ADVERTISEMENT

‘ದೋಸ್ತಿ’ಗಳ ಮಧ್ಯೆ ಒಮ್ಮತ?

ಸಮನ್ವಯ ಸಮಿತಿ ರಚನೆ ಕುರಿತು ಚರ್ಚೆ

​ಪ್ರಜಾವಾಣಿ ವಾರ್ತೆ
Published 31 ಮೇ 2018, 19:30 IST
Last Updated 31 ಮೇ 2018, 19:30 IST
‘ದೋಸ್ತಿ’ಗಳ ಮಧ್ಯೆ ಒಮ್ಮತ?
‘ದೋಸ್ತಿ’ಗಳ ಮಧ್ಯೆ ಒಮ್ಮತ?   

ಬೆಂಗಳೂರು: ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ನೇತೃತ್ವದ ಜೆಡಿಎಸ್‌– ಕಾಂಗ್ರೆಸ್‌ ಮೈತ್ರಿಕೂಟ ಖಾತೆ ಹಂಚಿಕೆ ವಿಷಯದಲ್ಲಿ ಬಹುತೇಕ ಒಮ್ಮತಕ್ಕೆ ಬಂದಿದೆ. ಸಂಪುಟ ವಿಸ್ತರಣೆ ಮುಹೂರ್ತ ಮತ್ತು ಸಮನ್ವಯ ಸಮಿತಿಯ ಸ್ವರೂಪ ಕುರಿತು ಶುಕ್ರವಾರ ಅಧಿಕೃತ ಮಾಹಿತಿ ಹೊರಬೀಳುವ ಸಾಧ್ಯತೆ ಇದೆ.

ಹಣಕಾಸು ಹಾಗೂ ಜಲಸಂಪನ್ಮೂಲ ಖಾತೆಗಳಿಗೆ ಉಭಯ ಪಕ್ಷಗಳೂ ಪಟ್ಟು ಹಿಡಿದಿವೆ. ಇದರಿಂದಾಗಿ, ಖಾತೆಗಳ ಹಂಚಿಕೆ  ಕಗ್ಗಂಟಾಗಿತ್ತು.

‘ಎಲ್ಲ ವಿಷಯಗಳ ಕುರಿತು ಕಾಂಗ್ರೆಸ್ ನಾಯಕರ ಜೊತೆ ಚರ್ಚೆ ನಡೆಸಲಾಗಿದೆ.  ಸಂಪುಟ ವಿಸ್ತರಣೆ ಯಾವಾಗ ನಡೆಯಬೇಕು ಎಂಬ ಬಗ್ಗೆ ಚರ್ಚಿಸಲಾಗುತ್ತಿದೆ’ ಎಂದು ಜೆಡಿಎಸ್‌ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಡ್ಯಾನಿಶ್‌ ಅಲಿ ತಿಳಿಸಿದರು.

ADVERTISEMENT

ಜೆಡಿಎಸ್‌– ಕಾಂಗ್ರೆಸ್‌ ನಾಯಕರು ಮಾಡಿಕೊಂಡಿರುವ ಹಂಚಿಕೆ ‘ಒಪ್ಪಂದ’ಕ್ಕೆ ರಾಹುಲ್‌ ಗಾಂಧಿ ಹಸಿರುನಿಶಾನೆ ತೋರಿಸಿದ್ದಾರೆ. ಇದೇ ಭಾನುವಾರ ಅಥವಾ ಬುಧವಾರ ಸಂಪುಟ ವಿಸ್ತರಣೆ ಆಗುವ ಸಾಧ್ಯತೆ ಇದೆ ಎಂದೂ ಮೂಲಗಳು ಹೇಳಿವೆ.

ಸಂಪುಟ ವಿಸ್ತರಣೆ ಹಗ್ಗಜಗ್ಗಾಟ ಮುಂದುವರಿದಿರುವ ಮಧ್ಯೆಯೇ, ಡ್ಯಾನಿಶ್‌ ಅಲಿ ಮತ್ತು ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ಕೆ.ಸಿ. ವೇಣುಗೋಪಾಲ್‌, ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ, ಡಿ.ಕೆ. ಶಿವಕುಮಾರ್‌  ಗುರುವಾರ ಸಭೆ ಸೇರಿ ಚರ್ಚೆ ನಡೆಸಿದರು. ‘ಸಮನ್ವಯ ಸಮಿತಿ’ ರಚನೆಯಾದ ಬಳಿಕ ಖಾತೆ ಹಂಚಿಕೆ ಮತ್ತು ಸಂಪುಟ ವಿಸ್ತರಣೆ ಕುರಿತು ತೀರ್ಮಾನಕ್ಕೆ ಬರುವ ಬಗ್ಗೆಯೂ ಚರ್ಚೆ ನಡೆದಿದೆ.

‘ಸಚಿವ ಸಂಪುಟದ ವಿಸ್ತರಣೆ ಕುರಿತಂತೆ ಇನ್ನು ಅಂತಿಮ ನಿರ್ಧಾರ ಆಗಿಲ್ಲ. ಎರಡೂ ಪಕ್ಷಗಳ ಮುಖಂಡರು ಕುಳಿತು ಚರ್ಚಿಸಿ, ತೀರ್ಮಾನಕ್ಕೆ ಬಂದ ಬಳಿಕ ಜಂಟಿ ಮಾಧ್ಯಮಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಲಾಗುವುದು’ ಎಂದು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ತಿಳಿಸಿದರು.

‘ಖಾತೆ ಹಂಚಿಕೆ ಚರ್ಚೆ ನಡೆದಿದೆ. ಶೀಘ್ರದಲ್ಲೇ ತೀರ್ಮಾನ ತೆಗೆದುಕೊಳ್ಳುತ್ತೇವೆ’ ಎಂದು ವೇಣುಗೋಪಾಲ್‌ ಹೇಳಿದರು.

* ಜಮ್ಮು ಮತ್ತು ಕಾಶ್ಮೀರದಲ್ಲಿ‌ ಸಂಪುಟ ರಚನೆಗೆ ಮೂರು ತಿಂಗಳು ತೆಗೆದುಕೊಂಡಿರಲಿಲ್ಲವೇ?

-ಕೆ.ಸಿ. ವೇಣುಗೋಪಾಲ್, ಕಾಂಗ್ರೆಸ್ ರಾಜ್ಯ ಉಸ್ತುವಾರಿ

* ಹಣಕಾಸು ಖಾತೆ ಜೆಡಿಎಸ್‌ಗೆ ಸಿಗಲಿದೆ. ಗೃಹ ಖಾತೆಯನ್ನು ಕಾಂಗ್ರೆಸ್‌ಗೆ ನೀಡಲು ಒಪ್ಪಂದ ಆಗಿದೆ

-ಡ್ಯಾನಿಶ್ ಅಲಿ, ಜೆಡಿಎಸ್‌ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.