ADVERTISEMENT

ಪದಾಧಿಕಾರಿಗಳ ಕಾರ್ಯವೈಖರಿಗೆ ಕೆ.ಸಿ.ವೇಣುಗೋಪಾಲ್ ಕಿಡಿ

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2018, 19:30 IST
Last Updated 9 ಮಾರ್ಚ್ 2018, 19:30 IST
ಕೆ.ಸಿ.ವೇಣುಗೋಪಾಲ್
ಕೆ.ಸಿ.ವೇಣುಗೋಪಾಲ್   

ಬೆಂಗಳೂರು: ಪ್ರದೇಶ ಕಾಂಗ್ರೆಸ್‌ ಸಮಿತಿ (ಕೆಪಿಸಿಸಿ) ಪದಾಧಿಕಾರಿಗಳ ಕಾರ್ಯವೈಖರಿಗೆ ಕಾಂಗ್ರೆಸ್‌ ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್‌ ತೀವ್ರ ಅತೃಪ್ತಿ ವ್ಯಕ್ತಪಡಿಸಿದ್ದಾರೆ.

ಚುನಾವಣಾ ಕಾರ್ಯತಂತ್ರಗಳ ಕುರಿತು ಕೆಪಿಸಿಸಿ ಮತ್ತು ಜಿಲ್ಲಾ ಘಟಕಗಳ ಪದಾಧಿಕಾರಿಗಳ ಜೊತೆ ಶುಕ್ರವಾರ ಚರ್ಚೆ ನಡೆಸಿದ ವೇಣುಗೋಪಾಲ್‌, ಕ್ಷೇತ್ರವಾರು ಜವಾಬ್ದಾರಿ ನಿರ್ವಹಿಸಲು ವಿಫಲರಾದವರ ಮೇಲೆ ಕಿಡಿ ಕಾರಿದ್ದಾರೆ.

‘ಪಕ್ಷ ಸಂಘಟನೆಗೆ ಯಾರು ಏನೇನು ಮಾಡುತ್ತಿದ್ದಾರೆ ಎಂಬ ಬಗ್ಗೆ 15 ದಿನಗಳಿಗೊಮ್ಮೆ ವರದಿ ಬರುತ್ತದೆ. ಅನೇಕ ಪದಾಧಿಕಾರಿಗಳು ಕೊಟ್ಟ ಕೆಲಸ ಸರಿಯಾಗಿ ನಿರ್ವಹಿಸಿಲ್ಲ. ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಹೇಳುವ ಸುಳ್ಳಿನ ಬಗ್ಗೆ ಜನರಿಗೆ ತಿಳಿಸಲು ಏನು ಮಾಡಿದ್ದೀರಿ’ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.

ADVERTISEMENT

ಬೆಂಗಳೂರಿನ ಎಲ್ಲ 28 ವಿಧಾನಸಭಾ ಕ್ಷೇತ್ರಗಳಲ್ಲೂ ಪಕ್ಷ ಸಂಘಟನೆ ದುರ್ಬಲವಾಗಿದೆ. ‘ಮನೆ ಮನೆ ಕಾಂಗ್ರೆಸ್’ ಅಭಿಯಾನ ಕೂಡಾ ಹಲವು ಕ್ಷೇತ್ರಗಳಲ್ಲಿ ಸಮರ್ಪಕವಾಗಿ ಆಗಿಲ್ಲ ಎಂದೂ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ಟಿಕೆಟ್‌ ಆಕಾಂಕ್ಷಿಗಳು ಪಕ್ಷದ ಪದಾಧಿಕಾರಿ ಸ್ಥಾನಕ್ಕೆ ತಕ್ಷಣ ರಾಜೀನಾಮೆ ನೀಡಬೇಕು. ಆಕಾಂಕ್ಷಿಗಳಾಗಿದ್ದರೆ ಉಸ್ತುವಾರಿ ಕ್ಷೇತ್ರದ ಹೊಣೆಗಾರಿಕೆ ನಿಭಾ
ಯಿಸಲು ಸಾಧ್ಯವಿಲ್ಲ. ಹೀಗಾಗಿ ರಾಜೀನಾಮೆ ನೀಡಿ ಬೇರೆಯವರಿಗೆ ಅವಕಾಶ ಕಲ್ಪಿಸಬೇಕು’ ಎಂದು ಸಲಹೆ ನೀಡಿದ್ದಾರೆ.

ಖೇಣಿ ಸೇರ್ಪಡೆಗೆ ಅಸಮಾಧಾನ: ‘ಬೀದರ್‌ ದಕ್ಷಿಣ ಕ್ಷೇತ್ರದ ಶಾಸಕ, ನೈಸ್‌ ಮುಖ್ಯಸ್ಥ ಅಶೋಕ ಖೇಣಿ ಸೇರ್ಪಡೆಗೆ ಪಕ್ಷದಲ್ಲಿ ಅಸಮಾಧಾನ ವ್ಯಕ್ತವಾಗಿದೆ.‌ ಆ ಕ್ಷೇತ್ರದಲ್ಲಿ ಮೂಲ ಕಾಂಗ್ರೆಸಿಗರಿಗೆ ಟಿಕೆಟ್ ಕೊಡುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ’ ಎಂದೂ ಅವರು ಹೇಳಿದ್ದಾರೆ.

ಎರಡನೇ ದಿನವೂ ಆಕಾಂಕ್ಷಿಗಳ ಸಾಲು: ಕೆಪಿಸಿಸಿ ಕಚೇರಿಯಲ್ಲಿ ನಡೆಯುತ್ತಿರುವ ಟಿಕೆಟ್ ಆಕಾಂಕ್ಷಿಗಳ ಸಂದರ್ಶನ ಶುಕ್ರವಾರವೂ ಮುಂದುವರಿಯಿತು. ವಿಧಾನಪರಿಷತ್ ಮುಖ್ಯ ಸಚೇತಕ ಐವನ್ ಡಿಸೋಜಾ, ಮೇಯರ್ ಸಂಪತ್ ರಾಜ್ ಸೇರಿದಂತೆ ಹಲವರು ಚುನಾವಣಾ ಪರಿಶೀಲನಾ ಸಮಿತಿ ಅಧ್ಯಕ್ಷ ಮಧುಸೂದನ್‌ ಮಿಸ್ತ್ರಿಗೆ ದಾಖಲೆಗಳನ್ನು ನೀಡಿ ಟಿಕೆಟ್ ನೀಡುವಂತೆ ಮನವಿ ಮಾಡಿದರು.

ಮನೆ ಮನೆಗೆ ಪಾದಯಾತ್ರೆ
ಏಪ್ರಿಲ್ ಮೊದಲ ವಾರದಿಂದ 23ರವರೆಗೆ ಎಲ್ಲ ವಿಧಾನ ಕ್ಷೇತ್ರಗಳಲ್ಲಿ ಮನೆ ಮನೆಗೆ ಪಾದಯಾತ್ರೆ ಕಾರ್ಯಕ್ರಮ ಹಮ್ಮಿಕೊಳ್ಳಲು ಕಾಂಗ್ರೆಸ್‌ ನಿರ್ಧರಿಸಿದೆ. ಬೆಂಗಳೂರಿನ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಬಿಜೆಪಿ ಕೈಗೊಂಡಿರುವ ‘ಬೆಂಗಳೂರು ರಕ್ಷಿಸಿ’ ಯಾತ್ರೆಗೆ ಪರ್ಯಾಯವಾಗಿ ‘ನಮ್ಮ ಬೆಂಗಳೂರು– ನಮ್ಮ ಹೆಮ್ಮೆ’ ಎಂಬ ಕಾರ್ಯಕ್ರಮ ಆಯೋಜಿಸಲು ತೀರ್ಮಾನಿಸಿದೆ. ಕಾಂಗ್ರೆಸ್‌ ಸರ್ಕಾರ ಬಂದ ಬಳಿಕ ಬೆಂಗಳೂರು ಅಭಿವೃದ್ಧಿಯಲ್ಲಿ ಆಗಿರುವ ಬದಲಾವಣೆಗಳ ಕುರಿತು ಕಿರುಹೊತ್ತಿಗೆ ಮುದ್ರಿಸಿ ಜನರಿಗೆ ತಲುಪಿಸಲು ಕಾಂಗ್ರೆಸ್‌ ಉದ್ದೇಶಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.