ADVERTISEMENT

ಬಿಜೆಪಿಯಿಂದ ಕಾಂಗ್ರೆಸ್‌ ಶಾಸಕರ ಸೆಳೆಯುವ ಯತ್ನ: ಡಿ.ಕೆ. ಶಿವಕುಮಾರ್ ಆರೋಪ

​ಪ್ರಜಾವಾಣಿ ವಾರ್ತೆ
Published 16 ಮೇ 2018, 4:28 IST
Last Updated 16 ಮೇ 2018, 4:28 IST
ಡಿ.ಕೆ. ಶಿವಕುಮಾರ್ - ಚಿತ್ರ ಕೃಪೆ: ಎನ್‌ಎನ್‌ಐ
ಡಿ.ಕೆ. ಶಿವಕುಮಾರ್ - ಚಿತ್ರ ಕೃಪೆ: ಎನ್‌ಎನ್‌ಐ   

ಬೆಂಗಳೂರು: ಬಿಜೆಪಿಯವರು ಕಾಂಗ್ರೆಸ್‌ ಶಾಸಕರನ್ನು ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್‌ನ ಹಿರಿಯ ನಾಯಕ ಡಿ.ಕೆ. ಶಿವಕುಮಾರ್ ಆರೋಪಿಸಿದರು.

ನಮ್ಮ ಶಾಸಕರ ಮೇಲೆ ಭಾರಿ ಒತ್ತಡವಿದೆ. ಆದರೆ, ಜೆಡಿಎಸ್‌ ಮತ್ತು ಕಾಂಗ್ರೆಸ್‌ ಸಾಕಷ್ಟು ಸ್ಥಾನಗಳನ್ನು ಹೊಂದಿರುವುದರಿಂದ ಶಾಸಕರನ್ನು ಸೆಳೆಯುವ ಯತ್ನ ಫಲಿಸದು. ರಾಜ್ಯದ ಜನತೆ ಎಲ್ಲವನ್ನೂ ಗಮನಿಸುತ್ತಿದ್ದಾರೆ ಎಂದು ಅವರು ಹೇಳಿದರು.

ಎಲ್ಲರಿಗೂ ದೂರವಾಣಿ ಕರೆ: ಕಾಂಗ್ರೆಸ್‌ನ ಎಲ್ಲ ಶಾಸಕರಿಗೂ ಬಿಜೆಪಿ ಕಡೆಯಿಂದ ದೂರವಾಣಿ ಕರೆ ಬಂದಿದೆ. ಆದರೆ, ಶಾಸಕರು ಹೋಗುವುದಕ್ಕೆ ಮತ ಹಾಕಿರುವ ಜನ ಬಿಡಬೇಕಲ್ಲವೇ. ಯಾರಿಗೆ ಕರೆ ಮಾಡಿದರು ಅನ್ನುವ ಪಟ್ಟಿ ಕೊಡುತ್ತೇನೆ. ನಮಗೂ ರಾಜಕಾರಣ ಮಾಡೋದು ಗೊತ್ತಿದೆ ಎಂದು ಶಿವಕುಮಾರ್ ಹೇಳಿದರು.

ADVERTISEMENT

‘ನಾವೇ ಸರ್ಕಾರ ರಚಿಸುತ್ತೇವೆ’: ಕಾಂಗ್ರೆಸ್‌ನ ಎಲ್ಲ ಶಾಸಕರೂ ಸಂಪರ್ಕದಲ್ಲಿದ್ದಾರೆ. ಯಾರೂ ನಾಪತ್ತೆಯಾಗಿಲ್ಲ. ನಾವೇ ಸರ್ಕಾರ ರಚಿಸುವ ಬಗ್ಗೆ ವಿಶ್ವಾಸವಿದೆ ಎಂದು ಹಂಗಾಮಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

‘ಬಿಜೆಪಿಯಿಂದ ಕೀಳು ರಾಜಕೀಯ’: ಸರ್ಕಾರ ರಚನೆಗೆ ಬೇರೆಯವರಿಗೆ ಅವಕಾಶ ಕೊಡಿವ ಮಾತೇ ಇಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳುತ್ತಾರೆ. ಇದರಿಂದ ಬಿಜೆಪಿಯವರು ಎಂತಹ ಮಟ್ಟಕ್ಕೆ ಇಳಿದಿದ್ದಾರೆ ಅನ್ನುವುದು ಗೊತ್ತಾಗುತ್ತದೆ ಎಂದು ಕಾಂಗ್ರೆಸ್‌ ನಾಯಕ ದಿನೇಶ್ ಗುಂಡೂರಾವ್ ಹೇಳಿದರು.

ಜನ ಅವರಿಗೆ (ಬಿಜೆಪಿಯವರಿಗೆ) ಆಶೀರ್ವಾದ ಮಾಡಿಲ್ಲ. ಹೀಗಾಗಿ ಸರ್ಕಾರ ರಚನೆಯಿಂದ ದೂರ ಇದ್ದರೇ ಸರಿ. ಅವರು ಸರ್ಕಾರ ರಚನೆ ಮಾಡಬೇಕು ಅಂತಾದರೆ ವಾಮಮಾರ್ಗ ಹಿಡಿಯಬೇಕು. ಇದು ಹೇಸಿಗೆ ತರಿಸುವ ಕೆಲಸ. ಇಂತಹ ಕಾರ್ಯಕ್ಕೆ ಕೈಹಾಕಬಾರದು ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.