ADVERTISEMENT

ಬಿಜೆಪಿ 4ನೇ ಪಟ್ಟಿ ಬಿಡುಗಡೆ: ಯಶವಂತಪುರದಿಂದ ಜಗ್ಗೇಶ್‌

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2018, 18:55 IST
Last Updated 23 ಏಪ್ರಿಲ್ 2018, 18:55 IST
ಬಿಜೆಪಿ 4ನೇ ಪಟ್ಟಿ ಬಿಡುಗಡೆ: ಯಶವಂತಪುರದಿಂದ ಜಗ್ಗೇಶ್‌
ಬಿಜೆಪಿ 4ನೇ ಪಟ್ಟಿ ಬಿಡುಗಡೆ: ಯಶವಂತಪುರದಿಂದ ಜಗ್ಗೇಶ್‌   

ನವದೆಹಲಿ: ರಾಜ್ಯ ವಿಧಾನಸಭೆ ಚುನಾವಣಾ ಸ್ಪರ್ಧೆಯ ನಾಮಪತ್ರ ಸಲ್ಲಿಕೆಗೆ ಕೇವಲ ಒಂದು ದಿನ ಉಳಿದಿರುವಂತೆ ಮತ್ತೆ ಏಳು ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿರುವ ಬಿಜೆಪಿ, ತೀವ್ರ ಕುತೂಹಲಕ್ಕೆ ಕಾರಣವಾಗಿರುವ ವರುಣಾ ಕ್ಷೇತ್ರದ ಉಮೇದುವಾರರನ್ನು ಅಂತಿಮಗೊಳಿಸಿಲ್ಲ.

ಹಾಸನ ಜಿಲ್ಲೆಯ ಸಕಲೇಶಪುರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ಕ್ಷೇತ್ರಗಳ ಟಿಕೆಟ್‌ ಹಂಚಿಕೆ ಪ್ರಕ್ರಿಯೆಯೂ ಬಾಕಿ ಉಳಿದಿದ್ದು, ಈಗಾ
ಗಲೇ ಪ್ರಕಟಗೊಂಡಿರುವ ಕೊಪ್ಪಳ, ಅರಸೀಕೆರೆ ಕ್ಷೇತ್ರಗಳ ಅಭ್ಯರ್ಥಿಗಳ ಹೆಸರು ಬದಲಿಸುವ ಸಾಧ್ಯತೆಯೂ ಇದೆ.

ಸಂಸದೆ ಶೋಭಾ ಕರಂದ್ಲಾಜೆ ಅವರ ಹೆಸರು ಚಾಲ್ತಿಯಲ್ಲಿದ್ದ ಬೆಂಗಳೂರಿನ ಯಶವಂತಪುರ ಕ್ಷೇತ್ರದಿಂದ ಅಚ್ಚರಿ ಎಂಬಂತೆ ಚಿತ್ರನಟ, ಮಾಜಿ ಶಾಸಕ ಜಗ್ಗೇಶ್‌ ಅವರಿಗೆ ಪಕ್ಷ ಟಿಕೆಟ್‌ ನೀಡಿದೆ.

ADVERTISEMENT

ರಾಮನಗರ ಕ್ಷೇತ್ರದಲ್ಲಿ ಜೆಡಿಎಸ್‌ ಮುಖಂಡ, ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರಿಗೆ ಎದುರಾಳಿಯಾಗಿ, ಬಿಜೆಪಿಯ ಮಹಿಳಾ ಘಟಕದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಚ್‌.ಲೀಲಾವತಿ, ಆರು ತಿಂಗಳ ಹಿಂದಷ್ಟೇ ಜೆಡಿಎಸ್‌ ತೊರೆದು ಬಂದಿರುವ ನಂದಿನಿ ಗೌಡ ಅವರನ್ನು ಕನಕಪುರದಲ್ಲಿ ಸಚಿವ ಡಿ.ಕೆ. ಶಿವಕುಮಾರ್‌ ವಿರುದ್ಧ ಕಣಕ್ಕಿಳಿಸಲು ನಿರ್ಧರಿಸಲಾಗಿದೆ.

ಪಕ್ಷದ ಮುಖಂಡ ಸಿ.ಟಿ. ರವಿ ಬೆಂಬಲಿಗ ಜೆ.ಪ್ರೀತಂ ಗೌಡ ಅವರನ್ನು ಹಾಸನದಿಂದ, 2008ರಲ್ಲಿ ಹಾಸನದಲ್ಲಿ ಕಮಲ ಚಿಹ್ನೆ ಅಡಿ ಸ್ಪರ್ಧಿಸಿದ್ದ ಎಚ್‌.ಕೆ. ಸುರೇಶ ಅವರನ್ನು ಬೇಲೂರಿನಿಂದ ಸ್ಪರ್ಧೆಗಿಳಿಸಲಾಗುತ್ತಿದೆ.

ಬಾದಾಮಿ ಕ್ಷೇತ್ರದಿಂದ ಸಿದ್ದರಾಮಯ್ಯ ಸ್ಪರ್ಧಿಸಿದರೆ ಪಕ್ಷದಿಂದ ನಾಮಪತ್ರ ಸಲ್ಲಿಸಲು ಸಿದ್ಧರಿರುವಂತೆ ಬಳ್ಳಾರಿ ಸಂಸದ ಬಿ. ಶ್ರೀರಾಮುಲು ಅವರಿಗೆ ವರಿಷ್ಠರು ಸೂಚಿಸಿದ್ದಾರೆ ಎಂದು ಪಕ್ಷದ ಮೂಲಗಳು ಸ್ಪಷ್ಟಪಡಿಸಿವೆ.

ಶಿಡ್ಲಘಟ್ಟದಲ್ಲಿ ಜೆಡಿಎಸ್‌ ಟಿಕೆಟ್‌ ಪಡೆದಿದ್ದ ಹಾಲಿ ಶಾಸಕ ಎಂ.ರಾಜಣ್ಣ ಅವರಿಗೆ ಪಕ್ಷದ ವರಿಷ್ಠರು ಕೊನೆಯ ಗಳಿಗೆಯಲ್ಲಿ ಬಿ– ಫಾರಂ ನಿರಾಕರಿಸಿ, ಮೇಲೂರು ರವಿಕುಮಾರ್‌ ಅವರಿಗೆ ನೀಡಿದ್ದರಿಂದ, ರಾಜಣ್ಣ ಅವರನ್ನು ಪಕ್ಷಕ್ಕೆ ಸೆಳೆದು ಟಿಕೆಟ್‌ ನೀಡುವ ಸಾಧ್ಯತೆಗಳಿವೆ.

ನಾರ್ವೆ ಸೋಮಶೇಖರ್‌ ಅವರು ಸಕಲೇಶಪುರ ಕ್ಷೇತ್ರದ ಟಿಕೆಟ್‌ ಭರವಸೆಯಲ್ಲಿದ್ದಾರೆ. ಅರಸೀಕೆರೆಯಿಂದ ವಿ.ಸೋಮಣ್ಣ ಅವರ ಪುತ್ರ ಡಾ.ಅರುಣ್‌ ಸ್ಪರ್ಧೆಗೆ ನಿರಾಕರಿಸಿರುವ ಕಾರಣ, ಯಡಿಯೂರಪ್ಪ ಅವರ ಆಪ್ತ ಮರಿಸ್ವಾಮಿ ಅವರಿಗೆ ಕೊನೆಯ ಕ್ಷಣದಲ್ಲಿ ಟಿಕೆಟ್‌ ದೊರೆಯಲಿದೆ ಎಂದು ತಿಳಿದುಬಂದಿದೆ.

ಕೊಪ್ಪಳದಿಂದ ಸಿ.ವಿ. ಚಂದ್ರಶೇಖರ್‌ ಬದಲಿಗೆ ಕರಡಿ ಸಂಗಣ್ಣ ಅವರ ಪುತ್ರ ಅಮರೇಶ ಅವರಿಗೆ ಪಕ್ಷ ಈಗಾಗಲೇ ಬಿ– ಫಾರಂ ವಿತರಿಸಿದ್ದು, ಮಂಗಳವಾರ ಅವರು ನಾಮಪತ್ರ ಸಲ್ಲಿಸಲಿದ್ದಾರೆ ಎನ್ನಲಾಗಿದೆ.

ಏಳು ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ

ಯಶವಂತಪುರ– ಜಗ್ಗೇಶ್‌

ಭದ್ರಾವತಿ– ಜಿ.ಆರ್‌.

‌ಪ್ರವೀಣ್‌ ಪಾಟೀಲ್‌

ರಾಮನಗರ– ಎಚ್‌.

ಲೀಲಾವತಿ

ಕನಕಪುರ– ನಂದಿನಿ ಗೌಡ

ಬಿ.ಟಿ.ಎಂ. ಲೇಔಟ್‌– ಲಲ್ಲೇಶ್‌ ರೆಡ್ಡಿ

ಬೇಲೂರು– ಎಚ್‌.ಕೆ. ಸುರೇಶ್‌

ಹಾಸನ– ಜೆ.ಪ್ರೀತಂ ಗೌಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.