ADVERTISEMENT

ಬಿಜೆಪಿ ‘ಸತ್ಯಹರಿಶ್ಚಂದ್ರ ಪಕ್ಷ’: ರಮೇಶ್ ಕುಮಾರ್ ವ್ಯಂಗ್ಯ

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2018, 19:30 IST
Last Updated 5 ಮಾರ್ಚ್ 2018, 19:30 IST

ಚಾಮರಾಜನಗರ: ಆರೋಪ ಮಾಡುವವರಿಗೆ ಸಾಕ್ಷ್ಯಾಧಾರ ಇಲ್ಲದೆ ಇದ್ದಾಗ ಚಾರಿತ್ರ್ಯವಧೆಗೆ ಮುಂದಾಗುತ್ತಾರೆ ಎಂದು ಆರೋಗ್ಯ ಸಚಿವ ಆರ್.ರಮೇಶ್‌ ಕುಮಾರ್ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಸೋಮವಾರ ಟೀಕಿಸಿದರು.

ಗುಂಡ್ಲುಪೇಟೆ ತಾಲ್ಲೂಕು ಹಾಲಹಳ್ಳಿ ಗ್ರಾಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿ, ‘ರಾಜ್ಯ ಸರ್ಕಾರದ ವಿರುದ್ಧ ಭ್ರಷ್ಟಾಚಾರದ ಆರೋಪ ಹೊರಿಸುತ್ತಿರುವ ಮೋದಿ ಅವರು ತಮ್ಮನ್ನು ಸತ್ಯವಂತರು ಎಂದು ಭಾವಿಸಿಕೊಂಡಂತಿದೆ. ಅವರು ತಮ‌್ಮ ಪಕ್ಷದ ಹೆಸರನ್ನು ಸತ್ಯಹರಿಶ್ಚಂದ್ರ ಪಕ್ಷ’ ಎಂದು ಬದಲಿಸಿಕೊಳ್ಳಲಿ ಎಂದು ವ್ಯಂಗ್ಯವಾಡಿದರು.

‘ಅಧಿಕಾರ ನಿಮ್ಮ ಕೈಯಲ್ಲೇ ಇರುವಾಗ ಕ್ರಮ ತೆಗೆದುಕೊಳ್ಳಲು ಏಕೆ ಹಿಂದೇಟು ಹಾಕುತ್ತಿದ್ದೀರಾ’ ಎಂದು ಪ್ರಶ್ನಿಸಿದರು. ‘ಹೇಳಿಕೊಳ್ಳಲು ಒಳ್ಳೆಯ ಕೆಲಸ ಮಾಡದಿದ್ದಾಗ ಇಂತಹ ಟೀಕೆ ಸಹಜ’ ಎಂದರು.

ADVERTISEMENT

‘ಸಿದ್ದರಾಮಯ್ಯ ಸರ್ಕಾರವನ್ನು ಸೀದಾ ರುಪಯ್ಯಾ ಸರ್ಕಾರ ಎಂದು ಲೇವಡಿ ಮಾಡಿದ್ದಾರೆ. ದೇಶದ ಇತಿಹಾಸದಲ್ಲಿ ಯಾವ ಪ್ರಧಾನಿಯೂ ಈ ರೀತಿ ವೈಯಕ್ತಿಕ ನಿಂದನೆಗೆ ಇಳಿದಿರಲಿಲ್ಲ. ಅವರ ಆರೋಪಗಳು ಆಧಾರರಹಿತ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.