ADVERTISEMENT

ಚುನಾವಣೆ ಪ್ರಚಾರಕ್ಕೆ ‘ಧರ್ಮಾಸ್ತ್ರ’ ಬಳಸಲ್ಲ

ಡಿ.ಬಿ, ನಾಗರಾಜ
Published 25 ಏಪ್ರಿಲ್ 2018, 19:30 IST
Last Updated 25 ಏಪ್ರಿಲ್ 2018, 19:30 IST
ಚುನಾವಣೆ ಪ್ರಚಾರಕ್ಕೆ ‘ಧರ್ಮಾಸ್ತ್ರ’ ಬಳಸಲ್ಲ
ಚುನಾವಣೆ ಪ್ರಚಾರಕ್ಕೆ ‘ಧರ್ಮಾಸ್ತ್ರ’ ಬಳಸಲ್ಲ   

ಲಿಂಗಾಯತ ಪ್ರತ್ಯೇಕ ಧರ್ಮದ ಹಕ್ಕೊತ್ತಾಯ ಚಳವಳಿಯ ನಾಯಕತ್ವ ವಹಿಸಿಕೊಂಡವರಲ್ಲಿ ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ ಅಗ್ರೇಸರರು. ಈ ಹೋರಾಟದಿಂದ ತಮ್ಮ ವರ್ಚಸ್ಸನ್ನು ರಾಜ್ಯದ ಎಲ್ಲೆಡೆ ವೃದ್ಧಿಸಿಕೊಂಡವರು.

ಲಿಂಗಾಯತ ಧರ್ಮಕ್ಕೆ ಸಂಬಂಧಿಸಿದ ಹೋರಾಟದಿಂದ ಕಾಂಗ್ರೆಸ್‌ ಮೇಲಾಗುವ ಪರಿಣಾಮಗಳ ಕುರಿತು ‘ಪ್ರಜಾವಾಣಿ’ಗೆ ನೀಡಿದ ಸಂದರ್ಶನದಲ್ಲಿ ಪಾಟೀಲ ವಿವರವಾಗಿ ಮಾತನಾಡಿದ್ದಾರೆ.

l ಧರ್ಮ ಒಡೆದವರು ಎಂಬ ಆಪಾದನೆ ನಿಮ್ಮ ಮೇಲಿದೆಯಲ್ಲಾ? ಇದನ್ನು ಹೇಗೆ ಸಮರ್ಥಿಸಿಕೊಳ್ಳುವಿರಿ?

ADVERTISEMENT

ಇದೊಂದು ರಾಜಕೀಯ ಪ್ರೇರಿತ ಟೀಕೆ. 2013ರಲ್ಲಿ ವೀರಶೈವ ಲಿಂಗಾಯತ ಧರ್ಮಕ್ಕಾಗಿ ನಾನು, ಶಾಮನೂರು ಶಿವಶಂಕರಪ್ಪ, ಬಿಜೆಪಿ ಮುಖಂಡರಾದ ಬಿ.ಎಸ್.ಯಡಿಯೂರಪ್ಪ, ಜಗದೀಶ ಶೆಟ್ಟರ್, ಬಸವರಾಜ ಬೊಮ್ಮಾಯಿ ಸೇರಿದಂತೆ ಇನ್ನೂ ಅನೇಕರು ಸಹಿ ಹಾಕಿದ್ದೆವು. ಆಗ ಈ ಪ್ರಶ್ನೆ ಏಕೆ ಕೇಳಿ ಬರಲಿಲ್ಲ?

ದೇಶದಲ್ಲಿ ನೆಲೆಸಿರುವವರೆಲ್ಲ ಹಿಂದೂಗಳು. ಜೈನರು, ಬೌದ್ಧರು, ಸಿಖ್ಖರನ್ನೊಳಗೊಂಡಂತೆ ಎಲ್ಲರೂ ಹಿಂದೂಗಳ ಭಾಗವೇ ಆಗಿದ್ದಾರೆ. ಸಾಕಷ್ಟು ಆಚರಣೆಗಳನ್ನು ಅನುಸರಿಸುತ್ತಿದ್ದಾರೆ. ನಾವೂ ಅಷ್ಟೆ. ಹಿಂದೂ ವಿರೋಧಿಗಳಲ್ಲ. ಆಚರಣೆ ವಿರೋಧಿಸುವುದಿಲ್ಲ. ಅದು ಅವರವರ ಭಾವಕ್ಕೆ ಬಿಟ್ಟಿದ್ದು.

‘ಲಿಂಗಾಯತ’ ಪ್ರತ್ಯೇಕ ಧರ್ಮವಾಗಿಯೇ ಗುರುತಿಸಿಕೊಂಡಿತ್ತು. ಯಾರೋ ಒಬ್ಬರ ತಪ್ಪಿನಿಂದ ತನ್ನ ಅಸ್ತಿತ್ವ ಕಳೆದುಕೊಂಡಿದೆ. ನಮ್ಮ ಅಸ್ಮಿತೆಗಾಗಿ ಈ ಹೋರಾಟ ನಡೆದಿದೆ. ಚುನಾವಣೆಯಲ್ಲಿ ಇದು ನಮ್ಮ ಅಸ್ತ್ರವಲ್ಲ. ಬಳಿಕವೂ ಚಳವಳಿ ಮುಂದುವರಿಯಲಿದೆ.

l ಚುನಾವಣೆಯಲ್ಲಿ ‘ಧರ್ಮಾಸ್ತ್ರ’ ಬಳಸಿಕೊಳ್ಳುತ್ತೀರಾ?

ಐದು ವರ್ಷ ನಡೆಸಿದ ಅಭಿವೃದ್ಧಿ ಕೆಲಸಗಳ ಮೇಲೆ ಮತ ಕೇಳುತ್ತೇವೆ. ಯಾವುದೇ ಕಾರಣಕ್ಕೂ ಧರ್ಮವನ್ನು ಇಲ್ಲಿ ಬೆರೆಸುವುದಿಲ್ಲ. ಆ ವಿಷಯದಲ್ಲಿ ನಾವು ಮೌನವಾಗಿದ್ದೇವೆ. ಇದೀಗ ಬಿಜೆಪಿಯವರೇ ಇದನ್ನು ಪ್ರಸ್ತಾಪಿಸುತ್ತಿದ್ದಾರೆ. ಇದು ಕಾಂಗ್ರೆಸ್‌ ಪಾಲಿಗೆ ವರವಾಗಲಿದೆ. ಚುನಾವಣಾ ಸಂದರ್ಭವಾಗಿದ್ದರಿಂದ ಬಸವರಾಜ ಹೊರಟ್ಟಿ ನಮ್ಮ ವಿರುದ್ಧ ಹೇಳಿದ್ದಾರಷ್ಟೆ.

l ಪದೇ ಪದೇ ಐ.ಟಿ ದಾಳಿ ಪ್ರಸ್ತಾಪಿಸಿದ್ದು ರಕ್ಷಣಾತ್ಮಕ ತಂತ್ರವೇ?

ಅಧಿಕಾರಿಗಳು, ಬಿಜೆಪಿ ಮುಖಂಡರು ನೀಡಿದ ಖಚಿತ ಮಾಹಿತಿ ಮೇರೆಗೆ ನಾನು ಈ ವಿಷಯ ಪ್ರಸ್ತಾಪಿಸಿದ್ದು. ಯಾವ ರಕ್ಷಣಾತ್ಮಕ ತಂತ್ರವೂ ಇಲ್ಲ.

ಐ.ಟಿ. ದಾಳಿ ನಡೆಯುತ್ತಿತ್ತು. ಆದರೆ ಚುನಾವಣಾ ವರ್ಷದಲ್ಲಿ ದಾಳಿ ನಡೆಸಿದರೆ ಎಂ.ಬಿ.ಪಾಟೀಲ ಹೇಳಿದ್ದೇ ಸತ್ಯ ಎಂಬುದು ರಾಜ್ಯದ ಜನರಿಗೆ ತಿಳಿಯುತ್ತದೆ ಎಂದು ಸದ್ಯಕ್ಕೆ ಹಿಂದೆ ಸರಿದಿದ್ದಾರೆ. ಇದರ ಜತೆಗೆ ಎಲ್ಲೆಡೆ ಸಮುದಾಯ ತಿರುಗಿ ಬೀಳುತ್ತಿತ್ತು. ಈ ಭಯದಿಂದಲೇ ಅವರೂ ದಾಳಿ ನಡೆಸದೆ ಸುಮ್ಮನಾಗಿದ್ದಾರೆ.

l ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ನಿಮ್ಮನ್ನೇ ಟಾರ್ಗೆಟ್‌ ಮಾಡಿದ್ದು ಏಕೆ?

ಯಡಿಯೂರಪ್ಪ ರಾಜಕಾರಣದ ಉತ್ತುಂಗ ಕಂಡವರು. ನಾವಿನ್ನೂ ಇದೀಗ ಪ್ರವರ್ಧಮಾನಕ್ಕೆ ಬರುತ್ತಿರುವವರು. ಎಂದೆಂದೂ ನಾನು ಅವರಿಗೆ ಸ್ಪರ್ಧಿಯಾಗಿರಲಿಲ್ಲ. ರಾಜಕೀಯ ವಿರೋಧ ಹೊರತುಪಡಿಸಿ, ಜಲಸಂಪನ್ಮೂಲ ಇಲಾಖೆಯಲ್ಲಿ ನನ್ನ ಸಾಧನೆ ನೋಡಿ ಮೆಚ್ಚುಗೆ ವ್ಯಕ್ತಪಡಿಸಬೇಕಿತ್ತು. ಅವರ ಮಕ್ಕಳಲ್ಲಿ ನನ್ನನ್ನು ಒಬ್ಬನಂತೆ ಪರಿಗಣಿಸಬೇಕಿತ್ತು. ನಮ್ಮ ಸಮುದಾಯದ ಹುಡುಗ ಬೆಳೆಯುತ್ತಿದ್ದಾನೆ ಎಂದು ಖುಷಿ ಪಡಬೇಕಿತ್ತು. ಆದರೆ, ಅವರಿಗೆ ಜೆ.ಎಚ್‌.ಪಟೇಲರಿಗಿದ್ದಂತಹ ಹೃದಯ ಶ್ರೀಮಂತಿಕೆ ಇಲ್ಲ. ನನ್ನ ಏಳ್ಗೆ ಕಂಡು ಅಸೂಯೆ ಪಟ್ಟರು. ಕೆಲವರ ಮಾತು ಕೇಳಿ ನನ್ನನ್ನು ವೈಯಕ್ತಿಕವಾಗಿ ನಿಂದಿಸಿದರು. ಭ್ರಷ್ಟಾಚಾರ ಬಹಿರಂಗಪಡಿಸುವುದಾಗಿ ಅಬ್ಬರಿಸಿದರು. ಆದರೆ ಅವರೇ ಭದ್ರಾ ಮೇಲ್ದಂಡೆ ಯೋಜನೆಗೆ ಸಂಬಂಧಿಸಿದಂತೆ ಆದಾಯ ತೆರಿಗೆ ಇಲಾಖೆಗೆ ದಂಡ ಪಾವತಿಸಿರುವುದು ನಾಚಿಕೆಗೇಡಿನ ಸಂಗತಿ.

l ಬಬಲೇಶ್ವರದಲ್ಲಿ ಜೆಡಿಎಸ್‌ ಸ್ಪರ್ಧೆಯಿಂದ ಹಿಂದೆ ಸರಿಯುವಲ್ಲಿ ನಿಮ್ಮ ಕೈವಾಡವಿದೆಯಂತಲ್ಲಾ?

ನಾನಷ್ಟು ಪವರ್‌ಫುಲ್! ಕಾಂಗ್ರೆಸ್‌, ಬಿಜೆಪಿ ಮತ್ತು ಜೆಡಿಎಸ್‌ನಲ್ಲಿ ಏನೇ ನಡೆದರೂ ಎಲ್ಲದಕ್ಕೂ ಎಂ.ಬಿ.ಪಾಟೀಲನೇ ಕಾರಣ ಎಂದು ನನ್ನ ಹೆಸರು ಹೇಳಿದರೆ ನಾನೇನು ಮಾಡಲಿ?

l ನಿಮಗೆ, ಕಾಂಗ್ರೆಸ್‌ಗೆ ಏಕೆ ವೋಟು ಹಾಕಬೇಕು?

ಬಸವಾದಿ ಶರಣರ ಸಮಾನತೆ, ಸಾಮಾಜಿಕ ನ್ಯಾಯದ ಕಳಕಳಿ, ಅಂಬೇಡ್ಕರ್‌ ರಚಿಸಿದ ಸಂವಿಧಾನದ ಆಶಯಕ್ಕನುಗುಣವಾಗಿ ಐದು ವರ್ಷ ಸುಸ್ಥಿರ ಆಡಳಿತ ನೀಡಿದ್ದೇವೆ. ಹಸಿವು ಮುಕ್ತ– ಬರ ಮುಕ್ತ ರಾಜ್ಯ ನಿರ್ಮಿಸಲು ಯತ್ನಿಸಿದ್ದೇವೆ. ಇದರ ಜತೆಗೆ ದೇಶದ ಭದ್ರತೆ, ಸೌಹಾರ್ದಕ್ಕಾಗಿ ಕಾಂಗ್ರೆಸ್‌ಗೆ ಮತ ನೀಡಬೇಕು.

ಬಿಜೆಪಿಯವರು ಅಧಿಕಾರದಲ್ಲಿದ್ದಾಗ ಮುರುಕು ಸೈಕಲ್‌, ಹರಕು ಸೀರೆ ಬಿಟ್ಟರೆ ಜನರಿಗೆ ಇನ್ನೇನು ನೀಡಿದ್ದಾರೆ? ಸಂವಿಧಾನವನ್ನೇ ಬದಲಿಸುವುದಾಗಿ ಹೇಳಿಕೆ ನೀಡಿದ ಕೇಂದ್ರ ಸಚಿವ ಅನಂತಕುಮಾರ ಹೆಗಡೆ ನಮ್ಮಲ್ಲಿದ್ದರೆ ಪಕ್ಷದಿಂದಲೇ ಉಚ್ಚಾಟಿಸುತ್ತಿ
ದ್ದೆವು. ಬಿಜೆಪಿಯವರು ಈಗಲಾದರೂ ಕನಿಷ್ಠ ಪಕ್ಷ ಸಚಿವ ಸಂಪುಟದಿಂದ ಅವರನ್ನು ಕೈಬಿಡಲಿ.

l ಐದು ವರ್ಷದಲ್ಲಿ ನಿಮ್ಮ ಸಾಧನೆ ಏನು?

ಆರೋಗ್ಯ, ಕುಟುಂಬ, ನನ್ನ ಸಂಸ್ಥೆಯ ಆಡಳಿತ ನಿರ್ಲಕ್ಷಿಸಿ, ಐದು ವರ್ಷ ಅಹೋರಾತ್ರಿ ಜಲಸಂಪನ್ಮೂಲ ಇಲಾಖೆಯ ಮುಖ್ಯಸ್ಥನಾಗಿ ದುಡಿದೆ. ಇದರ ಪರಿಣಾಮ 10– 15 ವರ್ಷದ ಅವಧಿಯಲ್ಲಿ ನಡೆಯಬೇಕಿದ್ದ ನೀರಾವರಿ ಕಾಮಗಾರಿಗಳಿಗೆ ಶರವೇಗ ಸಿಕ್ಕಿತು. ನನ್ನ ಅವಧಿಯಲ್ಲೇ ಆರಂಭಗೊಂಡು, ಪೂರ್ಣಗೊಂಡ ಯೋಜನೆಗಳು ಇವೆ.

₹ 7,000 ಕೋಟಿ ವೆಚ್ಚದಲ್ಲಿ ರಾಜ್ಯದ 3,500 ಕೆರೆಗಳನ್ನು ತುಂಬಲು 116 ಯೋಜನೆಗಳನ್ನು ಆರಂಭಿಸಿದೆ. 30 ಪೂರ್ಣಗೊಂಡಿದ್ದರೆ, 50ಕ್ಕೂ ಹೆಚ್ಚು ಯೋಜನೆಗಳ ಕಾಮಗಾರಿ ನಡೆದಿದೆ. ಉಳಿದವು ಆರಂಭಿಕ ಹಂತದಲ್ಲಿವೆ. 100 ವಿಧಾನಸಭಾ ಕ್ಷೇತ್ರ
ಗಳಲ್ಲಿ ಇದರಿಂದ ಕುಡಿಯುವ ನೀರಿನ ಬವಣೆ ನೀಗಿದೆ. ಅಂತರ್ಜಲ ಹೆಚ್ಚಳಗೊಂಡಿದೆ.

l ನೀವು ಪ್ರತಿನಿಧಿಸುವ ಬಬಲೇಶ್ವರ ಕ್ಷೇತ್ರದಲ್ಲಿ ಪಂಚಪೀಠಾಧೀಶ್ವರರು ನಿಮ್ಮ ವಿರುದ್ಧ ಚುನಾವಣಾ ಪ್ರಚಾರಕ್ಕೆ ಇಳಿದಿದ್ದಾರಂತಲ್ಲ? ಅವರಿಗೇಕೆ ಇಷ್ಟೊಂದು ರೋಷ?

ಪಂಚಪೀಠಾಧೀಶ್ವರರು ಸೇರಿದಂತೆ ವೀರಶೈವ ಪರಂಪರೆಯ ಕೆಲ ಸ್ವಾಮೀಜಿಗಳ ಜತೆ ತಾತ್ವಿಕ ಅಭಿಪ್ರಾಯ ಭೇದವಿದೆ, ವೈಚಾರಿಕ ಸಂಘರ್ಷವಿದೆ ಅಷ್ಟೆ. ಚುನಾವಣೆ ಪ್ರಕ್ರಿಯೆ ಮುಗಿದ ಬಳಿಕ, ಎಲ್ಲ ಪೂಜ್ಯರ ಜತೆ ಶಿವಯೋಗ ಮಂದಿರದಲ್ಲಿ ಒಂದು ದಿನ ದಾಖಲೆಗಳನ್ನಿಟ್ಟುಕೊಂಡು ಮಾತನಾಡುವೆ. ಅವರ ಮನವೊಲಿಸುವೆ.

ತಮ್ಮ ಅಸ್ತಿತ್ವಕ್ಕೆ ಅಪಾಯವಿದೆ ಎಂದು ತಪ್ಪು ಭಾವಿಸಿರುವ ಪಂಚಪೀಠಾಧೀಶ್ವರರು, ಬಬಲೇಶ್ವರ ಬೃಹನ್ಮಠದ ಡಾ. ಮಹಾದೇವ ಶಿವಾಚಾರ್ಯ, ಮನಗೂಳಿ ಸ್ವಾಮೀಜಿ ಹಾಗೂ ಬಿಜೆಪಿ ಮುಖಂಡರೊಬ್ಬರ ಆಣತಿಯಂತೆ ನನ್ನ ವಿರುದ್ಧ ಪ್ರಚಾರಕ್ಕೆ ಬರುತ್ತಿದ್ದಾರೆ. ಸ್ವಾಮೀಜಿಗಳ ಪಾದ ಪೂಜೆ, ಧಾರ್ಮಿಕ ಕಾರ್ಯಕ್ರಮಕ್ಕೆ ಆಕ್ಷೇಪವೇನಿಲ್ಲ. ನನಗೂ ಎಲ್ಲ ಸ್ವಾಮೀಜಿಗಳ ಬಗ್ಗೆ ಅಪಾರ ಗೌರವವಿದೆ. ಅವರಿಗೂ ನನ್ನ ಮೇಲೆ ಪ್ರೀತಿಯಿದೆ. ಆದರೆ ಕೆಲವರು ಹಾದಿ ತಪ್ಪಿಸಿ, ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರಷ್ಟೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.