ADVERTISEMENT

ಬಳ್ಳಾರಿಯಿಂದಲೇ ಕಾಂಗ್ರೆಸ್‌ ಅಧಿಕಾರ ಕೊನೆ: ಶ್ರೀರಾಮುಲು

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2018, 19:30 IST
Last Updated 9 ಮಾರ್ಚ್ 2018, 19:30 IST
ಬಿ.ಶ್ರೀರಾಮುಲು
ಬಿ.ಶ್ರೀರಾಮುಲು   

ಬಳ್ಳಾರಿ: ‘ಬೆಂಗಳೂರಿನಿಂದ ಬಳ್ಳಾರಿವರೆಗೂ ಪಾದಯಾತ್ರೆ ನಡೆಸಿ ರಾಜ್ಯದಲ್ಲಿ ಅಧಿಕಾರ ಪಡೆದ ಕಾಂಗ್ರೆಸ್‌, ಬಳ್ಳಾರಿಯಿಂದಲೇ ಅಧಿಕಾರವನ್ನೂ ಕಳೆದುಕೊಳ್ಳಲಿದೆ’ ಎಂದು ಸಂಸದ ಬಿ.ಶ್ರೀರಾಮುಲು ಭವಿಷ್ಯ ನುಡಿದರು.

‘ಭ್ರಷ್ಟಾಚಾರ, ಭದ್ರತಾ ವೈಫಲ್ಯ, ಹಿಂದೂಗಳ ಹತ್ಯೆ, ದರೋಡೆ, ಅತ್ಯಾಚಾರದ ವಿಷಯದಲ್ಲಿ ಕರ್ನಾಟಕವು ದೇಶದಲ್ಲಿ ನಂ.1 ಆಗಿದೆ. ಆನಂದ್‌ ಸಿಂಗ್‌, ಬಿ. ನಾಗೇಂದ್ರ, ಅಶೋಕ್‌ ಖೇಣಿ ಸೇರಿದಂತೆ ಭ್ರಷ್ಟರೆಲ್ಲರೂ ಕಾಂಗ್ರೆಸ್‌ ಸೇರುತ್ತಿದ್ದಾರೆ. ಇದು ತಾಲಿಬಾನ್‌ ಮಾದರಿಯ ಕೊಲೆಗಡುಕ ಸರ್ಕಾರ. ಅಧಿಕಾರ ಕೊನೆಗೊಳ್ಳಲು ಇಷ್ಟು ಸಾಕು’ ಎಂದು ಶುಕ್ರವಾರ ‌ಅಭಿಪ್ರಾಯಪಟ್ಟರು.

‘ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಸಂಪುಟದ ಹಲವು ಸಚಿವರ ವಿರುದ್ಧ ಲೋಕಾಯುಕ್ತದಲ್ಲಿ ಹಲವು ಪ್ರಕರಣಗಳು ದಾಖಲಾಗಿವೆ. ತನಿಖೆಯೂ ಚುರುಕಾಗಿ ನಡೆಯುತ್ತಿದೆ. ಇದರಿಂದ ಬೆದರಿರುವ ಮುಖ್ಯಮಂತ್ರಿ ಹಾಗೂ ಸಚಿವರು ಲೋಕಾಯುಕ್ತರ ಕಚೇರಿಗೆ ಭದ್ರತೆ ಇಲ್ಲದಂತೆ ಮಾಡಿ ಲೋಕಾಯುಕ್ತರ ಮೇಲೆ ಹಲ್ಲೆ ನಡೆಸಲು ಕುಮ್ಮಕ್ಕು ನೀಡಿದ್ದಾರೆ’ ಎಂದರು.

ADVERTISEMENT

‘ಜಿಲ್ಲಾ ಖನಿಜ ಪ್ರತಿಷ್ಠಾನದ ನಿಧಿಯನ್ನು, ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪ್ರೋತ್ಸಾಹ ಧನವನ್ನಾಗಿ ವಿತರಿಸಿ ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಪ್ರೋತ್ಸಾಹ ಧನ ವಿತರಿಸುವುದೇ ಆಗಿದ್ದರೆ ವರ್ಷದ ಆರಂಭದಲ್ಲಿ ಮಾಡಬೇಕಿತ್ತು. ಹಾಗೆ ಮಾಡಿಲ್ಲ. ಜಿಲ್ಲಾಧಿಕಾರಿಯ ಮೂಲಕವೇ ಕಾನೂನು ಉಲ್ಲಂಘಿಸಲಾಗಿದೆ’ ಎಂದು ಶ್ರೀರಾಮುಲು ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.