ADVERTISEMENT

ಬಿಜೆಪಿ ನಾಯಕರೇ ನಿದ್ದೆಗೆಡುವಂತೆ ಮಾಡುವೆ

​ಪ್ರಜಾವಾಣಿ ವಾರ್ತೆ
Published 21 ಮೇ 2018, 19:30 IST
Last Updated 21 ಮೇ 2018, 19:30 IST
ಹೊಳೆನರಸೀಪುರದ ಲಕ್ಷ್ಮಿನರಸಿಂಹ ಸ್ವಾಮಿ ದೇವಾಲಯದಲ್ಲಿ ನಿಯೋಜಿತ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, ಪತ್ನಿ ಅನಿತಾ ಪೂಜೆ ಸಲ್ಲಿಸಿದರು.
ಹೊಳೆನರಸೀಪುರದ ಲಕ್ಷ್ಮಿನರಸಿಂಹ ಸ್ವಾಮಿ ದೇವಾಲಯದಲ್ಲಿ ನಿಯೋಜಿತ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, ಪತ್ನಿ ಅನಿತಾ ಪೂಜೆ ಸಲ್ಲಿಸಿದರು.   

ಹಾಸನ: ‘ಶ್ರೀರಾಮುಲು ಸೇರಿದಂತೆ ಯಾವುದೇ ಬಿಜೆಪಿ ನಾಯಕರಿಗೂ ನಮ್ಮ ನಿದ್ದೆಗೆಡಿಸಲು ಸಾಧ್ಯವೇ ಇಲ್ಲ. ಬಿಜೆಪಿ ನಾಯಕರೇ ನಿದ್ದೆಗೆಡುವಂತೆ ಮಾಡುತ್ತೇನೆ’ ಎಂದು ನಿಯೋಜಿತ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸೋಮವಾರ ತಿರುಗೇಟು ನೀಡಿದರು.

ಪತ್ನಿ ಅನಿತಾ ಅವರ ಜೊತೆ ಹೆಲಿಕಾಪ್ಟರ್‌ನಲ್ಲಿ ಹೊಳೆನರಸೀಪುರಕ್ಕೆ ಬಂದ ಅವರು, ಹೆಲಿಪ್ಯಾಡ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.

‘ಮುಖ್ಯಮಂತ್ರಿ ಜವಾಬ್ದಾರಿ ಸವಾಲಿನ ಹುದ್ದೆಯಾಗಿದೆ. ಹೀಗಾಗಿ ಎಲ್ಲರೊಂದಿಗೂ ಚರ್ಚೆ ನಡೆಸಿ, ಐದು ವರ್ಷ ಸುಭದ್ರ ಆಡಳಿತ ನಡೆಸುವ ಮೂಲಕ ನಾಡಿನ ಜನರ ಸಮಸ್ಯೆ ನಿವಾರಣೆಗೆ ಆದ್ಯತೆ ನೀಡಲಾಗುವುದು’ ಎಂದರು.

ADVERTISEMENT

‘ರಾಜ್ಯದ ಜವಾಬ್ದಾರಿ ನಿರ್ವಹಿಸಲು ಸಹಕಾರ ನೀಡಿರುವ ಕಾಂಗ್ರೆಸ್ಸಿಗರ ವಿಶ್ವಾಸ ಪಡೆಯಲಾಗುವುದು. ಕಾಂಗ್ರೆಸ್‌ ಮುಖಂಡರಾದ ಸೋನಿಯಾ ಗಾಂಧಿ, ರಾಹುಲ್‌ ಗಾಂಧಿ, ಬಿಎಸ್‌ಪಿ ನಾಯಕಿ ಮಾಯಾವತಿ ಅವರನ್ನು ಭೇಟಿ ಮಾಡಲಾಗುವುದು’ ಎಂದರು.

‘ಖಾತೆ ಹಂಚಿಕೆ ಸಂಬಂಧ ಕಾಂಗ್ರೆಸ್ ನಡುವೆ ಯಾವುದೇ ಗೊಂದಲ ಇಲ್ಲ. ಇದೆಲ್ಲಾ ಮಾಧ್ಯಮಗಳ ಸೃಷ್ಟಿ. ಸಾಮಾಜಿಕ ಜಾಲತಾಣ, ಪತ್ರಿಕೆಗಳಲ್ಲಿ ಪ್ರಕಟವಾಗುವ ಲೇಖನಗಳನ್ನು ಓದಿ ಮೆದುಳಿನಲ್ಲಿ ತುಂಬಿಕೊಂಡಿದ್ದೇನೆ. ಈ ರೀತಿ ಮಾತನಾಡುವವರಿಗೆ ಮುಂದಿನ ದಿನಗಳಲ್ಲಿ ಸೂಕ್ತ ಉತ್ತರ ನೀಡುವೆ’ ಎಂದರು.

ತವರು ಜಿಲ್ಲೆಯ ವಿವಿಧ ದೇವಾಲಯಗಳಲ್ಲಿ ಕುಮಾರಸ್ವಾಮಿ ವಿಶೇಷ ಪೂಜೆ ಸಲ್ಲಿಸಿದರು. ಸೋದರ ಎಚ್.ಡಿ.ರೇವಣ್ಣ ಅವರ ಮೇಲುಸ್ತುವಾರಿ
ಯಲ್ಲಿ, 4 ಗಂಟೆಗಳ ಅಂತರದಲ್ಲಿ ಹಾಸನ ಹಾಗೂ ಚನ್ನರಾಯಪಟ್ಟಣದ ಐದು ದೇವಾಲಯಗಳಲ್ಲಿ ಅಭಿಷೇಕ, ಅರ್ಚನೆ ಮಾಡಿಸಿ ದೇವರಿಗೆ ನಮಿಸಿದರು.

ಮೊದಲು ಹೊಳೆನರಸೀಪುರದ ಲಕ್ಷ್ಮಿ ನರಸಿಂಹಸ್ವಾಮಿ ದೇವಾಲಯದಲ್ಲಿ ವೃಕ್ಷ ಪ್ರದಕ್ಷಿಣೆ ನಂತರ ವಿಶೇಷ ಪೂಜೆ ಸಲ್ಲಿಸಿದರು. ಅಲ್ಲಿಂದ ಮಾವಿನಕೆರೆ ರಂಗನಾಥ ಸ್ವಾಮಿ ದೇವಸ್ಥಾನಕ್ಕೆ ತೆರಳಿ ದೇಗುಲ ಪ್ರದಕ್ಷಿಣೆ ಹಾಕಿದರು.

ಹುಟ್ಟೂರು ಹರದನಹಳ್ಳಿಯಲ್ಲಿರುವ ಈಶ್ವರ ದೇವಾಲಯದಲ್ಲಿ ಅಭಿಷೇಕ ಮಾಡಿಸಿದರು. ಬಳಿಕ ಚನ್ನರಾಯಪಟ್ಟಣ ತಾಲ್ಲೂಕು ಆನೆಕೆರೆಯಮ್ಮ ದೇವಾಲಯದಲ್ಲಿ ಈಡುಗಾಯಿ ಹಾಕಿ, ಹರಕೆ ಈಡೇರಿಸಿ ದೇವಿಗೆ ನಮಸ್ಕರಿಸಿದರು. ಕೊನೆಯದಾಗಿ, ಯಲಿಯೂರು ದೇವೀರಮ್ಮ ದೇವಾಲಯಕ್ಕೆ ಭೇಟಿ ನೀಡಿ, ಮುಖ್ಯಮಂತ್ರಿ ಹುದ್ದೆಯನ್ನು ಸಮರ್ಥ ರೀತಿಯಲ್ಲಿ ನಿಭಾಯಿಸಲು ಶಕ್ತಿ ನೀಡುವಂತೆ ಬೇಡಿಕೊಂಡರು.

ನೆಚ್ಚಿನ ನಾಯಕನನ್ನು ನೋಡಲು ಗ್ರಾಮಗಳಲ್ಲಿ ರಸ್ತೆ ಪಕ್ಕ ನೂರಾರು ಜನ ನಿಂತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಕೆಲವು ಕಡೆ ಪಟಾಕಿ ಸಿಡಿಸಿ ಸಂಭ್ರಮಿಸಿದರೆ, ಮತ್ತೆ ಕೆಲವು ಕಡೆ ಹಸಿರು ತೋರಣ ಕಟ್ಟಿ ಸ್ವಾಗತಿಸಲಾಯಿತು.

ಚುನಾವಣೆ ಪೂರ್ವದಲ್ಲಿ ‘ಕುಮಾರ ಪರ್ವ’ ಆರಂಭಕ್ಕೂ ಮುನ್ನ ಕುಮಾರಸ್ವಾಮಿ, ಹುಟ್ಟೂರಿನ ಈಶ್ವರ ದೇವಾಲಯ, ಮಾವಿನಕೆರೆ ರಂಗನಾಥಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.