ADVERTISEMENT

‘ಪ್ರಧಾನಿಯಾಗಿರಲು ಮೋದಿ ಲಾಯಕ್ಕಿಲ್ಲ’

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2018, 19:30 IST
Last Updated 4 ಮಾರ್ಚ್ 2018, 19:30 IST
‘ಪ್ರಧಾನಿಯಾಗಿರಲು ಮೋದಿ ಲಾಯಕ್ಕಿಲ್ಲ’
‘ಪ್ರಧಾನಿಯಾಗಿರಲು ಮೋದಿ ಲಾಯಕ್ಕಿಲ್ಲ’   

ಬೆಂಗಳೂರು: ‘ನರೇಂದ್ರ ಮೋದಿ ಮಹಾ ಸುಳ್ಳುಗಾರ. ಇಷ್ಟೊಂದು ಸುಳ್ಳನ್ನು ಯಾವ ಪ್ರಧಾನಿಯೂ ಹೇಳಿರಲಿಲ್ಲ. ಪ್ರಧಾನಿಯಾಗಿರಲು ಅವರು ಲಾಯಕ್ಕಿಲ್ಲ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಭಾನುವಾರ ಕೆ.ಆರ್‌.ಪುರ ಮತ್ತು ಯಶವಂತಪುರ ವಿಧಾನಸಭಾ ಕ್ಷೇತ್ರಗಳಲ್ಲಿ ಆಯೋಜಿಸಿದ್ದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ನೆರವೇರಿಸಿದ ಮುಖ್ಯಮಂತ್ರಿ, ಭಾರಿ ಸಂಖ್ಯೆಯಲ್ಲಿ ಸೇರಿದ್ದ ಜನರನ್ನು ಉದ್ದೇಶಿಸಿ ಮಾತನಾಡಿದರು.

‘ಬಿ.ಎಸ್‌.ಯಡಿಯೂರಪ್ಪ, ಶೋಭಾ ಕರಂದ್ಲಾಜೆ, ಜನಾರ್ದನ ರೆಡ್ಡಿ, ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಮತ್ತು ಮೋದಿ ಲೆವೆಲ್‌ ಒಂದೇ ರೀತಿ ಇದೆ’ ಎಂದು ಹರಿಹಾಯ್ದರು.

ADVERTISEMENT

‘ತಾನು ದೇಶದ ಸಂಪತ್ತಿನ ಚೌಕಿದಾರನೆಂದು ಮೋದಿ ಹೇಳಿಕೊಳ್ಳುತ್ತಿದ್ದರು. ಜನರು ಬ್ಯಾಂಕಿನಲ್ಲಿಟ್ಟಿದ್ದ ಹಣದಲ್ಲಿ ಸಾವಿರಾರು ಕೋಟಿಯನ್ನು ನೀರವ್‌ ಮೋದಿ, ವಿಜಯ್‌ ಮಲ್ಯ, ಲಲಿತ್‌ ಮೋದಿ ಲೂಟಿ ಮಾಡಿ ದೇಶದಿಂದ ಪರಾರಿಯಾದರು. ಚೌಕಿದಾರನ ಕೆಲಸ ಏನಾಯಿತು? ಪ್ರಧಾನಿ ಮತ್ತು ಹಣಕಾಸು ಇಲಾಖೆ ಕುಮ್ಮಕ್ಕು ಇಲ್ಲದೇ ಇವರೆಲ್ಲ ದೇಶಬಿಟ್ಟು ಹೋಗಲು ಸಾಧ್ಯವೇ’ ಎಂದು ಪ್ರಶ್ನಿಸಿದರು.

‘ಮೋದಿ ಗುಜರಾತ್‌ ಮುಖ್ಯಮಂತ್ರಿಯಾಗಿದ್ದಾಗ 9 ವರ್ಷ ಲೋಕಾಯುಕ್ತರನ್ನು ನೇಮಿಸಲಿಲ್ಲ. ಕೇಂದ್ರದಲ್ಲಿ ಅಧಿಕಾರಕ್ಕೆ ಬಂದು ನಾಲ್ಕು ವರ್ಷವಾಗಿದೆ. ಇನ್ನೂ ಲೋಕಪಾಲರನ್ನು ನೇಮಿಸಿಲ್ಲ. ವಿದೇಶದಲ್ಲಿರುವ ಕಪ್ಪುಹಣ ತಂದು ಒಬ್ಬೊಬ್ಬರ ಖಾತೆಗೆ ₹15 ಲಕ್ಷ ಹಾಕುವುದಾಗಿ ಹೇಳಿದ್ದರು. ಇದುವರೆಗೂ ಒಬ್ಬರ ಖಾತೆಗೂ ₹15 ಕೂಡ ಬರಲಿಲ್ಲ. ಭ್ರಷ್ಟಾಚಾರದ ಬಗ್ಗೆ ಮಾತನಾಡಲು ಇವರಿಗೆ ಯಾವ ನೈತಿಕತೆ ಇದೆ. ಇವರಿಗೆ ನಾಚಿಕೆ ಆಗಬೇಕು’ ಎಂದು ಕಿಡಿಕಾರಿದರು.

‘ನೀವು ಎಷ್ಟೇ ಬಾರಿ ರಾಜ್ಯಕ್ಕೆ ಬಂದು ಭಾಷಣ ಮಾಡಿದರೂ ಇಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದಿಲ್ಲ. ನಮ್ಮ ಅಭಿವೃದ್ಧಿ ಕೆಲಸವನ್ನು ಜನ ಮೆಚ್ಚಿದ್ದಾರೆ. ನಾವೇ ಪುನಃ ಅಧಿಕಾರಕ್ಕೆ ಬರುತ್ತೇವೆ ಎಂದು ಮೋದಿಯವರಿಗೂ ನೇರವಾಗಿ ಹೇಳಿದ್ದೇನೆ’ ಎಂದರು.

‘ರಾಜ್ಯದಲ್ಲಿ ಕೋಮುಗಲಭೆ ಸೃಷ್ಟಿಸಿ, ಅದರಲ್ಲಿ ಯಾರಾದರೂ ಸತ್ತಿದ್ದರೆ ಅದಕ್ಕೆ ಬಿಜೆಪಿ, ಆರ್‌ಎಸ್‌ಎಸ್‌, ಬಜರಂಗದಳ ಹಾಗೂ ಹಿಂದೂ ಜಾಗರಣ ವೇದಿಕೆಯವರೇ ನೇರ ಕಾರಣ. ಕೋಮುವಾದಿಗಳಿಗೆ ಮತ್ತು ಲೂಟಿಕೋರರಿಗೆ ರಾಜ್ಯದಲ್ಲಿ ಅಧಿಕಾರ ಹಿಡಿಯಲು ಅವಕಾಶ ನೀಡುವುದಿಲ್ಲ ಎಂದು ಜನರು ಸಂಕಲ್ಪ ಮಾಡಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.