ADVERTISEMENT

‘ದೋಸ್ತಿ’ಗಳ ಮಧ್ಯೆ ‘ಹಣಕಾಸು’ ಕಗ್ಗಂಟು

ಪ್ರಮುಖ ಖಾತೆಗಳಿಗಾಗಿ ಜೆಡಿಎಸ್‌– ಕಾಂಗ್ರೆಸ್‌ ಮೈತ್ರಿಕೂಟದ ಮಧ್ಯೆ ಹಗ್ಗಜಗ್ಗಾಟ, ಸಂಪುಟ ವಿಸ್ತರಣೆ ವಿಳಂಬ ಸಾಧ್ಯತೆ

​ಪ್ರಜಾವಾಣಿ ವಾರ್ತೆ
Published 29 ಮೇ 2018, 19:30 IST
Last Updated 29 ಮೇ 2018, 19:30 IST
‘ದೋಸ್ತಿ’ಗಳ ಮಧ್ಯೆ ‘ಹಣಕಾಸು’ ಕಗ್ಗಂಟು
‘ದೋಸ್ತಿ’ಗಳ ಮಧ್ಯೆ ‘ಹಣಕಾಸು’ ಕಗ್ಗಂಟು   

ಬೆಂಗಳೂರು: ಜೆಡಿಎಸ್‌– ಕಾಂಗ್ರೆಸ್‌ ಮೈತ್ರಿಕೂಟದ ಮಧ್ಯೆ ಖಾತೆ ಹಂಚಿಕೆ ಬಿಕ್ಕಟ್ಟು ಮಂಗಳವಾರವೂ ಬಗೆಹರಿದಿಲ್ಲ. ಉಭಯ ಪಕ್ಷಗಳು ಹಣಕಾಸು ಖಾತೆ ತಮಗೇ ಬೇಕೆಂದು ಪಟ್ಟು ಹಿಡಿದಿರುವುದು ಗೊಂದಲ ಮುಂದುವರಿಯ‌ಲು ಕಾರಣವಾಗಿದೆ.

ಹಣಕಾಸು ಖಾತೆ ವಿಷಯದಲ್ಲಿ ರಾಜಿ ಆಗದಿರಲು ನಿರ್ಧರಿಸಿರುವ ಜೆಡಿಎಸ್‌ ವರಿಷ್ಠ ದೇವೇಗೌಡ, ಈ ಬಗ್ಗೆ ಕಾಂಗ್ರೆಸ್‌ ಮುಖಂಡ ಗುಲಾಂ ನಬಿ ಆಜಾದ್ ಜೊತೆಗೂ ಮಂಗಳವಾರ ದೂರವಾಣಿಯಲ್ಲಿ ಚರ್ಚೆ ನಡೆಸಿದ್ದಾರೆ.

ಹಣಕಾಸು ಖಾತೆ ಬಿಟ್ಟುಕೊಡಲು ಮನಸ್ಸು ಮಾಡಿರುವ ಕಾಂಗ್ರೆಸ್‌, ಕೆಲವು ಪ್ರಮುಖ ಖಾತೆಗಳ ಮೇಲೆ ಕಣ್ಣಿಟ್ಟಿದೆ ಎಂದೂ ಹೇಳಲಾಗಿದೆ. ಆದರೆ, ಕಾಂಗ್ರೆಸ್‌ ಕೇಳಿರುವ ಖಾತೆಗಳನ್ನು ನೀಡಲು ಜೆಡಿಎಸ್‌ ಸಿದ್ಧವಾಗಿಲ್ಲ. ಹೀಗಾಗಿ, ವಿದೇಶ ಪ್ರವಾಸದಲ್ಲಿರುವ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಮರಳುವವರೆಗೂ ಸಂಪುಟ ವಿಸ್ತರಣೆ ವಿಳಂಬವಾಗುವ ಸಾಧ್ಯತೆ ಇದೆ.

ADVERTISEMENT

ಪ್ರಮುಖ ಖಾತೆಗಳ ಪೈಕಿ ಹಣಕಾಸು, ಲೋಕೋಪಯೋಗಿ ಮತ್ತು ಜಲಸಂಪನ್ಮೂಲ ಖಾತೆಗಳನ್ನು ಜೆಡಿಎಸ್‌ಗೆ ಬಿಟ್ಟುಕೊಟ್ಟು ಗೃಹ, ಕಂದಾಯ, ಇಂಧನ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ (ಆರ್‌ಡಿಪಿಆರ್‌) ಖಾತೆ ಉಳಿಸಿಕೊಳ್ಳಲು ಕಾಂಗ್ರೆಸ್ ಬಯಸಿದೆ. ಆದರೆ, ಇದಕ್ಕೆ ಜೆಡಿಎಸ್ ಸಕಾರಾತ್ಮಕವಾಗಿ ಸ್ಪಂದಿಸಿಲ್ಲ. ಈ ಕಾರಣಕ್ಕೆ ಖಾತೆ ಹಂಚಿಕೆ ಹಗ್ಗ ಜಗ್ಗಾಟ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ.

ಲೋಕೋಪಯೋಗಿ ಜೊತೆಗೆ ಇಂಧನ ಖಾತೆಯನ್ನೂ ತಮ್ಮ ಬಳಿ ಇಟ್ಟುಕೊಳ್ಳಲು ಜೆಡಿಎಸ್‌ನ ಎಚ್‌.ಡಿ. ರೇವಣ್ಣ ಬಯಸಿದ್ದಾರೆ. ಆದರೆ, ಉಪ ಮುಖ್ಯಮಂತ್ರಿ ಸ್ಥಾನ ತಪ್ಪಿದ್ದರಿಂದ ಮುನಿಸಿಕೊಂಡಿರುವ ಡಿ.ಕೆ. ಶಿವಕುಮಾರ್‌ ಅವರಿಗೆ ಇಂಧನ ಖಾತೆ ನೀಡಲು ಕಾಂಗ್ರೆಸ್‌ ವಲಯದಲ್ಲಿ ಚರ್ಚೆ ನಡೆದಿದೆ. ಈ ಮಧ್ಯೆ, ಕಾಂಗ್ರೆಸ್‌ನಲ್ಲಿ ಸಚಿವ ಸ್ಥಾನ ಆಕಾಂಕ್ಷಿಗಳ ಲಾಬಿಯೂ ತೀವ್ರಗೊಂಡಿದೆ. ಉಪ ಮುಖ್ಯಮಂತ್ರಿಯೂ ಆಗಿರುವ ಕೆಪಿಸಿಸಿ ಅಧ್ಯಕ್ಷ ಜಿ. ಪರಮೇಶ್ವರ ಅವರನ್ನು ಸದಾಶಿವ ನಗರದ ಮನೆಯಲ್ಲಿ ಮಂಗಳವಾರ ಭೇಟಿಯಾದ ಹಲವು ಶಾಸಕರು, ಸಚಿವ ಸ್ಥಾನ ನೀಡುವಂತೆ ಬೇಡಿಕೆ ಮುಂದಿಟ್ಟಿದ್ದಾರೆ.

ಪರಮೇಶ್ವರ ಭೇಟಿ ಬಳಿಕ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಚಾಮರಾಜಪೇಟೆ ಶಾಸಕ ಜಮೀರ್‌ ಅಹ್ಮದ್‌, ‘ಪಕ್ಷದ ಅಧ್ಯಕ್ಷರ ಮನೆಗೆ ಹೋಗದೆ ಯಡಿಯೂರಪ್ಪ ಮನೆಗೆ ಹೋಗುವುದಕ್ಕೆ ಆಗುತ್ತದೆಯೇ? ಸಚಿವ ಸ್ಥಾನಕ್ಕೆ ಬೇಡಿಕೆ ಇಟ್ಟಿಲ್ಲ. ಕೇಳುವುದೂ ಇಲ್ಲ’ ಎಂದರು.

‘ಕುಮಾರಸ್ವಾಮಿ ಮತ್ತು ನಾನು ಹಳೆಯ ದೋಸ್ತಿಗಳು. ಬಸ್ಸು ಎತ್ಕೊಂಡು ತಕ್ಷಣ ಬಾ ಅಂದರೂ ನಾನೇ ಚಲಾಯಿಸಿಕೊಂಡು ಹೋಗುತ್ತೇನೆ. ಸಚಿವ ಸ್ಥಾನಕ್ಕೆ ಲಾಬಿ ಮಾಡುವುದಿದ್ದರೆ ದೆಹಲಿಗೆ ಹೋಗುತ್ತಿದ್ದೆ. ಕೊಡಬೇಕು ಎಂದು ನಾಯಕರಿಗೆ ಅನ್ನಿಸಿದರೆ ಕೊಡುತ್ತಾರೆ’ ಎಂದರು. ‘ಎರಡು ಬಾರಿ ಶಾಸಕನಾಗಿ ಆಯ್ಕೆಯಾಗಿರುವ ನಾನು ಕೂಡ ಸಚಿವ ಸ್ಥಾನದ ಆಕಾಂಕ್ಷಿ. ಪಕ್ಷದ ಹಿರಿಯ ಮುಖಂಡರ ಬಳಿ ಬೇಡಿಕೆ ಇಟ್ಟಿದ್ದೇನೆ’ ಎಂದು ಬಂಗಾರಪೇಟೆ ಶಾಸಕ ನಾರಾಯಣಸ್ವಾಮಿ ಹೇಳಿದರು.

‘ಕೋಲಾರದಲ್ಲಿ ಪರಿಶಿಷ್ಟ ಜಾತಿಯ ಬಲಗೈ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ನನಗೆ ಸಚಿವ ಸ್ಥಾನ ಕೊಟ್ಟರೆ ಈ ಸಮುದಾಯಕ್ಕೆ ನ್ಯಾಯ ಸಿಕ್ಕಂತಾಗುತ್ತದೆ’ ಎಂದೂ ಸಮರ್ಥನೆ ನೀಡಿದರು.

ಪರಮೇಶ್ವರ ಜೊತೆ ಸುಮಾರು ಅರ್ಧ ಗಂಟೆ ಚರ್ಚೆ ನಡೆಸಿದ ಕಾಂಗ್ರೆಸ್‌ ನಾಯಕ ಡಿ.ಕೆ. ಶಿವಕುಮಾರ್‌, ‘ಖಾತೆ ಹಂಚಿಕೆ ವಿಷಯದಲ್ಲಿ ಯಾವುದೇ ಗೊಂದಲ ಇಲ್ಲ. ಆದಷ್ಟು ಶೀಘ್ರ ಸಂಪುಟ ರಚನೆಯಾಗಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ಇಂಧನ ಖಾತೆ– ಭಿನ್ನಮತ ಇಲ್ಲ’

‘ನನ್ನ ಮತ್ತು ಎಚ್‌.ಡಿ. ರೇವಣ್ಣ ಮಧ್ಯೆ ಇಂಧನ ಖಾತೆ ಸಂಬಂಧಿಸಿದಂತೆ ಯಾವುದೇ ಭಿನ್ನಮತ ಇಲ್ಲ. ಎಲ್ಲವನ್ನೂ ನೀವೇ (ಮಾಧ್ಯಮದವರು) ಸೃಷ್ಟಿ ಮಾಡುತ್ತಿದ್ದೀರಾ. ನಾನು ಯಾವುದೇ ಬೇಡಿಕೆ ಇಟ್ಟಿಲ್ಲ. ಸಂಪುಟ ರಚನೆ ಸಂಬಂಧಿಸಿದ ಎಲ್ಲ ಸಮಸ್ಯೆಗಳು ಶೀಘ್ರವೇ ಬಗೆಹರಿಯಲಿವೆ’ ಎಂದು ಡಿ.ಕೆ. ಶಿವಕುಮಾರ್ ಹೇಳಿದರು.

* ಮೈತ್ರಿ ಸರ್ಕಾರ ಅಂದಮೇಲೆ ಸಣ್ಣಪುಟ್ಟ ಗೊಂದಲ ಇದ್ದದ್ದೆ. ಹಣಕಾಸು ಒಂದೇ ಅಲ್ಲ, ಎಲ್ಲ ಖಾತೆಗಳು ಒಟ್ಟಿಗೆ ಹಂಚಿಕೆಯಾಗಲಿವೆ

–ಜಿ. ಪರಮೇಶ್ವರ, ಉಪ ಮುಖ್ಯಮಂತ್ರಿ 

ಮುಖ್ಯಾಂಶಗಳು

* ಪ್ರಮುಖ ಖಾತೆಗಳ ಮೇಲೆ ‘ಕೈ’ ಕಣ್ಣು

* ಲೋಕೋಪಯೋಗಿ ಜೊತೆ ಇಂಧನದ ಮೇಲೂ ರೇವಣ್ಣ ದೃಷ್ಟಿ

* ಸಚಿವ ಸ್ಥಾನ ಆಕಾಂಕ್ಷಿಗಳಿಂದ ಲಾಬಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.