ADVERTISEMENT

‘ಗದ್ದಲ ಮಾಡುವುದಾದರೆ ಕಬ್ಬನ್‌ ಪಾರ್ಕ್‌ಗೆ ಹೋಗಿ’

​ಪ್ರಜಾವಾಣಿ ವಾರ್ತೆ
Published 30 ಮೇ 2018, 19:30 IST
Last Updated 30 ಮೇ 2018, 19:30 IST
ಪರಸ್ಪರ ಮಾತಿನ ಚಕಮಕಿಯಲ್ಲಿ ತೊಡಗಿರುವ ರೈತ ಸಂಘಟನೆಗಳ ಪ್ರತಿನಿಧಿಗಳು –ಪ್ರಜಾವಾಣಿ ಚಿತ್ರ
ಪರಸ್ಪರ ಮಾತಿನ ಚಕಮಕಿಯಲ್ಲಿ ತೊಡಗಿರುವ ರೈತ ಸಂಘಟನೆಗಳ ಪ್ರತಿನಿಧಿಗಳು –ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಕಿತಾಪತಿ ಮಾಡಲು ಬಂದಿದ್ದೀರಾ. ನಿಮ್ಮ ರಾಜಕೀಯ ಹೊರಗೆ ಮಾಡಿಕೊಳ್ಳಿ. ರೈತರ ಬಗ್ಗೆ ನನಗಿರುವ ಕಳಕಳಿಯನ್ನು ಅರ್ಥ ಮಾಡಿಕೊಳ್ಳಿ’.

ಈ ರೀತಿ ರೈತರ ಮೇಲೆ ಪ್ರೀತಿ ಮತ್ತು ಮುನಿಸಿನಿಂದ ಗದರಿದ್ದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ.

ವಿಧಾನಸೌಧದಲ್ಲಿ ಬುಧವಾರ ನಡೆದ ರೈತರ ಸಾಲ ಮನ್ನಾ ಕುರಿತ ಸಭೆಯಲ್ಲಿ ರೈತ ಮುಖಂಡರು ಪರಸ್ಪರ ಆರೋಪ– ಪ್ರತ್ಯಾರೋಪದಲ್ಲಿ ತೊಡಗಿದಾಗ ಕುಮಾರಸ್ವಾಮಿ ಎರಡು ಮೂರು ಬಾರಿ ಮಧ್ಯ ಪ್ರವೇಶಿಸಿ ಗದರಿ ಸುಮ್ಮನಾಗಿಸಿದರು.

ADVERTISEMENT

ಸಮ್ಮೇಳನ ಸಭಾಂಗಣವು ರೈತ ಪ್ರತಿನಿಧಿಗಳಿಂದ ತುಂಬಿ ತುಳುಕುತ್ತಿತ್ತು. ಯಾವುದೇ ಒಬ್ಬ ರೈತ ಮುಖಂಡ ತನ್ನ ವಿಚಾರ ಮಂಡಿಸಲು ಎದ್ದು ನಿಂತಾಗ ಬೇರೆಯವರು ಅದಕ್ಕೆ ಅಡ್ಡಿ ಪಡಿಸುತ್ತಿದ್ದರು. ಗದ್ದಲ ತಾರಕಕ್ಕೇರುತ್ತಿತ್ತು. ಯಾರೂ ನಿಯಂತ್ರಣಕ್ಕೆ ತರಲು ಸಾಧ್ಯವಾಗದಿದ್ದಾಗ ಸ್ವತಃ ಕುಮಾರಸ್ವಾಮಿ ಕೆಲ ಕಾಲ ತಲೆ ಮೇಲೆ ಕೈಹೊತ್ತು ಕುಳಿತರು.

ಬಳಿಕ ಅವರೇ ಎದ್ದು ನಿಂತು, ‘ನಿಮ್ಮಲ್ಲಿ ತಾಳ್ಮೆ ಇಲ್ಲದಿದ್ದರೆ ಹೇಗೆ. ಇಲ್ಲಿಂದ ರಾಜ್ಯದ ಜನರಿಗೆ ಯಾವ ಸಂದೇಶ ಹೋಗುತ್ತದೆ. ಅರ್ಧ ಗಂಟೆ ತಾಳ್ಮೆಯಿಂದ ಕುಳಿತುಕೊಳ್ಳಲು ಆಗದಿದ್ದರೆ ಈ ಸಭೆ ಕರೆದಿರುವ ಉದ್ದೇಶ ಈಡೇರುತ್ತದೆಯೇ. ಗದ್ದಲ ಮಾಡುವುದಿದ್ದರೆ ಕಬ್ಬನ್‌ ಪಾರ್ಕ್‌ಗೆ ಹೋಗಿ. ನಾನು ಇಲ್ಲಿ ನಾಡಿನ ಸೇವಕನಾಗಿ ಕುಳಿತುಕೊಂಡಿದ್ದೇನೆ’ ಎಂದು ಹೇಳಿದಾಗ ಸಭೆಯಲ್ಲಿ ಕೆಲ ಸಮಯ ಮೌನ ನೆಲೆಸಿತು.

‘ನಮ್ಮದು ಹೊಸ ಸರ್ಕಾರ, ಸಣ್ಣ ರೈತರನ್ನು ಉಳಿಸಲು ಹೊರಟಿದ್ದೇವೆ. ಪರಸ್ಪರ ಕಚ್ಚಾಡುವುದಕ್ಕೆ ಬದಲು ರಚನಾತ್ಮಕ ಮತ್ತು ಕಾರ್ಯಸಾಧುವೆನಿಸುವ ಸಲಹೆಗಳನ್ನು ನೀಡಿ. ರೈತರು ಬೀದಿಗಿಳಿದು ಹೋರಾಟ ಮಾಡುವ ಸ್ಥಿತಿಗೆ ತರುವುದಿಲ್ಲ. ರೈತರ ಬಗ್ಗೆ ಬದ್ಧತೆ ಇದೆಯೇ ಹೊರತು ಸಮಸ್ಯೆಯಿಂದ ಪಲಾಯನ ಮಾಡುವುದಿಲ್ಲ’ ಎಂದು ಕುಮಾರಸ್ವಾಮಿ ವೀರಾವೇಶದ ಮಾತುಗಳನ್ನೂ ಆಡಿದರು.

‘ಇವತ್ತು ಸಾಲ ಮನ್ನಾ ಮಾಡಿದಾರೆ. ರೈತರು ನಾಳೆ ಹೋಗಿ ಸಾಲ ಪಡೆಯುವುದಿಲ್ಲ ಎಂದು ಖಾತ್ರಿ ನೀಡಲು ಆಗುವುದಿಲ್ಲ. ರೈತರು ಸಾಲ ಪಡೆಯದ ಹಾಗೆ ಒಂದು ವ್ಯವಸ್ಥೆ ನಿರ್ಮಾಣ ಮಾಡಬೇಕು ಎಂಬುದೇ ನನ್ನ ಉದ್ದೇಶ’ ಎಂದೂ ಅವರು ಹೇಳಿದರು.

‘ಕೆಲವರು ಸಹಕಾರ ಬ್ಯಾಂಕ್‌ಗಳಲ್ಲಿ ಶೂನ್ಯ ಬಡ್ಡಿ ದರದಲ್ಲಿ ಸಾಲ ಪಡೆದು ಆ ಹಣವನ್ನು ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಠೇವಣಿ ಇಟ್ಟು ಬಡ್ಡಿ ಪಡೆಯುತ್ತಿದ್ದಾರೆ ಎಂಬ ದೂರುಗಳೂ ಇವೆ. ಒಟ್ಟಿನಲ್ಲಿ ನಾನೊಂದು ದೊಡ್ಡ ಸಾಹಸಕ್ಕೆ ಕೈ ಹಾಕಿದ್ದೇನೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅನುಭವದ ಸಲಹೆ
ಯನ್ನೂ ಪಡೆಯುತ್ತೇನೆ’ ಎಂದರು.

2005 ರಲ್ಲಿ ಇಡೀ ದೇಶದಲ್ಲಿ ರೈತರು ಪಡೆಯುತ್ತಿದ್ದ ಸಾಲದ ಮೊತ್ತ ₹1 ಲಕ್ಷ ಕೋಟಿ. 2017 ಕ್ಕೆ ಅದು ₹10 ಲಕ್ಷ ಕೋಟಿಗೆ ಏರಿಕೆ ಆಗಿದೆ ಎಂದರು.

ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಅಧ್ಯಕ್ಷ ಚಾಮರಸ ಮಾಲೀ ಪಾಟೀಲ್, ಕರ್ನಾಟಕ ಪ್ರಾಂತ ರೈತ ಸಂಘದ ಅಧ್ಯಕ್ಷ ಮಾರುತಿ ಮಾನ್ಪಡೆ, ರೈತ ಮುಖಂಡ  ಕೋಡಿಹಳ್ಳಿ ಚಂದ್ರಶೇಖರ್, ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರರ ಸಂಘದ ಮುಖಂಡ  ಕುರುಬೂರು ಶಾಂತಕುಮಾರ್ ಸೇರಿದಂತೆ ವಿವಿಧ ರೈತ ಸಂಘಟನೆಗಳ ಮುಖಂಡರು ಹಾಗೂ ಪ್ರಗತಿಪರ ರೈತರು ಸಭೆಯಲ್ಲಿ ಹಾಜರಿದ್ದರು.                              

ರೈತ ನಾಯಕರ ಅಭಿಪ್ರಾಯಗಳು

* ರಾಜ್ಯ ರೈತರು ವಿವಿಧ ಬ್ಯಾಂಕ್‌ಗಳು ಮತ್ತು ಹಣಕಾಸು ಸಂಸ್ಥೆಗಳಲ್ಲಿ ಮಾಡಿರುವ ಸಾಲ ಮೊತ್ತ  ₹1.14 ಲಕ್ಷ ಕೋಟಿ. ರಾಜ್ಯ ಸರ್ಕಾರ ₹ 53 ಸಾವಿರ ಕೋಟಿ ಬೆಳೆ ಸಾಲ ಮನ್ನಾ ಮಾಡಬೇಕು. ಉಳಿದ ಮೊತ್ತವನ್ನು ಕೇಂದ್ರ ಸರ್ಕಾರ ಶೇ 33, ರೈತ ಶೇ 33 ಮತ್ತು ರಾಜ್ಯ ಸರ್ಕಾರ ಶೇ 33 ರಂತೆ ಭರಿಸಬೇಕು ಎಂದು ಕಿಸಾನ್‌ ಖೇತ್‌ ಮಜ್ದೂರ್‌ ಕಾಂಗ್ರೆಸ್ ಅಧ್ಯಕ್ಷ ಸಚಿನ್‌ ಮೀಗಾ ಒತ್ತಾಯಿಸಿದರು.

* ಕೆಎಂಎಫ್‌ ಮಾದರಿಯಲ್ಲಿ ಕೃಷಿ ಉತ್ಪನ್ನಗಳ ದಾಸ್ತಾನು ಮತ್ತು ಮಾರಾಟದ ವ್ಯವಸ್ಥೆ ಮಾಡಬೇಕು. ಅದಕ್ಕಾಗಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ  ಶೈತ್ಯಾಗಾರ ಸ್ಥಾಪಿಸಬೇಕು ಎಂದು ಸುನಂದಾ ಜಯರಾಂ ಸಲಹೆ ನೀಡಿದರು.

‘ಸಾಲ ಮನ್ನಾ ಹೆಸರಲ್ಲಿ ದುಡ್ಡೆತ್ತಿದರು’

ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್‌ ಮಾತನಾಡುವಾಗ ಮಧ್ಯ ಪ್ರವೇಶಿಸಿದ ರೈತರೊಬ್ಬರು, ‘ರೈತರ ಸಾಲ ಮನ್ನಾ ಮಾಡಿಸುವ ಹೆಸರಿನಲ್ಲಿ ನಮ್ಮಿಂದ ಹಣ ಸಂಗ್ರಹಿಸಿ ದುರಪಯೋಗ ಮಾಡಿಕೊಂಡಿದ್ದಾರೆ. ಇವರಿಗೆ ಮಾತನಾಡಲು ಹಕ್ಕಿಲ್ಲ’ ಎಂದರು.

ಆದರೆ, ಇವರ ಆಕ್ರೋಶ ನುಡಿಗಳು ಕೋಡಿಹಳ್ಳಿ ಚಂದ್ರಶೇಖರ್‌ ಕಿವಿಗೆ ಬೀಳಲಿಲ್ಲ. ಬಳಿಕ ಅವರು ಮಾಧ್ಯಮಗಳ ಮುಂದೆ ಆ ರೈತ ಅಹವಾಲು ತೋಡಿಕೊಂಡರು.

ಪ್ರತಿ ಹಳ್ಳಿಗೂ ನದಿಗಳಿಂದ ಕುಡಿಯುವ ನೀರು!

‘ಮುಂದಿನ ದಿನಗಳಲ್ಲಿ ಪ್ರತಿ ಹಳ್ಳಿಗೂ ನದಿಗಳ ಮೂಲಕ ಶುದ್ಧ ಕುಡಿಯುವ ನೀರು ಒದಗಿಸುವ ಕನಸು ನನ್ನದು. ಈ ಯೋಜನೆಯ ಅನುಷ್ಠಾನಕ್ಕೆ ನಲವತ್ತು ಸಾವಿರ ಕೋಟಿ ರೂ ಅಗತ್ಯವಿದೆ ಎಂದು ಕುಮಾರಸ್ವಾಮಿ ತಿಳಿಸಿದರು.

ಬಡ್ಡಿ-ರಹಿತ ಸಾಲ ದೊರೆತಲ್ಲಿ ತಮ್ಮ ಕನಸಿನ ಯೋಜನೆಯ ಅನುಷ್ಠಾನ ಮತ್ತಷ್ಟು ಸುಗಮವಾಗಲಿದೆ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.