ADVERTISEMENT

ಬೆಂಬಲ ನೀಡಲು ಕೇಳಿದ್ದು ನಿಜ: ಯಡಿಯೂರಪ್ಪ

​ಪ್ರಜಾವಾಣಿ ವಾರ್ತೆ
Published 25 ಮೇ 2018, 19:53 IST
Last Updated 25 ಮೇ 2018, 19:53 IST
ಬೆಂಬಲ ನೀಡಲು ಕೇಳಿದ್ದು ನಿಜ: ಯಡಿಯೂರಪ್ಪ
ಬೆಂಬಲ ನೀಡಲು ಕೇಳಿದ್ದು ನಿಜ: ಯಡಿಯೂರಪ್ಪ   

ಬೆಂಗಳೂರು: ‘ಸರ್ಕಾರ ರಚಿಸುವ ಬಗ್ಗೆ ಡಿ.ಕೆ. ಶಿವಕುಮಾರ್‌ ಜತೆ ಮಾತುಕತೆಯಾಡಿದ್ದು, ನಮಗೆ ಬೆಂಬಲ ನೀಡಿದರೆ ಸ್ಥಾನ ಮಾನ ನೀಡುವುದಾಗಿ ಕಾಂಗ್ರೆಸ್ ಶಾಸಕರಿಗೆ ಹೇಳಿದ್ದು ನಿಜ’ ಎಂದು ವಿರೋಧ ಪಕ್ಷದ ನಾಯಕ ಬಿ.ಎಸ್‌. ಯಡಿಯೂರಪ್ಪ ವಿಧಾನಸಭೆಯಲ್ಲಿ ಶುಕ್ರವಾರ ತಿಳಿಸಿದರು.

‌ಮುಖ್ಯಮಂತ್ರಿ ವಿಶ್ವಾಸ ಮತ ಯಾಚಿಸಿದ ಬಳಿಕ ಮಾತನಾಡಿದ ಯಡಿಯೂರಪ್ಪ, ‘ಆ ಕಡೆ(ಕಾಂಗ್ರೆಸ್‌) ಕುಳಿತವರನ್ನು ಅಂದು ಕರೆದಿದ್ದು ಹೌದು. ಈಗಲೂ ಕರೆಯುತ್ತೇನೆ’ ಎಂದರು.

‘ನೀವು ಎಷ್ಟು ಜನರಿಗೆ ಕರೆ ಮಾಡಿಲ್ಲ. ನಿಮ್ಮ ಕಡೆಯವರಿಂದ ನಮ್ಮವರಿಗೆ ಎಷ್ಟು ಕರೆ ಬಂದಿಲ್ಲ’ ಎಂದು ಕಾಂಗ್ರೆಸ್‌ನ ಶಿವಕುಮಾರ್ ಹಾಗೂ ಜೆಡಿಎಸ್‌ ಎಚ್.ಡಿ. ರೇವಣ್ಣ ಕುಟುಕಿದರು.

ADVERTISEMENT

ಇದಕ್ಕೆ ಪ್ರತಿಕ್ರಿಯಿಸಿದ ಯಡಿಯೂರಪ್ಪ, ‘ಸದನದಲ್ಲಿ ಅತ್ಯಂತ ವಿನಯದಿಂದ ಹೇಳುತ್ತೇನೆ. ನಿಮ್ಮಲ್ಲಿ ಕೆಲವರನ್ನು ಸಂಪರ್ಕಿಸಿದ್ದು ನಿಜ. ರಾಜ್ಯದ ಅಭಿವೃದ್ಧಿಗಾಗಿ ನಮ್ಮ ಜತೆ ಕೈಜೋಡಿಸಿ ಎಂದು ಹೇಳಿದ್ದೆ. ನಮ್ಮ ಮನೆಗೆ ಯಾರು ಬಂದಿದ್ದರು ಎಂದು ಹೆಸರು ಹೇಳುವುದಿಲ್ಲ. ಯಾವುದೇ ಕಾರಣಕ್ಕೂ ಅಪ್ಪ–ಮಕ್ಕಳ(ದೇವೇಗೌಡ–ಕುಮಾರಸ್ವಾಮಿ) ಜತೆ ಕೈಜೋಡಿಸಬೇಡಿ ಎಂಬ ಕರೆಯನ್ನೂ ನೀಡಿದ್ದೆ’ ಎಂದರು.

‘ಶಿವಕುಮಾರ್ ಜತೆ ಏನೇನು ಮಾತುಕತೆಯಾಯ್ತು ಎಂದು ಇಲ್ಲಿ ಹೇಳಿಲ್ಲ. ಅದನ್ನೂ ಹೇಳುವುದೂ ಇಲ್ಲ’ ಎಂದರು.

ಆಗ ಮಾತನಾಡಿದ ಕುಮಾರಸ್ವಾಮಿ, ‘ನಿಮ್ಮ ಕಡೆಯಿಂದ ಬಂದ ಮೊಬೈಲ್ ಕರೆಗಳ ದಾಖಲೆ (ಸಿಡಿಆರ್) ತೆಗೆಸಿದರೆ ನಿಮ್ಮ ಬಣ್ಣ ಬಯಲಾಗುತ್ತದೆ’ ಎಂದು ಗುಡುಗಿದರು.

ಡಿಕೆಶಿ ಖಳನಾಯಕ! ಕಾಂಗ್ರೆಸ್ ಶಾಸಕರನ್ನು ಹಿಡಿದಿಟ್ಟುಕೊಂಡ ಶಿವಕುಮಾರ್‌ ನೀವೇ ಖಳನಾಯಕರು ಎಂದು ಯಡಿಯೂರಪ್ಪ ತುಸು ಆಕ್ರೋಶದಿಂದ ಹೇಳಿದರು.

‘ಸ್ವಾಮಿ ಶಿವಕುಮಾರ್ ಅವರೇ, ಮಾಡಬಾರದ್ದನ್ನು ಮಾಡಿ ಶಾಸಕರನ್ನು ರಕ್ಷಣೆ ಮಾಡಿದ್ದೀರಿ. ಇಂದು ನಾಳೆಯೋ ನೀವು ಪಶ್ಚಾತ್ತಾಪ ಪಡಬೇಕಾಗುತ್ತದೆ. ನಾಡಿಗೆ, ನಾಡಿನ ಜನಕ್ಕೆ ದ್ರೋಹ, ವಿಶ್ವಾಸ ದ್ರೋಹ ಮಾಡಿದವರನ್ನು ಮುಖ್ಯಮಂತ್ರಿ(ಕುಮಾರಸ್ವಾಮಿ) ಮಾಡಲು ನೀವು ಶ್ರಮ ವಹಿಸಿದ್ದೀರಿ. ನೀವು ಇದನ್ನು ಅನುಭವಿಸುತ್ತೀರಿ. ಈಗಲೂ ಹೇಳುತ್ತೇನೆ ಶಿವಕುಮಾರ್‌, ಕುಮಾರಸ್ವಾಮಿ ಮುಳುಗುದೋಣಿಯಲ್ಲಿದ್ದಾರೆ. ಅವರ ಜತೆ ಹೋದರೆ ನೀವು ಮುಳುಗುತ್ತೀರಿ’ ಎಂದರು.

‘ಯಡಿಯೂರಪ್ಪನವರ ಜತೆಗೆ ಸ್ನೇಹ, ಪ್ರೀತಿ ಎಲ್ಲವೂ ಇದೆ. ಹಾಗಿದ್ದರೂ ನನ್ನನ್ನು ಖಳನಾಯಕ ಎಂದು ಕರೆದಿದ್ದೀರಿ. ಅದನ್ನು ಕಡತದಿಂದ ತೆಗೆದು ಹಾಕಬೇಕು’ ಎಂದು ಶಿವಕುಮಾರ್ ಸ್ಪಷ್ಟನೆ ನೀಡಿದರು.

ಮಧ್ಯ ಪ್ರವೇಶಿಸಿದ ಸಭಾಧ್ಯಕ್ಷ ರಮೇಶಕುಮಾರ್‌, ‘ಒಬ್ಬರಿಗೆ ಆಹಾರ ಆಗುವುದು ಮತ್ತೊಬ್ಬರಿಗೆ ವಿಷವಾಗುತ್ತದೆ. ಕೆಲವರಿಗೆ ಹೀರೋ ಆಗುವವರು ಮತ್ತೊಬ್ಬರಿಗೆ ಖಳನಾಯಕರಾಗುತ್ತಾರೆ. ಎಲ್ಲರಿಗೂ ಹೀರೋ ಆಗುವುದು ಅಸಾಧ್ಯ’ ಎಂದು ಚಟಾಕಿ ಹಾರಿಸಿದರು.

*****

ನಮ್ಮ ನಾಯಕರಾದ ರಾಹುಲ್ ಗಾಂಧಿ ಏನು ಹೇಳಿದ್ದರೋ ಅದನ್ನು ತತ್ವ, ಆದೇಶದಂತೆ ಪಾಲನೆ ಮಾಡಿದ್ದೇನೆ
–ಡಿ.ಕೆ. ಶಿವಕುಮಾರ್, ಕಾಂಗ್ರೆಸ್ ಮುಖಂಡ

‘ಮುಖ್ಯಮಂತ್ರಿಯಾಗುವ ಕನಸು ಇರುವ ಶಿವಕುಮಾರ್‌ ಅವರನ್ನು  ಖಳನಾಯಕ ಎಂದು ಹೇಳಿದ್ದನ್ನು ವಾಪಸ್ ಪಡೆಯುವೆ. ನೀವು ಅಲ್ಲಿದ್ದರೆ  ಮುಖ್ಯಮಂತ್ರಿಯಾಗಲು ಸಾಧ್ಯವೇ?

–ಬಿ.ಎಸ್. ಯಡಿಯೂರಪ್ಪ, ವಿರೋಧ ಪಕ್ಷದ ನಾಯಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.