಕ್ಕೆ ನನಗೆ ಬೇಸರವಿಲ್ಲ. ನಾನು ಸಚಿವ ಸ್ಥಾನ ನೀಡುವಂತೆ ಮನವಿ ಮಾಡಿರಲಿಲ್ಲ. ಆದರೂ ಸ್ಥಾನ ನೀಡಿದ್ದಾರೆ. ಸಣ್ಣದು, ದೊಡ್ಡದು ಎಂದು ತಾರತಮ್ಯ ಮಾಡುವುದಿಲ್ಲ. ನಾನು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ಎಲ್ಲೂ ಹೇಳಿಲ್ಲ’ ಎಂದು ಸ್ಪಷ್ಟಪಡಿಸಿದರು.

‘ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನವನ್ನೂ ನಾನು ಕೇಳಿಲ್ಲ. ಮದ್ದೂರು ಶಾಸಕ ಡಿ.ಸಿ.ತಮ್ಮಣ್ಣ ಅವರಿಗೆ ಸಾರಿಗೆ ಸಚಿವ ಸ್ಥಾನ ನೀಡಿರುವುದಕ್ಕೂ ನನಗೆ ಅಸಮಾಧಾನವಿಲ್ಲ. ಪಕ್ಷ ನೀಡಿರುವ ಹೊಣೆಯನ್ನು ಜವಾಬ್ದಾರಿಯಿಂದ ನಿರ್ವಹಣೆ ಮಾಡುತ್ತೇನೆ. ಶಾಂತಿಯಿಂದ ಇರುವಂತೆ ನನ್ನ ಬೆಂಬಲಿಗರಿಗೆ ಸೂಚನೆ ನೀಡಿದ್ದೇನೆ. ಶಾಸಕನಾಗಿದ್ದುಕೊಂಡೇ ಜನರ ಸೇವೆ ಮಾಡಬಹುದು’ ಎಂದು ಹೇಳಿದರು.

ಅಂತರ ಕಾಯ್ದುಕೊಂಡಿಲ್ಲ : ‘ನಾನೆಲ್ಲೂ ಅಜ್ಞಾತ ಸ್ಥಳಕ್ಕೆ ಹೋಗಿಲ್ಲ. ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಂದ ಅಂತರ ಕಾಯ್ದುಕೊಳ್ಳುವ ಪ್ರಶ್ನೆಯೇ ಇಲ್ಲ. ಅವರು ಮೈಸೂರಿಗೆ ಬರುತ್ತಾರೆ, ಹೋಗಿ ಭೇಟಿ ಮಾಡುತ್ತೇನೆ’ ಎಂದು ಹೇಳಿದರು.
*
ಹೆಚ್ಚುವರಿ ಖಾತೆ ಭರವಸೆ?
ಮಂಡ್ಯ: ಪುಟ್ಟರಾಜು ಅವರ ಅಸಮಾಧಾನ ತಗ್ಗಿಸಲು ಅವರಿಗೆ ಇನ್ನೊಂದು ಹೆಚ್ಚುವರಿ ಖಾತೆ ನೀಡಲು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ನಿರ್ಧರಿಸಿದ್ದಾರೆ. ಜೊತೆಗೆ ಜಿಲ್ಲಾ ಉಸ್ತುವಾರಿಯನ್ನೂ ವಹಿಸಲಿದ್ದಾರೆ ಎಂದು ಜೆಡಿಎಸ್‌ ಮೂಲಗಳು ತಿಳಿಸಿವೆ.

‘ಸಿ.ಎಸ್‌.ಪುಟ್ಟರಾಜು ಅವರಿಗೆ ಬೇಸರವಾಗಿರುವುದು ನಿಜ. ಆದರೆ ಅವರು ರಾಜೀನಾಮೆ ನೀಡುವ ನಿರ್ಧಾರ ಕೈಗೊಂಡಿಲ್ಲ. ಕೆಲಸ ಮಾಡಲು ಸಾಧ್ಯತೆ ಇರುವ ಇನ್ನೊಂದು ಹೆಚ್ಚುವರಿ ಖಾತೆ ನೀಡಿದರೆ ಎಲ್ಲವೂ ಸರಿಯಾಗುತ್ತದೆ’ ಎಂದು ಜೆಡಿಎಸ್‌ ಮುಖಂಡ ಡಾ.ಎಚ್‌.ಕೃಷ್ಣ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.