ADVERTISEMENT

‘ನಗೆಪಾಟಲಾಗುತ್ತಿರುವುದು ವಿಪರ್ಯಾಸ’

​ಪ್ರಜಾವಾಣಿ ವಾರ್ತೆ
Published 4 ಜೂನ್ 2018, 20:07 IST
Last Updated 4 ಜೂನ್ 2018, 20:07 IST
ಬಸವರಾಜ ಹೊರಟ್ಟಿ
ಬಸವರಾಜ ಹೊರಟ್ಟಿ   

ಚಿತ್ರದುರ್ಗ: ಖಾತೆ ಹಂಚಿಕೆಗೆ ಸಂಬಂಧಿಸಿದಂತೆ ಜೆಡಿಎಸ್–ಕಾಂಗ್ರೆಸ್ ಪಕ್ಷಗಳಲ್ಲಿ ನಡೆಯುತ್ತಿರುವ ಗುದ್ದಾಟ ಕಂಡು ರಾಜ್ಯದ ಜನ ನಗುತ್ತಿದ್ದಾರೆ ಎಂದು ವಿಧಾನಪರಿಷತ್‌ ಸದಸ್ಯ ಬಸವರಾಜ ಹೊರಟ್ಟಿ ಬೇಸರ ವ್ಯಕ್ತಪಡಿಸಿದರು.

‘ಕ್ಲಿಷ್ಟಕರ ಪರಿಸ್ಥಿತಿಯಲ್ಲಿ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದಿದೆ. ಪಕ್ಷದ ಹೈಕಮಾಂಡ್‌ ಹಾಗೂ ಮುಖ್ಯಮಂತ್ರಿಯ ಮಾತು ಮೀರುವ ಆತುರ ಒಳ್ಳೆಯದಲ್ಲ. ಪಕ್ಷ ಹಾಗೂ ರಾಜ್ಯದ ಹಿತದೃಷ್ಟಿಯಿಂದ ಸಚಿವ ಸ್ಥಾನದ ಆಕಾಂಕ್ಷೆಯಿಂದ ಹಿಂದೆ ಸರಿಯಲು ಸಿದ್ಧನಿದ್ದೇನೆ. ಎರಡು ಪಕ್ಷಗಳ ಶಾಸಕರು ತ್ಯಾಗದ ಮನೋಭಾವ ಬೆಳೆಸಿಕೊಳ್ಳಬೇಕು’ ಎಂದು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಸಲಹೆ ನೀಡಿದರು.

‘ಬಿಜೆಪಿಯ 104 ಸದಸ್ಯರು ವಿರೋಧ ಪಕ್ಷದಲ್ಲಿ ಕತ್ತಿ ಮಸೆಯುತ್ತಿದ್ದಾರೆ. ಸಣ್ಣ ವಿಚಾರವನ್ನು ಬಳಸಿಕೊಂಡು ಸರ್ಕಾರ ಉರುಳಿಸಲು ಕಾಯುತ್ತಿದ್ದಾರೆ. ಖಾತೆ ಹಂಚಿಕೆ ಕಲಹದಲ್ಲಿ ಸರ್ಕಾರ ಉರುಳಿದರೆ ಮುಂದೆಂದೂ ಜನ ಬೆಂಬಲ ನೀಡುವುದಿಲ್ಲ. ರಾಜ್ಯದ ಮತದಾರರ ವಿಶ್ವಾಸ ಉಳಿಸಿಕೊಳ್ಳುವ ಸವಾಲು ಸರ್ಕಾರದ ಮುಂದಿದೆ’ ಎಂದರು.

ADVERTISEMENT

‘ಎನ್‌.ಎಚ್‌.ಕೋನರಡ್ಡಿ ನೇತೃತ್ವದಲ್ಲಿ ಮಹದಾಯಿ ನದಿ ನೀರಿಗಾಗಿ ನಿರಂತರ ಹೋರಾಟ ನಡೆಸಿದ್ದೇವೆ. ಆದರೆ, ನರಗುಂದ ಮತ್ತು ನವಲಗುಂದದ ಜನ ಬಿಜೆಪಿಗೆ ಮತ ಹಾಕಿದ್ದು ವಿಪರ್ಯಾಸ. ಈ ಹೋರಾಟವನ್ನು ರಾಜಕೀಯಕ್ಕೆ ಬಳಸಿಕೊಳ್ಳುವ ಉದ್ದೇಶವಿಲ್ಲ. ರೈತರೊಂದಿಗೆ ಸೇರಿ ಮತ್ತೆ ಹೋರಾಟ ನಡೆಸುತ್ತೇವೆ’ ಎಂದು ಹೇಳಿದರು.

‘ಮಠಾಧೀಶರ ರಾಜಕೀಯ ಸಲ್ಲದು’

‘ವಿಧಾನಸೌಧದಲ್ಲಿ ಇರುವುದಕ್ಕಿಂತ ಹೆಚ್ಚು ರಾಜಕೀಯ ಮಠಾಧೀಶರಲ್ಲಿದೆ. ರಾಜಕಾರಣದ ಕುರಿತು ಸ್ವಾಮೀಜಿಗಳು ಬಹಿರಂಗವಾಗಿ ಮಾತನಾಡುವುದು ತಪ್ಪು’ ಎಂದು ಹೊರಟ್ಟಿ ಅಭಿಪ್ರಾಯಪಟ್ಟರು.

‘ಬಸವ ಧರ್ಮ ಪೀಠಾಧ್ಯಕ್ಷೆ ಮಾತೆ ಮಹಾದೇವಿ ಕಾಂಗ್ರೆಸ್‌ ಪರ, ರಂಭಾಪುರಿ ಶ್ರೀ ಬಿಜೆಪಿ ಪರ ಮತಯಾಚನೆ ಮಾಡಿದ್ದು ಸರಿಯಲ್ಲ. ರಾಜಕಾರಣಿಗಳು ತಪ್ಪು ಮಾಡಿದಾಗ ಮಠಕ್ಕೆ ಕರೆದು ಬುದ್ಧಿವಾದ ಹೇಳಿ. ಅದನ್ನು ಬಿಟ್ಟು ನೇರವಾಗಿ ರಾಜಕೀಯಕ್ಕೆ ಬರಬೇಡಿ’ ಎಂದು ವಿನಂತಿಸಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.