ADVERTISEMENT

‘ತಾಕತ್ತಿದ್ದರೆ ಸಾಲ ಮನ್ನಾ ಮಾಡಿ’

​ಪ್ರಜಾವಾಣಿ ವಾರ್ತೆ
Published 23 ಮೇ 2018, 19:30 IST
Last Updated 23 ಮೇ 2018, 19:30 IST
ವಿಧಾನಸೌಧದ ಮುಂದೆ ಬುಧವಾರ ನಡೆದ ನೂತನ ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಸಾಕ್ಷಿಯಾಗಲು ಸೇರಿದ್ದ ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷದ ಸಾವಿರಾರು ಕಾರ್ಯಕರ್ತರು ಹಾಗೂ ಅಭಿಮಾನಿಗಳು –ಪ್ರಜಾವಾಣಿ ಚಿತ್ರ/ಆನಂದ್ ಬಕ್ಷಿ
ವಿಧಾನಸೌಧದ ಮುಂದೆ ಬುಧವಾರ ನಡೆದ ನೂತನ ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಸಾಕ್ಷಿಯಾಗಲು ಸೇರಿದ್ದ ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷದ ಸಾವಿರಾರು ಕಾರ್ಯಕರ್ತರು ಹಾಗೂ ಅಭಿಮಾನಿಗಳು –ಪ್ರಜಾವಾಣಿ ಚಿತ್ರ/ಆನಂದ್ ಬಕ್ಷಿ   

ಹುಬ್ಬಳ್ಳಿ: ‘ಎಚ್‌.ಡಿ. ಕುಮಾರಸ್ವಾಮಿ ಅವರಿಗೆ ತಾಕತ್ತಿದ್ದರೆ ಚುನಾವಣಾ ಪೂರ್ವ ಭರವಸೆಯಂತೆ, ಅಧಿಕಾರ ವಹಿಸಿಕೊಂಡ 24 ಗಂಟೆಯೊಳಗೆ ರೈತರ ಸಾಲ ಮನ್ನಾ ಮಾಡಲಿ’ ಎಂದು ಶಾಸಕ ಜಗದೀಶ ಶೆಟ್ಟರ್ ಅವರು ಸವಾಲು ಹಾಕಿದರು.

ಸಮ್ಮಿಶ್ರ ಸರ್ಕಾರ ರಚನೆ ವಿರೋಧಿಸಿ ಹುಬ್ಬಳ್ಳಿಯಲ್ಲಿ ಬುಧವಾರ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಅವರು, ‘ಅಧಿಕಾರಕ್ಕೆ ಬಂದ ತಕ್ಷಣ ರೈತರ ಸಾಲವನ್ನು ಸಂಪೂರ್ಣ ಮನ್ನಾ ಮಾಡುತ್ತೇನೆಂಬ ಅವರ ಹೇಳಿಕೆಯೇ ಅವರೆಷ್ಟು ಅಪಕ್ವ ಮತ್ತು ಬೇಜವಾಬ್ದಾರಿಯ ಮನುಷ್ಯ ಎಂಬುದನ್ನು ತೋರಿಸುತ್ತದೆ’ ಎಂದು ಹರಿಹಾಯ್ದರು.

‘ಸಾಲ ಮನ್ನಾ ಕುರಿತು ಮೀನಮೇಷ ಎಣಿಸುತ್ತಿದ್ದಾರೆ. ನಿಜವಾಗಿಯೂ ಅವರಿಗೆ ರೈತರ ಬಗ್ಗೆ ಕಾಳಜಿ ಇದ್ದರೆ, ಮೈತ್ರಿಗೆ ಮುನ್ನವೇ ಸಾಲ ಮನ್ನಾ ನಿರ್ಧಾರಕ್ಕೆ ಕಾಂಗ್ರೆಸ್‌ನವರನ್ನು ಒಪ್ಪಿಸಬೇಕಿತ್ತು. ಆದರೆ, ಅಂತಹ ಯಾವುದೇ ಪ್ರಯತ್ನ ಮಾಡದೆ ರೈತರಿಗೆ ಮೋಸ ಮಾಡಿದ್ದಾರೆ’ ಎಂದು ಟೀಕಿಸಿದರು.

ADVERTISEMENT

‘ಎಚ್‌.ಡಿ. ದೇವೇಗೌಡರಿಗೆ ಮಗನನ್ನು ಮುಖ್ಯಮಂತ್ರಿ ಮಾಡುವ ಉದ್ದೇಶವಿದೆಯೇ ಹೊರತು, ರೈತರ ಹಾಗೂ ದೀನ–ದಲಿತರ ಬಗ್ಗೆ ಯಾವುದೇ ಕಾಳಜಿ ಇಲ್ಲ. ಮಾತು ತಪ್ಪಿದ್ದಕ್ಕಾಗಿ ಇಬ್ಬರೂ ರಾಜ್ಯದ ಜನರ ಕ್ಷಮೆ ಕೋರಬೇಕು’ ಎಂದು ಆಗ್ರಹಿಸಿದರು.

ಹಿಂದಿನಿಂದಲೂ ಅನ್ಯಾಯ: ‘ಸಚಿವ ಸಂಪುಟದಲ್ಲಿ ಪ್ರಾತಿನಿಧ್ಯದ ವಿಷಯ ಬಂದಾಗಲೆಲ್ಲಾ ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗುತ್ತಲೇ ಇದೆ. ಈ ಭಾಗದವರಿಗೆ ಉಪ ಮುಖ್ಯಮಂತ್ರಿ ಸ್ಥಾನ ಸಿಗುವ ವಿಶ್ವಾಸ ಇತ್ತು. ಆದರೆ, ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿ ಎರಡೂ ಸ್ಥಾನಗಳು ದಕ್ಷಿಣ ಕರ್ನಾಟಕದವರ ಪಾಲಾಗಿವೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.