ADVERTISEMENT

ಚುನಾವಣೆಯಲ್ಲಿ ಸಣ್ಣ ಪಕ್ಷಗಳ ಹವಾ!

ಕಳೆದ ಬಾರಿ ರಾಷ್ಟ್ರೀಯ ಪಕ್ಷಗಳ ವಿರುದ್ಧ ಕಣಕ್ಕಿಳಿದಿದ್ದ ಪುಡಿ ಪಕ್ಷಗಳ ಸಂಖ್ಯೆ 46ಕ್ಕೂ ಅಧಿಕ

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2018, 17:17 IST
Last Updated 26 ಏಪ್ರಿಲ್ 2018, 17:17 IST
ಚುನಾವಣೆಯಲ್ಲಿ ಸಣ್ಣ ಪಕ್ಷಗಳ ಹವಾ!
ಚುನಾವಣೆಯಲ್ಲಿ ಸಣ್ಣ ಪಕ್ಷಗಳ ಹವಾ!   

ಬೆಂಗಳೂರು: ಆನೆಗಳ ಗುಂಪಿನಲ್ಲಿ ಆಡುಗಳು ಮತ್ತು ಇರುವೆಗಳ ಅಸ್ತಿತ್ವ ಕಾಣಲು ಹೇಗೆ ಸಾಧ್ಯವಿಲ್ಲವೋ, ಅದೇ ರೀತಿ ವಿಧಾನಸಭೆ ಮತ್ತು ಲೋಕಸಭಾ ಚುನಾವಣೆಗಳಲ್ಲಿ ದೊಡ್ಡ ರಾಜಕೀಯ ಪಕ್ಷಗಳ ಅಬ್ಬರದ ನಡುವೆ ಸಣ್ಣ ಪಕ್ಷಗಳು ಕಳೆದು ಹೋಗುವುದು ಸಾಮಾನ್ಯ!

ರಾಜ್ಯದಲ್ಲಿ 2013ರ ಚುನಾವಣೆಯಲ್ಲಿ ಸ್ಪರ್ಧಿಸಿದ್ದವುಗಳಲ್ಲಿ ರಾಜ್ಯ ಮತ್ತು ರಾಷ್ಟ್ರ ಮಟ್ಟದ ಏಳು ಪ್ರಮುಖ ರಾಜಕೀಯ ಪಕ್ಷಗಳ ಜತೆಗೆ, ಸಣ್ಣ ಪಕ್ಷಗಳ ಸಂಖ್ಯೆಯೇ 46. ಈ ಪಕ್ಷಗಳು ನೋಂದಣಿಯಾಗಿದ್ದ ಪಕ್ಷಗಳಾದರೂ ಮಾನ್ಯತೆ ಇರಲಿಲ್ಲ. ಅಲ್ಲದೆ, 1,217 ಪಕ್ಷೇತರರು ಸ್ಪರ್ಧಿಸಿದ್ದರು.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ದೊಡ್ಡ ರಾಷ್ಟ್ರೀಯ ಪಕ್ಷಗಳಲ್ಲದೆ, ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳಲು ಸಾಧ್ಯವಾಗಿದ್ದು, ಯಡಿಯೂರಪ್ಪ ನೇತೃತ್ವದ ಕರ್ನಾಟಕ ಜನತಾ ಪಕ್ಷ (6), ಶ್ರೀರಾಮುಲು ನೇತೃತ್ವದ ಬಡವರ ಶ್ರಮಿಕರ ರೈತರ ಕಾಂಗ್ರೆಸ್‌ ಪಕ್ಷ (4), ಕನ್ನಡ ಮಕ್ಕಳ ಪಕ್ಷ (1), ಸಮಾಜವಾದಿ ಪಕ್ಷ (1) ಮತ್ತು ಸರ್ವೋದಯ ಕರ್ನಾಟಕ ಪಕ್ಷಕ್ಕೆ (1) ಮಾತ್ರ. ಉಳಿದ ಸಣ್ಣ ಪಕ್ಷಗಳಲ್ಲಿ ಯಾವುದಕ್ಕೂ ಠೇವಣಿ ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ.

ADVERTISEMENT

ಅಚ್ಚರಿ ಎಂದರೆ, ಇಂತಹ ಕೆಲವು ಪಕ್ಷಗಳ ಅಭ್ಯರ್ಥಿಗಳು 500ಕ್ಕಿಂತಲೂ ಕಡಿಮೆ ಮತಗಳನ್ನು ಪಡೆದಿದ್ದರು. ಅದರಲ್ಲಿ ಜೈ ವಿಜಯಭಾರತಿ ಪಕ್ಷದ ಏಕೈಕ ಅಭ್ಯರ್ಥಿ ಪಡೆದ ಮತ 96. ಮಹಾರಾಷ್ಟ್ರದ ಬಲಿಷ್ಠ ಪಕ್ಷ ಶಿವಸೇನೆ 256 ಮತಗಳನ್ನು ಪಡೆದಿತ್ತು. ಸಿಪಿಐ 8 ಕ್ಷೇತ್ರದಲ್ಲಿ ಸ್ಪರ್ಧಿಸಿ 25,450 ಮತ
ಗಳನ್ನು ಪಡೆದಿತ್ತು. ಸಿಪಿಎಂ 16 ಕ್ಷೇತ್ರಗಳಲ್ಲಿ ಸ್ಪರ್ಧಿಸಿ 68,775 ಮತಗಳನ್ನು ಗಳಿಸಿತ್ತು. ಎನ್‌ಸಿಪಿ 24 ಕ್ಷೇತ್ರಗಳಲ್ಲಿ ಸ್ಪರ್ಧಿಸಿ 18,886 ಮತಗಳನ್ನು ಗಳಿಸಿತ್ತು.

ಈ ಬಾರಿ ಹೊಸ ಪಕ್ಷಗಳು: ಪ್ರಸಕ್ತ ವಿಧಾನಸಭಾ ಚುನಾವಣೆಯಲ್ಲಿ ಆಮ್‌ ಆದ್ಮಿ ಪಕ್ಷ, ಕರ್ನಾಟಕ ಪ್ರಜಾಕೀಯ ಜನತಾ ಪಕ್ಷ, ಮಹಿಳಾ ಎಂಪವರ್‌
ಮೆಂಟ್‌ ಪಾರ್ಟಿ (ಎಂಇಪಿ) ಹೊಸದಾಗಿ ಸೇರ್ಪಡೆಗೊಂಡಿವೆ. ಕಳೆದ ಚುನಾವಣೆಯಲ್ಲಿ ಸಕ್ರಿಯವಾಗಿದ್ದ ಕರ್ನಾಟಕ ಜನತಾ ಪಕ್ಷ, ಬಡವರ ಶ್ರಮಿಕರ ರೈತರ ಕಾಂಗ್ರೆಸ್‌ ಪಕ್ಷ, ಕನ್ನಡ ಮಕ್ಕಳ ಪಕ್ಷ ಈ ಬಾರಿ ನೇಪಥ್ಯಕ್ಕೆ ಸರಿದಿವೆ.

ಮಾಜಿ ಡಿವೈಎಸ್‌ಪಿ ಅನುಪಮಾ ಶೆಣೈ ತಮ್ಮದೇ ಆದ ಕರ್ನಾಟಕ ಜನಶಕ್ತಿ ಕಾಂಗ್ರೆಸ್ ಸ್ಥಾಪಿಸಿದ್ದು, ಕಾಪು ಕ್ಷೇತ್ರದಿಂದ ಕಣಕ್ಕೆ ಇಳಿದಿದ್ದಾರೆ.

ಚಿತ್ರನಟ ಉಪೇಂದ್ರ ನೇತೃತ್ವದಲ್ಲಿ ಆರಂಭವಾದ ಕರ್ನಾಟಕ ಪ್ರಜಾಕೀಯ ಜನತಾ ಪಕ್ಷ ಆರಂಭದಲ್ಲಿ ಸದ್ದುಗದ್ದಲ ಉಂಟು ಮಾಡಿತ್ತು. ಬಳಿಕ ಉಪೇಂದ್ರ ಆ ಪಕ್ಷದಿಂದಲೇ ಹೊರಬಂದು, ಹೊಸದಾಗಿ ತಾವು ಹುಟ್ಟುಹಾಕಲಿರುವ ‘ಉತ್ತಮ ಪ್ರಜಾಕೀಯ ಪಕ್ಷ’ದ ನೋಂದಣಿಗೆ ಪ್ರಯತ್ನಿಸುತ್ತಿರುವುದಾಗಿ ತಿಳಿಸಿ
ದ್ದಾರೆ. ಎಂಇಪಿ ಹೆಚ್ಚಿನ ಸಂಖ್ಯೆಯಲ್ಲಿ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದೆ.

***

2013ರಲ್ಲಿ ಪಕ್ಷಗಳ ಮತ ಗಳಿಕೆ:

#ರಾಷ್ಟ್ರೀಯ ಪಕ್ಷಗಳು

* ಒಟ್ಟು ಅಭ್ಯರ್ಥಿಗಳ ಸ್ಪರ್ಧೆ 670

* ಗೆಲುವು 162

* ಠೇವಣಿ ನಷ್ಟ 354

* ಸಿಕ್ಕ ಮತ 1,81,07,131

* ಮತ ಪ್ರಮಾಣ– ಶೇ 57.75

(ಪಕ್ಷಗಳು– ಬಿಜೆಪಿ, ಬಿಎಸ್‌ಪಿ, ಸಿಪಿಐ, ಸಿಪಿಎಂ, ಕಾಂಗ್ರೆಸ್, ಎಸ್‌ಪಿ ಮತ್ತು ಎನ್‌ಸಿಪಿ)

***

ರಾಜ್ಯ ಮಟ್ಟದ ಪಕ್ಷ:

ಜೆಡಿಎಸ್‌

* ಸ್ಪರ್ಧಿಸಿದ ಅಭ್ಯರ್ಥಿಗಳು– 222

* ಗೆಲುವು– 40

* ಠೇವಣಿ ನಷ್ಟ– 110

* ಸಿಕ್ಕ ಮತ– 63,29,158

* ಮತ ಪ್ರಮಾಣ– ಶೇ 20.9

–––––––––––––––

ಅನ್ಯರಾಜ್ಯಗಳ ಪಕ್ಷಗಳು

* ಸ್ಪರ್ಧಿಸಿದ ಅಭ್ಯರ್ಥಿಗಳು– 169

* ಗೆಲುವು– 1

* ಠೇವಣಿ ನಷ್ಟ– 168

* ಸಿಕ್ಕ ಮತ– 1,94,519

* ಮತ ಪ್ರಮಾಣ– ಶೇ 0.62

(ಎಡಿಎಂಕೆ, ಐಯುಎಂಎಲ್‌, ಜೆಡಿಯು, ಎಲ್‌ಜೆಪಿ, ಶಿವಸೇನೆ, ಎಸ್‌ಪಿ)

––––––––––

ನೋಂದಾಯಿತ (ಮಾನ್ಯತೆ ಇಲ್ಲದ) ಪಕ್ಷಗಳು:

* ಸ್ಪರ್ಧಿಸಿದ ಅಭ್ಯರ್ಥಿಗಳು– 670

* ಗೆಲುವು– 12

* ಠೇವಣಿ ನಷ್ಟ– 597

* ಸಿಕ್ಕ ಮತ– 44,08,260

*ಮತ ಪ್ರಮಾಣ– ಶೇ.14.06

(12 ಸ್ಥಾನಗಳಲ್ಲಿ ಕೆಜೆಪಿ, ಬಿಎಸ್‌ಆರ್‌, ಕೆಎಂಪಿ, ಸರ್ವೋದಯ ಪಕ್ಷ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದರು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.